ಒಳ ಮೀಸಲಾತಿ ವರದಿ ಯಥಾವತ್ ಜಾರಿ ಮಾಡಿ; ಸಿ.ಎಂಗೆ ಬಹಿರಂಗ ಪತ್ರ ಬರೆದ ದೇವನೂರ ಮಹಾದೇವ
ದಲಿತ ಸಮುದಾಯ ದಿನದಿನಕ್ಕೂ ಚಲನಶೀಲತೆ ಪಡೆದುಕೊಂಡು ಬದಲಾವಣೆಯಾಗುತ್ತಿರುವುದರಿಂದ ಅದಕ್ಕೆ ತಕ್ಕಂತೆ ಮೀಸಲಾತಿ ಪ್ರಾತಿನಿಧ್ಯ ನೀಡಬೇಕು ಎಂದು ಮನವಿ ಮಾಡಿದ್ದಾರೆ.;
ನ್ಯಾ.ನಾಗಮೋಹನ್‌ದಾಸ್ ಆಯೋಗದ ವರದಿಯನ್ನು ಯಥಾವತ್ತಾಗಿ ಅನುಷ್ಠಾನ ಮಾಡುವಂತೆ ಸಾಹಿತಿ ದೇವನೂರ ಮಹಾದೇವ ಅವರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅವರು, ಯಾವುದೇ ವಿಳಂಬವಿಲ್ಲದಂತೆ ವರದಿ ಜಾರಿ ಮಾಡುವಂತೆ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೇವನೂರ ಮಹಾದೇವ ಅವರು ಬರೆದಿರುವ ಪತ್ರದ ಸಾರಾಂಶ ಇಂತಿದೆ.
"ನಾನು ಗೊಂದಲ, ಆತಂಕಗಳ ನಡುವೆ ಈ ಪತ್ರ ಬರೆಯುತ್ತಿರುವೆ. ಒಳಮೀಸಲಾತಿ ವರದಿ ವಿವಾದಕ್ಕೊಳಗಾಗಿ, ಎಲ್ಲಿ ಮುಂದೂಡಲ್ಪಡುತ್ತದೊ ಎಂಬುದು ನನ್ನನ್ನು ತುಂಬಾ ಕಾಡುತ್ತಿದೆ. ಜೊತೆಗೆ, ಖಾಲಿ ಇರುವ ಉದ್ಯೋಗಗಳಿಗೂ ನೇಮಕಾತಿ ಇಲ್ಲದೇ ಏಗುತ್ತಿರುವ ತರುಣರು, ತಮ್ಮ ತಾರುಣ್ಯ ಕಳೆದುಕೊಂಡು ಮಧ್ಯ ವಯಸ್ಕರಾಗುತ್ತಿದ್ದಾರೆ. ಇದು ತುಂಬಾ ದಯನೀಯ ಪರಿಸ್ಥಿತಿ. ಹಾಗಾಗಿ ವರದಿಯನ್ನು ಯಥಾವತ್ತಾಗಿ ಮಾಡಬೇಕು ಎಂಬುದೇ ನನಗೆ ತೋರುತ್ತಿರುವ ಪರಿಹಾರ ಎಂದು ಹೇಳಿದ್ದಾರೆ.
ದಲಿತ ಸಮುದಾಯ ದಿನದಿನಕ್ಕೂ ಚಲನಶೀಲತೆ ಪಡೆದುಕೊಂಡು ಬದಲಾವಣೆಯಾಗುತ್ತಿರುವುದರಿಂದ ಅದಕ್ಕೆ ತಕ್ಕಂತೆ ಮೀಸಲಾತಿ ಪ್ರಾತಿನಿಧ್ಯ ನೀಡಬೇಕು. ಕಾಲಕಾಲಕ್ಕೆ ಹೊಸ ದತ್ತಾಂಶಗಳಿಂದ ಒಳ ಮೀಸಲಾತಿ ಪ್ರಮಾಣವನ್ನು ಪರಿಷ್ಕರಿಸಲು, ಹಿಂದುಳಿದ ವರ್ಗಗಳಿಗೆ ಇರುವಂತೆಯೇ, ಪರಿಶಿಷ್ಟ ಜಾತಿಗಳ ಆಯೋಗಕ್ಕೂ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ಒದಗಿಸಬೇಕು ಎಂಬುದು ನನ್ನ ಭಾವನೆ. ಈ ರೀತಿಯಾದರೆ ಆಯೋಗದ ಮುಂದೆ, ನ್ಯಾ. ನಾಗಮೋಹನ್ ದಾಸ್ ಅವರ ವರದಿಯ ಬಗ್ಗೆ ಇರಬಹುದಾದ ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಲು ಹಾಗೂ ಪರಿಹಾರ ಕಂಡುಕೊಳ್ಳಲು ಸಾಧ್ಯತೆ ಹೆಚ್ಚುತ್ತದೆ ಎಂದಿದ್ದಾರೆ.
ಈ ಹಿಂದೆ ಮೀಸಲಾತಿ ಹೆಚ್ಚಳ ಆಯೋಗದ ಅಧ್ಯಕ್ಷರಾಗಿ ನ್ಯಾ. ನಾಗಮೋಹನ್ ದಾಸ್ ಸಲ್ಲಿಸಿದ್ದ ವರದಿಯಲ್ಲಿ 'ಪರಿಶಿಷ್ಟ ಜಾತಿ ಸಮುದಾಯವು ಶೇ 17.98, ಪರಿಶಿಷ್ಟ ಪಂಗಡವು ಶೇ7.41 ಜನಸಂಖ್ಯೆ ಇರುವುದರಿಂದ ಎಸ್‌ಸಿಗೆ ಶೇ18 ಹಾಗೂ ಎಸ್‌ಟಿಗೆ ಶೇ7.50 ನೀಡುವುದು ಸೂಕ್ತ' ಎಂದಿದ್ದರು. (ಆದರೆ, ಅಂದು ಆ ಆಯೋಗದ ಮುಂದೆ ಶೇ17ಗೆ ಏರಿಸುವ ವಿಚಾರವಷ್ಟೇ ಇದ್ದುದರಿಂದ ಶಿಫಾರಸ್ಸು ಅಷ್ಟಕ್ಕೆ ಸೀಮಿತವಾಗಿತ್ತು). ತಾವು ಶೇ 1 ಹೆಚ್ಚಳದ ನಿರ್ಧಾರ ಕೈಗೊಂಡರೆ ಹೆಚ್ಚುವರಿಯಾಗಿ ಸಿಗುವ ಶೇ 1 ನಿಂದ ಇಂದಿನ ಗೊಂದಲ ಪರಿಹರಿಸಿಕೊಳ್ಳಬಹುದಾದ ಸಾಧ್ಯತೆ ಇದೆ. ಇದು ಸರ್ಕಾರದ ಕೈಯಲ್ಲೇ ಇದೆ ಎಂದುಕೊಂಡಿದ್ದೇನೆ. ನೀವು ಈ ಕುರಿತು ಆಶ್ವಾಸನೆ ನೀಡಿದರೂ ದಲಿತ ಸಮುದಾಯ ನಂಬುತ್ತದೆ ಎಂದು ದೇವನೂರ ಮಹಾದೇವ ಹೇಳಿದ್ದಾರೆ.
01-08-2024ರ ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಪರಿಶಿಷ್ಟ ಜಾತಿಗಳು ವೈವಿಧ್ಯಮಯ ಭಿನ್ನರೂಪತೆಯ (Heterogeneous) ಗುಂಪುಗಳಾಗಿವೆ ಎಂದು ಅಭಿಪ್ರಾಯ ನೀಡಿದೆ. ವರ್ಗೀಕರಣ ನಿರ್ಧರಿಸುವಾಗ ಸರ್ವಾಂಗೀಣ ಹಿಂದುಳಿದಿರುವಿಕೆಯನ್ನೂ ಪರಿಗಣಿಸಿ ನಿರ್ಧರಿಸಬೇಕಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನ್ಯಾ.ನಾಗಮೋಹನ್ ದಾಸ್ ಅವರ ವರದಿಯನ್ನು ಗಮನಿಸಿದರೆ ಅದು ಸುಪ್ರೀಂಕೋರ್ಟ್ ಆಶಯಕ್ಕೆ ತಕ್ಕಂತೆಯೇ ಇರುವಂತೆ ಕಾಣಿಸುತ್ತದೆ ಎಂದು ಹೇಳಿದ್ದಾರೆ.
ಇದಲ್ಲದೆ, ನ್ಯಾ. ನಾಗಮೋಹನ್ ದಾಸ್ ವರದಿಯು ಸಮಗ್ರ ಸಮೀಕ್ಷೆ ಮಾಡುವ ಮೂಲಕವೇ ಅಂಕಿ-ಅಂಶಗಳನ್ನು ಸಂಗ್ರಹಿಸಿದೆ. ವಿಸ್ತಾರವಾದ ಸಮೀಕ್ಷೆ ಮಾಡಿ ಶೇ 94 ರಷ್ಟು ಜನರ ಮಾಹಿತಿ ಸಂಗ್ರಹಿಸಿದೆ. ಮನೆ ಮನೆ ಸರ್ವೇ, ನಿಗದಿತ ಕೇಂದ್ರಗಳಲ್ಲಿ ಸರ್ವೆ, Online ಸರ್ವೆ ಅವಕಾಶ ಹೀಗೆ ಸಮಗ್ರ ಪ್ರಯತ್ನ ಮಾಡಿದೆ. ಈ ರೀತಿ ಸಮೀಕ್ಷೆ ಅಪರೂಪ. ಮೊದಲು ಇದನ್ನು ಎಲ್ಲರೂ ಗೌರವಿಸಬೇಕಾಗಿದೆ. ಹಾಗೆಂದು ಈಗ ಎದ್ದಿರುವ ಆಕ್ಷೇಪಣೆಗಳನ್ನು ತಳ್ಳಿ ಹಾಕಬೇಕಿಲ್ಲ. ಅವನ್ನು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶಾಶ್ವತ ಆಯೋಗಕ್ಕೆ ಹೆಚ್ಚಿನ ಅಧಿಕಾರ ಮತ್ತು ಕಾರ್ಯವ್ಯಾಪ್ತಿಯನ್ನು ತಾವು ಘೋಷಣೆ ಮಾಡುವುದಾದರೆ, ಅದು ಮುಂದಿನ ದಿನಗಳಲ್ಲಿ ಕಾಲಕಾಲಕ್ಕೆ ಲಭ್ಯವಾಗುವ ಜಾತಿ/ಜನಗಣತಿಯ ದತ್ತಾಂಶಗಳ ಮೂಲಕ ಪರಿಷ್ಕರಣೆಯ ಮೂಲಕ ಸಮತೋಲನ ಮಾಡಲು ಅವಕಾಶವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಶೇ 18 ಮತ್ತು ಶೇ 7.5 ಮಾಡುವ ಬಗ್ಗೆ ಆಶ್ವಾಸನೆ ನೀಡುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಶಾಶ್ವತ ಆಯೋಗಕ್ಕೆ ಹೆಚ್ಚಿನ ಕಾರ್ಯವ್ಯಾಪ್ತಿ ಹಾಗೂ ಅಧಿಕಾರದ ಘೋಷಣೆ ಮಾಡುವುದು. ಮೀಸಲಾತಿಯನ್ನು ನೀಡದಿರುವುದಕ್ಕಾಗಿಯೇ ಹುಟ್ಟಿಕೊಂಡಿದೆಯೇನೋ ಎಂಬಂತಿರುವ 'ಗುತ್ತಿಗೆ ಕೆಲಸ'ಗಳಲ್ಲು ಮೀಸಲಾತಿ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುವುದು. ಅಷ್ಟೇ ಅಲ್ಲದೇ, ಪರಿಶಿಷ್ಟ ಜಾತಿ/ಪಂಗಡಗಳ ಹೆಸರಿನಲ್ಲಿ ಸುಳ್ಳು ಪ್ರಮಾಣ ಪತ್ರ ಪಡೆದುಕೊಂಡಿರುವವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಅಗತ್ಯವಿರುವ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ನಿರ್ಧಾರ ಪ್ರಕಟಿಸಬೇಕು. ಇದರಿಂದ ನ್ಯಾ. ನಾಗಮೋಹನ್‌ದಾಸ್ ವರದಿಯನ್ನು ತಕ್ಷಣವೇ ಅನುಷ್ಠಾನ ಮಾಡಲು ಪೂರಕ ವಾತಾವರಣ ಉಂಟು ಮಾಡಬಹುದು ಎಂದು ಭಾವಿಸುತ್ತೇನೆ ಪತ್ರದಲ್ಲಿ ವಿವರಿಸಿದ್ದಾರೆ.