ಕೇಂದ್ರ ಸರ್ಕಾರದಿಂದ ರಸಗೊಬ್ಬರ ಅಸಮರ್ಪಕ ಪೂರೈಕೆ : ಸಚಿವ ಚಲುವರಾಯಸ್ವಾಮಿ

ರಾಜ್ಯದಲ್ಲಿನ ರಸಗೊಬ್ಬರ ಸಮಸ್ಯೆ ಬಗ್ಗೆ ಮಾತನಾಡಲು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರಲ್ಲಿ ಅಧಿಕೃತವಾಗಿ ಸಮಯ ಕೇಳಿದರೂ ಅವಕಾಶ ನೀಡುತ್ತಿಲ್ಲ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಬೇಸರ ವ್ಯಕ್ತಪಡಿಸಿದರು.;

Update: 2025-08-07 08:35 GMT

ಕೃಷಿ ಸಚಿವ ಚಲುವರಾಯಸ್ವಾಮಿ

ಕರ್ನಾಟಕಕ್ಕೆ ಹಂಚಿಕೆಯಾಗಿರುವ ರಸಗೊಬ್ಬರದ ಪೈಕಿ ಕೇಂದ್ರ ಸರ್ಕಾರ 1.5 ಲಕ್ಷ ಮೆಟ್ರಿಕ್‌ ಟನ್‌ ಬಾಕಿ ಉಳಿಸಿಕೊಂಡಿದೆ.  ದಾಸ್ತಾನು ಪೂರೈಸುವವರೆಗೂ ರಸಗೊಬ್ಬರ ಸಮಸ್ಯೆ ಇದ್ದೇ ಇರುತ್ತದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿನ ರಸಗೊಬ್ಬರ ಸಮಸ್ಯೆ ಬಗ್ಗೆ ಚರ್ಚಿಸಲು ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರನ್ನು ಸಮಯ ಕೇಳಿದರೂ ಅವಕಾಶ ನೀಡುತ್ತಿಲ್ಲ. ಇತ್ತೀಚೆಗ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದಾಗಲಾದರೂ  ಸಮಯ ನೀಡಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 

ರಸಗೊಬ್ಬರ ಸೂಕ್ತ ಪ್ರಮಾಣದಲ್ಲಿ ಪೂರೈಕೆಯಾಗದಿರುವ ಬಗ್ಗೆ ಬಿಜೆಪಿ ನಾಯಕರು ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಬೇಕು. ನನ್ನ ರಾಜೀನಾಮೆ ಕೇಳುವ ಮುನ್ನ ಕೇಂದ್ರ ರಸಗೊಬ್ಬರ ಸಚಿವ ಜೆ.ಪಿ. ನಡ್ಡಾ ಅವರ ರಾಜೀನಾಮೆ ಕೇಳಲು ವಿಪಕ್ಷ ನಾಯಕ ಆರ್.‌ ಅಶೋಕ್‌ಗೆ ಧೈರ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ.

ರೈತರಿಗೆ ಲಾಠಿ ಏಟು

ರಾಜ್ಯದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದ ರಸಗೊಬ್ಬರಕ್ಕಾಗಿ ರೈತರು ಗೋದಾಮುಗಳು ಹಾಗೂ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತು ಯೂರಿಯಾ ಖರೀದಿಸುತ್ತಿದ್ದಾರೆ. ಆದರೆ, ಕೆಲವೆಡೆ ರಸಗೊಬ್ಬರ ಪೂರೈಕೆ ಕಡಿಮೆ ಇರುವ ಕಾರಣ ರೈತರು ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದರು. ಬುಧವಾರ ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನಲ್ಲಿ ರಸಗೊಬ್ಬರದ ಅಂಗಡಿ ಮುಂದೆ ನಿಂತಿದ್ದ ರೈತರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ ಎಂದು ಪ್ರತಿ ಪಕ್ಷ ನಾಯಕ ಆರ್‌. ಅಶೋಕ್‌ ಆರೋಪಿಸಿದ್ದಾರೆ. ಆರ್‌. ಅಶೋಕ್‌ ತಮ್ಮ ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

Tags:    

Similar News