ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ; ಜನಜೀವನ ಅಸ್ತವ್ಯಸ್ತ

ನಾಗಲಾಪುರದ ಬಳಿ ನದಿ ಅಕ್ಕಪಕ್ಕದ ಭತ್ತದ ಗದ್ದೆ ಮತ್ತು ಅಡಕೆ ತೋಟಗಳು ಜಲಾವೃತವಾಗಿವೆ. ಭತ್ತದ ನಾಟಿಗಾಗಿ ರೈತರು ಸಿದ್ಧ ಮಾಡಿದ್ದ ಸಸಿಮಡಿ ತುಂಗೆಯ ಪಾಲಾಗಿದೆ.;

Update: 2025-07-28 04:53 GMT

ರಾಜ್ಯದಲ್ಲಿ ಜುಲೈ ತಿಂಗಳಾದ್ಯಂತ ಮಳೆ ಮುಂದುವರಿಯುವ ಸಾಧ್ಯತೆ ಇದೆ. 

ರಾಜ್ಯದಲ್ಲಿ ಜುಲೈ ತಿಂಗಳಾಂತ್ಯದವರೆಗೂ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ, ಮಲೆನಾಡು ಭಾಗದಲ್ಲಿ ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಕೊಡಗು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಿಗೆ ಜು.28 ರಿಂದ 30 ರವರೆಗೆ ಆರೆಂಜ್‌ ಅಲರ್ಟ್‌ ನೀಡಿದೆ. ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ. ಬೆಂಗಳೂರಿನ ಕೆಲವೆಡೆ ಹಗುರದಿಂದ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆ ಅಬ್ಬರ ಹೆಚ್ಚಾಗಿದ್ದು ಮಳೆ ಜತೆಗೆ ಜೋರು ಗಾಳಿ ಬೀಸುತ್ತಿರುವುದರಿಂದ ರಸ್ತೆ ಬದಿ, ಕಾಫಿ ತೋಟಗಳು, ಮತ್ತಿತರೆ ಜನವಸತಿ ಪ್ರದೇಶದಲ್ಲಿ ಮರಗಳು ನೆಲಕ್ಕುರುಳುತ್ತಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ.

ನಾಗಲಾಪುರದ ಬಳಿ ನದಿ ಅಕ್ಕಪಕ್ಕದ ಭತ್ತದ ಗದ್ದೆ ಮತ್ತು ಅಡಕೆ ತೋಟಗಳು ಜಲಾವೃತವಾಗಿವೆ. ಭತ್ತದ ನಾಟಿಗಾಗಿ ರೈತರು ಸಿದ್ಧ ಮಾಡಿದ್ದ ಸಸಿಮಡಿ ತುಂಗೆಯ ಪಾಲಾಗಿದೆ. ನದಿ ನೀರು ಹರಿಹರಪುರ ಮಠದ ಮೆಟ್ಟಿಲ ಮೇಲೆ ಏರುತ್ತಿದೆ.

ಜಿಲ್ಲೆಯ ಶೃಂಗೇರಿ, ಕೊಪ್ಪ, ಕಳಸ ತಾಲೂಕಿನಲ್ಲಿ ಶನಿವಾರ ರಾತ್ರಿಯಿಂದ ವಿದ್ಯುತ್‌ ಸಂಪರ್ಕ ಕಡಿತಗೊಂಡಿದೆ. ಕುಡಿಯುವ ನೀರಿಗೂ ಪರದಾಡುವಂತಾಗಿದೆ. ನೆಮ್ಮಾರ್‌ ಸಾಲ್ಮರ ಬಳಿ ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಮತ್ತೆ ಧರೆ ಕುಸಿತ ಉಂಟಾಗಿದ್ದು, ಶೃಂಗೇರಿ-ಕಾರ್ಕಳ ನಡುವೆ ವಾಹನ ಸಂಚಾರ ಬಂದ್‌ ಆಗಿತ್ತು. ಭಾನುವಾರ ಮಣ್ಣು ತೆರವು ಮಾಡಲಾಗಿದೆ.

ಮಡಿಕೇರಿ ಜಿಲ್ಲಾದ್ಯಂತ ಬಿರುಗಾಳಿ ಸಹಿತ ಮಳೆ ಮುಂದುವರಿದಿದ್ದು ವಾಸದ ಮನೆಗಳು ಸೇರಿದಂತೆ ಭಾರಿ ಗಾತ್ರದ ಮರಗಳು ಧರೆ ಗುರುಳಿವೆ.  ಮೆಸ್ಕಾಂ ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿ 150ಕ್ಕಿಂತಲೂ ಅಧಿಕ ವಿದ್ಯುತ್‌ ಕಂಬ ನಾಶ, 8 ಟಿಸಿ ಹಾನಿ, ಲಕ್ಷಾಂತರ ರೂ. ನಷ್ಟವಾಗಿದೆ.

Tags:    

Similar News