Belagavi Winter Session| ಉತ್ತರ ಕರ್ನಾಟಕದ ಸಮಸ್ಯೆ ಚರ್ಚಿಸದಿದ್ದರೆ ಪ್ರತ್ಯೇಕ ರಾಜ್ಯದ ಕೂಗು
ಅಧಿವೇಶನದಲ್ಲಿ ಇದೇ ವಿಚಾರ ತೆಗೆದುಕೊಂಡು ಕಲಾಪದ ಸಮಯ ವ್ಯರ್ಥ ಮಾಡಿದರೆ ಪ್ರತ್ಯೇಕ ರಾಜ್ಯದ ಕೂಗು ಮತ್ತೊಮ್ಮೆ ಮೊಳಗಿಸಲು ಉತ್ತರ ಕರ್ನಾಟಕ ವಿವಿಧ ಸಂಘಟನೆಗಳು ಸಿದ್ಧವಾಗಿವೆ.;
ಅಭಿವೃದ್ಧಿಯಲ್ಲಿ ಉತ್ತರ ಕರ್ನಾಟಕದ ಬಗ್ಗೆ ತಾರತಮ್ಯ ಧೋರಣೆ ಕಡಿಮೆಯಾಗಿಲ್ಲ. ಸರ್ಕಾರಗಳು ಬದಲಾದರೂ ಪ್ರಾದೇಶಿಕ ಅಸಮಾನತೆ ಸರಿ ಹೋಗಿಲ್ಲ. ಅಭಿವೃದ್ಧಿ ಕಡೆಗಣಿಸಿದ್ದರಿಂದಲೇ ಪ್ರತ್ಯೇಕ ರಾಜ್ಯದ ಕೂಗು ಆಗಿಂದಾಗ್ಗೆ ಪ್ರತಿಧ್ವನಿಸುತ್ತಲೇ ಇದೆ. ಆಡಳಿತ ವಿಕೇಂದ್ರೀಕರಣಕ್ಕಾಗಿ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಿಸಿದರೂ ಅದು ವರ್ಷಕ್ಕೊಮ್ಮೆ ಅಧಿವೇಶನಕ್ಕಷ್ಟೇ ಸೀಮಿತ ಎಂಬ ಆರೋಪಗಳು ಕೇಳಿಬರುತ್ತಿವೆ. ಹೀಗಿರುವಾಗ ಡಿ.9 ರಿಂದ ಮತ್ತೊಮ್ಮೆ ಚಳಿಗಾಲದ ಅಧಿವೇಶನ ಆರಂಭವಾಗುತ್ತಿದೆ. ಉತ್ತರ ಕರ್ನಾಟಕದ ಸಮಸ್ಯೆಗಳಷ್ಟೇ ಚರ್ಚೆಯಾಗಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ.
ಮತ್ತೆ ಪ್ರತ್ಯೇಕ ರಾಜ್ಯದ ಕೂಗಿನ ಎಚ್ಚರಿಕೆ
ವಿಧಾನಮಂಡಲ ಅಧಿವೇಶನದಲ್ಲಿ ಮುಡಾ, ವಾಲ್ಮೀಕಿ, ವಕ್ಫ್, ಬಾಣಂತಿಯರ ಸಾವಿನ ವಿಚಾರ ಇಟ್ಟುಕೊಂಡು ಆಡಳಿತ ಹಾಗೂ ಪ್ರತಿಪಕ್ಷಗಳ ಜಂಗೀಕುಸ್ತಿ ನಡೆಸುವ ಸಾಧ್ಯತೆಗಳು ದಟ್ಟವಾಗಿವೆ.
ಅಧಿವೇಶನದಲ್ಲಿ ಇದೇ ವಿಚಾರ ತೆಗೆದುಕೊಂಡು ಕಲಾಪದ ಸಮಯ ವ್ಯರ್ಥ ಮಾಡಿದರೆ ಪ್ರತ್ಯೇಕ ರಾಜ್ಯದ ಕೂಗು ಮತ್ತೊಮ್ಮೆ ಮೊಳಗಿಸಲು ಉತ್ತರ ಕರ್ನಾಟಕ ವಿವಿಧ ಸಂಘಟನೆಗಳು ಸಿದ್ಧವಾಗಿವೆ.
ಉತ್ತರ ಕರ್ನಾಟಕದಲ್ಲಿ ನೀರಾವರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಕಬ್ಬು ಬೆಳೆಗಾರರ ಸಮಸ್ಯೆ ಬೆಟ್ಟದಷ್ಟಿದೆ. ಸರ್ಕಾರಿ ಇಲಾಖೆಗಳನ್ನು ಸ್ಥಳಾಂತರಿಸುವ ಭರವಸೆಗಳು ಈಡೇರಿಲ್ಲ. ಇಂತಹ ಅನೇಕ ಸಮಸ್ಯೆಗಳಿಂದ ಉತ್ತರ ಕರ್ನಾಟಕ ನಲುಗಿತ್ತಿದೆ. ಹಾಗಾಗಿ ಇಲ್ಲಿನ ಸಮಸ್ಯೆಗಳಷ್ಟೇ ಅಧಿವೇಶನದಲ್ಲಿ ಚರ್ಚೆಯಾಗಬೇಕು ಎಂಬುದು ಜನರ ಪ್ರಬಲ ಒತ್ತಾಯವಾಗಿದೆ.
ಉತ್ತರ ಕರ್ನಾಟಕದ ಒಟ್ಟು 13 ಜಿಲ್ಲೆಗಳಲ್ಲಿ ನೀರಾವರಿ ಸಮಸ್ಯೆಯೇ ಪ್ರಮುಖವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ, ಕಳಸಾ ಬಂಡೂರಿ ಯೋಜನೆಗಳು ನನೆಗುದಿಗೆ ಬಿದ್ದಿವೆ. ಏನ ನೀರಾವರಿ ಯೋಜನೆಗಳು ಕುಂಟುತ್ತಾ ಸಾಗಿವೆ. ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿ, ಮಲಪ್ರಭಾ, ಘಟಪ್ರಭಾ,, ತುಂಗಾ ನದಿ ಹರಿಯುತ್ತವೆ. ಬಹಳಷ್ಟು ರೈತರಿಗೆ ಇದೇ ನದಿ ಯೋಜನೆಗಳ ಮೂಲಕ ನೀರು ಪೂರೈಕೆಯಾಗುತ್ತಿದೆ. ಆದರೆ, ನೀರಾವರಿ ಯೋಜನೆಗಳು ಅನುದಾನದ ಕೊರತೆಯಿಂದ ತೆವಳುತ್ತಿವೆ. ಹಾಗಾಗಿ ರೈತರಿಗೆ ಪೂರ್ಣ ಪ್ರಮಾಣದಲ್ಲಿ ನೀರಾವರಿ ಸೌಲಭ್ಯ ಸಿಕ್ಕಿಲ್ಲ ಎಂಬುದು ಈ ಭಾಗದ ರೈತರ ಮಾತು.
ಶಾಸಕರ ಮೋಜು ಮಸ್ತಿಗೆ ಅಧಿವೇಶನ
ವರ್ಷದಲ್ಲಿ ಒಮ್ಮೆ ಬೆಳಗಾವಿ ಅಧಿವೇಶನ ನಡೆಸಲಾಗುತ್ತದೆ. ಆದರೆ, ಅಭಿವೃದ್ಧಿ ಕೇಂದ್ರಿತ ಚರ್ಚೆಯ ಬದಲು ಅನ್ಯ ವಿಚಾರಗಳಲ್ಲಿ ಕಾಲಹರಣ ಮಾಡಿ ಗೋವಾಗೆ ಹೋಗಿ ಮೋಜು ಮಸ್ತಿ ಮಾಡುತ್ತಾರೆ. ಉತ್ತರ ಕರ್ನಾಟಕದ ಅಭಿವೃದ್ಧಿ ಕುರಿತು ಕಾಳಜಿ ಇದ್ದರೆ ವರ್ಷದಲ್ಲಿ ಎರಡು ಬಾರಿ ಅಧಿವೇಶನ ಮಾಡಬೇಕು.
ಅಧಿವೇಶನಕ್ಕಾಗಿ ಅಂದಾಜು 25 ಕೋಟಿ ಖರ್ಚು ಮಾಡುತ್ತಾರೆ. ಅನ್ಯ ವಿಚಾರಗಳಲ್ಲಿ ಸಮಯ ವ್ಯರ್ಥ ಮಾಡಿದರೆ ಪ್ರತ್ಯೇಕ ರಾಜ್ಯ ಕೂಗು ಮೊಳಗಿಸುವುದು ನಿಶ್ಚಿತ. ಈ ಬಗ್ಗೆ ಭಾನುವಾರ(ಡಿ.8) ಬೆಂಗಳೂರಿನಲ್ಲಿ ರಾಜ್ಯ ರೈತ ಸಂಘದ ಸಭೆ ನಡೆಯಲಿದ್ದು, ಅಧಿವೇಶನದ ವೇಳೆ ಬೇಡಿಕೆಗಳ ಈಡೇರಿಕೆಗೆ ನಡೆಸುವ ಹೋರಾಟದ ರೂಪುರೇಷಗಳನ್ನು ಚರ್ಚಿಸಲಾಗುವುದು ಎಂದು ರಾಜ್ಯ ರೈತ ಸಂಘದ ಉಪಾಧ್ಯಕ್ಷ ಮುತ್ತಪ್ಪ ಎಚ್. ಕೋಮಾರ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
2014ರ ಅಧಿವೇಶನದಲ್ಲಿ ಕಬ್ಬು ಬೆಳೆಗಾರರಿಗೆ ಸಹಾಯಧನ ಬಿಡುಗಡೆ ಮಾಡಿದ್ದು ಬಿಟ್ಟರೆ ಈವರೆಗೆ ಬೇರೆ ಯಾವುದೇ ಬೇಡಿಕೆ ಈಡೇರಿಸಿದ ನಿದರ್ಶನಗಳಿಲ್ಲ. ರಾಜ್ಯದ ಶೇ75ರಷ್ಟು ಕಬ್ಬು ಬೆಳೆಯುವ ಉತ್ತರ ಕರ್ನಾಟಕದಲ್ಲಿ ಸಮಸ್ಯೆಗಳು ವಿಪರೀತವಾಗಿವೆ. ಸಕ್ಕರೆ ಕಾರ್ಖಾನೆಗಳಿಂದ ತೂಕದಲ್ಲಿ ಮೋಸ, ರಿಕವರಿಯಲ್ಲಿ ಮೋಸವಾಗುತ್ತಿದೆ. ಸಮಿತಿಗಳಲ್ಲಿ ರೈತರಿಗೆ ಪ್ರಾತಿನಿಧ್ಯ ನೀಡುತ್ತಿಲ್ಲ. ಕಬ್ಬಿಗೆ ಎಫ್‌ಆರ್‌ಪಿ ಬದಲು ಎಂಎಸ್‌ಪಿ ದರ ನಿಗದಿಪಡಿಸಬೇಕು. ಈ ಎಲ್ಲ ವಿಚಾರಗಳನ್ನು ಅಧಿವೇಶನದಲ್ಲಿ ಚರ್ಚಿಸಬೇಕು ಎಂದು ಒತ್ತಾಯಿಸಿದರು.
ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಿ
ಉತ್ತರ ಕರ್ನಾಟಕದ ಜನರ ಕೃಷಿಗೆ ಪೂರಕವಾಗಿರುವ ಕೃಷ್ಣಾ ಮೇಲ್ದಂಜೆ ಯೋಜನೆಗೆ ಆದ್ಯತೆ ನೀಡಬೇಕು. ಬಾಗಲಕೋಟೆ, ಬಿಜಾಪುರ ಸೇರಿದಂತೆ ಐದು ಜಿಲ್ಲೆಗಳ ಕೃಷಿಗೆ ನೀರೊದಗಿಸುವ ಈ ಯೋಜನೆಗೆ ಇನ್ನು 1 ಲಕ್ಷ ಕೋಟಿ ಅನುದಾನ ಅಗತ್ಯವಾಗಿದೆ. ಈ ಕುರಿತು ಸರ್ಕಾರ ಗಂಭೀರ ಚರ್ಚೆ ನಡೆಸಿ ಕ್ರಮ ಕೈಗೊಳ್ಳಬೇಕು. ಸುಮ್ಮನೆ ಕಾಟಾಚಾರಕ್ಕೆ ಅಧಿವೇಶನ ನಡೆಸುವುದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಹೇಳಿದರು.
ಅಧಿವೇಶನ ಮನರಂಜನೆ ನೀಡುವ ಡ್ರಾಮ
ಚಳಿಗಾಲದ ಅಧಿವೇಶನ ಎಂಬುದು ಮನರಂಜನೆ ನೀಡುವ ಡ್ರಾಮ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಅಂತ ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡಲಾಗುತ್ತಿದೆ. ಕಲಬುರಗಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ರೈತರಿಗೆ ಬೆಳೆ ವಿಮೆ ಸಿಕ್ಕಿಲ್ಲ. ಕಬ್ಬಿಗೆ ವೈಜ್ಞಾನಿಕವಾದ ಬೆಲೆ ನಿಗದಿ ಮಾಡಿಲ್ಲ, ಹಳಿಯಾಳ ರೈತರಿಗೆ ಸಕ್ಕರೆ ಕಾರ್ಖಾನೆಗಳು ಕಬ್ಬಿನ ಬಾಕಿ ಹಣ ಕೊಟ್ಟಿಲ್ಲ. ಒಂದು ಕೈಯಲ್ಲಿ ಹಣ ಬಿಡುಗಡೆಗೆ ಆದೇಶದ ಮತ್ತೊಂದು ಕೈಯಲ್ಲಿ ಹಿಂಪಡೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ರಾಯಚೂರು, ಬಿಜಾಪುರದಲ್ಲಿ ರೈತರ ಸಮಸ್ಯೆಗಳು ಸಾಕಾಷ್ಟಿವೆ. ರೈತರು ಬೆಳೆದ ಭತ್ತದಲ್ಲಿ ಶೇ 30 ರಷ್ಟು ಭತ್ತ ಅಕಾಲಿತ ಮಳೆಯಿಂದ ನಷ್ಟವಾಗಿದೆ. ಒಡಿಶಾ ಹಾಗೂ ತೆಲಂಗಾಣದಲ್ಲಿ ಭತ್ತಕ್ಕೆ ಅಲ್ಲಿನ ಸರ್ಕಾರ ಪ್ರೋತ್ಸಾಹಧನ ನೀಡುತ್ತಿದೆ. ಅದರಂತೆ ರಾಜ್ಯದಲ್ಲೂ ಭತ್ತ ಬೆಳೆಗಾರರಿಗೆ ಪ್ರೋತ್ಸಾಹಧನ ನೀಡಬೇಕು. ಕಳಪೆ ಬೀಜದ ಕಾರಣ ಕಲಬುರಗಿಯಲ್ಲಿ ತೊಗರಿ ಬೆಳೆ ನಷ್ಟವಾಗಿದೆ. ಕೆಲವು ಕಂಪೆನಿಗಳು ಕಳಪೆ ಕೀಟನಾಶಕಗಳನ್ನು ಎಗ್ಗಿಲ್ಲದೇ ಮಾರಾಟ ಮಾಡುತ್ತಿವೆ. ಇದಕ್ಕೆ ಯಾರೊಬ್ಬರೂ ಕಡಿವಾಣ ಹಾಕಿಲ್ಲ ಎಂದು ಕುರುಬೂರು ಶಾಂತಕುಮಾರ್ ಆರೋಪಿಸಿದರು.
ಪ್ರತಿಭಟನೆಗೆ ಅನುಮತಿ ಕೋರಿ 55 ಅರ್ಜಿ
ಪ್ರತಿ ವರ್ಷ ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನೆಗಳು ಸಾಮಾನ್ಯವಾಗಿವೆ. ಈ ಬಾರಿ ಪ್ರತಿಭಟನೆಗೆ ಅನುಮತಿ ಕೋರಿ ಡಿ.6ರವರೆಗೆ ಒಟ್ಟು 55 ಅರ್ಜಿಗಳು ನಗರ ಪೊಲೀಸ್ ಆಯುಕ್ತರ ಕಚೇರಿಗೆ ಸಲ್ಲಿಕೆಯಾಗಿವೆ.
ಈವರೆಗೆ ನಡೆ ಬಹುತೇಕ ಪ್ರತಿಭಟನೆಗಳಲ್ಲಿ ಸಣ್ಣಪುಟ್ಟ ಬೇಡಿಕೆಯಷ್ಟೇ ಈಡೇರಿದೆ. ಉಳಿದಂತೆ ಯಾವುದೇ ಬೇಡಿಕೆಗಳು ಈಡೇರಿಲ್ಲ. ರೈತರು, ಕಾರ್ಮಿಕರು, ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರು, ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರು, ಅನುದಾನಿತ ಶಾಲೆ-ಕಾಲೇಜುಗಳ ಪಿಂಚಣಿ ನೌಕರರು, ಗ್ರಂಥಾಲಯಗಳ ಮೇಲ್ವಿಚಾರಕರು, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರು ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆಗಾಗಿ ಸಿದ್ಧತೆ ನಡೆಸಿವೆ.
ಇನ್ನು ಮೀಸಲಾತಿ ಹೋರಾಟ ತೀವ್ರಗೊಳಿಸಲು ನಿರ್ಧರಿಸಿರುವ ಪಂಚಮಸಾಲಿ ಸಮುದಾಯ 5 ಸಾವಿರ ಟ್ರ್ಯಾಕ್ಟರ್‌ಗಳಲ್ಲಿ ಸುವರ್ಣ ವಿಧಾನಸೌಧ ಮುತ್ತಿಗೆಗೆ ನಿರ್ಧರಿಸಿದೆ.
ಇನ್ನು ಬೆಳಗಾವಿಯ ರೈತ ಮುಖಂಡರೊಬ್ಬರು ಮಾತನಾಡಿ, ಪ್ರತಿ ಬಾರಿ ಅಧಿವೇಶನದ ನೆಪದಲ್ಲಿ ಬಂದು ಮೋಜು ಮಸ್ತಿಗೆ ಶಾಸಕರು ಗೋವಾಗೆ ಹೋಗುತ್ತಾರೆ. ಅಧಿವೇಶನದಲ್ಲಿ ಮುಡಾ, ವಕ್ಫ್ ಇತರೆ ವಿಷಯಗಳನ್ನು ಚರ್ಚಿಸಿ ಸಮಯ ವ್ಯರ್ಥ ಮಾಡಿದರೆ ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ. ಪ್ರತ್ಯೇಕ ರಾಜ್ಯದ ಕೂಗು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಮೊದಲೆರಡು ದಿನ ಕಲಾಪ ನೋಡುತ್ತೇವೆ. ಉತ್ತರ ಕರ್ನಾಟಕ ನೀರಾವರಿ ಯೋಜನೆಗಳಾದ ಕೃಷ್ಣ, ಭದ್ರಾ ಹಾಗೂ ಕಳಸಾಬಂಡೂರಿ ವಿಷಯಗಳ ಚರ್ಚೆ ಆಗದಿದ್ದರೆ ಹುಬ್ಬಳ್ಳಿಯಲ್ಲಿ ಕಪ್ಪುಪಟ್ಟಿ ಧರಿಸಿ ಪ್ರತಿಭಟಿಸುತ್ತೇವೆ. ಮುಂದುವರಿದರೆ ಬೆಳಗಾವಿ ಅಧಿವೇಶನದ ವೇಳೆ ಸಚಿವರು ಕಾರು ತಡೆಯುತ್ತೇವೆ. ನಂತರ ಎಲ್ಲ ಸಂಘಟನೆಗಳು ಸೇರಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯದ ಘೋಷಣೆ ಮೊಳಗಿಸುತ್ತೇವೆ ಎಂದು ಹೇಳಿದ್ದಾರೆ.
ಉತ್ತರ ಕರ್ನಾಟಕದಲ್ಲಿ ಕೈಗಾರಿಕೆಗಳು, ಐಟಿ ಬಿಟಿ ಕಂಪನಿಗಳಿಲ್ಲ. ಇಲ್ಲಿನ ಜನರು ಬೆಂಗಳೂರಿಗೆ ಗುಳೆ ಹೋಗುವ ಸ್ಥಿತಿ ಸೃಷ್ಟಿಯಾಗಿದೆ. ಸರ್ಕಾರಗಳು ಕೇವಲ ಬಾಯಿ ಮಾತಿನ ಭರವಸೆ ನೀಡುತ್ತಾ ಉತ್ತರ ಕರ್ನಾಟಕ ಅಭಿವೃದ್ಧಿ ನಿರ್ಲಕ್ಷಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಅನುಮತಿಗಾಗಿ ಸಮಿತಿ ರಚನೆ
ಅಧಿವೇಶನದ ವೇಳೆ ಪ್ರತಿಭಟನೆಗಳಿಗೆ ಅನುಮತಿ ನೀಡುವುದಕ್ಕಾಗಿಯೇ ಜಿಲ್ಲಾಡಳಿತ ಪ್ರತ್ಯೇಕ ಸಮಿತಿರಚಿಸಿದೆ. ಇಬ್ಬರು ಉಪವಿಭಾಗಾಧಿಕಾರಿಗಳು, ಇಬ್ಬರು ಡಿವೈಎಸ್ಪಿಗಳು, ಹಾಗೂ ಪೊಲೀಸ್ ಆಯುಕ್ತರು ಸಮಿತಿಯಲ್ಲಿ, ಅನುಮತಿ ಕೋರಿ ಬರುವ ಅರ್ಜಿಗಳನ್ನು ವಿಲೇವಾರಿ ಮಾಡಲಿದ್ದಾರೆ.
ಪ್ರತಿಭಟನಾಕಾರರ ಹಕ್ಕೋತ್ತಾಯಗಳ ಮಾಹಿತಿ ಪಡೆದು ಅಧಿವೇಶನದ ಮೇಲೆ ಪರಿಣಾಮ ಬೀರದಂತೆ ಕ್ರಮ ವಹಿಸಲು ಸಮಿತಿ ರಚಿಸಲಾಗಿದೆ. ಕಳೆದ ಅಧಿವೇಶನದಲ್ಲಿ ಗಲಾಟೆ, ತಕರಾರು ಮಾಡಿದ ಸಂಘಟನೆಗಳಿಗೆ ಈ ಬಾರಿ ಅವಕಾಶ ಕೊಡದಿರಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಕಳೆದ ಅಧಿವೇಶನದ ವೇಳೆ ಒಟ್ಟು 74 ಪ್ರತಿಭಟನೆಗಳು ನಡೆದಿದ್ದವು. ಈ ಸಂಖ್ಯೆ ಪ್ರಸಕ್ತ ಅಧಿವೇಶನದ ಅವಧಿಯಲ್ಲಿ 100ರ ಗಡಿ ಮುಟ್ಟಲಿದೆ ಎನ್ನಲಾಗಿದೆ.
ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಈಗಾಗಲೇ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದ್ದಾರೆ. ಆದರೆ, ಪ್ರತಿಪಕ್ಷಗಳು ಅಧಿವೇಶನದಲ್ಲಿ ಯಾವ ಹೆಜ್ಜೆ ಇರಿಸಲಿವೆ ಎಂಬುದು ಕುತೂಹಲ ಕೆರಳಿಸಿದೆ.