ಅಮೆರಿಕದ ಸೆಮಿ ಕಂಡಕ್ಟರ್ ಉದ್ಯಮಿಗಳ ಜೊತೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಮಾತುಕತೆ

ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಸಚಿವರು, ಉದ್ದಿಮೆಗಳ ಪ್ರಮುಖರಿಗೆ ಇದೇ ಸಂದರ್ಭದಲ್ಲಿ ಔಪಚಾರಿಕ ಆಹ್ವಾನವನ್ನೂ ನೀಡಿದ್ದಾರೆ.

Update: 2024-10-01 11:38 GMT

ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರು ಅಮೆರಿಕದಲ್ಲಿ ಸೆಮಿ ಕಂಡಕ್ಟರ್ ಉದ್ಯಮದ ಜಾಗತಿಕ ಪ್ರಮುಖ ಕಂಪನಿಗಳ ಮುಖ್ಯಸ್ಥರ ಜೊತೆ ಸರಣಿ ಮಾತುಕತೆ ನಡೆಸಿದ್ದಾರೆ.

ರಾಜ್ಯದಲ್ಲಿ ವೇಗವಾಗಿ ವಿಸ್ತರಿಸುತ್ತಿರುವ ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಅಮೆರಿಕದ ಕಂಪನಿಗಳ ಜೊತೆಗೆ ಹೆಚ್ಚಿನ ಸಹಯೋಗದ ಅವಕಾಶಗಳನ್ನು ಸಚಿವರು ಚರ್ಚಿಸಿದ್ದಾರೆ. ಸೆಮಿಕಂಡಕ್ಟರ್ ಅಭಿವೃದ್ಧಿ ಕೇಂದ್ರವಾಗಿ ಹೊರಹೊಮ್ಮುವ ರಾಜ್ಯದ ಮಹತ್ವಾಕಾಂಕ್ಷೆ ಸಾಕಾರಗೊಳ್ಳುವುದಕ್ಕೆ ಈ ಭೇಟಿಯು ನೆರವಾಗಲಿದೆ.

ಕರ್ನಾಟಕದ ಸೆಮಿಕಂಡಕ್ಟರ್ ಉದ್ದಿಮೆಗೆ ಚೇತರಿಕೆ ನೀಡುವ ಉದ್ದೇಶದಿಂದ, ಅಮೆರಿಕದ ಸೆಮಿಕಂಡಕ್ಟರ್ ವಲಯದ ನಾಲ್ಕು ಪ್ರಮುಖ ಕಂಪನಿಗಳಾದ ಯುಜೆನಸ್ ಟೆಕ್ನಾಲಜಿ, ಲ್ಯಾಮ್ ರಿಸರ್ಚ್, ಅಲ್ಫಾವೇವ್ ಸೆಮಿ ಮತ್ತು ಎಂಐಪಿಎಸ್ ಟೆಕ್ನಾಲಜೀಸ್‌ ಉನ್ನತ ಅಧಿಕಾರಿಗಳ ಜೊತೆ ಸಚಿವರು ಸಮಾಲೋಚನೆ ನಡೆಸಿದ್ದಾರೆ.

ಮುಂದಿನ ವರ್ಷ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಸಚಿವರು ಉದ್ದಿಮೆಗಳ ಪ್ರಮುಖರಿಗೆ ಇದೇ ಸಂದರ್ಭದಲ್ಲಿ ಔಪಚಾರಿಕ ಆಹ್ವಾನವನ್ನೂ ನೀಡಿದ್ದಾರೆ.

ಯುಜೆಎನ್ಎಸ್‌ನ ಸಿಇಒ ಜೆಡಬ್ಲ್ಯು ಕಿಮ್ ಅವರ ಜೊತೆಗಿನ ಸಭೆಯಲ್ಲಿ, ಸಚಿವ ಪಾಟೀಲ ಅವರು, ಕರ್ನಾಟಕದಲ್ಲಿ ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಗೆ ವಿಪುಲ ಅವಕಾಶಗಳು ಇರುವುದನ್ನು ವಿವರಿಸಿದರು. ರಾಜ್ಯದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಸೆಮಿಕಂಡಕ್ಟರ್ ಉದ್ಯಮಕ್ಕೆ ನೆರವಾಗಲು, ಸುಧಾರಿತ ಸೆಮಿಕಂಡಕ್ಟರ್ ತಯಾರಿಕಾ ಉಪಕರಣಗಳನ್ನು ಒದಗಿಸುವಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿ ಇರುವ ಯುಜೆನಸ್ ಟೆಕ್ನಾಲಜಿಯ ಪರಿಣತಿ ಬಳಸಿಕೊಳ್ಳುವ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗಿದೆ.

ಲ್ಯಾಮ್ ರೀಸರ್ಚ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ಯಾಟ್ ಲಾರ್ಡ್ ಅವರ ಭೇಟಿ ಸಂದರ್ಭದಲ್ಲಿ ಸಚಿವರು ಜಾಗತಿಕ ಸೆಮಿಕಂಡಕ್ಟರ್ ಉದ್ಯಮದಲ್ಲಿ ಕರ್ನಾಟಕವು ಮಹತ್ವದ ಪಾತ್ರ ನಿರ್ವಹಿಸಲಿರುವುದನ್ನು ಮನದಟ್ಟು ಮಾಡಿಕೊಟ್ಟರು.

ವೇಫರ್ ಫ್ಯಾಬ್ರಿಕೇಷನ್ ಉಪಕರಣಗಳ ಜಾಗತಿಕ ಪೂರೈಕೆ ಕಂಪನಿಯಾಗಿರುವ ಲ್ಯಾಮ್ ರಿಸರ್ಚ್ ಇತ್ತೀಚೆಗೆ ಬೆಂಗಳೂರಿನಲ್ಲಿ ತನ್ನ ಸಿಸ್ಟಮ್ಸ್ ಲ್ಯಾಬ್ ಆರಂಭಿಸಿದೆ.

ಆಲ್ಫಾವೇವ್ ಸೆಮಿಯ ಸಿಇಒ ಟೋನಿ ಪಿಯಾಲಿಸ್ ಅವರ ಜೊತೆಗಿನ ಭೇಟಿಯಲ್ಲಿ ಕರ್ನಾಟಕದಲ್ಲಿ ಸೆಮಿಕಂಡಕ್ಟರ್ ಉದ್ದಿಮೆಯನ್ನು ಸದೃಢವಾಗಿ ಬೆಳೆಸುವುದಕ್ಕೆ ಇರುವ ಸಹಯೋಗದ ಮಾರ್ಗೋಪಾಯಗಳ ಕುರಿತು ಚರ್ಚಿಸಿದರು.

ದತ್ತಾಂಶ ಮೂಲಸೌಲಭ್ಯಗಳ ಸಂಪರ್ಕ ಪರಿಹಾರಗಳಲ್ಲಿ ಅಗ್ರಗಣ್ಯವಾಗಿರುವ ಅಲ್ಫಾವೇವ್ ಸೆಮಿ, ಕರ್ನಾಟಕದ ಸೆಮಿಕಂಡಕ್ಟರ್ ಉದ್ಯಮದ ಭವಿಷ್ಯದ ಬೆಳವಣಿಗೆಗೆ ಗಣನೀಯ ಕೊಡುಗೆ ನೀಡಲು ತೀವ್ರ ಆಸಕ್ತಿ ವ್ಯಕ್ತಪಡಿಸಿದೆ.

ಪಾಲೊ ಆಲ್ಟೊದಲ್ಲಿ ಎಂಐಪಿಎಸ್ ಟೆಕ್ನಾಲಜೀಸ್ನ ಸಿಇಒ ಸಮೀರ್ ವಾಸನ್ ಅವರನ್ನು ಭೇಟಿಯಾದ ಸಚಿವರು ರಾಜ್ಯದಲ್ಲಿ ಸೆಮಿಕಂಡಕ್ಟರ್ ವಿನ್ಯಾಸ ಮತ್ತು ನಾವೀನ್ಯತೆಗೆ ಪೂರಕ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಮಾತುಕತೆ ನಡೆಸಿದರು.

ದುಂಡುಮೇಜಿನ ಸಭೆ

ಅಮೆರಿಕ-ಭಾರತ ಕಾರ್ಯತಂತ್ರ ಪಾಲುದಾರಿಕೆ ವೇದಿಕೆಯು (ಯುಎಸ್ಐಎಸ್ಪಿಎಫ್) ಆಯೋಜಿಸಿದ್ದ ದುಂಡುಮೇಜಿನ ಸಭೆಯಲ್ಲಿ ಸಚಿವ ಪಾಟೀಲ ಅವರು ಅಮೆರಿಕದ ಪ್ರಮುಖ ಕಂಪನಿಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.

ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತದ ಕಾನ್ಸುಲ್ ಜನರಲ್ ಶ್ರೀಕರ್ ರೆಡ್ಡಿ ಅವರೂ ಈ ಸಭೆಯಲ್ಲಿ ಭಾಗವಹಿಸಿದ್ದರು. ಅಮೆರಿಕ ಮತ್ತು ಕರ್ನಾಟಕದ ನಡುವಣ ಬಹುಬಗೆಯ ಸಹಯೋಗ ಹಾಗೂ ಬಾಂಧವ್ಯ ವೃದ್ಧಿ ಬಗ್ಗೆ ಸಭೆಯಲ್ಲಿ ವಿವರವಾಗಿ ಚರ್ಚಿಸಲಾಯಿತು.

ಅಮೆರಿಕದ ಉದ್ಯಮಿಗಳ ಜೊತೆಗಿನ ಈ ಉನ್ನತ ಮಟ್ಟದ ಚರ್ಚೆಗಳು ಸೆಮಿಕಂಡಕ್ಟರ್ ಉದ್ಯಮಕ್ಕೆ ಕರ್ನಾಟಕವು ಜಾಗತಿಕ ಕೇಂದ್ರವಾಗಲು, ಗಮನಾರ್ಹ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಆಕರ್ಷಿಸಲು ಮತ್ತು ಈ ಕ್ಷೇತ್ರದಲ್ಲಿ ನಾವೀನ್ಯತೆ ಉತ್ತೇಜಿಸುವ ರಾಜ್ಯ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸುತ್ತವೆ.

ಸಚಿವ ಪಾಟೀಲರ ನೇತೃತ್ವದಲ್ಲಿ ನಡೆದ ಉದ್ಯಮಿಗಳ ಭೇಟಿ ಹಾಗೂ ಸಮಾಲೋಚನೆ ಸಭೆಗಳಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್.ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಮತ್ತು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ (ಕೆಐಎಡಿಬಿ) ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಡಾ. ಮಹೇಶ್ ಅವರು ಭಾಗಿಯಾಗಿದ್ದರು.

Tags:    

Similar News