HPPL PROJECT | ಹೋರಾಟಗಾರರ ಮೇಲೆ ಪೊಲೀಸ್ ದೌರ್ಜನ್ಯ ಸರಣಿಗೆ ಕೊನೆ ಇಲ್ಲ!
ಹೊನ್ನಾವರ ಬಂದರು ಯೋಜನೆ ಪರವಾಗಿ ಸರ್ಕಾರ ಪೊಲೀಸರನ್ನು ಬಳಸಿ ಸ್ಥಳೀಯ ಮೀನುಗಾರರ ವಿರುದ್ಧ ಮಾನವ ಹಕ್ಕುಗಳ ಉಲ್ಲಂಘನೆಯನ್ನು ನಡೆಸುತ್ತಾ ಬಂದಿದೆ. ಸುಳ್ಳು ಪ್ರಕರಣ, ದಬ್ಬಾಳಿಕೆ ಮೂಲಕ ಹೋರಾಟದ ದನಿ ಹತ್ತಿಕ್ಕುತ್ತಿದೆ ಎಂದು ಸತ್ಯಶೋಧನಾ ಸಮಿತಿ ಹೇಳಿದೆ;
ಹೊನ್ನಾವರ ಖಾಸಗಿ ಬಂದರು ಯೋಜನೆ ಸ್ಥಳೀಯ ಪರಿಸರಕ್ಕೆ, ಕಡಲ ಜೀವ ಸಂಕುಲಕ್ಕೆ, ಮೀನುಗಾರರಿಗೆ ತಂದೊಡ್ಡಿರುವ ಅಪಾಯ ಒಂದೆಡೆಯಾದರೆ, ಕಂಪೆನಿ ಬೆನ್ನಿಗೆ ನಿಂತಿರುವ ಆಡಳಿತ ವ್ಯವಸ್ಥೆ ಪೊಲೀಸರನ್ನು ಬಳಸಿಕೊಂಡು ಬಡ ಮೀನುಗಾರರ ವಿರುದ್ಧ ನಡೆಸುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಗಳ ಕಥೆ ಮತ್ತೊಂದು ಕಡೆ.
ಬಂದರು ನಿರ್ಮಾಣದ ವಿರುದ್ಧ ಹೋರಾಟದ ದನಿ ಎತ್ತಿರುವ ಹೊನ್ನಾವರದ ಕಾಸರಕೋಡು ಪ್ರದೇಶದ ಮೀನುಗಾರರ ಮೇಲೆ ಅಲ್ಲಿನ ಆಡಳಿತವು ನಿರಂಕುಶವಾಗಿ ವರ್ತಿಸುತ್ತಿದ್ದು, ಸುಳ್ಳು ಪ್ರಕರಣ, ದಬ್ಬಾಳಿಕೆ, ಬೆದರಿಕೆಗಳ ಮೂಲಕ ಕಳೆದ ಏಳೆಂಟು ವರ್ಷಗಳಿಂದ ಬಡವರ ದನಿ ಉಡುಗಿಸುವ ಯತ್ನ ಮಾಡುತ್ತಿದೆ ಎನ್ನುತ್ತದೆ ಸತ್ಯಶೋಧನಾ ಸಮಿತಿಯ ವರದಿ.
ಇದನ್ನೂ ಓದಿ: HPPL PROJECT | ಹೊನ್ನಾವರದ ಕಡಲಮಕ್ಕಳ ಬದುಕನ್ನೇ ಮುಳುಗಿಸಿದ ಬಂದರು ಯೋಜನೆ
ಹೊನ್ನಾವರದ ಪ್ರಸ್ತಾವಿತ ಬಂದರು ಯೋಜನೆಯು ಕಾಸರಕೋಡು ಪ್ರದೇಶದ ಪರಿಸರ, ಮೀನುಗಾರರು, ಕಡಲ ಜೀವಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂಬುದನ್ನು ಮನಗಂಡ ಸ್ಥಳೀಯರು ಬಂದರು ಯೋಜನೆ ವಿರುದ್ಧ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ಆದರೆ, ಖಾಸಗಿ ಕಂಪೆನಿಯ ಬೆನ್ನಿಗೆ ನಿಂತಿರುವ ಆಡಳಿತವು ಸ್ಥಳೀಯರನ್ನು ಒಕ್ಕಲೆಬ್ಬಿಸಲು, ಆ ಪ್ರದೇಶದಲ್ಲಿ ಜನವಸತಿಯ ಕುರುಹನ್ನೇ ಅಳಿಸಿಹಾಕಲು ನಿರಂತರ ಶ್ರಮಿಸುತ್ತಿದೆ.
ಕಾಸರಕೋಡಿನ ಟೊಂಕ ಪ್ರದೇಶದಲ್ಲಿ ಏಳೆಂಟು ದಶಕಗಳಿಂದ ವಾಸಿಸುತ್ತಿರುವ ಸ್ಥಳೀಯರ ಮನೆಗಳನ್ನು ನಕಾಶೆಯಿಂದ ಅಳಿಸಲಾಗಿದ್ದು, ಅಲ್ಲಿ ಅವರು ಸವೆಸಿರುವ ಸುದೀರ್ಘ ಬದುಕನ್ನೇ ಆ ಜನರಿಂದ ಕಿತ್ತು ಕಂಪೆನಿ ಪಾದದಡಿಗೆ ಇಡಲು ಆಡಳಿತ ಹೊರಟಿದೆ. ಬಂದರು ಕಂಪೆನಿ ಪರವಾಗಿ ಕಂದಾಯ ಅಧಿಕಾರಿಗಳು ಭೂಮಿ ಸರ್ವೆಗೆ ಬಂದಾಗ ತಮ್ಮ ಮನೆಗಳನ್ನು ಸರ್ವೇ ನಕಾಶೆಯಲ್ಲಿ ಗುರುತಿಸುವಂತೆ ಒತ್ತಾಯಿಸಿದ ಸ್ಥಳೀಯರನ್ನು ಬೆದರಿಸಲು, 20 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಿರುವ ಪೊಲೀಸರು, ಮಹಿಳೆಯರು-ಪುರುಷರೆನ್ನದೇ 18 ಮಂದಿಯನ್ನು 5 ದಿನಗಳ ಕಾಲ ಕಾರವಾರ ಜೈಲಿನಲ್ಲಿ ಬಂಧಿಸಿಟ್ಟಿದ್ದರು.
ಇದನ್ನೂ ಓದಿ: HPPL PROJECT | ಹೊನ್ನಾವರ ಒಣಮೀನು ಉದ್ಯಮಕ್ಕೆ ಬೆಂಕಿ ಇಟ್ಟ ಬಂದರು
ಹೊನ್ನಾವರ ಬಂದರು ಯೋಜನೆ ವಿರೋಧಿ ಹೋರಾಟಗಾರರ ಮೇಲೆ ನಡೆದಿರುವ ಮಾನವ ಹಕ್ಕು ಉಲ್ಲಂಘನೆಯ ಸರಣಿಗೆ ವರ್ಷಗಳ ಇತಿಹಾಸವಿದೆ. ʼದಿ ಫೆಡೆರಲ್ ಕರ್ನಾಟಕʼದ ಜೊತೆಗೆ ಮಾತನಾಡಿರುವ ಸ್ಥಳೀಯ ಮೀನುಗಾರ-ಹೋರಾಟಗಾರ ರಾಜೇಶ್ ಗೋವಿಂದ್ ತಾಂಡೇಲ್ ಪ್ರಕಾರ "ಕೇವಲ ಬಂದರು ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನುವ ಕಾರಣಕ್ಕಾಗಿ ಸುಮಾರು 70-80 ಮಂದಿ ವಿರುದ್ಧ ವಿವಿಧ ಸಂದರ್ಭಗಳಲ್ಲಿ 14 ಕ್ಕೂ ಅಧಿಕ ಪ್ರಕರಣ ದಾಖಲಿಸಲಾಗಿದೆ. ಒಬ್ಬೊಬ್ಬರ ಮೇಲೆ ಕನಿಷ್ಟ 3-4 ಪ್ರಕರಣಗಳು ಇವೆ".
ದಿನದ ಅನ್ನವನ್ನು ಅಂದಂದೇ ಸಂಪಾದಿಸುವ ಮೀನುಗಾರರು, ಪೊಲೀಸ್ ಕೇಸು, ನ್ಯಾಯಾಲಯಗಳ ವಿಚಾರಣೆಯಿಂದಾಗಿ ಹೈರಾಣಾಗಿದ್ದಾರೆ. ಒಂದು ಬಾರಿ ವಿಚಾರಣೆಗೆ ಹೋಗಬೇಕಿದ್ದರೆ ಆ ದಿನದ ದುಡಿಮೆಯೂ ಕಳೆದುಕೊಳ್ಳಬೇಕು, ಹೋಗಿ-ಬರುವ ವೆಚ್ಚ ಸೇರಿದಂತೆ ಎಲ್ಲವನ್ನೂ ಸ್ವಂತ ಕೈಯಿಂದಲೇ ಭರಿಸಬೇಕಿದೆ. ಯುವಜನರ ಮೇಲೆ ಪ್ರಕರಣಗಳನ್ನು ದಾಖಲಿಸುವ ಮೂಲಕ ಅವರ ಶಿಕ್ಷಣಕ್ಕೂ, ಉದ್ಯೋಗಕ್ಕೂ ಅಡ್ಡಿ-ಆತಂಕಗಳು ಎದುರಾಗಿದೆ.
2016 ರ ವೇಳೆಗೆ ಬಂದರು ನಿರ್ಮಾಣಗೊಳ್ಳುವ ಹಳ್ಳಿಗಳ ಮೂಲ ಸರ್ವೇ ನಕಾಶೆಯೇ ʼಕಾಣೆʼಯಾಗಿದ್ದು, ಏಕಾಏಕಿ ಪೊಲೀಸ್ ಪಡೆಯೊಂದಿಗೆ ನುಗ್ಗಿದ ಅಧಿಕಾರಿಗಳು ಸ್ಥಳೀಯರ ಮೇಲೆ ಲಾಠಿ ಚಾರ್ಜ್ ನಡೆಸಿ, ಶೆಡ್‌ಗಳನ್ನು ಜೆಸಿಬಿ ಮೂಲಕ ನೆಲಸಮಗೊಳಿಸಿದ್ದರು. ಇದನ್ನು ವಿರೋಧಿಸಿದ್ದ ಗ್ರಾಮಸ್ಥರನ್ನು ʼಉಪದ್ರವಿʼಗಳು ಎಂದು ಚಿತ್ರಿಸಿ, ಬಂದರು ನಿರ್ಮಾಣ ಕಾಮಗಾರಿ ಸರಾಗವಾಗಿ ನಡೆಸಲು ಇವರು ಅಡ್ಡಿಪಡಿಸುತ್ತಿದ್ದಾರೆ ಎಂದು ಪೊಲೀಸ್ ಪಡೆಯನ್ನೂ ಈ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು.
ಇದನ್ನೂ ಓದಿ: HPPL Project | ಆಲಿವ್ ರಿಡ್ಲೆ ಕಡಲಾಮೆ ಸಂತತಿಗೆ ಮಾರಕವಾದ ಯೋಜನೆ
"2019 ರ ಬಳಿಕ ಬಂದರು ಯೋಜನೆಯ ಕಾಮಗಾರಿಗಳು ವೇಗ ಪಡೆಯತೊಡಗಿದ್ದು, ಈ ವೇಳೆ ಮಹಿಳೆಯರೂ ಪ್ರತಿರೋಧದಲ್ಲಿ ತೊಡಗಿಸಿಕೊಳ್ಳುತ್ತಾರೆ. ಭಾರೀ ವಾಹನಗಳ ಸಂಚಾರಕ್ಕಾಗಿ ಅಕ್ರಮವಾಗಿ ಕಾಸರಕೋಡು ಹಳ್ಳಿಯ ಮೇಲೆ ರಸ್ತೆ ನಿರ್ಮಿಸುತ್ತಿರುವುದನ್ನು ಸ್ಥಳೀಯರು ಪ್ರಶ್ನಿಸಿದಕ್ಕೆ, ಅವರ ಮೇಲೆ ಹಲವು ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ" ಎಂದು ಸಂತ್ರಸ್ತೆ ರೇಣುಕಾ ಟೊಂಕ ಅವರು ʼದಿ ಫೆಡೆರಲ್ ಕರ್ನಾಟಕʼದೊಂದಿಗೆ ಅಳಲು ಹಂಚಿಕೊಂಡಿದ್ದಾರೆ.
"ವ್ಯವಸ್ಥೆಯು ಅಮಾನುಷವಾಗಿ ನಮ್ಮನ್ನು ನಡೆಸಿಕೊಳ್ಳುತ್ತಿದ್ದು, ಪ್ರತಿಭಟನಾ ನಿರತ ಮೀನುಗಾರ ಮಹಿಳೆಯರ ಮೇಲೆ ಬಲಪ್ರಯೋಗ ನಡೆಸಲಾಗಿದೆ. ಪೊಲೀಸರು ನಮ್ಮನ್ನು ಎಳೆದಾಡಿದ್ದರಿಂದ ನಮ್ಮೊಂದಿಗೆ ಇದ್ದ ಗರ್ಭಿಣಿ ಮಹಿಳೆಯೊಬ್ಬರಿಗೆ ಗರ್ಭಾಪಾತವಾಗಿದೆ. ಹಲವಾರು ವರ್ಷಗಳಿಂದ ಮಕ್ಕಳಿಲ್ಲದ ಅವರು ಈ ಆಘಾತದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ" ಎಂದು ಪೊಲೀಸ್ ದೌರ್ಜನ್ಯದ ಕರಾಳತೆಯನ್ನು ರೇಣುಕಾ ಬಿಚ್ಚಿಡುತ್ತಾರೆ.
“ಮಹಿಳೆಯರನ್ನು ಸಂಜೆ ಮೇಲೆ ಪೊಲೀಸ್ ವಶದಲ್ಲಿ ಇರಿಸಿಕೊಳ್ಳಬಾರದೆಂಬ ನಿಯಮವಿದ್ದರೂ ಪೊಲೀಸರು ಇದನ್ನು ಪಾಲಿಸುತ್ತಿಲ್ಲ. ಬಂಧನಕ್ಕೆ ಕಾರಣ ನೀಡದೆ, ಎಲ್ಲಿಗೆ ಕರೆದುಕೊಂಡು ಹೋಗುತ್ತೇವೆ ಎಂಬುದನ್ನು ತಿಳಿಸದೆ, ಅಕ್ರಮವಾಗಿ ಖಾಸಗಿ ವಾಹನಗಳಲ್ಲಿ ತುಂಬಿಸಿಕೊಂಡು ಹೋಗಿದ್ದೂ ಇದೆ. ಖಾಲಿ ಹಾಳೆಯ ಮೇಲೆ ಸಹಿ ಹಾಕುವಂತೆ ಬಲವಂತ ಪಡಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರು ದರ್ಪ ತೋರಿದ್ದೂ ಇದೆ” ಎಂದು ಅವರು ತಮ್ಮ ನೋವುಗಳನ್ನು ʼದಿ ಫೆಡರಲ್ʼ ಜೊತೆ ಹಂಚಿಕೊಂಡಿದ್ದಾರೆ.
ಬಂದರು ಯೋಜನೆ ಮತ್ತು ಅದು ತಂದೊಡ್ಡುವ ಸಮಸ್ಯೆಗಳ ಕುರಿತು ವರದಿ ಮಾಡಿರುವ ಸತ್ಯ ಶೋಧನಾ ವರದಿಯ ಪ್ರಕಾರ, “2022ರ ಜನವರಿ 24ರಂದು ಕಾಸರಕೋಡಿನ ಮೀನುಗಾರ ಸಮುದಾಯವು ಪ್ರತಿಭಟನೆ ನಡೆಸಿತ್ತು. ಸುಮಾರು 70 ಮಂದಿ ಗಂಡಸರು- ಹೆಂಗಸರು ರಸ್ತೆ ನಿರ್ಮಾಣದ ವಿರುದ್ಧ ಪ್ರತಿಭಟಿಸುತ್ತಿದ್ದರು. ಒಂದೆರಡು ಗಂಟೆಗಳ ಒಳಗೆ, ಸುಮಾರು 600 ಪೊಲೀಸರು ಬಂದು ಅವರನ್ನು ಸುತ್ತುವರಿದು, ಅವರ ಮೇಲೆ ಹಲ್ಲೆ ಮಾಡಿ, ಅವರನ್ನು ಟೆಂಪೊಗಳಲ್ಲಿ ತುಂಬಿಸಿ ದೂರದ ಜಿಲ್ಲೆಗೆ ಕರೆದೊಯ್ದರು. ಅಲ್ಲಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅವರನ್ನು ಸಂಜೆ 8 ಗಂಟೆಯ ತನಕ ಬಂಧಿಸಿಟ್ಟರು. ಆ ಗುಂಪಿನಲ್ಲಿದ್ದ ಹಲವರಿಗೆ ಗಾಯಗಳಾಗಿದ್ದವು. ಆ ಬಳಿಕ ವಾರವಿಡೀ, ಜನವರಿ 30ರ ತನಕ ಕಾಸರಕೋಡ - ಟೊಂಕ ಪ್ರದೇಶದಲ್ಲಿ ಸೆಕ್ಷನ್ 144 ವಿಧಿಸಿ, ಸಹಜ ಬದುಕಿಗೆ ಅಡ್ಡಿ ಮಾಡಲಾಗಿತ್ತು”.
ರೇಣುಕಾ ಅವರು ನೀಡಿದ ಮಾಹಿತಿ ಪ್ರಕಾರ ಬಂದರು ಕಂಪೆನಿಯೊಂದಿಗೆ ಇಡೀ ವ್ಯವಸ್ಥೆಯೇ ಶಾಮೀಲಾಗಿದ್ದು, ಪೊಲೀಸ್ ದೌರ್ಜನ್ಯದಿಂದ ಹೋರಾಟಗಾರರಿಗೆ ಗಾಯಗಳಾಗಿರುವ ಬಗ್ಗೆ ಸರ್ಕಾರಿ ಆಸ್ಪತ್ರೆಗಳೂ ತಪ್ಪು ವರದಿಯನ್ನು ನೀಡಿ, ವಾಸ್ತವಾಂಶಗಳನ್ನು ಮರೆ ಮಾಚಿವೆ. "2024 ರ ಜನವರಿ 31 ರಂದು ನಡೆದ ಪೊಲೀಸ್ ದೌರ್ಜನ್ಯದಲ್ಲಿ ನಾನು ಗಂಭೀರ ಗಾಯಗೊಂಡಿದ್ದರೂ ಬಳ್ಕೂರು ಸರ್ಕಾರಿ ವೈದ್ಯರು ಅದನ್ನು ವರದಿಯಲ್ಲಿ ಉಲ್ಲೇಖಿಸಲು ನಿರಾಕರಿಸಿದ್ದರು" ಎಂದು ರೇಣುಕಾ ಸ್ವತಃ ತಾವು ಅನುಭವಿಸಿದ ದಬ್ಬಾಳಿಕೆಯನ್ನು ವಿವರಿಸಿದರು.
ಪೊಲೀಸರ ಷಡ್ಯಂತ್ರದ ಮಗ್ಗುಲುಗಳನ್ನು ವಿವರಿಸಿದ ಮೀನುಗಾರ-ಹೋರಾಟಗಾರ ರಮೇಶ್ ತಾಂಡೆಲಾ, “ನಮ್ಮ ವಿರುದ್ಧ ಪ್ರಕರಣಗಳನ್ನು ದಾಖಲಿಸುವಾಗ ಪೊಲೀಸರು ಉದ್ದೇಶಪೂರ್ವಕವಾಗಿ ಒಂದೆರಡು ಹೆಸರುಗಳನ್ನು ತಪ್ಪಾಗಿ ಹಾಕುತ್ತಾರೆ. ಆ ಹೆಸರಿನ ಜನರು ನಮ್ಮ ಊರಿನಲ್ಲಿ ಇರುವುದೇ ಇಲ್ಲ. ಅವರು ನ್ಯಾಯಾಲಯಕ್ಕೆ ಹಾಜರಾಗುವ ತನಕ ನಾವೂ ನ್ಯಾಯಾಲಯಕ್ಕೆ ಅಲೆದಾಡುತ್ತಲೇ ಇರಬೇಕು. ಇಲ್ಲದ ವ್ಯಕ್ತಿಗಳನ್ನು ನ್ಯಾಯಾಲಯಕ್ಕೆ ನಾವು ಕರೆ ತರುವುದು ಹೇಗೆ? ಅವರನ್ನು ಹಾಜರು ಪಡಿಸುವ ತನಕ ಪ್ರಕರಣದ ಇತ್ಯರ್ಥವೂ ಆಗುತ್ತಿಲ್ಲ” ಎಂದು ಹೇಳಿದ್ದಾರೆ.
ತಮ್ಮ ಮನೆಗಳಿಗಾಗಿ, ದುಡಿಮೆ-ಬದುಕಿಗಾಗಿ ಹೋರಾಟದ ಹಾದಿಯನ್ನು ಅನಿವಾರ್ಯಗೊಳಿಸಿದ ಹೊನ್ನಾವರದ ಮೀನುಗಾರರ ಸಂಕಷ್ಟಗಳು ಇಲ್ಲಿಗೇ ಮುಗಿಯುವುದಿಲ್ಲ. ಮಕ್ಕಳನ್ನು ಬೆದರಿಸಿ ಪ್ರತಿಭಟನಾ ನಿರತ ಪೋಷಕರನ್ನು ಎಳೆದುಕೊಂಡು ಹೋಗುವ ಪೊಲೀಸರು ಅವರನ್ನು ಮನೆಗೆ ಕಳುಹಿಸುವಾಗ ರಾತ್ರಿಯಾಗುತ್ತದೆ. ಅಲ್ಲಿಯವರೆಗೆ ಆ ಮಕ್ಕಳೂ ಅತಂತ್ರರಾಗಿರುತ್ತಾರೆ.
“ಒಮ್ಮೆಯಂತೂ ಹಾಲೂಡಿಸುವ ಮಹಿಳೆಯನ್ನು ವಶಕ್ಕೆ ಪಡೆದಿದ್ದ ಪೊಲೀಸರು ದಿನವಿಡೀ ಆಕೆಯನ್ನು ತನ್ನ ಮಗುವಿನಿಂದ ದೂರ ಉಳಿಯುವಂತೆ ಮಾಡಿದ್ದರು. ಎದೆಹಾಲು ಕುಡಿಯುವ ಮಗುವಿದೆ, ಆಕೆಯೊಬ್ಬಳನ್ನು ಬಿಟ್ಟು ನಮ್ಮನ್ನು ಬೇಕಿದ್ದರೆ ಇಲ್ಲಿರಿಸಿ ಎಂದು ನಾವು ಪೊಲೀಸರಿಗೆ ಪರಿಪರಿಯಾಗಿ ಬೇಡಿಕೊಂಡರೂ ಅವರಿಗೆ ಮನಸ್ಸು ಕರಗಲಿಲ್ಲ. ನಮ್ಮೊಂದಿಗೆ ಇದ್ದ ಮಹಿಳೆಯರಲ್ಲಿ ಕೆಲವರು ಮುಟ್ಟಾದವರೂ ಇದ್ದರು. ಅವರಿಗೆ ಬೇಕಾದ ಪ್ಯಾಡ್‌ಗಳನ್ನು ಒದಗಿಸುವಂತೆ ಕೇಳಿದಾಗಲೂ ಪೊಲೀಸರಿಂದ ಅಸಡ್ಡೆಯನ್ನೇ ಎದುರಿಸಬೇಕಾಯಿತು. ಇನ್ನೊಂದು ಬಾರಿ ಹಗಲು-ರಾತ್ರಿ ಪೊಲೀಸರ ವಶದಲ್ಲಿದ್ದಾಗ ರಾತ್ರಿ 3 ಗಂಟೆಯ ನಂತರ ನಮಗೆ ಊಟ ನೀಡಿದ್ದರು. ದಿನವಿಡೀ ಹಸಿವಿನಿಂದ ಇದ್ದ ನಮಗೆ ಅವೇಳೆಯಲ್ಲಿ ತಿನ್ನಲೂ ಸಾಧ್ಯವಾಗಿರಲಿಲ್ಲ ಎಂದು ನಿರಾಕರಿಸಿದ್ದೆವು” ಎನ್ನುತ್ತಾರೆ ರೇಣುಕಾ.
ಪುರುಷರ ಮೇಲೂ ಸುಳ್ಳು ಪ್ರಕರಣಗಳನ್ನು ದಾಖಲಿಸಿರುವ ಪೊಲೀಸರು, ಹೋರಾಟಗಾರರನ್ನು ರೌಡಿ ಶೀಟರ್ ಎಂದು ಗುರುತಿಸಿ ಪ್ರಕರಣ ದಾಖಲಿಸಿರುವುದೂ ಇದೆ. ಕಾಮಗಾರಿಗೆ ಬಂದ ಕೆಲಸಗಾರರನ್ನು, ಕಂಪೆನಿ ಪರವಾಗಿರುವ ಒಂದಿಬ್ಬರು ಸ್ಥಳೀಯರನ್ನು ಬಳಸಿ ಗಂಭೀರ ಕ್ರಿಮಿನಲ್ ಪ್ರಕರಣವನ್ನೂ ಹೋರಾಟಗಾರರ ಮೇಲೆ ಹಾಕಲಾಗಿದೆ ಎಂಬುದನ್ನು ಸತ್ಯಶೋಧನಾ ವರದಿಯು ಬಹಿರಂಗಪಡಿಸಿದೆ.
ಹೋರಾಟದಿಂದ ಹಿಂದೆ ಸರಿಯುವಂತೆ ಮಾಡಲು ಕೋರ್ಟ್ ವಿಚಾರಣೆಗೆ ಕೇವಲ 2-3 ದಿನಗಳು ಮಾತ್ರ ಇರುವಾಗ ಹೋರಾಟಗಾರರಿಗೆ ಸಮನ್ಸ್, ನೋಟಿಸ್‌ಗಳನ್ನು ನೀಡಲಾಗುತ್ತಿದೆ. ಕೊನೆ ಕ್ಷಣದಲ್ಲಿ ವಿಚಾರಣೆಗೆ ಬೇಕಾದ ಹಣಕಾಸಿನ ಹೊಂದಾಣಿಕೆ ಮಾಡಲು ಕಷ್ಟವಾಗುತ್ತದೆ. ಈ ಉದ್ದೇಶದಿಂದಲೇ ಹೀಗೆ ಮಾಡಲಾಗುತ್ತಿದೆ ಎಂದು ಸಂತ್ರಸ್ತರು ʼದಿ ಫೆಡೆರಲ್ ಕರ್ನಾಟಕʼದೊಂದಿಗೆ ಅಳಲು ಹಂಚಿಕೊಂಡಿದ್ದಾರೆ.