ಬೆಂಗಳೂರಿನಲ್ಲಿ ಭೀಕರ ಅಗ್ನಿ ದುರಂತ: ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಬೆಂಕಿ, ಒಬ್ಬರ ಸಜೀವ ದಹನ
ಅಗ್ನಿ ಅವಘಡದ ಮಾಹಿತಿ ದೊರೆತ ಕೂಡಲೇ, ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ನಿರತವಾಗಿವೆ.;
ರಾಜಧಾನಿಯ ನಗರತ್ಪೇಟೆಯಲ್ಲಿ ಶನಿವಾರ ಮುಂಜಾನೆ 3.30ಕ್ಕೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯೊಂದರಲ್ಲಿ ಹೊತ್ತಿಕೊಂಡ ಬೆಂಕಿಗೆ ಒಬ್ಬರು ಸಜೀವ ದಹನವಾಗಿದ್ದು, ಅಂಗಡಿಯೊಳಗೆ ಇನ್ನೂ ಹಲವರು ಸಿಲುಕಿರುವ ಅಥವಾ ಗಾಯಗೊಂಡಿರುವ ಶಂಕೆ ವ್ಯಕ್ತವಾಗಿದೆ.
ನಗರತ್ಪೇಟೆ6 ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಈ ದುರಂತ ನಡೆದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಂಕಿ ಹೊತ್ತಿಕೊಂಡಾಗ ಅಂಗಡಿಯೊಳಗೆ ಐದಕ್ಕೂ ಹೆಚ್ಚು ಕೆಲಸಗಾರರು ನಿದ್ರಿಸುತ್ತಿದ್ದರು ಎಂದು ಹೇಳಲಾಗಿದೆ. ಪ್ಲಾಸ್ಟಿಕ್ ಮತ್ತು ಇತರ ದಹನಕಾರಿ ವಸ್ತುಗಳು ಹೆಚ್ಚಾಗಿದ್ದರಿಂದ ಬೆಂಕಿ ಅತ್ಯಂತ ವೇಗವಾಗಿ ವ್ಯಾಪಿಸಿದೆ.
ಅಗ್ನಿ ಅವಘಡದ ಮಾಹಿತಿ ದೊರೆತ ಕೂಡಲೇ, ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದ್ದು, ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿ ನಿರತವಾಗಿವೆ. ಗಾಯಾಳುಗಳನ್ನು ಮತ್ತು ಸಿಲುಕಿರುವವರನ್ನು ರಕ್ಷಿಸುವ ಕಾರ್ಯವನ್ನು ತುರ್ತಾಗಿ ನಡೆಸಲಾಗುತ್ತಿದೆ.
ಸುರಕ್ಷತಾ ಲೋಪದ ಶಂಕೆ
ಮೃತಪಟ್ಟವರ ಮತ್ತು ಗಾಯಗೊಂಡವರ ಕುರಿತು ಯಾವುದೇ ವಿವರಗಳು ಲಭ್ಯವಾಗಿಲ್ಲ. ಅಗ್ನಿಶಾಮಕ ದಳ ಮತ್ತು ಪೊಲೀಸರು ಅಂಗಡಿ ಮಾಲೀಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ. ಈ ಅಗ್ನಿ ದುರಂತಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಅಂಗಡಿಯಲ್ಲಿ ಸುರಕ್ಷತಾ ಕ್ರಮಗಳ ಕೊರತೆ ಇತ್ತೇ ಎಂಬುದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಈ ಅಗ್ನಿ ದುರಂತದಿಂದಾಗಿ ನಗರತ್ಪೇಟೆ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಬೆಂಕಿ ನಂದಿಸುವ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.