ಹೊಸಕೆರೆಹಳ್ಳಿ ಮೇಲ್ಸೇತುವೆ: ಮುಂದಿನ ವಾರ ಪ್ರಾಯೋಗಿಕ ಸಂಚಾರಕ್ಕೆ ಮುಕ್ತ
500 ಮೀಟರ್ ಉದ್ದದ ಈ ಮೇಲ್ಸೇತುವೆ ಕಾಮಗಾರಿ 2021ರಲ್ಲಿ ಪ್ರಾರಂಭವಾಗಿತ್ತು. ಇದು ದಕ್ಷಿಣ ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ಬನಶಂಕರಿ, ಪದ್ಮನಾಭನಗರ, ಉತ್ತರಹಳ್ಳಿ ಮತ್ತು ನಾಯಂಡಹಳ್ಳಿ ನಡುವೆ ಸಂಚಾರವನ್ನು ಸುಗಮಗೊಳಿಸಲಿದೆ. ಪಿಇಎಸ್ ಕಾಲೇಜು ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶ.
ಹೊಸಕೆರೆಹಳ್ಳಿ ಮೇಲ್ಸೇತುವೆ
ದಶಕಗಳಿಂದ ಸಂಚಾರ ದಟ್ಟಣೆಯಿಂದ ತತ್ತರಿಸಿದ್ದ ಹೊಸಕೆರೆಹಳ್ಳಿ ಕೆರೆಕೋಡಿ ಜಂಕ್ಷನ್‌ನಲ್ಲಿ ನಿರ್ಮಾಣವಾಗುತ್ತಿರುವ ಮೇಲ್ಸೇತುವೆ ಕಾಮಗಾರಿ ಅಂತಿಮ ಹಂತ ತಲುಪಿದ್ದು, ಮುಂದಿನ ವಾರ ವಾಹನಗಳ ಪ್ರಾಯೋಗಿಕ ಸಂಚಾರಕ್ಕೆ ಅವಕಾಶ ನೀಡಲಾಗುವುದು. ಈ ಮೂಲಕ, ಬನಶಂಕರಿಯಿಂದ ನಾಯಂಡಹಳ್ಳಿಗೆ ಸಾಗುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ಕೆ.ವಿ. ರಾಜೇಂದ್ರ ಅವರು ಬುಧವಾರ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಈ ಸೂಚನೆ ನೀಡಿದ್ದಾರೆ. ಮೇಲ್ಸೇತುವೆಯ ಎರಡೂ ಬದಿಯ ಸರ್ವೀಸ್ ರಸ್ತೆಗಳಲ್ಲಿನ ಗುಂಡಿಗಳನ್ನು ಮುಚ್ಚಿ, ಹಾಳಾದ ಭಾಗಗಳನ್ನು ದುರಸ್ತಿಪಡಿಸಿ, ಕಟ್ಟಡ ತ್ಯಾಜ್ಯವನ್ನು ತೆರವುಗೊಳಿಸುವಂತೆ ನಿರ್ದೇಶನ ನೀಡಿದ್ದಾರೆ.
ಯಾವ ಮೇಲ್ಸೇತುವೆ
500 ಮೀಟರ್ ಉದ್ದದ ಈ ಮೇಲ್ಸೇತುವೆ ಕಾಮಗಾರಿ 2021ರಲ್ಲಿ ಪ್ರಾರಂಭವಾಗಿತ್ತು. ಇದು ದಕ್ಷಿಣ ಬೆಂಗಳೂರಿನ ಪ್ರಮುಖ ಪ್ರದೇಶಗಳಾದ ಬನಶಂಕರಿ, ಪದ್ಮನಾಭನಗರ, ಉತ್ತರಹಳ್ಳಿ ಮತ್ತು ನಾಯಂಡಹಳ್ಳಿ ನಡುವೆ ಸಂಚಾರವನ್ನು ಸುಗಮಗೊಳಿಸಲಿದೆ. ಪಿಇಎಸ್ ಕಾಲೇಜು ಜಂಕ್ಷನ್‌ನಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಇದರ ಮುಖ್ಯ ಉದ್ದೇಶ.
ಶೇ. 90ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಮೇಲ್ಸೇತುವೆಯ ಮಧ್ಯಭಾಗದಲ್ಲಿ ಡಾಂಬರೀಕರಣ ಮುಗಿದಿದೆ. ಎರಡೂ ಕಡೆ ವೆಟ್ ಮಿಕ್ಸ್ ಹಾಕಲಾಗಿದ್ದು, ಡಾಂಬರೀಕರಣ ಮತ್ತು ಬಣ್ಣ ಬಳಿಯುವ ಕೆಲಸ ಬಾಕಿ ಇದೆ. ಈ ಮೇಲ್ಸೇತುವೆ ಕಾರ್ಯಾರಂಭವಾದರೆ, ನಿತ್ಯ ಸಾವಿರಾರು ವಾಹನಗಳಿಗೆ ಅನುಕೂಲವಾಗಲಿದ್ದು, ಪ್ರಯಾಣದ ಸಮಯ ಉಳಿತಾಯವಾಗಲಿದೆ.
ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಕಂಠೀರವ ಕ್ರೀಡಾಂಗಣದಲ್ಲಿ ಮಳೆಗಾಲದಲ್ಲಿ ಆಗುವ ಜಲಾವೃತವನ್ನು ತಪ್ಪಿಸಲು ರಾಜಕಾಲುವೆ ತಡೆಗೋಡೆ ಎತ್ತರಿಸುವ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಆಯುಕ್ತ ರಾಜೇಂದ್ರ ಚೋಳನ್ ಸೂಚನೆ ನೀಡಿದ್ದಾರೆ. ಅನಧಿಕೃತ ಕಟ್ಟಡಗಳನ್ನು ಗುರುತಿಸಿ, ಹಂತ-ಹಂತವಾಗಿ ತೆರವುಗೊಳಿಸುವ ಕಾರ್ಯವನ್ನು ಪ್ರಾರಂಭಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.