ಸಿಂಡಿಕೇಟ್ ನೇಮಕಾತಿ ವಿವಾದ | ಸದಸ್ಯರ ನೇಮಕದಲ್ಲಿ ಅನ್ಯಾಯ: ಆರೋಪ

ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಮತ್ತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಎದುರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆಯಿತು.

Update: 2024-09-15 10:26 GMT
ಬೆಂಗಳೂರು ವಿಶ್ವವಿದ್ಯಾನಿಲಯ
Click the Play button to listen to article

ವಿಶ್ವವಿದ್ಯಾಲಯಗಳಿಗೆ ಸಿಂಡಿಕೇಟ್ ಸದಸ್ಯರ ನೇಮಕ ವಿಚಾರದಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಮತ್ತು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಎದುರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆಯಿತು. 

ಕಾರ್ಯಕರ್ತರ ಅಹವಾಲು ಆಲಿಸಲು ಇಬ್ಬರು ಸಚಿವರು ಅಲ್ಲಿಗೆ ಬಂದಿದ್ದರು. 'ಸಿಂಡಿಕೇಟ್ ಸದಸ್ಯರ ನೇಮಕದ ವೇಳೆ ಬಿಜೆಪಿ, ಆರ್‌ಎಸ್‌ಎಸ್ ಕಾರ್ಯಕರ್ತರಿಗೆ ಮಣೆ ಹಾಕಲಾಗಿದೆ' ಎಂದು ಆರೋಪಿಸಿದ ಸಮೀವುಲ್ಲಾ ಖಾನ್ ಎಂಬ ಕಾರ್ಯಕರ್ತ, ಮೂರು ವರ್ಷಗಳಿಂದ ನಾನು ಪಕ್ಷದಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದೇನೆ. ನನ್ನನ್ನು ಸಿಂಡಿಕೇಟ್ ಸದಸ್ಯರಾಗಿ ನೇಮಿಸಬೇಕು' ಎಂದು ಆಗ್ರಹಿಸಿದರು. ಈ ವೇಳೆ ಸ್ಥಳದಲ್ಲಿದ್ದ ಇತರ ಕಾರ್ಯಕರ್ತರು ಸಮೀವುಲ್ಲಾ ಅವರನ್ನು ಸಮಾಧಾನಪಡಿಸಿದರು.

'ನಾನು ಯಾವ ನೇಮಕಾತಿಯನ್ನೂ ನೇರವಾಗಿ ಮಾಡಿಲ್ಲ. ಮುಖ್ಯಮಂತ್ರಿ ಕಚೇರಿಯ ವಿವೇಚನೆಯ ಮೇಲೆ ಎಲ್ಲ ತೀರ್ಮಾನ ಮಾಡಲಾಗಿದೆ. ನಿಮಗೆ ಸಂದೇಹಗಳಿದ್ದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಉತ್ತರ ಕೊಡುತ್ತಾರೆ' ಎಂದು ಸುಧಾಕ‌ರ್ ಸಮಜಾಯಿಷಿ ನೀಡಿದರು.

ಆಗ ಕಾಂಗ್ರೆಸ್ ಕಾರ್ಯಕರ್ತರು ಮತ್ತಷ್ಟು ಕೆರಳಿದರು. 'ಸಿಂಡಿಕೇಟ್ ಸದಸ್ಯರ ನೇಮಕದ ಸಂದರ್ಭದಲ್ಲಿ ಆರು ಮಂದಿಗೆ ಮಾತ್ರ ಅವಕಾಶ ಇರುತ್ತದೆ. ಕೆಲವು ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಿದವರಿಗೆ ಅವಕಾಶ ಮಾಡಿಕೊಟ್ಟಿದ್ದೇವೆ. ರಾಜ್ಯಪಾಲರು ಹಿಂದೆ ಮಾಡಿದ ನೇಮಕವನ್ನು ನಾವು ಪ್ರಶ್ನೆ ಮಾಡಲು ಹೋಗುವುದಿಲ್ಲ' ಎಂದೂ ಸುಧಾಕ‌ರ್ ಹೇಳಿದರು. 'ಮುಖ್ಯಮಂತ್ರಿಯವರು ಅಳೆದುತೂಗಿ ಸಾಧ್ಯವಾದಷ್ಟು ಸಿಂಡಿಕೇಟ್ ಸದಸ್ಯರ ನೇಮಕ ಮಾಡಿದ್ದಾರೆ. ಈ ವಿಚಾರದಲ್ಲಿ ಹೈಕಮಾಂಡ್‌ಗೆ ದೂರು ಹೋಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ' ಎಂದೂ ಹೇಳಿದರು.

Tags:    

Similar News