Shiva Rajkumar | ಶಿವರಾಜ್‌ಕುಮಾರ್ ಸರ್ಜರಿ ಸಕ್ಸಸ್: ಬದುಕಿನ ಸಮರ ಗೆದ್ದ ಹ್ಯಾಟ್ರಿಕ್ ಹೀರೋ
ಅನಾರೋಗ್ಯದ ನಿಮಿತ್ತ ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ಎಲ್ಲರ ಆಶೀರ್ವಾದ ಮತ್ತು ಹಾರೈಕೆಗಳಿಂದಾಗಿ ತಾವು ಜೀವನ ಸಮರ ಗೆದ್ದಿರುವುದಾಗಿ ಹೇಳಿದ್ದಾರೆ.;
ಅನಾರೋಗ್ಯದ ನಿಮಿತ್ತ ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಅಭಿಮಾನಿಗಳು ಮತ್ತು ಸಹೋದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದ್ದು, ಎಲ್ಲರ ಆಶೀರ್ವಾದ ಮತ್ತು ಹಾರೈಕೆಗಳಿಂದಾಗಿ ತಾವು ಜೀವನ ಸಮರ ಗೆದ್ದಿರುವುದಾಗಿ ಹೇಳಿದ್ದಾರೆ.
ಅಮೆರಿಕಾದ ಮಿಯಾಮಿ ಕ್ಯಾನ್ಸರ್ ಹಾಸ್ಪಿಟಲ್‌ನಲ್ಲಿ ನಡೆದಿದ್ದ ನಟ ಶಿವರಾಜ್ ಕುಮಾರ್ ಶಸ್ತ್ರಚಿಕಿತ್ಸೆಯ ಯಶಸ್ಸಿನ ಬೆನ್ನಲ್ಲೇ ಇದೀಗ ಶಿವರಾಜ್ ಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಅಭಿಮಾನಿಗಳೊಂದಿಗೆ ಮಾತನಾಡಿದ್ದು, ಅಭಿಮಾನಿಗಳಿಗೆ ಮತ್ತು ಕರ್ನಾಟಕದ ಜನತೆಗೆ ಹೊಸ ವರ್ಷದ ಶುಭ ಕೋರಿದ್ದಾರೆ. ಶಿವರಾಜ್ ಕುಮಾರ್ ಅವರ ಚಿಕಿತ್ಸೆಯ ನಂತರ ಎಲ್ಲಾ ಮೆಡಿಕಲ್ ರಿಪೋರ್ಟ್ ಗಳೂ ನೆಗೆಟಿವ್ ಇದೆ ಎಂದು ಅವರು ತಿಳಿಸಿದ್ದಾರೆ. ಅಭಿಮಾನಿಗಳ ಹಾರೈಕೆಯಿಂದ ಶಿವಣ್ಣ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ಗೀತಾ ಶಿವರಾಜ್‌ಕುಮಾರ್ ತಿಳಿಸಿದ್ದಾರೆ.
"ಶಿವರಾಜ್ ಕುಮಾರ್ ಅವರ ಎಲ್ಲ ವೈದ್ಯಕೀಯ ಪರೀಕ್ಷಾ ವರದಿಗಳು ಬಂದಿದ್ದು, ಎಲ್ಲದರಲ್ಲೂ ನೆಗೆಟಿವ್ ಬಂದಿದೆ. ಶಿವಣ್ಣ ಈಗ ಕ್ಯಾನ್ಸರ್ ನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಈ ಬಗ್ಗೆ ವೈದ್ಯರು ಅಧಿಕೃತ ಹೇಳಿಕೆ ನೀಡಿದ್ದು, ಅಭಿಮಾನಿಗಳು, ಗುರು-ಹಿರಿಯರ ಪ್ರಾರ್ಥನೆಯ ಫಲವಾಗಿ ಶಿವರಾಜ್ ಕುಮಾರ್ ಅವರು ಕ್ಯಾನ್ಸರ್ ನಿಂದ ಗುಣಮುಖರಾಗಿದ್ದಾರೆ. ನಿಮಗೆಲ್ಲರಿಗೂ ಧನ್ಯವಾದಗಳು" ಎಂದು ಗೀತ ಶಿವರಾಜ್ ಕುಮಾರ್ ಹೇಳಿದ್ದಾರೆ.
ಬಳಿಕ ಮಾತನಾಡಿದ ನಟ ಶಿವರಾಜ್ ಕುಮಾರ್, 'ಅಭಿಮಾನಿಗಳ ದೇವರುಗಳ ಹಾರೈಕೆ ಮತ್ತು ಪ್ರಾರ್ಥನೆಯಿಂದ ಇಂದು ನಾನು ಗುಣಮುಖನಾಗಿದ್ದೇನೆ. ವೈದ್ಯರ ಅತ್ಯುತ್ತಮ ಚಿಕಿತ್ಸೆ ಮತ್ತು ನನ್ನ ಸ್ನೇಹಿತರು, ಸಹ ಕಲಾವಿದರ ಹಾರೈಕೆಯಿಂದಾಗಿ ನಾನು ಚೇತರಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ಕ್ಯಾನ್ಸರ್ ಹೊರತಾಗಿಯೂ ತಾವು ಚಿತ್ರಗಳನ್ನು ಕಂಪ್ಲೀಟ್ ಮಾಡಿದ ಬಗ್ಗೆ ಮತ್ತು ಕ್ಯಾನ್ಸರ್ ವಿರುದ್ಧದ ತಮ್ಮ ಹೋರಾಟವನ್ನು ಶಿವಣ್ಣ ಭಾವುಕರಾಗಿ ಹೇಳಿದ್ದಾರೆ. ಅಲ್ಲದೆ ಗೀತಾ ಶಿವರಾಜ್ ಕುಮಾರ್ ಅವರಿಂದಲೇ ತಾವು ಇಂದು ಈ ಸ್ಥಿತಿಯಲ್ಲಿದ್ದೇನೆ. ನನ್ನ ಆರೋಗ್ಯ ಚೇತರಿಕೆಯಲ್ಲಿ ಗೀತಾ ಮತ್ತು ನನ್ನ ಮಗಳಾದ ನಿವೇದಿತಾ ಅವರ ಪಾತ್ರ ಬಹಳ ದೊಡ್ಡದುʼ ಎಂದು ಶಿವಣ್ಣ ಹೇಳಿದ್ದಾರೆ.
ಸ್ವತಃ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಶಿವಣ್ಣ, ನಿಮ್ಮೆಲ್ಲರ ಪ್ರೀತಿ, ಆಶೀರ್ವಾದಕ್ಕೆ ನಾನು ಚಿರಋಣಿ. ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಎಂದು ಹಾರೈಸಿದ್ದಾರೆ.
ಅಲ್ಲದೆ, ವಿಡಿಯೋದಲ್ಲಿ ತಮ್ಮ ಚಿಕಿತ್ಸಾ ಪ್ರಕ್ರಿಯೆಯಲ್ಲಿ ನೆರವಾದ ಎಲ್ಲರಿಗೂ ಧನ್ಯವಾದ ಹೇಳಿರುವ ಶಿವಣ್ಣ, ಆಸ್ಪತ್ರೆ ಸಿಬ್ಬಂದಿಗಳಿಗೂ ಧನ್ಯವಾದ ಅರ್ಪಿಸಿದ್ದಾರೆ. ಅಂತೆಯೇ ಶಿವಣ್ಣ, ಐ ವಿಲ್ ಬಿ ಬ್ಯಾಕ್ ಸೂನ್ ಎಂದು ಅಭಿಮಾನಿಗಳಿಗೆ ಹೊಸ ವರ್ಷದ ಶುಭ ಕೋರಿದ್ದಾರೆ.