Karnataka By-Election | ಅವಳಿ ನಗರದ ಮಾದರಿಯಲ್ಲಿ ಚನ್ನಪಟ್ಟಣ - ರಾಮನಗರ ಅಭಿವೃದ್ಧಿ: ಎಚ್‌ಡಿಕೆ ಭರವಸೆ

ರಾಮನಗರ- ಚನ್ನಪಟ್ಟಣ ಭಾಗದ ಕಾಡಾನೆ ಹಾವಳಿಗೆ ಕಡಿವಾಣ ಹಾಕಲು ಕೇಂದ್ರದ ರೈಲ್ವೆ ಸಚಿವರ ಜತೆ ಚರ್ಚೆ ಮಾಡಿದ್ದೇನೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.

Update: 2024-11-02 12:51 GMT
HD KUMARASWAMY RALLY

ಹುಬ್ಬಳ್ಳಿ- ಧಾರವಾಡ ಮಾದರಿಯಲ್ಲಿ ಚನ್ನಪಟ್ಟಣ ಹಾಗೂ ರಾಮನಗರ ಅಭಿವೃದ್ಧಿ ಮಾಡಲಾಗುವುದು. ಇವೆರಡೂ ಪಟ್ಟಣಗಳ ನಡುವೆ ಸುಮಾರು ಹತ್ತು ಸಾವಿರ ಜನರಿಗೆ ನೇರ ಉದ್ಯೋಗ ಸಿಗುವಂತಹ ಕೈಗಾರಿಕೆ ಸ್ಥಾಪನೆಗೆ ಪ್ರಯತ್ನಿಸಲಾಗುವುದು ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರವಾಗಿ ತಾಲೂಕಿನ ವಿರೂಪಸಂದ್ರ ಗ್ರಾಮದಲ್ಲಿ ಪ್ರಚಾರ ಭಾಷಣದ ವೇಳೆ ಈ ಭರವಸೆ ನೀಡಿದರು.

ಚನ್ನಪಟ್ಟಣ-ರಾಮನಗರದ ಅಭಿವೃದ್ಧಿಗೆ ಹೊಸ ಆಯಾಮ ನೀಡಲಾಗುವುದು. ಈವರೆಗೂ ನಾನು ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದ್ದೇನೆ. ತಾಲೂಕಿನ ಜನರ ಔದಾರ್ಯ, ಮಂಡ್ಯ ಜನರ ಆಶೀರ್ವಾದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿಶ್ವಾಸದಿಂದ ಕೇಂದ್ರದಲ್ಲಿ ಮಂತ್ರಿಯಾಗಿದ್ದೇನೆ. ನನಗೆ ರಾಜಕೀಯ ಜನ್ಮ ಕೊಟ್ಟ ಜಿಲ್ಲೆಯ ಅಭಿವೃದ್ಧಿಗೆ ಈ ಅವಕಾಶ ಬಳಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದರು.

ಈ ಭಾಗದ ಯುವ ಜನರಿಗೆ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾವಕಾಶ ದೊರಕಿಸುವ ಕೆಲಸ ಮಾಡುತ್ತೇನೆ. ಇದರಿಂದ ಪರೋಕ್ಷವಾಗಿ ಸಾವಿರಾರು ಜನರಿಗೆ ಉದ್ಯೋಗ ಸಿಗಲಿದೆ. ಆರ್ಥಿಕತೆಗೆ ಶಕ್ತಿ ಬಂದು ಈ ಭಾಗದಲ್ಲಿ ಜನಜೀವನ ಸುಧಾರಿಸಲಿದೆ ಎಂದು ಸಚಿವರು ಹೇಳಿದರು.

2018ರಲ್ಲಿ ಕಾರ್ಯಕರ್ತರು ಒತ್ತಡ ಹಾಕಿ ನನ್ನನ್ನು ಚನ್ನಪಟ್ಟಣಕ್ಕೆ ಕರೆತಂದರು. ಬಳಿಕ ಎರಡು ಬಾರಿಯೂ ದೊಡ್ಡಮಟ್ಟದಲ್ಲಿ ಗೆಲ್ಲಿಸಿಕೊಟ್ಟಿದ್ದೀರಿ. ಕಳೆದ ಲೋಕಸಭೆ ಚುನಾವಣೆಯಲ್ಲಿ ಅನಿವಾರ್ಯವಾಗಿ ಮಂಡ್ಯದಲ್ಲಿ ಸ್ಪರ್ಧೆ ಮಾಡಿ ಗೆದ್ದಿದ್ದೇನೆ. ದೇವೇಗೌಡರು ನೀರಾವರಿ ಸಚಿವರಾಗಿದ್ದಾಗ ಇಗ್ಗಲೂರು ಬಳಿ ಜಲಾಶಯ ಕಟ್ಟಿಸಿದರು. ಹಲವು ಪಕ್ಷಗಳಿಗೆ ಹೋಗಿ ಈಗ ಕಾಂಗ್ರೆಸ್ ಸೇರಿರುವ ಕಾಂಗ್ರೆಸ್ ಅಭ್ಯರ್ಥಿ ತಾಲೂಕಿಗೆ ನೀರಾವರಿ ಕೊಟ್ಟಿದ್ದು ನಾನೇ ಎನ್ನುತ್ತಿದ್ದಾರೆ. ದೇವೇಗೌಡರು ಡ್ಯಾಂ ಕಟ್ಟಲಿಲ್ಲ ಅಂದರೆ ಇವರು ಕೆರೆಗಳಿಗೆ ನೀರು ಎಲ್ಲಿ ತುಂಬಿಸುತ್ತಿದ್ದರು ಎಂದು ಕಿಡಿಕಾರಿದರು.

ಸದಾನಂದಗೌಡರು ಸಿಎಂ ಆಗಿದ್ದಾಗ ಚನ್ನಪಟ್ಟಣದ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶಕ್ಕೆ ಹಣ ಬಿಡುಗಡೆ ಮಾಡಿದರು. ಅವರನ್ನು ಭಗೀರಥ ಎಂದು ಕರೆಯುವುದರಲ್ಲಿ ಅರ್ಥವಿದೆ. ಆದರೆ, ಇವರು ನಾನೇ ಭಗೀರಥ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಚನ್ನಪಟ್ಟಣದಲ್ಲಿ ₹85 ಕೋಟಿ ವೆಚ್ಚದಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣ ಆಗುತ್ತಿದೆ. ಮಾವಿನ ಸಂರಕ್ಷಣೆಗೆ ನೂತನ ಘಟಕ ನಿರ್ಮಾಣ ಮಾಡಲಾಗುತ್ತಿದೆ. ಸಾಕಷ್ಟು ರಸ್ತೆಗಳು, ಶಾಲೆಗಳನ್ನು ಅನುದಾನ ತಂದು ನಿರ್ಮಾಣ ಮಾಡಿದ್ದೇವೆ. ಈಗ ಅನಿವಾರ್ಯವಾಗಿ ನಿಖಿಲ್ ಸ್ಪರ್ಧೆ ಮಾಡಿದ್ದಾರೆ. ನಿಖಿಲ್ ಮೃದು ಸ್ವಭಾವದ ವ್ಯಕ್ತಿ, ಅವನಿಗೆ ಈ ಬಾರಿ ಆಶೀರ್ವಾದ ಮಾಡಿ ಎಂದು ಅವರು ಮನವಿ ಮಾಡಿದರು.

ಆನೆ ಹಾವಳಿಗೆ ಕಡಿವಾಣ; ಸಚಿವರ ಜತೆ ಚರ್ಚೆ

ರಾಜ್ಯದ ಯಾವುದೇ ಭಾಗದಲ್ಲಿ ಅಭಿವೃದ್ಧಿ ಆಗುತ್ತಿಲ್ಲ. ನಮ್ಮ ತೆರಿಗೆ ಹಣ ಲೂಟಿ ಆಗುತ್ತಿದೆ. ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಹಾಗಾಗಿ ಈ ಬಾರಿ ನಿಖಿಲ್ ಗೆಲ್ಲಿಸಿಕೊಡಿ. ನನಗೆ 6 ರಿಂದ 7 ತಿಂಗಳು ಸಮಯ ಕೊಡಿ. ಈ ಭಾಗದ ಕಾಡಾನೆ ಹಾವಳಿಗೆ ಕಡಿವಾಣ ಹಾಕುತ್ತೇವೆ. ಕೇಂದ್ರದ ರೈಲ್ವೆ ಸಚಿವರ ಜತೆ ಚರ್ಚೆ ಮಾಡಿದ್ದೇನೆ. ರೈಲ್ವೆ ತಡೆಗೋಡೆ ನಿರ್ಮಾಣಕ್ಕೆ ಕ್ರಮ ವಹಿಸುತ್ತೇವೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಕೆ.ಟಿ.ಶ್ರೀಕಂಟೆಗೌಡ ಸೇರಿದಂತೆ ಸ್ಥಳೀಯ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಪಾರ ಸಾರ್ವಜನಿಕರು ಉಪಸ್ಥಿತರಿದ್ದರು.

Tags:    

Similar News