ಹಾವೇರಿ ಹೆಣ್ಣು ಮಕ್ಕಳ ಮಾರಾಟ ಜಾಲ: ಕ್ರಮಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹ

ಅಕ್ರಮವಾಗಿ ಹೆಣ್ಣು ಮಕ್ಕಳ ಮಾರಾಟ ಮಾಡುವ ಜಾಲ ನಡೆಯುವ ಸ್ಥಳದ ಎದುರಿಗೆ ಅಂಗನವಾಡಿ ಕೇಂದ್ರವಿದೆ. ಅಲ್ಲಿಗೆ ಚಿಕ್ಕಮಕ್ಕಳು ಮತ್ತು ಹೆಣ್ಣುಮಕ್ಕಳು ಬರುತ್ತಾರೆ ಎಂದು ಸಂಸದ ಬಸವರಾಜ್‌ ಬೊಮ್ಮಾಯಿ ಆರೋಪಿಸಿದ್ದಾರೆ.;

Update: 2025-07-08 08:49 GMT

ಸಂಸದ ಬಸವರಾಜ್‌ ಬೊಮ್ಮಾಯಿ

ಹಾವೇರಿ ಜಿಲ್ಲೆ ಹಾನಗಲ್‌ ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ಬೆಳಕಿಗೆ ಬಂದಿರುವ ಅಂತಾರಾಜ್ಯ ಹೆಣ್ಣು ಮಕ್ಕಳ ಮಾರಾಟ ಜಾಲವು ಅತ್ಯಂತ ಗಂಭೀರ ವಿಷಯವಾಗಿದ್ದು, ಇದರ ವಿರುದ್ಧ ಗೃಹ ಸಚಿವರು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಬ್ಯಾಗವಾದಿ ಗ್ರಾಮದಲ್ಲಿ ಅಂತಾರಾಜ್ಯ ಹೆಣ್ಣು ಮಕ್ಕಳ ಮಾರಾಟ ಜಾಲ ಪತ್ತೆಯಾಗಿದ್ದು, ಇದು ಸುಮಾರು ದಿನಗಳಿಂದ ನಡೆಯುತ್ತಿದೆ. ಬೇರೆ ಜಿಲ್ಲೆಯಿಂದ ಹೆಣ್ಣುಮಕ್ಕಳನ್ನು, ಚಿಕ್ಕಮಕ್ಕಳನ್ನು ಇಲ್ಲಿ ಸಾಗಾಣಿಕೆ ಮಾಡಿ ಹಿಂಸೆ ಕೊಟ್ಟು, ಅವರನ್ನು ಕದ್ದು ಇಟ್ಟು ಬೇರೆ ಬೇರೆ ರಾಜ್ಯಗಳಿಗೆ ಕಳುಹಿಸುವ ಜಾಲ ಇಲ್ಲಿದೆ. ಆದರೂ ಪೊಲಿಸರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಇದು ಅತ್ಯಂತ ಖಂಡನೀಯ ಎಂದು ಆರೋಪಿಸಿದ್ದಾರೆ

ಅಕ್ರಮವಾಗಿ ಹೆಣ್ಣು ಮಕ್ಕಳ ಮಾರಾಟ ಮಾಡುವ ಜಾಲ ನಡೆಯುವ ಸ್ಥಳದ ಎದುರಿಗೆ ಅಂಗನವಾಡಿ ಕೇಂದ್ರವಿದೆ. ಅಲ್ಲಿಗೆ ಚಿಕ್ಕಮಕ್ಕಳು ಮತ್ತು ಹೆಣ್ಣುಮಕ್ಕಳು ಬರುತ್ತಾರೆ. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿಯವರು ಯಾವುದೇ ರೀತಿಯ ದೂರು ನೀಡಿಲ್ಲ. ಮಹಿಳಾ ಮತ್ತು ಮಕ್ಕಳ ಇಲಾಖೆಯವರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಾಗಿದೆ. ಪೊಲಿಸರು ಯಾವುದೇ ಕ್ರಮ ಕೈಗೊಂಡಿಲ್ಲ.

ಆಡಳಿತ ಕುಸಿದಿದೆ. ಬೇರೆ ಬೇರೆ ಜಿಲ್ಲೆಯಿಂದ ಸಮಾಜ ಘಾತುಕ ಶಕ್ತಿಗಳು, ಕೊಲೆ, ಸುಲಿಗೆ ಮಾಡಿದವರು ಇಲ್ಲಿ ಬಂದು ಆಶ್ರಯ ಪಡೆಯುತ್ತಿದ್ದಾರೆ. ಇಲ್ಲಿಯ ಪೊಲೀಸರ ಬಗ್ಗೆ ಯಾವುದೇ ಭಯ ಇಲ್ಲ. ಈ ಅಕ್ರಮಗಳಿಗೆ ಸಹಕಾರ ನೀಡಿದ್ದ ಪೊಲೀಸರು ಅಮಾನತ್ತು ಆಗಿದ್ದಾರೆ. ಹೀಗಿರುವಾಗ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಇಲ್ಲಿಯ ಅಧಿಕಾರಿಗಳು ಶಾಮೀಲಾಗಿರುವುದರಿಂದ ಗೃಹ ಸಚಿವರು ಇಡೀ ಪೊಲೀಸ್ ವ್ಯವಸ್ಥೆಯಲ್ಲಿ ದೊಡ್ಡ ಬದಲವಾಣೆ ತರದಿದ್ದರೆ, ಹಾವೇರಿ ಜಿಲ್ಲೆಯ ಜನರಿಗೆ ದೊಡ್ಡ ಶಿಕ್ಷೆ ನೀಡಿದಂತಾಗುತ್ತಿದೆ. ಸಮಾಜ ಘಾತುಕರಿಗೆ ಪುಷ್ಠಿ ಕೊಟ್ಟಂತಾಗುತ್ತದೆ. ಜನ ಸಾಮಾನ್ಯರು ದಿನನಿತ್ಯ ಜೀವನ ನಡೆಸುವುದು ಕಷ್ಟವಾಗಿದೆ. ಹೆಣ್ಣು ಮಕ್ಕಳು ಭಯಭೀತರಾಗಿದ್ದಾರೆ. ಗಾಂಜಾ ಮುಕ್ತವಾಗಿ ಮಾರಾಟ ಮಾಡಲಾಗುತ್ತಿದೆ. ಜೂಜಾಟ ನಡೆಯುತ್ತಿದೆ. ಇಷ್ಟೇಲ್ಲ ನಡೆಯುತ್ತಿದ್ದರೂ ಗೃಹ ಸಚಿವರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಅವರು ಕೂಡಲೇ ಕಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ‌.

Tags:    

Similar News