ನಾಯಿ ಮಾಲೀಕರಿಗೆ ಎಚ್ಚರಿಕೆ | ಸ್ವಚ್ಛತೆ ನಿರ್ಲಕ್ಷ್ಯಕ್ಕೆ ದುಬಾರಿ ದಂಡ: ಹೈಕೋರ್ಟ್‌ ಸೂಚನೆ

ತಮ್ಮ ಸಾಕುಪ್ರಾಣಿಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ವಿಫಲರಾದ ಸಾಕುಪ್ರಾಣಿ ಮಾಲಿಕರಿಗೆ ದಂಡ ಸೇರಿದಂತೆ ಬೆಂಗಳೂರಿನ ಉದ್ಯಾನವನಗಳಲ್ಲಿ ಸ್ವಚ್ಛತೆ ಮತ್ತು ಮೇಲ್ವಿಚಾರಣೆಯನ್ನು ಕಾಪಾಡಿಕೊಳ್ಳಲು ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿದೆ.

Update: 2024-11-27 05:21 GMT
ಸಾಕುನಾಯಿ ಮಾಲೀಕರಿಗೆ ಹೈಕೋರ್ಟ್‌ ಎಚ್ಚರಿಕೆ ನೀಡಿದೆ.
Click the Play button to listen to article

ತಮ್ಮ ಸಾಕುಪ್ರಾಣಿಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ವಿಫಲರಾದ ಸಾಕುಪ್ರಾಣಿ ಮಾಲೀಕರಿಗೆ ದಂಡ ಸೇರಿದಂತೆ ಬೆಂಗಳೂರಿನ ಉದ್ಯಾನವನಗಳಲ್ಲಿ ಸ್ವಚ್ಛತೆ ಮತ್ತು ಮೇಲ್ವಿಚಾರಣೆಯನ್ನು ಕಾಪಾಡಿಕೊಳ್ಳಲು ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ. 

ಉದ್ಯಾನವನಗಳಿಗೆ ಸಾಕುನಾಯಿಗಳನ್ನು ಕರೆತರುವವವರು ಅವುಗಳ ಮಲ ವಿಲೇವಾರಿಗೆ ಕೈಚೀಲ ತರುವುದನ್ನು ಕಡ್ಡಾಯಗೊಳಿಸಲು ಬಿಬಿಎಂಪಿಗೆ ನಿರ್ದೇಶಿಸಬೇಕು ಮತ್ತು ಘನತ್ಯಾಜ್ಯ ನಿರ್ವಹಣಾ ಬೈ-ಲಾ ಜಾರಿಗೆ ನಿರ್ದೇಶಿಸಬೇಕು ಎಂದು ಕೋರಿ; ಸರ್ಕಾರೇತರ ಸ್ವಯಂಸೇವಾ ಸಂಸ್ಥೆ ‘ಕ್ಯೂಪಾ' (ಮೆಸರ್ಸ್ ಕಂಪ್ಯಾಷನ್ ಅನ್‌ಲಿಮಿಟೆಡ್ ಪ್ಲಸ್ ಆ್ಯಕ್ಷನ್) ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರ ವಿಭಾಗೀಯ ಪೀಠವು ಈ ಮಹತ್ವದ ನಿರ್ದೇಶನ ನೀಡಿದೆ. 

ಸಾಕುಪ್ರಾಣಿ ಮಾಲೀಕರಿಗೆ ತಮ್ಮ ನಾಯಿಗಳನ್ನು ಉದ್ಯಾನವನಗಳಿಗೆ ಕರೆತರುವ ಸ್ವಾತಂತ್ರ್ಯವಿದ್ದರೆ, ಇತರರಿಗೂ ಸ್ವಚ್ಛ ಪರಿಸರದ ಹಕ್ಕಿದೆ ಎಂದು ಹೇಳಿರುವ ಪೀಠ, ಸಾರ್ವಜನಿಕ ಉದ್ಯಾನಗಳಿಗೆ ಸಾಕುನಾಯಿ ಕರೆತರುವ ಸಾರ್ವಜನಿಕರು ಅವುಗಳ ಮಲದ ತ್ಯಾಜ್ಯ ವಿಲೇವಾರಿಗೆ ಕೈ ಚೀಲಗಳನ್ನು ತೆಗೆದುಕೊಂಡು ಬರಬೇಕು ಎಂದು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ. ನಾಯಿಗಳ ಉಪಟಳದಿಂದ ಉದ್ಯಾನಕ್ಕೆ ಭೇಟಿ ನೀಡುವವರಿಗೆ ರಕ್ಷಣೆ ನೀಡಬೇಕಾಗಿದ್ದು, ಸಾರ್ವಜನಿಕ ಉದ್ಯಾನಗಳಲ್ಲಿ ಎಲ್ಲ ರೀತಿಯ ಸ್ವಚ್ಛತೆ ಕಾಯ್ದುಕೊಳ್ಳುವುದು ಕಡ್ಡಾಯವಾಗಬೇಕು ಎಂದು ಆದೇಶಿಸಿದೆ. 

ನಗರದಾದ್ಯಂತ ಪ್ರಮುಖ ಉದ್ಯಾನವನಗಳು ಮತ್ತು ಉದ್ಯಾನಗಳನ್ನು ನಿಯಮಿತವಾಗಿ ತಪಾಸಣೆ ನಡೆಸಲು, ಸ್ವಚ್ಛತೆಯ ಮಾನದಂಡಗಳನ್ನು ಮೇಲ್ವಿಚಾರಣೆ ಮಾಡಲು ಅಗತ್ಯ ಕ್ರಮಗಳನ್ನು ಶಿಫಾರಸು ಮಾಡಲು ತೋಟಗಾರಿಕೆ ಇಲಾಖೆ ಮತ್ತು ಬಿಬಿಎಂಪಿಯ ಅಧಿಕಾರಿಗಳು ಸೇರಿದಂತೆ ಮೂವರು ಸದಸ್ಯರ ತಂಡವನ್ನು ರಚಿಸುವಂತೆ ನ್ಯಾಯಾಲಯ ಸೂಚಿಸಿದೆ.

ಸ್ವಚ್ಛತೆ ಕಾಯ್ದಕೊಳ್ಳುವುದು ಮತ್ತು ಇತರೆ ನಿಯಮಗಳನ್ನು ಉಲ್ಲಂಘಿಸುವವರಿಗೆ ವಿಧಿಸಲಾಗುವ ದಂಡಕ್ಕಿಂತಲೂ, ಮಲವಿಸರ್ಜನೆಗೆ ಕಾರಣವಾಗುವ ನಾಯಿಗಳನ್ನು ಸಾಕಿರುವ ಮಾಲೀಕರಿಗೆ ವಿಧಿಸುವ ದಂಡ ಹೆಚ್ಚಿನ ಪ್ರಮಾಣದ್ದಾಗಿರಬೇಕು. ಕರ್ನಾಟಕ ಉದ್ಯಾನಗಳು, ಆಟದ ಮೈದಾನಗಳು ಮತ್ತು ಮುಕ್ತ ಸ್ಥಳಗಳ ಸಂರಕ್ಷಣೆ ಮತ್ತು ನಿಯಂತ್ರಣ ಕಾಯ್ದೆ-1985 ಅನ್ನು ಬಿಬಿಎಂಪಿ ಅಧಿಕಾರಿಗಳು ಅಕ್ಷರಶಃ ಜಾರಿಗೆ ತರಬೇಕು. ಉದ್ಯಾನಗಳೂ ಸೇರಿ ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಘನತ್ಯಾಜ್ಯ ನಿರ್ವಹಣೆ ನಿಯಮಗಳು-2016 ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದಿದೆ.

ಅಲ್ಲದೆ, ಈ ನಿಯಮಗಳ ತಿದ್ದುಪಡಿಗೆ ಪಾಲಿಕೆ ಕ್ರಮ ವಹಿಸಬೇಕು. ಉದ್ಯಾನಗಳಲ್ಲಿ ಸ್ವಚ್ಛತೆ ಕಾಪಾಡುವುದು ಮತ್ತು ನಿರ್ವಹಣೆಗೆ ಸರ್ಕಾರ ಸೇರಿದಂತೆ ಸಂಬಂಧಿಸಿದ ಸಕ್ಷಮ ಪ್ರಾಧಿಕಾರಗಳು ಅಗತ್ಯ ಬಜೆಟ್ ಮೀಸಲಿರಿಸಬೇಕು. ಉದ್ಯಾನಗಳ ಬಗೆಗೆ ಕಣ್ಗಾವಲು ಇಡಲು ತೋಟಗಾರಿಕೆ ಇಲಾಖೆ ಮತ್ತು ಬಿಬಿಎಂಪಿ ಶಾಶ್ವತವಾದ ಕಾರ್ಯವಿಧಾನವನ್ನು ರೂಪಿಸಿ ಅಭಿವೃದ್ಧಿ ಪಡಿಸಬೇಕು. ಉದ್ಯಾನಗಳಲ್ಲಿ ಉಗುಳುವುದು, ಕಸ ಎಸೆಯುವುದು, ಸಾಕುಪ್ರಾಣಿಗಳ ಮಲ ವಿಸರ್ಜನೆಗೆ ಅವಕಾಶ ನೀಡುವವರನ್ನು ನಿಯಂತ್ರಿಸಿ ಸ್ವಚ್ಛತೆ ಕಾಯ್ದುಕೊಳ್ಳುವುದು ಮತ್ತು ಉಲ್ಲಂಘಿಸುವವರಿಗೆ ದಂಡ ವಿಧಿಸುವುದು ತೋಟಗಾರಿಕಾ ಇಲಾಖೆ ಮತ್ತು ಬಿಬಿಎಂಪಿ ಅಧಿಕಾರಿಗಳ ಹೊಣೆ ಎಂದು ಕೋರ್ಟ್‌ ಹೇಳಿದೆ.

ಉದ್ಯಾನಗಳ ಸಂರಕ್ಷಣೆ ಮತ್ತು ಮೇಲ್ವಿಚಾರಣೆಗಾಗಿ ತಂಡಗಳನ್ನು ನಿಯೋಜಿಸುವ ಸಂಬಂಧ ಸೂಕ್ತ ನಿಯಮಗಳನ್ನು ಅಳವಡಿಸುವುದು ಮತ್ತು ತಪ್ಪಿತಸ್ಥರಿಗೆ ದಂಡ ವಿಧಿಸಲು ಬಿಬಿಎಂಪಿ ನಿಯಮಗಳಿಗೆ ಅಗತ್ಯ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ ಎಂದು ಪೀಠ ನಿರ್ದೇಶನ ನೀಡಿದೆ.

Tags:    

Similar News