ಅನಧಿಕೃತ ಬಿಪಿಎಲ್ ಕಾರ್ಡ್ ರದ್ದಾದರೂ ಗೃಹಲಕ್ಷ್ಮಿ ಯೋಜನೆ ರದ್ದಾಗಲ್ಲ: ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ
ಬಿಪಿಎಲ್ ಕಾರ್ಡ್ನಿಂದ ಎಪಿಎಲ್ ಕಾರ್ಡ್ಗೆ ವರ್ಗಾವಣೆಯಾಗಿದ್ದರೂ ಸಹ ಗೃಹ ಲಕ್ಷ್ಮೀ ಹಣ ಬಂದ್ ಆಗುವುದಿಲ್ಲ. ಬಿಪಿಎಲ್ ಜೊತೆ ಎಪಿಎಲ್ ಕಾರ್ಡ್ದಾರರಿಗೂ ನೀಡಲಾಗುತ್ತೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.;
ಅಕ್ರಮ ಬಿಪಿಎಲ್ ಕಾರ್ಡ್ ರದ್ದಾದ ಕೂಡಲೇ ಗೃಹಲಕ್ಷ್ಮಿ ಯೋಜನೆ 2000 ರೂ. ಖಾತೆಗೆ ಜಮೆ ಆಗುವುದು ರದ್ದಾಗುತ್ತದೆ ಎಂಬ ಆತಂಕ ಹಲವು ಫಲಾನುಭವಿಗಳಿಗೆ ಎದುರಾಗಿದ್ದು, ಇದೀಗ ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಆಹಾರ ಇಲಾಖೆಯು ಅನಧಿಕೃತ ಬಿಪಿಎಲ್ ಕಾರ್ಡ್‌ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಸಾವಿರಾರು ಕಾರ್ಡ್‌ಗಳನ್ನು ರದ್ದು ಮಾಡುತ್ತಿದೆ. ಗೃಹಲಕ್ಷ್ಮಿ ಯೋಜನೆಯ ಇದಕ್ಕೆ ಪೂರಕವೆಂಬಂತೆ ತಾಂತ್ರಿಕ ಕಾರಣಗಳಿಂದ ಹಲವರ ಖಾತೆಗೆ ಹಣ ಜಮೆಯಾಗುವುದು ಸ್ಥಗಿತವಾಗಿದೆ. ಹೀಗಾಗಿ, ಕಾರ್ಡ್ ರದ್ದಾದ ಹಲವರು ಗೃಹಲಕ್ಷ್ಮಿ ಯೋಜನೆಯೂ ಸ್ಥಗಿತವಾಗುತ್ತದೆ ಎಂಬ ಆತಂಕ ಎದುರಾಗಿದೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಬಿಪಿಎಲ್ ಕಾರ್ಡ್ನಿಂದ ಎಪಿಎಲ್ ಕಾರ್ಡ್ಗೆ ವರ್ಗಾವಣೆಯಾಗಿದ್ದರೂ ಸಹ ಗೃಹ ಲಕ್ಷ್ಮೀ ಹಣ ಬಂದ್ ಆಗುವುದಿಲ್ಲ. ಬಿಪಿಎಲ್ ಜೊತೆ ಎಪಿಎಲ್ ಕಾರ್ಡ್ದಾರರಿಗೂ ನೀಡಲಾಗುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟದಲ್ಲಿ ಈವರೆಗೂ ಗೃಹಲಕ್ಷ್ಮಿ ಯೋಜನೆಗೆ 1.25 ಕೋಟಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಸದ್ಯ 1.21 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂಪಾಯಿ ಪಾವತಿಯಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಲ್ಲಿ ಈವರೆಗೂ ಒಟ್ಟು 13 ಕಂತುಗಳು ಬಿಡುಗಡೆಯಾಗಿವೆ. 2023 ಆಗಸ್ಟ್‌ನಿಂದ 2024 ಆಗಸ್ಟ್ ತಿಂಗಳವರೆಗಿನ ಹಣ ಜಮೆ ಆಗಿದೆ. ಸೆಪ್ಟೆಂಬರ್, ಅಕ್ಟೋಬರ್ ಹಣ ಬಾಕಿದೆ.