Heinous Crime | ಬಿಡದಿಯ ಹಕ್ಕಿಪಿಕ್ಕಿ ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ; ಎಫ್ಎಸ್ಎಲ್ ವರದಿಯಲ್ಲಿ ಬಹಿರಂಗ
ಬಿಡದಿಯ ಬಾಲಕಿ ಕೊಲೆ ಪ್ರಕರಣದ ಎಫ್ಎಸ್ಎಲ್ ವರದಿ ಶನಿವಾರ ಸಂಜೆ ಪೋಲೀಸರ ಕೈ ಸೇರಿದ್ದು, ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂಬುದು ತಿಳಿದುಬಂದಿದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸಗೌಡ ತಿಳಿಸಿದ್ದಾರೆ.;
ಬಿಡದಿ ಹೋಬಳಿ ಭದ್ರಾಪುರದ ಹಕ್ಕಿಪಿಕ್ಕಿ ಕಾಲೊನಿ ಸಮೀಪದ ಶವವಾಗಿ ಪತ್ತೆಯಾಗಿದ್ದ ಬಾಲಕಿ ಖುಷಿ (15) ಮೇಲೆ ಅತ್ಯಾಚಾರ ನಡೆದಿಲ್ಲ ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಯಿಂದ ದೃಢಪಟ್ಟಿದೆ.
ಶನಿವಾರ ಸಂಜೆ ಎಫ್ಎಸ್ಎಲ್ ವರದಿ ಪೋಲೀಸರ ಕೈ ಸೇರಿದ್ದು, ಬಾಲಕಿ ಮೇಲೆ ಅತ್ಯಾಚಾರ ನಡೆದಿಲ್ಲ ಎಂಬುದು ತಿಳಿದುಬಂದಿದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸಗೌಡ ತಿಳಿಸಿದ್ದಾರೆ.
ಶನಿವಾರ ರಾತ್ರಿ ಬಿಡದಿ ಪೊಲೀಸ್ ಠಾಣೆಯಲ್ಲಿ ಮಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ಎಫ್ಎಸ್ಎಲ್ ವರದಿ ಬಂದಿದೆ. ಅತ್ಯಾಚಾರ ನಡೆದಿರುವುದು ಋಜುವಾತಾಗಿಲ್ಲ. ಮರಣೋತ್ತರ ಪರೀಕ್ಷೆ ವರದಿ ಬರಬೇಕಾಗಿದೆ. ಅ ಬಳಿಕ ಸಾವಿನ ನಿಖರ ಕಾರಣ ತಿಳಿದುಬರಲಿದೆ ಎಂದು ತಿಳಿಸಿದ್ದಾರೆ.
ತಮ್ಮ ಮಗಳ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ ಎಂದು ಪೋಷಕರು ಆರೋಪಿಸಿದ್ದರು. ಈ ಸಂಬಂಧ ಮೃತ ಬಾಲಕಿಯ ದೇಹದ 32 ಮಾದರಿಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು.
ಸಾಮಾಜಿಕ ಮಾಧ್ಯಮಗಳಲ್ಲಿ ಹಬ್ಬಿರುವಂತೆ ಬಾಲಕಿ ಮೈ ಮೇಲೆ ಸಿಗರೇಟಿನಿಂದ ಸುಟ್ಟಿರುವ ಗಾಯಗಳಿವೆ ಎಂಬುದು ಸುಳ್ಳು. ಬಾಲಕಿ ತಲೆಗೆ ಗಂಭೀರ ಪೆಟ್ಟು ಬಿದ್ದಿರುವ ಗುರುತುಗಳಿವೆ. ಮರಣೋತ್ತರ ಪರೀಕ್ಷೆಯಲ್ಲಿ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಕರಣದ ಈವರೆಗಿನ ತನಿಖೆ ಹಾಗೂ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದಾಗ ಬಾಲಕಿ ರೈಲಿಗೆ ಸಿಲುಕಿ ಮೃತಪಟ್ಟಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಪ್ರಕರಣ ಸಂಬಂಧ 10 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು ಎಂದು ಹೇಳಿದ್ದಾರೆ.
ಹಕ್ಕಿಪಿಕ್ಕಿ ಸಮುದಾಯದ 14 ವರ್ಷದ ಬಾಲಕಿ ಮೇ 11ರಂದು ರಾತ್ರಿ ನಾಪತ್ತೆಯಾಗಿದ್ದಳು. ಬೆಳಿಗ್ಗೆ 8 ಗಂಟೆಗೆ ರೈಲು ಹಳಿ ಪಕ್ಕ ಬಾಲಕಿಯ ಶವ ಅರೆ ನಗ್ನಾವಸ್ಥೆಯಲ್ಲಿ ಪತ್ತೆಯಾಗಿತ್ತು.
ಮಾತು ಬಾರದ ಹಾಗೂ ಕಿವಿಯೂ ಕೇಳದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಆರೋಪಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ ವಿವಿಧ ಸಂಘಟನೆಗಳು ಅಗ್ರಹಿಸಿದ್ದವು.
ಖುಷಿ ಸಾವಿಗೆ ನ್ಯಾಯ ಒದಗಿಸಿ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಯಾನ ಆರಂಭಿಸಲಾಗಿತ್ತು.