ಸಿಎಂ ಸಿದ್ದರಾಮಯ್ಯ ಜತೆಗಿನ ನನ್ನ ಸಂಬಂಧ ಹಾಳು ಮಾಡುವ ಯತ್ನ ನಡೆದಿದೆ : ಉಲ್ಟಾ ಹೊಡೆದ ಬಿ.ಆರ್. ಪಾಟೀಲ್
ಈ ಹಿಂದೆ ವೈರಲ್ ಆಗಿದ್ದ ವಿಡಿಯೋದಲ್ಲಿ, ಶಾಸಕ ಬಿ.ಆರ್. ಪಾಟೀಲ್, "ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ. ಸಿಎಂಗೆ ಸೋನಿಯಾ ಗಾಂಧಿಯನ್ನು ಮೊದಲು ಭೇಟಿ ಮಾಡಿಸಿದವನು ನಾನೇ," ಎಂದಿದ್ದರು.;
ಆಳಂದ ಶಾಸಕ ಬಿ.ಆರ್. ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ಟೀಕಿಸಿ ಮಾತನಾಡಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆದ ನಂತರ, ಇದೀಗ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದಾರೆ. "ಮಾಧ್ಯಮಗಳಲ್ಲಿ ನನ್ನ ಮಾತುಗಳನ್ನು ತಿರುಚಿ ಪ್ರಸಾರ ಮಾಡಲಾಗುತ್ತಿದೆ. ಇದು ಉದ್ದೇಶಪೂರ್ವಕವಾಗಿ ನನ್ನ ಮತ್ತು ಸಿದ್ದರಾಮಯ್ಯ ಅವರ ನಡುವಿನ ಸಂಬಂಧಕ್ಕೆ ಹುಳಿ ಹಿಂಡುವ ಪ್ರಯತ್ನವಾಗಿದೆ," ಎಂದು ಅವರು ಆರೋಪಿಸಿದ್ದಾರೆ.
"ನನ್ನ ಹೇಳಿಕೆಗಳನ್ನು ತಿರುಚಿ ವರದಿ ಮಾಡಲಾಗುತ್ತಿದೆ. ಕೆ.ಆರ್. ಪೇಟೆಯಲ್ಲಿ ಸ್ನೇಹಿತರೊಂದಿಗೆ ಮಾತನಾಡುತ್ತಿದ್ದಾಗ ಅವರ ಬಗ್ಗೆ ಕೆಲವು ಮಾತುಗಳನ್ನು ಆಡಿದ್ದೆ. 'ಅವರು ಲಕ್ಕಿ ಲಾಟರಿಯಲ್ಲಿ ಗೆದ್ದು ಸಿಎಂ ಆದರು' ಎಂದು ಹೇಳಿದ್ದೆ. ಆದರೆ, 'ನಾನು ಅವರಿಗೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿಸಿದ್ದೇನೆ' ಎಂದು ನಾನು ಹೇಳಿರುವುದು ಸಂಪೂರ್ಣ ತಪ್ಪು. ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡುವಾಗ ನಾನೂ ಜೊತೆಯಲ್ಲಿದ್ದೆ. ಸೋನಿಯಾ ಗಾಂಧಿ ಅವರು ಭೇಟಿ ಮಾಡಲು ಹಿಂಜರಿಯುತ್ತಿದ್ದರು, ಆದರೆ ನಾನೇ ಒತ್ತಾಯಿಸಿದಾಗ ಅವರು ಭೇಟಿಯಾದರು," ಎಂದು ಬಿ. ಆರ್ ಪಾಟೀಲ್ ಹೇಳಿಕೊಂಡಿದ್ದಾರೆ.
"ಸಿದ್ದರಾಮಯ್ಯ ಅವರು ಸಾಮೂಹಿಕ ನಾಯಕರು (ಮಾಸ್ ಲೀಡರ್). ಅವರನ್ನು ಮುಖ್ಯಮಂತ್ರಿ ಮಾಡುವ ಶಕ್ತಿ ನನಗಿಲ್ಲ. ಅವರು ಮತ್ತು ನನ್ನ ಆತ್ಮೀಯ ಸಂಬಂಧವನ್ನು ಹಾಳುಮಾಡಲು ಕೆಲವರು ಉದ್ದೇಶಪೂರ್ವಕವಾಗಿ ಪ್ರಯತ್ನಿಸುತ್ತಿದ್ದಾರೆ. ನಾವು ಒಂಬತ್ತು ಜನ ಶಾಸಕರು ಅವರ ನೇತೃತ್ವದಲ್ಲಿ ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಸೇರಿದ್ದೇವೆ. ಕಾಂಗ್ರೆಸ್ ಪಕ್ಷ ಕೂಡ ಅವರ ಜನಬೆಂಬಲವನ್ನು ನೋಡಿ ಅವರನ್ನು ಮುಖ್ಯಮಂತ್ರಿ ಮಾಡಿದೆ ಹೊರತು, ನಾವು ಹೇಳಿದ್ದರಿಂದ ಅಲ್ಲ," ಎಂದು ಬಿ.ಆರ್. ಪಾಟೀಲ್ ಒತ್ತಿ ಹೇಳಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಾಗಿತ್ತು?
ಈ ಹಿಂದೆ ವೈರಲ್ ಆಗಿದ್ದ ವಿಡಿಯೋದಲ್ಲಿ, ಶಾಸಕ ಬಿ.ಆರ್. ಪಾಟೀಲ್, "ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ. ಸಿಎಂಗೆ ಸೋನಿಯಾ ಗಾಂಧಿಯನ್ನು ಮೊದಲು ಭೇಟಿ ಮಾಡಿಸಿದವನು ನಾನೇ. ಆದರೆ ಅವನ ಗ್ರಹಚಾರ ಚೆನ್ನಾಗಿತ್ತು. ಅವನು ಸಿಎಂ ಆಗಿಬಿಟ್ಟ. ನನಗೆ ಗಾಡೂ ಇಲ್ಲ, ಫಾದ್ರೂ ಇಲ್ಲ," ಎಂದು ಹೇಳಿದ್ದರು. ಆದರೆ, ಈ ಹೇಳಿಕೆಗಳನ್ನು ಇದೀಗ ಪಾಟೀಲ್ ಅವರು ನಿರಾಕರಿಸಿದ್ದಾರೆ.