Namma Nandini | ನಂದಿನಿ ದೋಸೆ, ಇಡ್ಲಿ ಹಿಟ್ಟಿಗೆ ಭಾರೀ ಬೇಡಿಕೆ; ಮುಂದಿನ ತಿಂಗಳು ರಾಜ್ಯಾದ್ಯಂತ ಮಾರಾಟ ವಿಸ್ತರಣೆ

ಡಿ.25 ರಂದು ಮಾರುಕಟ್ಟೆಗೆ ಲಗ್ಗೆಯಿಟ್ಟ ನಂದಿನಿ ಬ್ರ್ಯಾಂಡ್‌ ದೋಸೆ ಹಾಗೂ ಇಡ್ಲಿ ಹಿಟ್ಟಿನ ಮಾರಾಟ ದಿನೇ ದಿನೇ ಏರಿಕೆಯಾಗುತ್ತಿದೆ. ಬೆಂಗಳೂರಿನ ದಕ್ಷಿಣ ಹಾಗೂ ಪಶ್ಚಿಮ ಭಾಗದ ಪ್ರದೇಶಗಳಲ್ಲಿ ನಿತ್ಯ 2,250 ಕೆ.ಜಿ ಹಿಟ್ಟು ಮಾರಾಟವಾಗುತ್ತಿದೆ.;

Update: 2025-01-02 14:12 GMT
ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು

ಮಾರುಕಟ್ಟೆಯಲ್ಲಿ ನಂದಿನಿ ಬ್ರ್ಯಾಂಡ್ ದೋಸೆ ಹಾಗೂ ಇಡ್ಲಿ ಹಿಟ್ಟಿಗೆ ಬೇಡಿಕೆ ದುಪ್ಪಟ್ಟಾಗಿದೆ.

ಡಿ.25 ರಂದು ಮಾರುಕಟ್ಟೆಗೆ ಲಗ್ಗೆಯಿಟ್ಟ ನಂದಿನಿ ಬ್ರ್ಯಾಂಡ್‌ ದೋಸೆ ಹಾಗೂ ಇಡ್ಲಿ ಹಿಟ್ಟಿನ ಮಾರಾಟ ದಿನೇ ದಿನೇ ಏರಿಕೆಯಾಗುತ್ತಿದೆ. ಬೆಂಗಳೂರಿನ ದಕ್ಷಿಣ ಹಾಗೂ ಪಶ್ಚಿಮ ಭಾಗದ ಪ್ರದೇಶಗಳಲ್ಲಿ ನಿತ್ಯ 2,250 ಕೆ.ಜಿ ಹಿಟ್ಟು ಮಾರಾಟವಾಗುತ್ತಿದೆ.

ನಂದಿನಿ ಬ್ರ್ಯಾಂಡ್ ದೋಸೆ ಹಾಗೂ ಇಡ್ಲಿ ಹಿಟ್ಟಿಗೆ ಗ್ರಾಹಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮುಂದಿನ ಒಂದು ತಿಂಗಳಲ್ಲಿ ರಾಜ್ಯಾದ್ಯಂತ ಮಾರಾಟ ವಿಸ್ತರಿಸಲು ಕೆಎಂಎಫ್ ನಿರ್ಧರಿಸಿದೆ.

ನಂದಿನಿ ಬ್ರ್ಯಾಂಡ್ ಹಿಟ್ಟಿನಲ್ಲಿ ಶೇ 5 ರಷ್ಟು ಪ್ರೋಟಿನ್ ಮಿಶ್ರಣ ಇರುವುದರಿಂದ ಅತಿ ಹೆಚ್ಚು ಜನರು ದೋಸೆ ಹಾಗೂ ಇಡ್ಲಿ ಹಿಟ್ಟು ಖರೀದಿಗೆ ಮುಂದಾಗುತ್ತಿದ್ದಾರೆ. ಮುಂದಿನ ಹಂತದಲ್ಲಿ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಪ್ರದೇಶದಲ್ಲಿರುವ ನಂದಿನಿ ಪಾರ್ಲರ್‌ಗಳಲ್ಲಿ ಮಾರಾಟ ಆರಂಭಿಸಲಾಗುವುದು. ಆಗ ಪ್ರತಿನಿತ್ಯ 5ಸಾವಿರ ಕೆ.ಜಿ. ದೋಸೆ ಹಾಗೂ ಇಡ್ಲಿ ಹಿಟ್ಟು ಮಾರಾಟವಾಗುವ ನಿರೀಕ್ಷೆ ಇದೆ ಎಂದು ಕೆಎಂಎಫ್ ಹಿರಿಯ ಅಧಿಕಾರಿಯೊಬ್ಬರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.

ಇನ್ನು ಈ ಕುರಿತಂತೆ ಕರ್ನಾಟಕ ಹಾಲು ಮಹಾಮಂಡಳ(ಕೆಎಂಎಫ್) ಅಧ್ಯಕ್ಷ ಭೀಮಾನಾಯ್ಕ್ ʼದ ಫೆಡರಲ್ ಕರ್ನಾಟಕʼದ ಜೊತೆ ಮಾತನಾಡಿ, ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಒಂದೆರಡು ದಿನಗಳಲ್ಲಿ ಬೆಂಗಳೂರಿನ ಉಳಿದ ಭಾಗಗಳಲ್ಲಿ ಮಾರಾಟ ಆರಂಭಿಸಲಾಗುವುದು. ಜೊತೆಗೆ ಅಧಿಕಾರಿಗಳ ಸಭೆ ನಡೆಸಿ, ರಾಜ್ಯವ್ಯಾಪಿ ಮಾರುಕಟ್ಟೆ ವಿಸ್ತರಣೆ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ರಾಜ್ಯವ್ಯಾಪಿ ನಂದಿನಿ ದೋಸೆ ಹಾಗೂ ಇಡ್ಲಿ ಹಿಟ್ಟು ಮಾರಾಟ ವಿಸ್ತರಿಸುವ ಉದ್ದೇಶವಿದೆ. ಆದರೆ, ದಿನಾಂಕದ ಬಗ್ಗೆ ಚರ್ಚೆ ಮಾಡಿಲ್ಲ. ಮುಂದಿನ ತಿಂಗಳೊಳಗೆ ವಿಸ್ತರಣೆ ಮಾಡುವುದು ಖಚಿತ ಎಂದು ತಿಳಿಸಿದರು.

ಡಿ.25 ರಂದು ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಪ್ರೋಟಿನ್‌ಯುಕ್ತ ನಂದಿನಿ ಬ್ರ್ಯಾಂಡ್ ದೋಸೆ ಹಾಗೂ ಇಡ್ಲಿ ಹಿಟ್ಟನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ದೋಸೆ ಮತ್ತು ಇಡ್ಲಿ ಹಿಟ್ಟಿನ 450 ಗ್ರಾಂ ಪ್ಯಾಕ್ಗೆ 40 ರೂ. ಹಾಗೂ 900 ಗ್ರಾಂ ಪ್ಯಾಕೇಟ್ಗೆ 80 ರೂ. ನಂತೆ ದರ ನಿಗದಿ ಮಾಡಲಾಗಿತ್ತು.

Tags:    

Similar News