ಹನಿಟ್ರ್ಯಾಪ್ ಪ್ರಕರಣ | ಹಣಮಂತ ಯಳಸಂಗಿ ಸೇರಿ 6 ಮಂದಿ ಬಂಧನ
ಕಲಬುರಗಿಯಲ್ಲಿ ಯುವತಿಯರನ್ನು ಬಳಸಿಕೊಂಡು ಉದ್ಯಮಿಗಳಿಗೆ, ಅಧಿಕಾರಿಗಳಿಗೆ ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಹಾಗೂ ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಸೇರಿ ಆರು ಮಂದಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.;
ಕಲಬುರಗಿಯಲ್ಲಿ ಯುವತಿಯರನ್ನು ಬಳಸಿಕೊಂಡು ಉದ್ಯಮಿಗಳಿಗೆ, ಅಧಿಕಾರಿಗಳಿಗೆ ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಹಾಗೂ ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಸೇರಿ ಆರು ಮಂದಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಹನಿಟ್ರ್ಯಾಪ್ ಆರೋಪದಡಿ ಮಹಾರಾಷ್ಟ್ರ ಮೂಲದ ಸಂತ್ರಸ್ತೆ ಯುವತಿ ಸ್ಟೇಷನ್ ಬಜಾರ್ ಠಾಣೆಯಲ್ಲಿ ಎಂಟು ಮಂದಿ ವಿರುದ್ಧ ದೂರು ದಾಖಲಿಸಿದ್ದರು.
ಯಳಸಂಗಿ ಸೇರಿದಂತೆ ಶ್ರೀಕಾಂತ ರೆಡ್ಡಿ, ಮಂಜು ಭಂಡಾರಿ, ಉದಯಕುಮಾರ ಖಣಗೆ, ಅರವಿಂದ ಕಮಲಾಪುರ ಮತ್ತು ಸಂತೋಷ ಪಾಳನನ್ನು ಬಂಧಿಸಲಾಗಿದೆ. ಆರೋಪಿಗಳನ್ನು ವೈದ್ಯಕೀಯ ತಪಾಸಣೆ ಮಾಡಿದ ಬಳಿಕ ನ್ಯಾಯಾಧೀಶರ ಮುಂದೆ ಹಾಜರಿಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
'ವೈದ್ಯಕೀಯ ತಪಾಸಣೆಯ ನಂತರ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಹಾಜರಿಪಡಿಸುತ್ತೇವೆ. ವಿಚಾರಣೆಗಾಗಿ 10 ದಿನಗಳ ಮಟ್ಟಿಗೆ ಪೊಲೀಸ್ ವಶಕ್ಕೆ ನೀಡುವಂತೆ ಕೋರುತ್ತೇವೆ. ಹನಿಟ್ರ್ಯಾಪ್ ಒಳಗಾಗಿದ್ದಾಗಿ ಯಾವುದೇ ಉದ್ಯಮಿಗಳು, ನೌಕರರು ಮುಂದೆ ಬಂದು ದೂರು ಕೊಟ್ಟಿಲ್ಲ. ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿದ್ದವರು ಮುಂದೆ ಬಂದು ದೂರು ಕೊಟ್ಟರೆ ಅವರ ಗೋಪ್ಯತೆಯನ್ನು ಕಾಪಾಡಿ ವಿಚಾರಣೆ ಮಾಡುತ್ತೇವೆ' ಎಂದು ಎಂದು ಪೊಲೀಸ್ ಕಮಿಷನರ್ ಶರಣಪ್ಪ ಎಸ್.ಡಿ ಭರವಸೆ ನೀಡಿದರು.
ಬಂಧನದ ವೇಳೆ ಮಾಧ್ಯಮಗಳ ಮುಂದೆ ಮಾತನಾಡಿದ ಯಳಸಂಗಿ, 'ಕೆಲ ಕುತಂತ್ರಿಗಳು ದಾಖಲಿಸಿದ್ದ ಸುಳ್ಳು ಪ್ರಕರಣದಲ್ಲಿ ನಾವೇ ಪೊಲೀಸರ ಮುಂದೆ ಶರಣಾಗಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರ ಹೆಸರಿಗೆ ಕಳಂಕ ತರಲು ಕೆಲವರು ಯತ್ನಿಸುತ್ತಿದ್ದಾರೆ. ಕಾನೂನಿನ ಮೇಲೆ ಸಂಪೂರ್ಣ ಭರವಸೆ ಇದೆ' ಎಂದರು.