ನಷ್ಟವಾದರೂ ಚಿಂತೆಯಿಲ್ಲ, ಪಾಕಿಸ್ತಾನಕ್ಕೆ ವೀಳ್ಯದೆಲೆ ರಪ್ತು ಮಾಡುವುದಿಲ್ಲ ಎಂದ ಹೊನ್ನಾವರದ ರೈತರು
ವೀಳ್ಯದೆಲೆಗೆ ಇದೀಗ ಬೇಡಿಕೆ ಕುಸಿತವಾಗಿದ್ದು ಒಂದು ಎಲೆಯ ಬೆಲೆ ಮೂರು ರೂಪಾಯಿಯಿಂದ ಮೂವತ್ತು ಪೈಸೆಗೆ ಇಳಿಮುಖವಾಗಿದೆ. ಇದೀಗ ಕೇವಲ ಉತ್ತರ ಭಾರತದ ಕೊಲ್ಕತ್ತ, ಉತ್ತರ ಪ್ರದೇಶಕ್ಕೆ ಮಾತ್ರ ಸರಬರಾಜು ಆಗುತ್ತಿದೆ.;
ವೀಲ್ಯೆದೆಲೆ
ಭಾರತವು ಪಾಕಿಸ್ತಾನದೊಂದಿಗಿನ ವ್ಯಾಪಾರ ಸಂಬಂಧಗಳನ್ನು ಸ್ಥಗಿತಗೊಳಿಸಿದ ಬೆನ್ನಲ್ಲೇ, ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ವೀಳ್ಯದೆಲೆ ಬೆಳೆಗಾರರು ಪಾಕಿಸ್ತಾನಕ್ಕೆ ತಮ್ಮ ಬೆಳೆಯನ್ನು ರಫ್ತು ಮಾಡುವುದಿಲ್ಲ ಎಂದು ದೃಢ ನಿಲುವು ತಾಳಿದ್ದಾರೆ. ಅನ್ಯ ಮಾರ್ಗಗಳ ಮೂಲಕ ರಫ್ತು ಮಾಡಲು ಪ್ರಯತ್ನಿಸಿದರೆ ವೀಳ್ಯದೆಲೆ ಬೆಳೆಯುವುದನ್ನೇ ನಿಲ್ಲಿಸುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.
ಶರಾವತಿ ನದಿ ತೀರ ಪ್ರದೇಶದಲ್ಲಿ ಬೆಳೆಯುವ ಈ ವೀಳ್ಯದೆಲೆ 'ರಾಣಿ ವೀಳ್ಯದೆಲೆ' ಎಂದೇ ಪ್ರಸಿದ್ಧವಾಗಿದ್ದು, ದೇಶೀಯ ಮಾರುಕಟ್ಟೆಯಲ್ಲದೆ ಅಂತರಾಷ್ಟ್ರೀಯವಾಗಿಯೂ ಹೆಸರುವಾಸಿಯಾಗಿದೆ. ಹೆಚ್ಚು ಕಾಲ ಬಾಳಿಕೆ ಬರುವ, ವಿಶೇಷ ಖಾರ ಮತ್ತು ಸ್ವಾದ ಹೊಂದಿರುವ ಈ ವೀಳ್ಯದೆಲೆಗೆ ಪಾಕಿಸ್ತಾನವು ಒಂದು ಪ್ರಮುಖ ಮಾರುಕಟ್ಟೆಯಾಗಿತ್ತು. ಈ ಹಿಂದೆ ಮುಂಬೈ ಮೂಲಕ ಮತ್ತು ನಂತರ ದೆಹಲಿಯ ಮಾರುಕಟ್ಟೆಗಳ ಮೂಲಕ ಪಾಕಿಸ್ತಾನಕ್ಕೆ ರಫ್ತಾಗುತ್ತಿತ್ತು.
ಒಂದು ಎಕರೆ ವೀಳ್ಯದೆಲೆ ಬೆಳೆಯಿಂದ ಸುಮಾರು ಮೂರು ಲಕ್ಷ ರೂಪಾಯಿಗಳ ಲಾಭ ಬರುತ್ತಿತ್ತು. ಭಾರೀ ಬೇಡಿಕೆಯಲ್ಲಿದ್ದ ಈ ವೀಳ್ಯದೆಲೆಗೆ ಈಗ ಬೇಡಿಕೆ ಕುಸಿತವಾಗಿದ್ದು, ಒಂದು ಎಲೆಯ ಬೆಲೆ ಮೂರು ರೂಪಾಯಿಯಿಂದ ಕೇವಲ ಮೂವತ್ತು ಪೈಸೆಗೆ ಇಳಿದಿದೆ. ಪ್ರಸ್ತುತ, ಈ ವೀಳ್ಯದೆಲೆಗೆ ಉತ್ತರ ಭಾರತದ ಕೊಲ್ಕತ್ತಾ ಮತ್ತು ಉತ್ತರ ಪ್ರದೇಶ ಮಾರುಕಟ್ಟೆಗಳಿಗೆ ಮಾತ್ರ ಸೀಮಿತವಾಗಿದೆ. ಆದಾಗ್ಯೂ, ಹೊನ್ನಾವರದ ರೈತರು ತಮಗೆ ಆರ್ಥಿಕವಾಗಿ ನಷ್ಟವಾದರೂ ಪರವಾಗಿಲ್ಲ, ಲಾಭಕ್ಕಾಗಿ ಪಾಕಿಸ್ತಾನಕ್ಕೆ ವೀಳ್ಯದೆಲೆ ಮಾರಾಟ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 26 ಮಂದಿ ಮೃತಪಟ್ಟಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನಾಪಡೆಗಳು 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯನ್ನು ನಡೆಸಿ, ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಒಂಬತ್ತು ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿ ನೂರಾರು ಉಗ್ರರನ್ನು ಹತ್ಯೆ ಮಾಡಿದ್ದವು. ಪಾಕಿಸ್ತಾನದೊಂದಿಗಿನ ವ್ಯಾಪಾರ ಬಂದ್ ಆದ ಪರಿಣಾಮ, ಪಾಕ್‌ನಲ್ಲಿ ಬಹು ಬೇಡಿಕೆಯಲ್ಲಿದ್ದ ಹೊನ್ನಾವರ ವೀಳ್ಯದೆಲೆಗೂ ಇದರ ಬಿಸಿ ತಟ್ಟಿದೆ. ಇದಕ್ಕೂ ಮುನ್ನ, ಕೋಲಾರದ ಮಾರುಕಟ್ಟೆಯಿಂದಲೂ ಪಾಕಿಸ್ತಾನಕ್ಕೆ ಟೊಮೋಟೊ ಸೇರಿದಂತೆ ತರಕಾರಿ ರಫ್ತು ಮಾಡಲು ರೈತರು ನಿರಾಕರಿಸಿದ್ದರು.