ನಮ್ಮನ್ನು ಬಂಧಿಸಿದರೆ ರಾಜ್ಯವೇ ಹೊತ್ತಿ ಉರಿಯುತ್ತದೆ: ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ
ಫೆ.28 ರೊಳಗೆ ಬೆಳಗಾವಿ ಕನ್ನಡಮಯವಾಗುತ್ತದೆ ಎಂದು ಹೇಳಿ ಸರ್ಕಾರ ಸಮಯ ತೆಗೆದುಕೊಂಡಿದೆ. ಮಾತು ತಪ್ಪಿದರೆ 32 ಜಿಲ್ಲೆಯವರು ಗುಡುಗಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ನಾರಾಯಣ ಗೌಡ ಎಚ್ಚರಿಕೆ ನೀಡಿದ್ದಾರೆ.;
ಬೆಳಗಾವಿ: ಮುಂದಿನ ಯಾವುದೇ ಹೋರಾಟದಲ್ಲೂ ನಮ್ಮನ್ನು ಬಂಧಿಸಿ ಜೈಲಿಗೆ ಹಾಕಿದರೆ ಇಡೀ ರಾಜ್ಯವೇ ಹೊತ್ತಿ ಉರಿಯುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ನಾರಾಯಣ ಗೌಡ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಕನ್ನಡ ಗಟ್ಟಿಗೊಳಿಸುವ ಉದ್ದೇಶದಿಂದ ಬೆಳಗಾವಿ ಕನ್ನಡ ಭವನದಲ್ಲಿ ಇಂದು ಕರವೇ ರಾಜ್ಯ ಕಾರ್ಯಕಾರಣಿ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಾರಾಯಣಗೌಡ ಅವರು, ಫೆಬ್ರವರಿ.28 ರ ಒಳಗೆ ಬೆಳಗಾವಿ ಕನ್ನಡಮಯವಾಗುತ್ತದೆ ಎಂದು ಸರಕಾರ ಹೇಳಿ ಸಮಯ ತೆಗೆದುಕೊಂಡಿದೆ. ಸರಕಾರ ಮಾತು ತಪ್ಪಿದರೆ 32 ಜಿಲ್ಲೆಯವರು ಗುಡುಗಬೇಕಾಗುತ್ತದೆ ಎಂದು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಕನ್ನಡ ಭಾಷೆ ಉಳಿವಿಗಾಗಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಯಿತು. ಬೆಂಗಳೂರಿನಲ್ಲಿ ಕರವೇ ಹೋರಾಟದ ಸಂದರ್ಭದಲ್ಲಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯುತ್ತದೆ. ಸಭೆಯಲ್ಲಿ ಪೋಲಿಸ್ ಕಮಿಷನರ್ ದಯಾನಂದ ಅವರು ಸಿದ್ದರಾಮಯ್ಯ ಅವರಿಗೆ ತಲೆ ತುಂಬುವ ಕೆಲಸ ಮಾಡಿದರು. ನಾರಾಯಣಗೌಡ ಅವರನ್ನು ಮೂರು ತಿಂಗಳು ಬಂಧಿಸಿದರೆ ಚೆನ್ನಾಗಿರುತ್ತದೆ ಎಂದು ದಯಾನಂದ ಹೇಳಿದ್ದ ಎಂದು ಆರೋಪಿಸಿದರು.
ಪ್ರತಿ ಹೋರಾಟದಲ್ಲಿ ನಮಗೆ ಮಾಧ್ಯಮಗಳು ಸಾಕಷ್ಟು ಸಹಕಾರ ನೀಡುವ ಕೆಲಸ ಮಾಡಿವೆ. ನಮ್ಮ ಹೋರಾಟದಲ್ಲಿ ನಮಗೆ ಸದಾ ಬೆನ್ನೆಲುಬಾಗಿ ನಿಂತು ನಮ್ಮ ಜೈಲಿನಿಂದ ಬಿಡಿಸಿದವರು ನಮ್ಮ ವಕೀಲರು ಎಂದು ಹೇಳಿ ಮಾಧ್ಯಮ ಹಾಗೂ ವಕೀಲರಿಗೆ ಅಭಿನಂದನೆ ಸಲ್ಲಿಸಿದರು.
ನಮ್ಮನ್ನು ಬಂಧಿಸಿ ನಮ್ಮನ್ನ ಇನ್ನು ಜೈಲಿಗೆ ಹಾಕಿ ಭಯ ಪಡುವುದಿಲ್ಲ. ಹೆಂಡರು ಹೋಗಲಿ ಮಕ್ಕಳು ಹೋಗಲಿ, ಕನ್ನಡ ನಮ್ಮ ಜಗತ್ತ ಬೆಳಗಿಸೊವರೆಗೂ ನಮ್ಮ ಹೋರಾಟ ನಡೆಯಲಿದೆ. ನಾಡಿನ ಸಲುವಾಗಿ ಮನೆ ಬಿಟ್ಟು ಹೊರಗೆ ಬಂದು ಹೋರಾಟ ಮಾಡುವವರು ನಾವು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಹಾಗೂ ಯಡಿಯೂರಪ್ಪ ಅವರೇ ನಿಮ್ಮ ಕೊಡುಗೆ ರಾಜ್ಯಕ್ಕೆ ಏನಾದರೂ ಇದೇಯಾ? ರಾಜಕಾರಣಿಗಳ ಕೊಡುಗೆ ಬಗ್ಗೆ ಪ್ರಶ್ನೆ ಮಾಡಿದಾಗ ಬರುವ ಉತ್ತರ ಶೂನ್ಯ ಎಂದರು.
ಬೆಳಗಾವಿ ನಮ್ಮದು ಎನ್ನುವುದು ಕರವೇ ಹೋರಾಟದಿಂದ ಶುರುವಾಗಿದೆ. ಕರ್ನಾಟಕದ ಸಚಿವ ಸಂಪುಟ ಅಂದರೆ ನಮ್ಮ ಕನ್ನಡಿಗರು. ಅಪ್ಪಟ ಕನ್ನಡಿಗರು ಈ ಸಭೆಯಲ್ಲಿ ಕುಳಿತಿರುವುದೆ ನಮ್ಮ ಸಚಿವ ಸಂಪುಟ ಎಂದರು.
ಪಾಟೀಲ ಪುಟ್ಟಪ್ಪ, ಕುವೆಂಪು ಅವರೇ ನಮ್ಮ ನಾಯಕರು, ಅವರೆ ನಮ್ಮ ದೇವರು. ನಮಗೆ ಕನ್ನಡವೇ ಧರ್ಮ, ಕನ್ನಡವೇ ಜಾತಿ. ನಿಮ್ಮದು ಯಾವುದು ಎಂದು ರಾಜಕೀಯ ನಾಯಕರ ವಿರುದ್ಧ ಅಕ್ರೋಶ ಹೊರಹಾಕಿದ ನಾರಾಯಣಗೌಡ, ನನ್ನನ್ನು ಅಡಗಿಸಿದರೆ ಕರವೇ ಮುಚ್ಚುತ್ತೆ ಎಂದು ತಿಳಿದು ಕೊಂಡಿದ್ದೀರಾ? ಕರವೇ ಬೇರು ಸಾಕಷ್ಟು ಆಳವಾಗಿದೆ, ಅದನ್ನು ಅಡಗಿಸಲು ಅಸಾಧ್ಯವಾಗದ ಮಾತು ಎಂದರು.
ಕನ್ನಡವನ್ನ, ಕರವೇ ಅವರನ್ನ ಎದುರು ಹಾಕಿಕೊಂಡವರು ಯಾರು ಉಳದಿಲ್ಲಾ ನಮ್ಮ ಮುಂದೆ. ನಮ್ಮ ಹೆಣ್ಣ ಮಕ್ಕಳು ಶಾಲು ಹಾಕಿ ಕೂತಕ್ಕೊಂಡಾರಲ್ಲಾ ಅವರೆಲ್ಲಾ ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ ಹೆತ್ತವರು ಅನಸುತ್ತದೆ. ನಾನು ನನ್ನ 35 ವರ್ಷದಲ್ಲಿ ನನ್ನ ಬದುಕಿನ ಬಗ್ಗೆ ಯೋಚನೆ ಮಾಡಿಲ್ಲ. ಇವತ್ತಿಗೂ ನಾನು ನನ್ನ ಬದುಕಿನ ಬಗ್ಗೆ ಯೋಚನೆ ಮಾಡಿಲ್ಲ. ನಾನು ಇವತ್ತಿಗೂ ಎದೆಗುಂದದೆ ಮಾತಾಡುವ ಶಕ್ತಿ ಕೊಟ್ಟಿದ್ದು ನೀವು ಎಂದು ಕಾರ್ಯಕರ್ತರ ಬಗ್ಗೆ ಹೊಗಳಿಕೆಯ ಮಾತುಗಳನ್ನಾಡಿದರು.