ನನ್ನ ಹೇಳಿಕೆಗೆ ಈಗಲೂ ಬದ್ಧ, ಆದರೆ ನವೆಂಬರ್ ಕ್ರಾಂತಿ ಇಲ್ಲ': ಯತೀಂದ್ರ ಸಿದ್ದರಾಮಯ್ಯ

ಈ ಹೇಳಿಕೆಯು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ನಡೆದಿದೆ ಎನ್ನಲಾದ 'ಅಧಿಕಾರ ಹಂಚಿಕೆ' ಸೂತ್ರದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿತ್ತು.

Update: 2025-10-25 14:08 GMT

ವಿಧಾನಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ

Click the Play button to listen to article

ಸೈದ್ಧಾಂತಿಕ ಬದ್ಧತೆಯುಳ್ಳ ಸತೀಶ್ ಜಾರಕಿಹೊಳಿ ಅವರಂತಹ ನಾಯಕರು ಕಾಂಗ್ರೆಸ್ ಅನ್ನು ಮುನ್ನಡೆಸಬೇಕು ಎಂಬ ತಮ್ಮ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ, ವಿಶೇಷವಾಗಿ ಕಾಂಗ್ರೆಸ್ ಪಕ್ಷದೊಳಗೆ ತೀವ್ರ ಬಿರುಗಾಳಿ ಎಬ್ಬಿಸಿರುವ ನಡುವೆಯೇ, ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಅವರು, "ನನ್ನ ಹೇಳಿಕೆಗೆ ಈಗಲೂ ಬದ್ಧನಾಗಿದ್ದೇನೆ," ಎಂದು ಸ್ಪಷ್ಟಪಡಿಸಿದ್ದಾರೆ.

ಯಾವುದೇ ನಾಯಕತ್ವ ಬದಲಾವಣೆಯ ಚರ್ಚೆಗೆ ತೆರೆ ಎಳೆಯುವ ಪ್ರಯತ್ನದಲ್ಲಿ, "ಸಿದ್ದರಾಮಯ್ಯನವರೇ ಐದು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ, ಯಾವುದೇ ನವೆಂಬರ್ ಕ್ರಾಂತಿ ಅಥವಾ ಡಿಸೆಂಬರ್ ಕ್ರಾಂತಿ ಇಲ್ಲ," ಎಂದು ಹೇಳುವ ಮೂಲಕ ಗೊಂದಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಶನಿವಾರ ಮೈಸೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ತಮ್ಮ ಹೇಳಿಕೆಯಿಂದ ಉಂಟಾದ ವಿವಾದದ ಬಗ್ಗೆ ಮತ್ತಷ್ಟು ಮಾತನಾಡಲು ನಿರಾಕರಿಸಿದರು. "ನಾನು ಏನು ಹೇಳಬೇಕಿತ್ತೋ ಅದನ್ನು ಈಗಾಗಲೇ ಹೇಳಿದ್ದೇನೆ. ನನ್ನ ಹೇಳಿಕೆಯನ್ನು ಬೇರೆ ಬೇರೆ ರೀತಿ ಬಿಂಬಿಸಲಾಗುತ್ತಿದೆ. ಅನಗತ್ಯವಾಗಿ ಮಾತನಾಡಿ ವಿವಾದ ಸೃಷ್ಟಿಸುವುದಿಲ್ಲ. ಪಕ್ಷದ ಆಂತರಿಕ ವಿಚಾರಗಳನ್ನು ಪಕ್ಷದ ವೇದಿಕೆಯಲ್ಲೇ ಮಾತನಾಡುತ್ತೇನೆ. ಒಂದು ವೇಳೆ ಪಕ್ಷವು ನೋಟಿಸ್ ನೀಡಿದರೆ, ಅದಕ್ಕೆ ಸೂಕ್ತ ಉತ್ತರ ನೀಡುತ್ತೇನೆ," ಎಂದು ಅವರು ಹೇಳಿದರು.

ವಿವಾದಕ್ಕೆ ಕಾರಣವಾದ ಮೂಲ ಹೇಳಿಕೆ

ಕೆಲವು ದಿನಗಳ ಹಿಂದೆ ಬೆಳಗಾವಿಯ ಚಿಕ್ಕೋಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಯತೀಂದ್ರ ಸಿದ್ದರಾಮಯ್ಯ, "ನನ್ನ ತಂದೆ ಸಿದ್ದರಾಮಯ್ಯನವರು ತಮ್ಮ ರಾಜಕೀಯ ಜೀವನದ ಕೊನೆಯ ಹಂತದಲ್ಲಿದ್ದಾರೆ. ಈ ಸಮಯದಲ್ಲಿ, ಪ್ರಗತಿಪರ ಚಿಂತನೆ ಮತ್ತು ಬಲಿಷ್ಠ ಸಿದ್ಧಾಂತ ಹೊಂದಿರುವ ನಾಯಕನೊಬ್ಬನ ಅವಶ್ಯಕತೆಯಿದೆ. ಸಚಿವ ಸತೀಶ್ ಜಾರಕಿಹೊಳಿ ಅವರು ಕಾಂಗ್ರೆಸ್ ಸಿದ್ಧಾಂತವನ್ನು ಎತ್ತಿಹಿಡಿದು, ಪಕ್ಷವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ನಾಯಕ," ಎಂದು ಹೇಳಿದ್ದರು.

ಈ ಹೇಳಿಕೆಯು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ನಡೆದಿದೆ ಎನ್ನಲಾದ 'ಅಧಿಕಾರ ಹಂಚಿಕೆ' ಸೂತ್ರದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿತ್ತು. ಎರಡೂವರೆ ವರ್ಷಗಳ ನಂತರ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕು ಎಂಬ ಒಪ್ಪಂದದ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗಲೇ, ಯತೀಂದ್ರ ಅವರು ಸತೀಶ್ ಜಾರಕಿಹೊಳಿ ಹೆಸರನ್ನು ಪ್ರಸ್ತಾಪಿಸಿದ್ದು, ಇದು ಡಿ.ಕೆ. ಶಿವಕುಮಾರ್ ಅವರ ಬಣವನ್ನು ಕೆರಳಿಸಿತ್ತು.

ತೀವ್ರಗೊಂಡಿದ್ದ ರಾಜಕೀಯ ವಾಕ್ಸಮರ

ಯತೀಂದ್ರ ಅವರ ಹೇಳಿಕೆಗೆ ಕಾಂಗ್ರೆಸ್‌ನಲ್ಲೇ ತೀವ್ರ ವಿರೋಧ ವ್ಯಕ್ತವಾಗಿತ್ತು. ರಾಮನಗರ ಶಾಸಕ ಇಕ್ಬಾಲ್ ಹುಸೇನ್, "ಯತೀಂದ್ರ ಅವರದ್ದು ಎಳಸು ಹೇಳಿಕೆ, ಅವರು ತಮ್ಮ ಇತಿಮಿತಿ ಅರಿತು ಮಾತನಾಡಬೇಕು," ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದರು. ಡಿ.ಕೆ. ಶಿವಕುಮಾರ್ ಅವರ ಪರವಾಗಿ ಈ ಹಿಂದೆ ಮಾತನಾಡಿದ್ದ ಶಾಸಕರಿಗೆ ನೋಟಿಸ್ ನೀಡಿದ್ದ ಪಕ್ಷ, ಮುಖ್ಯಮಂತ್ರಿಗಳ ಮಗನಿಗೆ ಏಕೆ ನೋಟಿಸ್ ನೀಡಿಲ್ಲ ಎಂದು ಕೆಲವು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ಡಿಕೆಶಿ ಹೇಳಿದ್ದೇನು?

ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, "ಪಕ್ಷದಲ್ಲಿ ಶಿಸ್ತು ಮುಖ್ಯ. ಈ ಬಗ್ಗೆ ನಾನು ಯಾರ ಜೊತೆ ಮಾತನಾಡಬೇಕೋ ಅವರ ಜೊತೆ ಮಾತನಾಡುತ್ತೇನೆ," ಎಂದು ಹೇಳುವ ಮೂಲಕ ತಮ್ಮ ಅಸಮಾಧಾನವನ್ನು ಪರೋಕ್ಷವಾಗಿ ಹೊರಹಾಕಿದ್ದರು.

ಇದೇ ವೇಳೆ, ತಮ್ಮ ಮಗನ ಹೇಳಿಕೆಯಿಂದ ಉಂಟಾದ ಮುಜುಗರವನ್ನು ತಪ್ಪಿಸಲು ಯತ್ನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, "ಯತೀಂದ್ರನ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ. ಆತ ಕೇವಲ ಸಿದ್ಧಾಂತದ ಬಗ್ಗೆ ಮಾತನಾಡಿದ್ದಾನೆ, ಯಾರು ಮುಖ್ಯಮಂತ್ರಿಯಾಗಬೇಕು ಎಂದು ಹೇಳಿಲ್ಲ," ಎಂದು ಸಮಜಾಯಿಷಿ ನೀಡಿದ್ದರು.

Tags:    

Similar News