Holi 2024 | ಇಲ್ಲಿ ಬಣ್ಣಗಳಿಲ್ಲ.. ಇದು ನಮ್ಮದೇ ಜಾನಪದ ಹೋಳಿ ಹಬ್ಬ!
ತುಳುನಾಡು ಹಾಗೂ ಮಲೆನಾಡಿನ ಪ್ರದೇಶಗಳಲ್ಲಿ ಮರಾಠಿ ಹಾಗೂ ಕುಡುಬಿ ಜನಾಂಗದವರು ಆಚರಿಸುವ ಹೋಳಿ ಹಬ್ಬ ವಿಶಿಷ್ಟ ಆಚರಣೆಯಾಗಿ ಈಗಲೂ ರೂಢಿಯಲ್ಲಿದೆ.;
ಭಾರತದಾದ್ಯಂತ ಆಚರಿಸಲಾಗುವ ಹೋಳಿ ವಿನೋದ ಮತ್ತು ಬಣ್ಣಗಳ ಹಬ್ಬವಾಗಿದೆ. ಆದರೆ ಕರಾವಳಿ ಜಿಲ್ಲೆಯ ಉಡುಪಿ ಹಾಗೂ ಮಲೆನಾಡು ಗಡಿ ಬಾಗ ಮತ್ತು ಘಟ್ಟ ಪ್ರದೇಶಗಳಲ್ಲಿ ಮರಾಠಿ ಭಾಷಿಕ ಕುಡುಬಿ ಜನಾಂಗದವರು ಆಚರಿಸುವ ಹೋಳಿ ಬಹಳ ವಿಶಿಷ್ಟ ಹಬ್ಬ.
ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಯಲ್ಲಿ ಕಂಡುಬರುವ ಮರಾಠಿ ಹಾಗೂ ಕುಡುಬಿ(ಕುಣಬಿ) ಸಮುದಾಯದವರು ‘ದಶಮಿಯಿಂದ ಹುಣ್ಣಿಮೆಯವರೆಗೆ ಮನೆ ಮನೆಗೆ ಹೋಗಿ ಕುಣಿದು, ರಾಮಾಯಣದ ಹಾಡುಗಳನ್ನು ಹಾಡಿ ಹಾರೈಸುವ ಆಚರಣೆಯೊಂದಿದೆ.
ಸಮುದಾಯದ ಆರಾಧ್ಯ ದೇವತೆ ತುಳಜಾ ಭವಾನಿ
ಕುಡುಬಿ ಸಮುದಾಯದ ಪುರುಷರು ವಿಶೇಷವಾದ ವೇಷ ಭೂಷಣ ತೊಟ್ಟು ಮನೆ ಮನೆಗೆ ಭೇಟಿ ನೀಡಿ ನೃತ್ಯ ಮಾಡುತ್ತಾರೆ. ತುಳಜಾ ಭವಾನಿ ಇವರ ಆರಾಧ್ಯ ದೇವತೆ. ಆಕೆಗೆ ಪೂಜೆ ಸಲ್ಲಿಸಿದ ಬಳಿಕ ಕೂಡು ಕುಟುಂಬದ ಯಜಮಾನರೊಂದಿಗೆ ತಂಡ ಕಟ್ಟಿಕೊಂಡು ಮನೆಮನೆಗೆ ತೆರಳುತ್ತಾರೆ.
ಆಕರ್ಷಕ ವೇಷಭೂಷಣ
ಹಿಜಾರ, ನೆರಿ ಅಂಗಿ, ಶಲ್ಯ , ಕಾಲ್ಗೆಜ್ಜೆ, ತಲೆಗೆ ರುಮಾಲು ಸುತ್ತಿ ಅದಕ್ಕೆ ಕಿರೀಟ ಹಾಗೂ ಹೂವುಗಳನ್ನು ಸುತ್ತಿರುತ್ತಾರೆ. ಹೋಳಿ ಹಬ್ಬದ ನೃತ್ಯಕ್ಕೆ ಗುಮ್ಮಟೆಯು ಪ್ರಮುಖ ಆಕರ್ಷಣೆಯಾಗಿದ್ದು, ತಾಳ ಹಾಗೂ ಗುಮ್ಮಟೆಯನ್ನು ಬಾರಿಸುತ್ತ ಹೋಳಿ ನೃತ್ಯ ಮಾಡುತ್ತಾರೆ. ಹೋಳಿ ನೃತ್ಯದ ಹಾಡುಗಳು ರಾಮಾಯಣ, ಮಹಾಭಾರತದ ಕಥೆಯನ್ನು ಸಾರುತ್ತವೆ.
ಮರಾಠಿ ಸಮುದಾಯದ ವೇಷಭೂಷಣ
ಈ ಕುರಿತು ದ ಫಡರಲ್ ಕರ್ನಾಟಕದೊಂದಿಗೆ ಮಾತನಾಡಿದ ಉಡುಪಿ ಜಿಲ್ಲಾ ಮರಾಠಿ ಸಮಾಜ ಸೇವಾ ಸಂಘ ಉಮೇಶ್ ಎ ನಾಯ್ಕ್, ಉಡುಪಿ ಜಿಲ್ಲೆಯಲ್ಲಿ ಸುಮಾರು 120ಕ್ಕೂ ಹೆಚ್ಚು ಕೂಡುಕಟ್ಟೆ(ಧಾರ್ಮಿಕ ಸ್ಥಾನ) ಇದೆ.
ಕೂಡುಕಟ್ಟೆಯಲ್ಲಿ ದೊಡ್ಡದಾದ ತುಳಸಿ ಕಟ್ಟೆ ಇರುತ್ತದೆ. ಹೋಳಿ ಹಬ್ಬದ ಸಂದರ್ಭದಲ್ಲಿ ಕೂಡುಕಟ್ಟೆಗೆ ತೆರಳಿ, ದಶಮಿ ದಿನ ಇಡೀ ತೆಂಗಿನಕಾಯಿಯನ್ನು ದರ್ಶನದ ಮೂಲಕ ಆರೋಹಣ ಮಾಡುತ್ತೇವೆ. ಇದಾದ ಬಳಿಕ ಐದು ದಿನಗಳ ಕಾಲ ನಮ್ಮ ತಂಡ ಸಂಬಂಧಿಕರ ಮನೆಗೆ, ಊರಿನ ಮನೆ ಮನೆಗೆ ತೆರಳಿ ನೃತ್ಯವನ್ನು ಮಾಡುತ್ತೇವೆ. ಐದನೇ ಹೋಳಿ ಹುಣ್ಣಿಮೆಯ ದಿನ ಅದೇ ಕಟ್ಟೆಗೆ ಬಂದು ಸ್ನಾನದೊಂದಿಗೆ ನಮ್ಮ ಹೋಳಿ ಹಬ್ಬ ಮುಕ್ತಾಯಗೊಳ್ಳುತ್ತದೆ. ಈ ಐದು ದಿನಗಳ ಕಾಲ ಬಹಳ ಶುದ್ಧಾಚಾರವನ್ನು ಕಾಪಾಡಬೇಕಾಗುತ್ತದೆ. ಮದ್ಯ, ಮಾಂಸ ಮುಂತಾದವುಗಳು ಮಾಡುವಂತಿಲ್ಲ. ಕಾಲಿಗೆ ಚಪ್ಪಲಿ ಕೂಡ ಹಾಕುವಂತಿಲ್ಲ ಎಂದು ಹೋಳಿ ಹಬ್ಬದ ಆಚರಣೆಯ ಕ್ರಮವನ್ನು ಅವರು ವಿವರಿಸಿದ್ದಾರೆ.
5 ದಿನ ಹೋಳಿ ಕುಣಿತ
ಮರಾಠಿ ಕುಡುಬಿ ಸಮುದಾಯದವರು ಹೋಳಿಯನ್ನು ಅವರ ಹಿಂದಿನ ತಲೆಮಾರುಗಳು ಈ ನೆಲದ ಜನರಿಗೆ ಹಸ್ತಾಂತರಿಸಿದ ಅವರ ಪ್ರಾಚೀನ ಪದ್ಧತಿಗಳ ಮಿತಿಯೊಳಗೇ ಆಚರಿಸುತ್ತಾರೆ. ಕುಡುಬಿಗಳು 5 ದಿನ ಸ್ನಾನ ಮಾಡುವುದಿಲ್ಲ ಮತ್ತು ಮಾಂಸಾಹಾರ ಸೇವಿಸುವುದಿಲ್ಲ. ಐದನೇ ದಿನ ಕೂಡುಕಟ್ಟೆಗೆ ಬಂದು ಸ್ನಾನ ಮಾಡಿ, ಹಬ್ಬದ ಮೊದಲ ದಿನದಂದು ತುಳಸಿ ಕಟ್ಟೆಯ ಮೇಲೆ ಇಟ್ಟ ತೆಂಗಿನಕಾಯಿಯನ್ನು ಒಡೆಯುತ್ತಾರೆ. ಬಳಿಕ ಕೊನೆಗೆ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುತ್ತಾರೆ.
ಶಿವಾಜಿ ಮಹಾರಾಜರೊಂದಿಗೆ ನಿಕಟ ಸಂಬಂಧ
ನಮ್ಮ ಸಮುದಾಯ ಮೂಲತಃ ಮಹಾರಾಷ್ಟ್ರದಿಂದ ವಲಸೆ ಬಂದಿರುವವರು. ಕಾಡು - ಮೇಡಿನ ತಪ್ಪಲಿನ ಪ್ರದೇಶ ನಮ್ಮ ವಾಸಸ್ಥಾನ. ನಮ್ಮ ಸಮುದಾಯ ಶಿವಾಜಿ ಮಹಾರಾಜರೊಂದಿಗೆ ನಿಕಟ ಸಂಬಂಧ ಹೊಂದಿತ್ತು.
ಶಿವಾಜಿ ತುಳಜಾ ಭವಾನಿಯ ದೈವಭಕ್ತ. ನಮ್ಮ ಕುಲದೇವರು ಕೂಡ ತುಳಜಾ ಭವಾನಿ. ಶಿವಾಜಿ ಯಾವುದೇ ಯುದ್ದಕ್ಕೆ ಹೋಗುವ ಸಂದರ್ಭದಲ್ಲಿ ಅವರ ಸಹಚರರು ತುಳಜಾ ಭವಾನಿಯನ್ನು ತಲೆಮೇಲೆ ಹೊತ್ತು ಸಾಗುತ್ತಿದ್ದರು. ಇವತ್ತಿಗೂ ನಮ್ಮಲ್ಲಿ ಗದ್ದುಗೆ ಇದೆ. ನಾವು ತಲೆ ಮೇಲೆ ಗೊಂದಲು ಪೂಜೆಗೆ ತುಳಜಾ ಭವಾನಿ ದೇವಿಯನ್ನು ಹೊತ್ತು ಸಾಗುತ್ತೇವೆ. ಇದೊಂದು ಪ್ರಮುಖ ಕುರುಹು ಎನ್ನುತ್ತಾರೆ ಉಮೇಶ್ ನಾಯ್ಕ್ .
ಹೇಗಿರುತ್ತದೆ ಕುಡುಬಿ ಹೋಳಿ?
ಇನ್ನು ಕುಡುಬಿ ಸಮುದಾಯದವರು ಆಚರಿಸುವ ಹೋಳಿ, ಇತರೆ ಸಮುದಾಯಗಳಿಗಿಂತ ಭಿನ್ನ. ಕುಡುಬಿ ಜನಾಂಗವು ಹೋಳಿ ಹಬ್ಬವನ್ನು ಬಹಳ ವೈವಿಧ್ಯಮಯವಾಗಿ ತಮ್ಮ ಸಾಂಪ್ರದಾಯಿಕ ಸೊಗಡಿನೊಂದಿಗೆ ಆಚರಿಸುತ್ತದೆ. ಕುಡುಬಿ ಸಮುದಾಯದವರು ಮೂಲತಃ ಗೋವಾ ಪ್ರದೇಶದ ಮೂಲ ನಿವಾಸಿಗಳು. ಸುಮಾರು 15- 16ನೇ ಶತಮಾನದಲ್ಲಿ ಪೋರ್ಚ್ ಗೀಸರ ದಬ್ಬಾಳಿಕೆಯಿಂದ ಕರ್ನಾಟಕದ ಕರಾವಳಿ ಪ್ರದೇಶಕ್ಕೆ ವಲಸೆ ಬಂದವರು. ಗೋವಾದಲ್ಲಿ ಕುಲುಮಿ ಎಂದು ಕರೆಯುತ್ತಿದ್ದ ಈ ಪಂಗಡವನ್ನು ಕರ್ನಾಟಕಕ್ಕೆ ವಲಸೆ ಬಂದ ನಂತರ ‘ಕುಡುಬಿ’ ಎಂದು ಕರೆಯಲಾಗಿದೆ.
ಶಿವಮೊಗ್ಗದ ಜಿಲ್ಲೆಯ ಸಾಗರದ ಕುಡುಬಿ ಸಮುದಾಯದ ಓಮೇಂದ್ರ ನಾಗು ಮರಾಠಿ ದ ಫೆರಡರಲ್ ಕರ್ನಾಟದದೊಂದಿಗೆ ಕುಡುಬಿ ಹೋಳಿ ಆಚರಣೆ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಕುಡುಬಿಗಳ ಕೂಡುಕಟ್ಟಿನ ಎಲ್ಲ ಸದಸ್ಯರು ಶುಭ ಮುಹೂರ್ತವೊಂದರಲ್ಲಿ ಮಂಡಕಾರಿ( ವಾಳ್ಯದ ಗುರಿಕಾರ) ಮನೆಯಲ್ಲಿ ಒಗ್ಗೂಡುತ್ತಾರೆ. ಬೆಳಗ್ಗೆ ಎದ್ದು ಎಣ್ಣೆಸ್ನಾನ ಮಾಡಿಕೊಂಡು ಹೋಳಿ ಕುಣಿತಕ್ಕೆ ಬರುವ ಸದಸ್ಯರನ್ನು ಶೃಂಗರಿಸಿ ಬಳಿಕ ತಾನು ಗೆಜ್ಜೆಕಟ್ಟಿಕೊಳ್ಳುತ್ತಾನೆ. ಹೋಳಿ ಹುಣ್ಣಿಮೆಯ ದಿನದಿಂದ ವಾಳ್ಯದ ಗುರಿಕಾರನ ನೇತೃತ್ವದಲ್ಲಿ ಎಂಟು ದಿನಗಳ ಕಾಲ ನಗರ ಭಜನೆಯನ್ನು ಕೈಗೊಳ್ಳಲಾಗುತ್ತದೆ. ತಮ್ಮ ಕುಡುಬಿ ಜನಾಂಗದ ಮನೆಗಳಲ್ಲಿ ಮಾತ್ರವಲ್ಲದೇ, ಇತರ ವರ್ಗದ ಮನೆಗಳಲ್ಲೂ ಹೋಳಿ ಕುಣಿತವನ್ನು ಮಾಡುತ್ತಾರೆ. ಸಾಮಾನ್ಯವಾಗಿ ರಾತ್ರಿ ಹೊತ್ತು ಈ ನೃತ್ಯಗಳು ನಡೆಯುತ್ತವೆ. ಬೇರೆ ಊರುಗಳಿಗೆ ಹಗಲೊತ್ತಲ್ಲಿ ತೆರೆಳಿ ನೃತ್ಯ ಮಾಡಲಾಗುತ್ತದೆ. ರಾಮಾಯಣಕ್ಕೆ ಸಂಬಂಧಿಸಿದಂತೆ ಹಾಡುಗಳನ್ನು ನಾವೇ ಹಾಡುವ ಮೂಲಕ ಗುಮ್ಟೆ ಕುಣಿತವನ್ನು ಮಾಡಲಾಗುತ್ತದೆ ಎಂದರು.
ಪ್ರಮುಖ ಆಕರ್ಷಣೆ ಗುಮ್ಟೆ ಕುಣಿತ
ಹೋಳಿ ಆಚರಣೆಯ ಮುಖ್ಯ ಆಕರ್ಷಣೆ ‘ಗುಮ್ಟೆ ಕುಣಿತ’ (ಗುಮಟೆ)ವನ್ನು ಹಾಗೂ ಕೋಲಾಟ. ಢಂ.ಢಂ.. ಎಂದು ಸದ್ದು ಮಾಡುವ ಗುಮ್ವೆ ಕುಡುಬಿ ಜನಾಂಗದ ಸಾಂಪ್ರದಾಯಿಕ ವಾದ್ಯ. ಇದು ಆವೆ ಮಣ್ಣಿನಿಂದ ತಯಾರಿಸಿರುವ ಒಂದು ಕೊಡದ ಆಕಾರದ ಮಡಕೆ. ಗುಮಟೆಯ ಒಂದು ಭಾಗದಲ್ಲಿ ದೊಡ್ಡದಾದ ಬಾಯಿಯಿದ್ದರೆ ಇನ್ನೊಂದು ಕಡೆ ಸಣ್ಣ ತೂತಿರುತ್ತದೆ. ಉಡ ಇನ್ನಿತರ ಪ್ರಾಣಿಗಳ ಚರ್ಮವನ್ನು ಸುಲಿದು ನಿರ್ದಿಷ್ಟ ಹದ ಬರುವವರೆಗೆ ಬಿಸಿಲಲ್ಲಿ ಒಣಗಿಸಿ ಮಡಕೆಯ ಅಗಲದ ಬಾಯಿ ಇರುವ ಕಡೆ ಬಿಗಿಯಾಗಿ ಎಳೆದು ಕಟ್ಟಲಾಗುತ್ತದೆ.
ಕಡುಬಿ ಸಮುದಾಯದ ವೇಷಭೂಷಣ
ಕುಡುಬಿ ಸಮುದಾಯದ ವೇಷಭೂಣದ ಬಗ್ಗೆ ಹೇಳುವುದಾದರೆ, ಈ ಸಮುದಾಯದ ಪುರುಷರು ನೆರಿಗೆ ತೆಗೆದ ಸೀರೆಯನ್ನುಟ್ಟುಕೊಳ್ಳುತ್ತಾರೆ. ಕಾಲಿಗೆ ಗೆಜ್ಜೆ ಕಟ್ಟುತ್ತಾರೆ. ತುಂಬು ತೋಳಿನ ಅಂಗಿ ಧರಿಸಿ ತಲೆಗೆ ಬಿಗಿಯಾದ ಮುಂಡಾಸನ್ನು ಸುತ್ತಿಕೊಳ್ಳುತ್ತಾರೆ. ಅದಕ್ಕೆ ಕೆಂಪು ಹೂಗಳನ್ನು ವಿಶೇಷವಾಗಿ ಅಬ್ಬಲಿಗೆ ಹೂವು ಸುತ್ತಿಕೊಳ್ಳುತ್ತಾರೆ. ಭೀಮರಾಜ ಹಕ್ಕಿಯ ಗರಿಯನ್ನು ಸಿಕ್ಕಿಸಿ ಬಣ್ಣ ಬಣ್ಣದ ಪಟ್ಟೆಗಳನ್ನು ಹೊದ್ದು ಕೈಯಲ್ಲಿ ಗುಮ್ಟೆಗಳನ್ನು ಹಿಡಿದು, ಮನೆ ಮನೆಗೆ ಹೋಗಿ ನೃತ್ಯ ಮಾಡುತ್ತಾರೆ.
ಕುಡುಬಿ ಸಮುದಾಯ ಶಿವನ ಆರಾಧಕರು
ಕುಡುಬಿಗಳು ಶಿವನ ಆರಾಧಕರು. ಆದ್ದರಿಂದ, ಅವರ ಹೋಳಿ ಹಬ್ಬಕ್ಕೂ ತನ್ನದೇ ಆದ ಹಿನ್ನೆಲೆ ಇದೆ. ಹೋಳಿಯ ಇತಿಹಾಸವು ಪುರಾಣವನ್ನು ಆಧರಿಸಿದೆ. ಈಶ್ವರನು ಧ್ಯಾನಸ್ಥನಾಗಿರುವಾಗ ಕಾಮದೇವರು ಅಥವಾ ಮನ್ಮಥನು ಶಿವನ ವ್ರತ ಭಂಗ ಮಾಡಲು ಹೂ ಬಾಣವನ್ನು ಬಿಡುತ್ತಾನೆ. ಬಾಣ ತಾಗಿದ ಶಿವನು ಕಣ್ಣು ತೆರೆಯುತ್ತಾನೆ. ಅವನ ಕೋಪವನ್ನು ಯಾರಿಂದಲೂ ತಣಿಸಲು ಸಾಧ್ಯವಾಗಲಿಲ್ಲ. ಈ ಸಂದರ್ಭದಲ್ಲಿ ಬೆಟ್ಟ ಗುಡ್ಡಗಳಲ್ಲಿ ವಾಸವಾಗಿದ್ದ ಕುಡುಬಿ ಸಮುದಾಯದವರು ತಮ್ಮದೇ ಸಂಪ್ರದಾಯದ ಗುಮ್ಮಟೇ, ಕೋಲಾಟಗಳನ್ನು ಬಡಿಯುತ್ತಾ ಹಾಡಿ ಕುಣಿದು ಕುಪ್ಪಳಿಸುತ್ತಾರೆ.
ತಮ್ಮ ಬೆವರನ್ನು ಸುರಿಸಿ ಆರಾಧನೆಯನ್ನು ಮಾಡುವ ಈ ಜನಾಂಗವನ್ನು ಕಂಡ ಶಿವನು ತನ್ನ ಕೋಪವನ್ನು ತಣಿಸಿಕೊಳ್ಳುತ್ತಾನೆ. ಇದರ ತರುವಾಯ, ಪ್ರತೀ ವರ್ಷ ಈಶ್ವರನ ಕೋಪವನ್ನು ತಣಿಸುವುದಕ್ಕಾಗಿ ಮಾರ್ಚ್ ತಿಂಗಳಿನಲ್ಲಿ ಹೋಳಿ ಹಬ್ಬವನ್ನು ಆಚರಿಸುತ್ತಾರೆ ಎಂಬುದು ಪ್ರತೀತಿ. ಕುಡುಬಿಗಳ ಮನೆದೇವರು ಮಲ್ಲಿಕಾರ್ಜುನ. ಗೋವಾದಲ್ಲಿ ಕುಡುಬಿಗಳ ಮಲ್ಲಿಕಾರ್ಜುನ ದೇವಸ್ಥಾನವನ್ನು ಕಾಣಬಹುದು.
ಕಾಮದಹನ
ಕುಡುಬಿ ಜನಾಂಗದವರು ಹೋಳಿ ಹುಣ್ಣಿಮೆಯ ದಿನದಂದು ಕೂಡುಕಟ್ಟಿನ ಮನೆಯಲ್ಲಿ ವರ್ಷದ ಕೊನೆಯ ಹೋಳಿ ಕುಣಿತವನ್ನು ಮಾಡಿ, ಕುಣಿತಕ್ಕೆ ಅಂತಿಮ ಹಾಡುತ್ತಾರೆ. ಸಾಮೂಹಿಕ ಸ್ನಾನದ ನಂತರ ಕಾಮದಹನ ನೆರವೇರುತ್ತದೆ. ಬಳಿಕ ಸಾಮೂಹಿಕ ಭೋಜನ ಸ್ವೀಕರಿಸಿ, ಕಾಣಿಕೆಯಾಗಿ ಪಡೆದ ಅಕ್ಕಿ, ಕಾಯಿ ಸಮಾನವಾಗಿ ಹಂಚಿ ತಮ್ಮ ಮನೆಗಳಿಗೆ ಹೋಗುತ್ತಾರೆ.
ಹೀಗೆ ಮನೆಮನೆಗೆ ತೆರಳಿ ತಮ್ಮ ಸಂಪ್ರದಾಯ ಪದ್ಧತಿಯಲ್ಲಿ ಹೋಳಿ ಆಚರಣೆಯಲ್ಲಿ ತೊಡಗಿಸಿಕೊಂಡಿರುವ ಮರಾಠಿ ಹಾಗೂ ಕುಡುಬಿ ಸಮುದಾಯದವರಿಗೆ ಕುಣಿತಕ್ಕೆ ಹೋಗುವ ಪ್ರತೀ ಮನೆಯಲ್ಲಿ ಒಂದು ತೆಂಗಿನಕಾಯಿ, ಅಕ್ಕಿ, ವೀಳ್ಯದೆಲೆ, ಅಡಿಕೆ ಹಾಗೂ ಹಣವನ್ನು ಗೌರವ ಪೂರ್ವಕ ಉಡುಗೊರೆಯಾಗಿ ನೀಡಲಾಗುತ್ತದೆ.
ಹೋಳಿ ಎಂದರೆ ಕೇವಲ ಬಣ್ಣ ಎರಚುವುದು ಎಂಬಂತಾಗಿರುವ ನಗರ ಬದುಕಿನ ಆಚರಣೆಗೆ ತದ್ವಿರುದ್ಧವಾಗಿ ನಮ್ಮದೇ ನಾಡಿನ ಸಮುದಾಯಗಳಲ್ಲಿ ನೈಜ ಧಾರ್ಮಿಕ ಆಚರಣೆಯಾಗಿ, ಶ್ರೀಮಂತ ಸಾಂಸ್ಕೃತಿಕ ಕುರುಹಾಗಿ ಕರಾವಳಿ ಮತ್ತು ಮಲೆನಾಡಿನಲ್ಲಿ ಈಗಲೂ ಹೋಳಿ ಆಚರಣೆಯಲ್ಲಿದೆ.