ರಾಜ್ಯಾದ್ಯಂತ ಭ್ರಷ್ಟರ ಬೇಟೆ: 10 ಅಧಿಕಾರಿಗಳ ಕೋಟಿ ಕೋಟಿ ಅಕ್ರಮ ಆಸ್ತಿ ಜಪ್ತಿ

ದಾವಣಗೆರೆ ಎಪಿಎಂಸಿ ಸಹಾಯಕ ನಿರ್ದೇಶಕ ಪ್ರಭು ಜೆ. ಅವರಿಗೆ ಸಂಬಂಧಿಸಿದ ಮೂರು ಸ್ಥಳಗಳಲ್ಲಿ ದಾಳಿ ನಡೆಸಿದ್ದು, 2,50,00,000 ಲಕ್ಷ ಮೌಲ್ಯದ ಚರಾಸ್ತಿ, ಸ್ಥಿರಾಸ್ತಿ ಪತ್ತೆಯಾಗಿದೆ.

Update: 2025-11-26 05:26 GMT

ಶಿವಮೊಗ್ಗ ಮೆಡಿಕಲ್ ಕಾಲೇಜಿನ ಎಫ್‌ಡಿಎ ಲಕ್ಷ್ಮೀಪತಿ ಮನೆಯಲ್ಲಿ ಪತ್ತೆಯಾದ ನಗದು ಹಾಗೂ ಬೆಳ್ಳಿ

Click the Play button to listen to article

ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತ ಸಂಸ್ಥೆ ಮತ್ತೊಮ್ಮೆ ಚುರುಕು ಮುಟ್ಟಿಸಿದ್ದು, ಮಂಗಳವಾರ ಬೆಳ್ಳಂಬೆಳಗ್ಗೆ ರಾಜ್ಯದ 10 ಜಿಲ್ಲೆಗಳಲ್ಲಿ ಏಕಕಾಲಕ್ಕೆ ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಭ್ರಷ್ಟ ಅಧಿಕಾರಿಗಳ ನಿದ್ದೆಗೆಡಿಸಿದೆ. ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪದಡಿ 10 ಸರ್ಕಾರಿ ಅಧಿಕಾರಿಗಳಿಗೆ ಸೇರಿದ ಮನೆ ಹಾಗೂ ಕಚೇರಿಗಳೂ ಸೇರಿದಂತೆ ಒಟ್ಟು 47 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ಶೋಧ ಕಾರ್ಯದಲ್ಲಿ ಕೋಟಿಗಟ್ಟಲೆ ಮೌಲ್ಯದ ಅಕ್ರಮ ಆಸ್ತಿ, ನಗದು, ಚಿನ್ನಾಭರಣ ಹಾಗೂ ಸ್ಥಿರಾಸ್ತಿ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅಧಿಕಾರಿಗಳ ಅಕ್ರಮ ಸಂಪತ್ತಿನ ಪ್ರಮಾಣ ಕಂಡು ಸ್ವತಃ ತನಿಖಾಧಿಕಾರಿಗಳೇ ಹುಬ್ಬೇರಿಸುವಂತಾಗಿದೆ.

ಬೆಂಗಳೂರಿನಲ್ಲಿ ಆರ್‌ಟಿಒ ಅಧಿಕಾರಿಯ ಅಕ್ರಮ ಆಸ್ತಿ ಬಯಲು

ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿರುವ ಎಲೆಕ್ಟ್ರಾನಿಕ್ ಸಿಟಿ ಆರ್‌ಟಿಒ ಕಚೇರಿಯ ಹಿರಿಯ ಮೋಟಾರು ನಿರೀಕ್ಷಕ (ಶಾಖಾಧೀಕ್ಷಕ) ಕೃಷ್ಣಮೂರ್ತಿ ಪಿ. ಅವರು ಲೋಕಾಯುಕ್ತ ಬಲೆಗೆ ಬಿದ್ದ ಪ್ರಮುಖ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ. ಅವರಿಗೆ ಸಂಬಂಧಿಸಿದ ಏಳು ಸ್ಥಳಗಳಲ್ಲಿ ನಡೆಸಿದ ತೀವ್ರ ಶೋಧದಲ್ಲಿ ಬರೋಬ್ಬರಿ 4.26 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇದರಲ್ಲಿ 3.30 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ದಾಖಲೆಗಳು ಸೇರಿದ್ದು, 7 ನಿವೇಶನಗಳು, 4 ವಾಸದ ಮನೆಗಳು ಹಾಗೂ 5 ಎಕರೆ 30 ಗುಂಟೆ ಕೃಷಿ ಜಮೀನು ಇರುವುದು ಬೆಳಕಿಗೆ ಬಂದಿದೆ. ಇದಲ್ಲದೆ, 22 ಲಕ್ಷ ರೂ. ನಗದು, 32 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ 22 ಲಕ್ಷ ರೂ. ಮೌಲ್ಯದ ವಾಹನಗಳು ಸೇರಿದಂತೆ ಒಟ್ಟು 92 ಲಕ್ಷ ರೂ. ಮೌಲ್ಯದ ಚರಾಸ್ತಿ ಪತ್ತೆಯಾಗಿದೆ.

ಹಾವೇರಿ ಮತ್ತು ಮಂಡ್ಯದಲ್ಲಿ ಕುಬೇರ ಅಧಿಕಾರಿಗಳ ಪತ್ತೆ

ಹಾವೇರಿ ಜಿಲ್ಲಾ ನಗರಾಭಿವೃದ್ಧಿ ಕೋಶದ (ಡಿಯುಡಿಸಿ) ಕಾರ್ಯಪಾಲಕ ಎಂಜಿನಿಯರ್ ಶೇಖಪ್ಪ ಸಣ್ಣಪ್ಪ ಮಟ್ಟಿಕಟ್ಟಿ ಅವರ ಮನೆಯಲ್ಲಿ ಅತಿ ಹೆಚ್ಚು ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿದೆ. ಇವರಿಗೆ ಸೇರಿದ ಆರು ಸ್ಥಳಗಳಲ್ಲಿ ಪರಿಶೀಲನೆ ನಡೆಸಿದಾಗ ಒಟ್ಟು 5.36 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿ ಇರುವುದು ದೃಢಪಟ್ಟಿದೆ. ಇವರ ಬಳಿ 14 ನಿವೇಶನಗಳು ಮತ್ತು 3 ವಾಸದ ಮನೆಗಳಿಗೆ ಸಂಬಂಧಿಸಿದ 3.67 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ದಾಖಲೆಗಳು ಲಭ್ಯವಾಗಿವೆ. ಜೊತೆಗೆ 10.44 ಲಕ್ಷ ರೂ. ನಗದು ಹಾಗೂ 25.40 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನೂ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಇತ್ತ ಮಂಡ್ಯ ನಗರಸಭೆಯ ಸಮುದಾಯ ಸಂಘಟನಾಧಿಕಾರಿ ಪುಟ್ಟಸ್ವಾಮಿ ಕೂಡ ಲೋಕಾಯುಕ್ತರ ಕೆಂಗಣ್ಣಿಗೆ ಗುರಿಯಾಗಿದ್ದು, ಅವರಿಗೆ ಸೇರಿದ ಮೂರು ಕಡೆಗಳಲ್ಲಿ ದಾಳಿ ನಡೆಸಿದಾಗ 4.37 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇವರ ಹೆಸರಿನಲ್ಲಿ 8 ನಿವೇಶನಗಳು, 2 ಮನೆಗಳು ಹಾಗೂ ಬರೋಬ್ಬರಿ 12 ಎಕರೆ ಕೃಷಿ ಜಮೀನು ಇರುವುದು ಬೆಳಕಿಗೆ ಬಂದಿದ್ದು, 1.75 ಲಕ್ಷ ರೂ. ನಗದು ಮತ್ತು 25 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೊಡಗು ಮತ್ತು ಧಾರವಾಡದಲ್ಲಿ ಕೋಟಿ ಒಡೆಯರು

ಕೊಡಗು ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಎಇಇ ಡಿ.ಎಂ. ಗಿರೀಶ್ ಅವರ ಸಂಪತ್ತಿನ ಮೌಲ್ಯವೂ ಹುಬ್ಬೇರಿಸುವಂತಿದೆ. ಮಡಿಕೇರಿ ಉಪವಿಭಾಗದ ಇವರಿಗೆ ಸೇರಿದ ನಾಲ್ಕು ಸ್ಥಳಗಳಲ್ಲಿ ಶೋಧ ನಡೆಸಿದಾಗ 4.26 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇವರಲ್ಲಿ 2.36 ಕೋಟಿ ರೂ. ಮೌಲ್ಯದ ಚರಾಸ್ತಿಯೇ ಇರುವುದು ವಿಶೇಷವಾಗಿದ್ದು, 1.81 ಕೋಟಿ ರೂ. ಮೌಲ್ಯದ ಭಾರೀ ಪ್ರಮಾಣದ ಚಿನ್ನಾಭರಣ ಮತ್ತು 5.53 ಲಕ್ಷ ರೂ. ನಗದು ದೊರೆತಿದೆ.

ಅದೇ ರೀತಿ ಧಾರವಾಡದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಸುಭಾಷ್ ಚಂದ್ರ ನಾಟೀಕರ್ ಅವರಿಗೆ ಸೇರಿದ ಆರು ಕಡೆಗಳಲ್ಲಿ ದಾಳಿ ನಡೆದಿದೆ. ಇವರ ಬಳಿ 3.11 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದ್ದು, ಇದರಲ್ಲಿ 18 ಎಕರೆ 21 ಗುಂಟೆ ಕೃಷಿ ಜಮೀನು, 5 ನಿವೇಶನಗಳು ಹಾಗೂ 2 ಮನೆಗಳು ಸೇರಿವೆ.

ಮೈಸೂರು, ದಾವಣಗೆರೆ ಮತ್ತು ಇತರ ಜಿಲ್ಲೆಗಳ ವಿವರ

ಮೈಸೂರಿನ ಹೂಟಗಳ್ಳಿ ನಗರಸಭೆಯ ಕಂದಾಯ ನಿರೀಕ್ಷಕ ರಾಮಸ್ವಾಮಿ ಸಿ. ಅವರಿಗೆ ಸೇರಿದ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದ್ದು, 2.78 ಕೋಟಿ ರೂ. ಮೌಲ್ಯದ ಆಸ್ತಿ ಪತ್ತೆಯಾಗಿದೆ. ಇವರ ಮನೆಯಲ್ಲಿ 1.15 ಕೋಟಿ ರೂ.ಗಳ ಬೃಹತ್ ನಗದು ಹಣ ಪತ್ತೆಯಾಗಿರುವುದು ದಾಳಿಯ ಪ್ರಮುಖ ಅಂಶವಾಗಿದೆ. ದಾವಣಗೆರೆ ಎಪಿಎಂಸಿ ಸಹಾಯಕ ನಿರ್ದೇಶಕ ಪ್ರಭು ಜೆ. ಅವರ ಬಳಿ 2.50 ಕೋಟಿ ರೂ. ಆಸ್ತಿ ಪತ್ತೆಯಾಗಿದ್ದು, ಇವರ ಬಳಿಯೂ 1.04 ಕೋಟಿ ರೂ. ಮೌಲ್ಯದ 5 ನಿವೇಶನಗಳ ದಾಖಲೆಗಳು ಸಿಕ್ಕಿವೆ.

ಯಾದಗಿರಿ ಜಿಲ್ಲೆಯ ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಎಂಜಿನಿಯರ್ ಪ್ರೇಮ್ ಸಿಂಗ್ ಅವರಿಗೆ ಸೇರಿದ ಸ್ಥಳಗಳಲ್ಲಿ 2.43 ಕೋಟಿ ರೂ. ಆಸ್ತಿ ಪತ್ತೆಯಾಗಿದ್ದು, ಇವರಲ್ಲಿ 62 ಲಕ್ಷ ರೂ. ಬ್ಯಾಂಕ್ ಠೇವಣಿ ಇರುವುದು ಕಂಡುಬಂದಿದೆ. ಗದಗ ಜಿಲ್ಲೆಯ ಹಿರಿಯ ಪಶು ಪರಿವೀಕ್ಷಕ ಸತೀಶ್ ರಾಮಣ್ಣ ಕಟ್ಟಿಮನಿ ಬಳಿ 2.09 ಕೋಟಿ ರೂ. ಆಸ್ತಿ ಹಾಗೂ ಶಿವಮೊಗ್ಗ ಮೆಡಿಕಲ್ ಕಾಲೇಜಿನ ಎಫ್‌ಡಿಎ ಲಕ್ಷ್ಮೀಪತಿ ಅವರ ಬಳಿ 2.49 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಪ್ರಕಟಣೆ ತಿಳಿಸಿದೆ.

Tags:    

Similar News