Parliament Session | ಹಾಸನ ವಿಮಾನ ನಿಲ್ದಾಣದ ಕಾಮಗಾರಿ ಶೀಘ್ರ ಮುಗಿಸಲು ಎಚ್.ಡಿ. ದೇವೇಗೌಡ ಮನವಿ

ರಾಜ್ಯದಲ್ಲಿ ಐವರು ಮುಖ್ಯಮಂತ್ರಿಗಳು ಬಂದು ಹೋದರೂ ಹಾಸನದ ವಿಮಾನ ನಿಲ್ದಾಣದ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Update: 2024-12-06 06:39 GMT
ಹೆಚ್‌ ಡಿ ದೇವೇಗೌಡ
Click the Play button to listen to article

ರಾಜ್ಯದಲ್ಲಿ ಐವರು ಮುಖ್ಯಮಂತ್ರಿಗಳು ಬಂದು ಹೋದರೂ ಹಾಸನದ ವಿಮಾನ ನಿಲ್ದಾಣದ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ ಎಂದು ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಿರುವ ಅವರು, ರಾಜ್ಯಸಭಾ ಕಲಾಪದಲ್ಲಿ ಗುರುವಾರ ನಡೆದ 'ಭಾರತೀಯ ವಾಯುಯಾನ ಮಸೂದೆ' ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು. 

ನಾನು ಪ್ರಧಾನಿಯಾಗಿದ್ದಾಗಲೇ ಹಾಸನ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಮಂಜೂರಾತಿ ನೀಡಿದ್ದೆ. ಆ ಬಳಿಕ ರಾಜ್ಯದಲ್ಲಿ ಐವರು ಮುಖ್ಯಮಂತ್ರಿಗಳು ಬಂದು ಹೋದರೂ ವಿಮಾನ ನಿಲ್ದಾಣದ ಕಾಮಗಾರಿ ಪೂರ್ಣಗೊಳ್ಳಲಿಲ್ಲ. ಹಾಸನದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆಗುವುದರಿಂದ ಬೇಲೂರು, ಹಳೇಬೀಡು, ಶ್ರವಣಬೆಳಗೋಳ ತಾಣಗಳ ಪ್ರವಾಸೋದ್ಯಮ ಅಭಿವೃದ್ಧಿ ಆಗುವುದರ ಜೊತೆಗೆ ಹಾಸನ ಜಿಲ್ಲೆಯ ರೈತರಿಗೆ ಕೃಷಿ ರಫ್ತು ಹೆಚ್ಚಿಸಲು ಸಹಕಾರಿಯಾಗಲಿದೆ. ಹಾಗಾಗಿ ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಿ ಎಂದು ಮನವಿ ಮಾಡಿದ್ದಾರೆ. 

'ಹಾಸನದಲ್ಲಿ ಮೂಲಸೌಕರ್ಯಗಳ ಕೊರತೆಯಿಲ್ಲ. ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ಕಾನೂನು ಕಾಲೇಜುಗಳಿವೆ. ಕಾಫಿ ಮತ್ತು ಚಹಾ ರಫ್ತು ಮಾಡಲಾಗುತ್ತಿದೆ. ವಿದೇಶಿ ವಿನಿಮಯ ಗಳಿಕೆಗೆ ನಗರವು ಗಣನೀಯ ಕೊಡುಗೆ ನೀಡುತ್ತಿದೆ. ರೈತರು ಪ್ರತಿ ತಿಂಗಳು ಹಾಲು ಉತ್ಪಾದನೆಯಿಂದ ₹900 ಕೋಟಿ ಗಳಿಸುತ್ತಾರೆ' ಎಂದು ಹೇಳಿದರು.

ಹಾಸನದಲ್ಲಿ ವಿಮಾನ ನಿಲ್ದಾಣವು ಬೆಂಗಳೂರು, ಮಂಗಳೂರು ಮತ್ತು ಚೆನ್ನೈಗಳನ್ನು ಉತ್ತಮವಾಗಿ ಸಂಪರ್ಕಿಸುತ್ತದೆ. ಇದು ಆರ್ಥಿಕವಾಗಿ ಲಾಭದಾಯಕ ಮತ್ತು ಕಾರ್ಯತಂತ್ರದ ಭಾಗವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ. 

'ಲೋಕಸಭೆ ಮತ್ತು ವಿಧಾನಸಭೆ ಎರಡಕ್ಕೂ ಏಳು ಬಾರಿ ಆಯ್ಕೆಯಾಗಿರುವ ರೈತ ನಾನು. 66 ವರ್ಷಗಳನ್ನು ಸಾರ್ವಜನಿಕ ಸೇವೆಗೆ ಮೀಸಲಿಟ್ಟಿದ್ದೇನೆ. ಜೀವನದ ಸಂಧ್ಯಾಕಾಲದಲ್ಲಿರುವ ನನ್ನ ಬಹುದೊಡ್ಡ ಬೇಡಿಕೆ ಇದು' ಎಂದರು.

ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು ಉತ್ತರಿಸಿ, 'ವಿಮಾನ ನಿಲ್ದಾಣದ ಶೇ 60ರಷ್ಟು ಕಾಮಗಾರಿಗಳು ಮುಗಿದಿವೆ. 2025ರ ಏಪ್ರಿಲ್ ವೇಳೆಗೆ ಎಲ್ಲ ಕಾಮಗಾರಿಗಳು ಪೂರ್ಣಗೊಳ್ಳಲಿವೆ' ಎಂದು ಭರವಸೆ ನೀಡಿದರು.

Tags:    

Similar News