ಬಳ್ಳಾರಿ ಬಾಣಂತಿಯರ ಸಾವು | ರಾಜೀನಾಮೆಗೂ ಸಿದ್ಧ ಎಂದ ಆರೋಗ್ಯ ಸಚಿವ

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ 9 ಮಂದಿ ಬಾಣಂತಿಯರು ಅಸ್ವಸ್ಥರಾಗಿದ್ದರು. ಈ ಪೈಕಿ ನಾಲ್ವರು ಮೃತಪಟ್ಟಿದ್ದರು. ಈ ಮಧ್ಯೆ ಗುರುವಾರ ಕೂಡ್ಲಿಗಿ ಮೂಲದ ಮತ್ತೊಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

Update: 2024-12-06 08:24 GMT

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿನ ಬಾಣಂತಿಯರ ಸಾವಿನ ಪ್ರಕರಣ ಇದೀಗ ಸರ್ಕಾರ ಹಾಗೂ ಪ್ರತಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಬಾಣಂತಿಯರ ಸಾವಿಗೆ ಆರೋಗ್ಯ ಸಚಿವರ ನಿರ್ಲಕ್ಷ್ಯವೇ ಕಾರಣ ಎಂಬ ಬಿಜೆಪಿ ಟೀಕೆಗೆ ಪ್ರತಿಕ್ರಿಯಿಸಿರುವ ದಿನೇಶ್‌ ಗುಂಡೂರಾವ್‌, ಸಮಸ್ಯೆ ಸರಿ ಹೋಗಲಿದೆ ಎನ್ನುವುದಾದರೆ ನಾನು ರಾಜೀನಾಮೆ ನೀಡುವುದಕ್ಕೂ ಸಿದ್ಧ ಎಂದು ಹೇಳುವ ಮೂಲಕ ಸಂಚಲನ ಸೃಷ್ಟಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಾಣಂತಿಯರ ಸಾವಿನ ಪ್ರಕರಣದಲ್ಲಿ ನನ್ನ ಪ್ರತಿಷ್ಠೆ ಇಲ್ಲ, ನನ್ನ ತಪ್ಪಿದ್ದರೆ ರಾಜೀನಾಮೆ ಕೊಡುವುದಕ್ಕೂ ಸಿದ್ಧ. ಇಲ್ಲಿ ಜೀವದ ಪ್ರಶ್ನೆ ಇದೆ. ಈ ವಿಚಾರದಲ್ಲಿ ಪ್ರತಿಪಕ್ಷಗಳ ಸಹಕಾರವೂ ಅಗತ್ಯವಿದೆ ಎಂದು ಹೇಳಿದ್ದಾರೆ.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ 9 ಮಂದಿ ಬಾಣಂತಿಯರು ಅಸ್ವಸ್ಥರಾಗಿದ್ದರು. ಈ ಪೈಕಿ ನಾಲ್ವರು ಮೃತಪಟ್ಟಿದ್ದರು. ಈ ಮಧ್ಯೆ ಗುರುವಾರ ಜಿಲ್ಲೆಯ ಕೂಡ್ಲಿಗಿ ಮೂಲದ ಮತ್ತೊಬ್ಬರು ಮೃತಪಟ್ಟಿದ್ದು, ಸಾವಿನ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.

"ಐವರು ಮೃತಪಟ್ಟಿದ್ದಾರೆ. ಬಾಣಂತಿಯರ ಸಾವಿಗೆ ಕಾರಣವಾದ ರಿಂಗರ್ ಲ್ಯಾಕ್ಟೇಟ್ ದ್ರಾವಣ ಪೂರೈಸಿದ ಪಶ್ಚಿಮ ಬಂಗಾ ಫಾರ್ಮಾಸುಟಿಕಲ್‌ ಕಂಪನಿ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ" ಎಂದು ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಪ್ರಕರಣ ಕುರಿತಂತೆ ಲೋಕಾಯುಕ್ತರಿಗೆ ದೂರು ನೀಡುವ ಕುರಿತ ಪ್ರತಿಪಕ್ಷ ನಾಯಕ ಆರ್‌. ಅಶೋಕ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ಖಂಡಿತವಾಗಿಯೂ ಲೋಕಾಯುಕ್ತಕ್ಕೆ ದೂರು ನೀಡಲಿ. ಒಂದು ವೇಳೆ ನನ್ನ ರಾಜೀನಾಮೆಯಿಂದ ಸಮಸ್ಯೆ ಸರಿ ಹೋಗಲಿದೆ ಎಂದು ಹೇಳಿದರೆ ನಾನು ಅದಕ್ಕೂ ಸಿದ್ಧ. ಆದರೆ, ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದು ಖಚಿತ" ಎಂದು ಹೇಳಿದ್ದಾರೆ.

327 ಮಂದಿ ಬಾಣಂತಿಯರ ಸಾವು

ಈ ವರ್ಷ ರಾಜ್ಯದಲ್ಲಿ 327 ಬಾಣಂತಿ-ಗರ್ಭಿಣಿಯರ ಸಾವಾಗಿದೆ. ಎಲ್ಲವನ್ನೂ ಪರಿಶೀಲಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ವೈದ್ಯಕೀಯ ಲೋಪದ ಪ್ರಕರಣಗಳಲ್ಲಿ ಯಾವ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಆಗಬೇಕು. ಫಾರ್ಮಾಸ್ಯುಟಿಕಲ್ ಕಂಪನಿಗಳನ್ನು ರಕ್ಷಿಸುವ ಕಾನೂನುಗಳೇ ಹೆಚ್ಚಾಗಿವೆ. ತಪ್ಪು ಮಾಡಿದವರನ್ನು ಶಿಕ್ಷಿಸುವಲ್ಲಿ ಕಾನೂನುಗಳು ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎರಡೇ ಗಂಟೆಗಳಲ್ಲಿ ಅಸ್ವಸ್ಥ

ಐವಿ ದ್ರಾವಣ ನೀಡಿದ ಎರಡೇ ಗಂಟೆಗಳಲ್ಲಿ 9 ಬಾಣಂತಿಯರು ಅಸ್ವಸ್ಥರಾಗಿದ್ದರೆಂಬ ಸಂಗತಿ ಬಯಲಾಗಿದೆ. ನ. 9 ರಂದು ಎಲ್ಲರಿಗೂ ಶಸ್ತ್ರಚಿಕಿತ್ಸೆ(ಸಿಸೇರಿಯನ್) ಮೂಲಕ ಹೆರಿಗೆ ಮಾಡಿಸಲಾಗಿತ್ತು.

ನಂದಿನಿ, ಲಲಿತಮ್ಮ, ಸುಮಯಾ, ರೋಜಾ, ಮುಸ್ಕಾನ್, ಅಮೃತಾ, ಮಹಾಲಕ್ಷ್ಮೀ, ರಾಜೇಶ್ವರಿ, ಸುಮಲತಾ ಅವರಿಗೆ ಹೆರಿಗೆ ಮಾಡಿಸಲಾಗಿತ್ತು. ಅವರ ಪೈಕಿ ನಂದಿನಿ, ಲಲಿತಮ್ಮ, ರೋಜಾ, ಮುಸ್ಕಾನ್ ಹಾಗೂ ಸುಮಯಾ ಮೃತಪಟ್ಟಿದ್ದಾರೆ. ಉಳಿದ ನಾಲ್ವರು ಬಾಣಂತಿಯರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಆಸ್ಪತ್ರೆಗೆ ದಾಖಲಾದ ಬಾಣಂತಿಯರಲ್ಲಿ ಏಳು ಮಂದಿ ಕಿಡ್ನಿ ಮತ್ತು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ತಕ್ಷಣವೇ ಅವರನ್ನು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಮ್ಸ್‌ನಲ್ಲಿ ತಪಾಸಣೆ ನಡೆಸಿದಾಗ ಮೂವರಲ್ಲಿ ಇಲಿ ಜ್ವರ ಪತ್ತೆಯಾಗಿತ್ತು.

ಬಾಣಂತಿಯರ ಕುಟುಂಬಕ್ಕೆ ಪರಿಹಾರ

ಐವಿ ದ್ರಾವಣದಿಂದ ಮೃತಪಟ್ಟ ಬಾಣಂತಿಯರ ಕುಟುಂಬಕ್ಕೆ ಸರ್ಕಾರ ಪರಿಹಾರ ಘೋಷಿಸಿದೆ ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ತಿಳಿಸಿದ್ದಾರೆ.

ಪ್ರಕರಣದಲ್ಲಿ ಆಗಿರುವ ನೂನ್ಯತೆಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಔಷಧ ತಯಾರಿಸಿದ ಕಂಪನಿ ಮೇಲೆ ಕ್ರಮ ಕೈಗೊಳ್ಳುತ್ತಿದ್ದೇವೆ. ಮೃತ ಬಾಣಂತಿಯರ ಕುಟುಂಬಸ್ಥರಿಗೆ ಪರಿಹಾರ ಘೋಷಿಸಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಆಗದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

Tags:    

Similar News