Honey Trap | ವಿಧಾನಸಭೆಯಲ್ಲಿ ಕೋಲಾಹಲ: ಕರ್ತವ್ಯಕ್ಕೆ ಅಡ್ಡಿಪಡಿಸಿದ 18 ಶಾಸಕರ ಅಮಾನತು

ವಿಧಾನಸಭೆ ಕಲಾಪದ ವೇಳೆ 48 ನಾಯಕರನ್ನು ಹನಿಟ್ರ್ಯಾಪ್‌ ಮಾಡಲಾಗಿದೆ ಸಚಿವ ಕೆ.ಎನ್‌. ರಾಜಣ್ಣ ಆರೋಪಕ್ಕೆ ಸಂಬಂಧಿಸಿ ಸದನದಲ್ಲಿ ಕೋಲಾಹಲ ನಡೆಯಿತು. ಈ ಸಂದರ್ಭದಲ್ಲಿ ಸ್ಪೀಕರ್‌ ಪೀಠದ ಬಳಿ ನಿಂತು ಕಲಾಪಕ್ಕೆ ಅಡ್ಡಿಪಡಿಸಿದ ಪ್ರತಿಪಕ್ಷದ 18 ಸದಸ್ಯರನ್ನು 6 ತಿಂಗಳ ಕಾಲ ಅಮಾನತುಗೊಳಿಸಲಾಗಿದೆ.;

Update: 2025-03-21 11:33 GMT

ವಿಧಾನಸಭೆ ಕಲಾಪದ ವೇಳೆ 48  ನಾಯಕರನ್ನು ಹನಿಟ್ರ್ಯಾಪ್‌ ಮಾಡಲಾಗಿದೆ ಸಚಿವ ಕೆ.ಎನ್‌. ರಾಜಣ್ಣ ಆರೋಪಕ್ಕೆ ಸಂಬಂಧಿಸಿ ಸದನದಲ್ಲಿ ಕೋಲಾಹಲ ನಡೆಯಿತು. ಈ ಸಂದರ್ಭದಲ್ಲಿ ಸ್ಪೀಕರ್‌ ಪೀಠದ ಬಳಿ ನಿಂತು ಕಲಾಪಕ್ಕೆ ಅಡ್ಡಿಪಡಿಸಿದ ಪ್ರತಿಪಕ್ಷದ  18 ಸದಸ್ಯರನ್ನು 6 ತಿಂಗಳ ಕಾಲ ಅಮಾನತುಗೊಳಿಸಲಾಗಿದೆ.

ಸದನದ ಬಾವಿಗಿಳಿದರು ಪ್ರತಿಭಟನೆ ನಡೆಸಿದ್ದಲ್ಲದೆ, ಕೈಯ್ಯಲ್ಲಿದ್ದ ಕಾಗದ ಪತ್ರಗಳನ್ನು ಹರಿದು ಸ್ಪೀಕರ್ ಪೀಠಕ್ಕೆ ಅಪಮಾನ ಮಾಡಿದ್ದರು. ಈ ಹಿನ್ನೆಲೆಯಲ್ಲಿ 18 ಶಾಸಕರನ್ನು ಅಮಾನತುಗೊಳಿಸಲಾಗಿದೆ.

ಈ ಸಂಬಂಧ ಸ್ಪೀಕರ್‌ ಯು.ಟಿ ಖಾದರ್‌ ರೂಲಿಂಗ್‌ ಹೊರಡಿಸಿದ್ದಾರೆ.  ಬಿಜೆಪಿ ಶಾಸಕರಾದ ದೊಡ್ಡನಗೌಡ ಪಾಟೀಲ್, ಅಶ್ವಥನಾರಾಯಣ, ಎಸ್ ಆರ್ ವಿಶ್ವನಾಥ್, ಬೈರತಿ ಬಸವರಾಜು, ಎಮ್ ಆರ್ ಪಟೇಲ್, ಚನ್ನಬಸಪ್ಪ, ಉಮಾನಾಥ್ ಕೋಟ್ಯಾನ್‌, ಸುರೇಶ್ ಗೌಡ, ಶೈಲೇಂದ್ರ ಬೆಲ್ದಾಳೆ, ಶರಣು ಸಲಗಾರ್, ಸಿಕೆ ರಾಮಮೂರ್ತಿ, ಯಶ್ಪಾಲ್ ಸುವರ್ಣ, ಹರಿಶ್ ಬಿ ಪಿ, ಭರತ್ ಶೆಟ್ಟಿ, ಬಸವರಾಜ ಮತ್ತಿಮೂಡ್, ಧೀರಜ್ ಮುನಿರಾಜು, ಮುನಿರತ್ನ ಹಾಗೂ ಚಂದ್ರು ಲಮಾಣಿ ಅವರು ಅಮಾನತುಗೊಂಡಿದ್ದಾರೆ.

ಹನಿಟ್ರಾಪ್ ಪ್ರಕರಣವನ್ನು ಸಿಬಿಐ ಅಥವಾ ಹೈಕೋರ್ಟ್ ನ್ಯಾಯಾಧೀಶರಿಂದ ಉನ್ನತ ಮಟ್ಟದ ತನಿಖೆ ನಡೆಸಬೇಕೆಂದು ಒತ್ತಾಯಿಸಿ ವಿರೋಧ ಪಕ್ಷಗಳು ಶುಕ್ರವಾರ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದ್ದರಿಂದ ವಿಧಾನಸಭಾ ರಣರಂಗದ ಸ್ವರೂಪ ಪಡೆಯಿತು. ಕೈ-ಕೈ ಮಿಲಾಯಿಸುವ ಮಟ್ಟಕ್ಕೆ ತಲುಪಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಸಭಾಧ್ಯಕ್ಷರ ಪೀಠದ ಬಳಿ ವಿಪಕ್ಷ ಸದಸ್ಯರು ಅಕ್ಷರಶಃ ದಾಂಧಲೆ ನಡೆಸಿದರು.

ಗುರುವಾರ  ವಿಧಾನಸಭೆಯಲ್ಲಿ ಸಚಿವ ಕೆ.ಎನ್.ರಾಜಣ್ಣ ಬಹಿರಂಗಪಡಿಸಿದ ಹನಿಟ್ರ್ಯಾಪ್ ಪ್ರಕರಣವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳಿಂದ ಸ್ಪಷ್ಟನೆ ಬಯಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣದ ತನಿಖೆ ನಡೆಸುವುದಾಗಿ ಹೇಳಿದರು. ಅದರ ಹೊರತಾಗಿಯೂ ವಿರೋಧ ಪಕ್ಷಗಳ ಶಾಸಕರು ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದರು.

ಕೆಲವು ಶಾಸಕರು ಸಭಾಧ್ಯಕ್ಷರ ಪೀಠದ ಕಡೆಗೆ ಹಾಗೂ ಅಡಳಿತ ಪಕ್ಷದವರ ಕಡೆಗೆ ಕಾಗದಪತ್ರಗಳನ್ನು ಎಸೆಯುತ್ತಿದ್ದರು. ಮುಖ್ಯಮಂತ್ರಿಯವರಿಗೆ ಕೆಲವು ಕಾಗದಪತ್ರಗಳು ತಗುಲಿದವು. ಜತೆಗೆ ಸಭಾಧ್ಯಕ್ಷರ ಪೀಠದ ಬಳಿ ನಿಂತ ಕೆಲ ಶಾಸಕರು ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ಮಾರ್ಷಲ್‌ಗಳಿಂದ ಹೊರಗೆ ಕಳುಹಿಸಿ 18 ಮಂದಿ ಶಾಸಕರನ್ನು ಅಮಾನತುಗೊಳಿಸಲಾಯಿತು.

Tags:    

Similar News