ಬೆಂಗಳೂರಲ್ಲಿ ಹೆಚ್ಚಿದೆ ಡೆಂಗ್ಯೂ ! ಬಿಬಿಎಂಪಿ ಆಯುಕ್ತರಿಗೇ ಜ್ವರ!

ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರ ಪ್ರಕರಣ ಹೆಚ್ಚಾಗುತ್ತಿದ್ದು, ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರಿಗೂ ಡೆಂಗ್ಯೂ ದೃಢಪಟ್ಟಿದೆ. ಕಾಲರಾ ನಂತರ ಇದೀಗ ಡೆಂಗ್ಯೂ ಹೆಚ್ಚಾಗುತ್ತಿದೆ. ಡೆಂಗ್ಯೂ ಜ್ವರ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಡೆಂಗ್ಯೂ ಜ್ವರದ ಲಕ್ಷಣ, ನಿಯಂತ್ರಣ ವಿಧಾನ ಸೇರಿದಂತೆ ಸಮಗ್ರ ಮಾಹಿತಿ ಇಲ್ಲಿದೆ.

By :  Hitesh Y
Update: 2024-06-25 10:37 GMT
ಡೆಂಗ್ಯೂ

ಬೆಂಗಳೂರಿನಲ್ಲಿ ಕಾಲರಾದ ನಂತರ ಇದೀಗ ಡೆಂಗ್ಯೂ (Dengue Fever) ಜ್ವರದ ಪ್ರಕರಣಗಳು ಹೆಚ್ಚಾಗುತ್ತಿವೆ. ಕಳೆದ ಒಂದೂವರೆ ತಿಂಗಳ ಹಿಂದಷ್ಟೇ ನಗರದಲ್ಲಿ ಕಾಲರಾ ರೋಗ ಹೆಚ್ಚಾಗಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಇದೀಗ ಡೆಂಗ್ಯೂ ಸರದಿ.

ಮಳೆಗಾಲ ಚುರುಕು ಪಡೆದುಕೊಂಡ ಬೆನ್ನಲ್ಲೇ ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರದ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿಯ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರಿಗೂ ಸಹ ಡೆಂಗ್ಯೂ ದೃಢಪಟ್ಟಿದ್ದು, ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಆರು ತಿಂಗಳ ಅವಧಿಯಲ್ಲಿ (Dengue in Bangalore) ಬೆಂಗಳೂರಿನಲ್ಲಿ 1046 ಡೆಂಗ್ಯೂ ಪ್ರಕರಣಗಳು ದೃಢಪಟ್ಟಿವೆ. 2024ನೇ ಸಾಲಿನ ಜನವರಿ 1ರಿಂದ ಜೂನ್ 20ರ ವರೆಗಿನ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ 1000ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದೃಢಪಟ್ಟಿದ್ದು, ಈ ಪ್ರಕರಣಗಳ ಸಂಖ್ಯೆ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ಡೆಂಗ್ಯೂ ಜ್ವರವು ವೈರಾಣುವಿನಿಂದ ಹರಡುವ ಮಾರಕ ಕಾಯಿಲೆಯಾಗಿದ್ದು, ಸೋಂಕಿತ ಈಡಿಸ್ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಮತ್ತೊಬ್ಬರಿಗೆ ಈ ಡೆಂಗ್ಯೂ ಹರಡುತ್ತದೆ.

ಮಳೆ – ಬಿಸಿಲು; ಹೆಚ್ಚಾದ ಡೆಂಗ್ಯೂ ಪ್ರಕರಣ

ರಾಜ್ಯದಲ್ಲಿ ಮುಂಗಾರು ಮಳೆ ಚುರುಕು ಪಡೆದುಕೊಂಡಿದೆ. ಬೆಂಗಳೂರಿನಲ್ಲೂ ಮಳೆ ಬರುತ್ತಿದ್ದು, ಡೆಂಗ್ಯೂ ಹಾಗೂ ಮಲೇರಿಯಾ ಪ್ರಕರಣಗಳು ಹೆಚ್ಚಾಗುತ್ತಿರುವುದು ವರದಿಯಾಗುತ್ತಿದೆ. ಮಲೇರಿಯಾ ಪ್ರಕರಣಗಳು ನಿಯಂತ್ರಣದಲ್ಲಿದ್ದು, ಡೆಂಗ್ಯೂ ಪ್ರಕರಣಗಳು ವಿಪರೀತವಾಗಿದೆ. ಇಲ್ಲಿಯವರೆಗೆ ಐದು ಜನರಿಗೆ ಮಲೇರಿಯಾ ದೃಢಪಟ್ಟಿದೆ. ಬೆಂಗಳೂರಿನಲ್ಲಿ ಏಕಾಏಕಿ ವಾತಾವರಣ ಬದಲಾಗುತ್ತಿರುವುದು ಹಾಗೂ ಖಾಲಿ ಜಾಗದಲ್ಲಿ ನೀರು ನಿಲ್ಲುತ್ತಿರುವುದು ಹೆಚ್ಚುತ್ತಿರುವುದರಿಂದ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಡೆಂಗ್ಯೂ ಪ್ರಕರಣ ದೃಢಪಟ್ಟ ವಿವರ (ಜನವರಿ 1ರಿಂದ ಜೂನ್ 20ರ ವರೆಗೆ)

ವಲಯ                 ಡೆಂಗ್ಯೂ ದೃಢಪಟ್ಟ ಪ್ರಕರಣ

ಬೊಮ್ಮನಹಳ್ಳಿ            113

ದಾಸರಹಳ್ಳಿ                 06

ಪೂರ್ವ                       236

ಮಹದೇವಪುರ            328

ರಾಜರಾಜೇಶ್ವರಿ ನಗರ    83

ದಕ್ಷಿಣ                        113

ಪಶ್ಚಿಮ                        77

ಯಲಹಂಕ                  90

ಒಟ್ಟು                        1046

ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಕ್ರಮ: ಬಿಬಿಎಂಪಿ

ʻಬೆಂಗಳೂರಿನಲ್ಲಿ ಡೆಂಗ್ಯೂ ಜ್ವರ ನಿಯಂತ್ರಣಕ್ಕೆ ಬಿಬಿಎಂಪಿಯಿಂದ ಐಇಸಿ (ಡೆಂಗ್ಯೂ ಜ್ವರದ ಪರೀಕ್ಷೆ) ಪರೀಕ್ಷೆ ನಡೆಸಲಾಗುತ್ತಿದೆ. ಡೆಂಗ್ಯೂ ಸೊಳ್ಳೆಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಹಾಗೂ ಫಾಗಿಂಗ್ ಮಾಡಲಾಗುತ್ತಿದೆ. ಮನೆ – ಮನೆ ಲಾರ್ವಾ ಸರ್ವೇ ಮಾಡಲಾಗುತ್ತಿದೆʼ ಎಂದು ಬಿಬಿಎಂಪಿಯ ಮುಖ್ಯ ಆರೋಗ್ಯ ಅಧಿಕಾರಿ, ಡಾ. ಸೈಯದ್ ಸಿರಾಜುದ್ದೀನ್ ಮದಿನಿ ತಿಳಿಸಿದರು.

ದ ಫೆಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಅವರು, ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮನೆ – ಮನೆ ಸರ್ವೇ ಮಾಡಲಾಗುತ್ತಿದ್ದು, ಈ ಹಂತದಲ್ಲಿ ತೆಂಗಿನ ಚಿಪ್ಪು,  ಹೂಕುಂಡ, ಗಿಡಗಳ ತಟ್ಟೆಗಳಲ್ಲಿ ಹಾಗೂ ಟೈರ್ ಸೇರಿದಂತೆ ಮನೆ ಸುತ್ತಮುತ್ತಲಿನ ಪ್ರದೇಶದ ಯಾವುದೇ ವಸ್ತುಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಲು (Source Deduction) ಸೂಚಿಸಲಾಗುತ್ತಿದೆ. ಶುದ್ಧ ನೀರಿನಲ್ಲಿ ಡೆಂಗ್ಯೂ (ಈಡಿಸ್) ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗುತ್ತದೆ. ಅಲ್ಲದೇ ಬೆಳಿಗ್ಗೆ ಸಮಯದಲ್ಲಿ ಸೊಳ್ಳೆಗಳು ಕಚ್ಚುವುದರಿಂದ ಡೆಂಗ್ಯೂ ಬರುತ್ತದೆ. ಹೀಗಾಗಿ, ಡ್ರೈ ಡೇ (Dry Day) ಅನುಸರಿಸಲು ಜನರಿಗೆ ಸೂಚನೆ ನೀಡಲಾಗುತ್ತಿದೆ. ಅಂದರೆ, ಜನ ನೀರು ಸಂಗ್ರಹ ಮಾಡುವ ಸಾಧನಗಳನ್ನು ಒಂದು ದಿನ ಪೂರ್ತಿ ಸ್ವಚ್ಛ ಮಾಡಿ, ಆ ಸಾಧನಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು. ಇದರಿಂದ ಸೊಳ್ಳೆಗಳ ಉತ್ಪತ್ತಿ ಇಳಿಕೆಯಾಗಲಿದೆʼ ಎಂದು ಮಾಹಿತಿ ನೀಡಿದರು.


 ವಿವಿಧ ಇಲಾಖೆಯ ಸಹಕಾರ

ಬೆಂಗಳೂರಿನಲ್ಲಿ ಡೆಂಗ್ಯೂ ಸೋಂಕನ್ನು ನಿಯಂತ್ರಿಸುವ ಉದ್ದೇಶದಿಂದ ವಿವಿಧ ಇಲಾಖೆಗಳ ಸಹಾಯ ಪಡೆದುಕೊಳ್ಳಲಾಗುತ್ತಿದೆ ಎಂದು ಡಾ. ಸೈಯದ್ ತಿಳಿಸಿದರು.

ನರ್ಸಿಂಗ್, ಶಾಲಾ – ಕಾಲೇಜು ಹಾಗೂ ಸ್ಕೌಟ್ಸ್ ಮತ್ತು ಗೈಡ್ ವಿದ್ಯಾರ್ಥಿಗಳನ್ನು ಡೆಂಗ್ಯೂ ಜಾಗೃತಿಗೆ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ. ಆಶಾ ಕಾರ್ಯಕರ್ತೆಯರು ಹಾಗೂ ಬಿಬಿಎಂಪಿ ಆರೋಗ್ಯ ಇಲಾಖೆಯ ಸಿಬ್ಬಂದಿ ಈಗಾಗಲೇ ಸಾರ್ವಜನಿಕರಲ್ಲಿ ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಹೇಳಿದರು.

ಡೆಂಗ್ಯೂ ನಿಯಂತ್ರಣಕ್ಕೆ ಈ ಕ್ರಮ ಅನುಸರಿಸಿ…

* ಡೆಂಗ್ಯೂ ಸೋಂಕು ಹರಡುವುದಕ್ಕೆ ಮುಖ್ಯ ಕಾರಣ ನಿಂತ ನೀರು, ನಿಂತ ನೀರು ಸೊಳ್ಳೆಗಳ ಉತ್ಪತ್ತಿ ತಾಣ ಆದ್ದರಿಂದ ಅವುಗಳನ್ನು ನಾಶಪಡಿಸಿ.

* ಈಡಿಸ್ ಸೊಳ್ಳೆಗಳು ಹಗಲು ವೇಳೆಯಲ್ಲಿ ಕಚ್ಚುತ್ತವೆ. ಹೀಗಾಗಿ, ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸಿ.

* ನೀರು ಶೇಖರಿಸುವ ಪರಿಕರಗಳನ್ನು ಮುಚ್ಚಿಡಿ ಹಾಗೂ ವಾರಕ್ಕೊಮ್ಮೆ ಸ್ವಚ್ಛಗೊಳಿಸಿ.

* ಮನೆ, ಕಚೇರಿಗಳಲ್ಲಿ ಏರ್‌ಕೂಲರ್, ರೆಫ್ರಿಜರೇಟರ್ ಹಾಗೂ ಅಲಂಕಾರಿಕ ಹೂಕುಂಡ, ಗಿಡಗಳ ತಟ್ಟೆಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ.

* ಮನೆ – ಕಚೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಿ. ಸಮರ್ಪಕವಾಗಿ ಕಸ ವಿಲೇವಾರಿ ಮಾಡಿ.

* ಸೊಳ್ಳೆಗಳು ಕಚ್ಚದಂತೆ ಸ್ವಯಂ ರಕ್ಷಣಾ ವಿಧಾನ ಅನುಸರಿಸಿ, ಸೊಳ್ಳೆ ಪರದೆಗಳನ್ನು ಉಪಯೋಗಿಸಿ.

ಡೆಂಗ್ಯೂ ಜ್ವರದ ಲಕ್ಷಣಗಳೇನು ?

ಡೆಂಗ್ಯೂ ಜ್ವರದ ಪ್ರಮುಖ ಲಕ್ಷಣಗಳು ಈ ರೀತಿ ಇವೆ. ಡೆಂಗ್ಯೂ ಜ್ವರ ಕಾಣಿಸಿಕೊಂಡರೆ ಮೊದಲು ಅಧಿಕ ಜ್ವರ, ತೀವ್ರವಾದ ತಲೆನೋವು, ಕಣ್ಣಿನ ಕೆಳಭಾಗದಲ್ಲಿ ನೋವು, ಗಂಟಲು ಹಾಗೂ ಸ್ನಾಯು ಭಾಗದಲ್ಲಿ ನೋವು, ವಾಂತಿ, ವಾಕರಿಕೆ ಹಾಗೂ ಗ್ರಂಥಿಗಳು ಊದಿಕೊಳ್ಳುತ್ತದೆ.

ಇನ್ನು ಡೆಂಗ್ಯೂ ಜ್ವರ ಲಘು ಅಥವಾ ಯಾವುದೇ ಲಕ್ಷಣಗಳು ಕಾಣಿಸಿಕೊಳ್ಳದಿದ್ದರೆ, ಒಂದರಿಂದ ಎರಡು ದಿನದಲ್ಲಿ ಜ್ವರದಿಂದ ಚೇತರಿಸಿಕೊಳ್ಳಬಹುದಾಗಿದೆ. ಇನ್ನುಳಿದ ಪ್ರಕರಣಗಳಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡ 4ರಿಂದ 10 ದಿನಗಳಲ್ಲಿ ಸೋಂಕಿನ ಲಕ್ಷಣ ಕಾಣಿಸಿಕೊಳ್ಳಲಿದ್ದು 2 ರಿಂದ 7 ದಿನ ಜ್ವರ ಇರುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು.

ಡೆಂಗ್ಯೂ ಜ್ವರ ಕಾಣಿಸಿಕೊಂಡರೆ ಏನು ಮಾಡಬೇಕು ?

* ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಿ

* ಹತ್ತಿರದ ಆಸ್ಪತ್ರೆ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಿರಿ

* ಮೃದು ಅಥವಾ ದ್ರವರೂಪದ ಆಹಾರವನ್ನು ಸೇವಿಸಿ ಹಾಗೂ ಯಥೇಚ್ಛವಾಗಿ ನೀರು ಕುಡಿಯಿರಿ

* ಸಾಧ್ಯವಾದಷ್ಟು ವಿಶ್ರಾಂತಿ ಪಡೆಯಿರಿ ಹಾಗೂ ತಪ್ಪದೇ ಸೊಳ್ಳೆಪರದೆ ಉಪಯೋಗಿಸಿ

ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗ್ಯೂ ಜ್ವರ ಪರೀಕ್ಷೆ ಹಾಗೂ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆಎಂದು ಆರೋಗ್ಯ ಇಲಾಖೆ ತಿಳಿಸಿದೆ. 

Tags:    

Similar News