Honey Trap | ಸಚಿವ ರಾಜಣ್ಣ ಪುತ್ರನ ಕೊಲೆಗೆ ಸಂಚು; ಡಿಜಿಪಿಗೆ ದೂರು
ಸಚಿವ ಕೆ.ಎನ್ ರಾಜಣ್ಣ ಅವರು ವಿಧಾನಸಭೆಯಲ್ಲಿ ಸ್ಫೋಟಿಸಿದ್ದ ಹನಿಟ್ರ್ಯಾಪ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗ ಅವರ ಪುತ್ರ, ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರು ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದಾರೆ.;
ಸಚಿವ ಕೆ.ಎನ್ ರಾಜಣ್ಣ ಅವರು ವಿಧಾನಸಭೆಯಲ್ಲಿ ಸ್ಫೋಟಿಸಿದ್ದ ಹನಿಟ್ರ್ಯಾಪ್ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈಗ ಅವರ ಪುತ್ರ, ವಿಧಾನಪರಿಷತ್ ಸದಸ್ಯ ರಾಜೇಂದ್ರ ರಾಜಣ್ಣ ಅವರು ಪೊಲೀಸ್ ಮಹಾನಿರ್ದೇಶಕರಿಗೆ ದೂರು ನೀಡಿದ್ದು, ತಮ್ಮ ಕೊಲೆಗೆ ಯತ್ನ ನಡೆದಿದೆ ಎಂದು ಆಪಾದಿಸಿದ್ದಾರೆ.
ರಾಜೇಂದ್ರ ಅವರು ಡಿಜಿಪಿ ಅಲೋಕ್ ಮೋಹನ್ ಅವರಿಗೆ ದೂರು ನೀಡಿದ್ದರೂ, ಘಟನಾ ಸ್ಥಳ ಇರುವ ತುಮಕೂರು ಜಿಲ್ಲೆ ಪೊಲೀಸ್ ಅಧೀಕ್ಷಕರ ಬಳಿ ದೂರು ನೀಡುವಂತೆ ಸೂಚಿಸಿದ್ದಾರೆ. ಶಾಮಿಯಾನ ಹಾಕುವವರಂತೆ ಸೋಗುಹಾಕಿಕೊಂಡು ತಮ್ಮ ಮನೆಯ ಕಾರ್ಯಕ್ರಮ ಸಂಬಂದ ಮಾತುಕತೆ ಮಾಡಲು ಬಂದ ಇಬ್ಬರು ಕೊಲೆಗೆ ಪ್ರಯತ್ನ ನಡೆಸಿದ್ದರು ಎಂದು ಅವರು ಹೇಳಿದ್ದಾರೆ.
ಈ ಸಂಬಂಧ ದಾಖಲೆಗಳುಳ್ಳ ಪೆನ್‌ಡ್ರೈವ್ ಅನ್ನು ಡಿಜಿಪಿ ಅವರಿಗೆ ನೀಡಿರುವ ದೂರಿನ ಜತೆ ಒದಗಿಸದ್ದು, ಈ ಸಂಬಂಧ ಶುಕ್ರವಾರ ತುಮಕೂರು ಜಿಲ್ಲಾ ಎಸ್‌ಪಿ ಅವರಿಗೆ ಲಿಖಿತ ದೂರು ನೀಡುವುದಾಗಿ ರಾಜೇಂದ್ರ ಪ್ರಕಟಿಸಿದ್ದಾರೆ. ತಮ್ಮ ಕೊಲೆಗೆ ಸಂಚು ರೂಪಿಸಲಾಗಿದ್ದು, ಭರತ್ ಮತ್ತು ಸೋಮು ಎಂಬವರು ಐದು ಲಕ್ಷ ರೂ ಸುಪಾರಿ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ ಎಂದು ರಾಜೇಂದ್ರ ಹೇಳಿದ್ದಾರೆ.
ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿಲ್ಲ. ಆದರೆ ಅವರ ತಂದೆ ಸಚಿವ ಕೆ.ಎನ್. ರಾಜಣ್ಣ ಅವರು ನೀಡಿದ್ದ ದೂರಿನ ಸಂಬಂಧ ಸಿಐಡಿ ತನಿಖೆ ಆರಂಭವಾಗಿದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.