ಹಾಸನ ಪೆನ್‌ಡ್ರೈವ್‌ ಪ್ರಕರಣ | ಮಹಿಳಾ ಆಯೋಗದ ಪತ್ರಕ್ಕೆ ಇಲ್ಲ ಸರ್ಕಾರದ ಪ್ರತಿಕ್ರಿಯೆ!

ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಆಘಾತಕಾರಿ ಸಂಗತಿಗಳು ಹೊರಬರುತ್ತಿವೆ. ಸಾವಿರಾರು ಮಹಿಳೆಯರು ಇರುವ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹೆಣ್ಣುಮಕ್ಕಳ ಘನತೆ ಬೀದಿಪಾಲಾಗುತ್ತಿದೆ. ಆದರೆ, ಹೆಣ್ಣುಮಕ್ಕಳ ರಕ್ಷಣೆಗೆ ಧಾವಿಸಬೇಕಾಗಿದ್ದ ರಾಜ್ಯ ಸರ್ಕಾರ ಮತ್ತು ರಾಜ್ಯ ಪೊಲೀಸ್ ಇಲಾಖೆ ಮಾತ್ರ ಮಹಿಳಾ ಆಯೋಗದ ಪತ್ರಕ್ಕೂ ಪ್ರತಿಕ್ರಿಯಿಸದೆ ಮೌನಕ್ಕೆ ಜಾರಿವೆ.

Update: 2024-04-27 14:26 GMT

ಹಾಸನ ಪೆನ್ ಡ್ರೈವ್ ಪ್ರಕರಣದಲ್ಲಿ ದಿನದಿಂದ ದಿನಕ್ಕೆ ಆಘಾತಕಾರಿ ಸಂಗತಿಗಳು ಹೊರಬರುತ್ತಿವೆ. ಸಾವಿರಾರು ಮಹಿಳೆಯರು ಇರುವ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹೆಣ್ಣುಮಕ್ಕಳ ಘನತೆ ಬೀದಿಪಾಲಾಗುತ್ತಿದೆ. ಆದರೆ, ಹೆಣ್ಣುಮಕ್ಕಳ ರಕ್ಷಣೆಗೆ ಧಾವಿಸಬೇಕಾಗಿದ್ದ ರಾಜ್ಯ ಸರ್ಕಾರ ಮತ್ತು ರಾಜ್ಯ ಪೊಲೀಸ್ ಇಲಾಖೆ ಮಾತ್ರ ಮಹಿಳಾ ಆಯೋಗದ ಪತ್ರಕ್ಕೂ ಪ್ರತಿಕ್ರಿಯಿಸದೆ ಮೌನಕ್ಕೆ ಜಾರಿವೆ.

ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಪ್ರಸರಣವಾಗುತ್ತಿರುವ ʼಪ್ರಭಾವಿ ವ್ಯಕ್ತಿಯೊಬ್ಬ ಸಾವಿರಾರು ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಂಡಿರುವʼ ದೃಶ್ಯಗಳು ಮತ್ತು ಚಿತ್ರಗಳನ್ನು ಒಳಗೊಂಡಿವೆ ಎನ್ನಲಾದ ಪೆನ್ ಡ್ರೈವ್‌ಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿವೆ. ಜಿಲ್ಲೆಯ ಸಾರ್ವಜನಿಕ ಸ್ಥಳಗಳಲ್ಲಿ ಎಸೆಯಲಾಗಿತ್ತು ಎನ್ನಲಾದ ಪೆನ್‌ ಡ್ರೈವ್‌ಗಳಲ್ಲಿರುವ ವಿಡಿಯೋ ಮತ್ತು ಚಿತ್ರಗಳು ವಾಟ್ಸಪ್, ಟೆಲಿಗ್ರಾಮ್ ಮತ್ತಿತರ ಚಾಟಿಂಗ್ ಆಪ್ಗಳ ಮೂಲಕ ಕೋಟ್ಯಂತರ ಜನರನ್ನು ತಲುಪಿವೆ ಎನ್ನಲಾಗುತ್ತಿದ್ದು, ಈ ಬಗ್ಗೆ ಸ್ವತಃ ರಾಜ್ಯ ಮಹಿಳಾ ಆಯೋಗ ಮುಖ್ಯಮಂತ್ರಿ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ಪತ್ರ ಬರೆದು ತನಿಖೆಗೆ ವಿಶೇಷ ಎಸ್ಐಟಿ ತಂಡ ರಚನೆಗೆ ಒತ್ತಾಯಿಸಿದೆ.

ಹಾಸನ ಎಸ್ಪಿಗೆ ಪತ್ರ ಬರೆದ ಆಯೋಗ

ಈ ನಡುವೆ, “ಸಂತ್ರಸ್ತ ಮಹಿಳೆಯೊಬ್ಬರು ಮಾಧ್ಯಮಗಳ ಮುಂದೆ ಬಂದು ತಮ್ಮ ನೋವು ತೋಡಿಕೊಂಡಿದ್ದು, ಆ ಹಿನ್ನೆಲೆಯಲ್ಲಿ ನಿರ್ದಿಷ್ಟ ಪ್ರಕರಣವನ್ನು ಉಲ್ಲೇಖಿಸಿ ರಾಜ್ಯ ಮಹಿಳಾ ಆಯೋಗ, ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಪತ್ರ ಬರೆದು ಕ್ರಮಕ್ಕೆ ಒತ್ತಾಯಿಸಿದೆ. ನೊಂದ ಮಹಿಳೆಯನ್ನು ವಿಶ್ವಾಸಕ್ಕೆ ಪಡೆದು, ಆಕೆಯ ಗೌಪ್ಯತೆ ಕಾಯ್ದುಕೊಂಡು ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಆಯೋಗ ಸೂಚಿಸಿದೆ. ಈ ಕುರಿತು ಅಧಿಕೃತ ಪತ್ರವಲ್ಲದೆ, ಖುದ್ದು ದೂರವಾಣಿ ಮೂಲಕ ಕರೆ ಮಾಡಿ ಎಸ್ಪಿ ಅವರಿಗೆ ಮಾತನಾಡಿದ್ದೇನೆ. ಆದರೂ ಈವರೆಗೆ ಯಾವುದೇ ಕ್ರಮವಾದ ಬಗ್ಗೆ ಮಾಹಿತಿ ಇಲ್ಲ” ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.

ಈ ಕುರಿತು ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಡಾ ನಾಗಲಕ್ಷ್ಮಿ ಚೌಧರಿ ಅವರು, “ಹಾಸನ ಪೆನ್ಡ್ರೈವ್ ಪ್ರಕರಣದಲ್ಲಿ ಆಯೋಗ ಬರೆದಿರುವ ಪತ್ರಕ್ಕೆ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಏಳು ದಿನಗಳ ಒಳಗೆ ಪ್ರತಿಕ್ರಿಯೆ ಬರುವ ನಿರೀಕ್ಷೆ ಇದೆ. ಈ ನಡುವೆ ಪ್ರಕರಣದ ಸಂತ್ರಸ್ತೆ ಎಂದು ಹೇಳಿಕೊಂಡ ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮಗಳಲ್ಲಿ ನೋವು ತೋಡಿಕೊಂಡಿದ್ದು ಗಮನಕ್ಕೆ ಬಂದಿತ್ತು. ಕೂಡಲೇ ಆ ವಿಷಯವನ್ನು ಉಲ್ಲೇಖಿಸಿ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಕರೆ ಮಾಡಿ ಮಾತನಾಡಿದೆ. ಜೊತೆಗೆ ಪತ್ರವನ್ನೂ ಬರೆದು ಆ ಸಂತ್ರಸ್ತೆಯ ಹೇಳಿಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ಮತ್ತು ಪೆನ್‌ಡ್ರೈವ್ ಕಂಟೆಂಟ್ ಜಾಲತಾಣದಲ್ಲಿ ಹಂಚಿಕೆಯಾಗುತ್ತಿರುವುದನ್ನು ತಡೆಯಲು ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ” ಎಂದು ಮಾಹಿತಿ ನೀಡಿದರು.

ಈ ಕುರಿತು ʼದ ಫೆಡರಲ್ ಕರ್ನಾಟಕʼ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಜಿತಾ ಮೊಹಮ್ಮದ್ ಅವರನ್ನು ಸಂಪರ್ಕಿಸಿದಾಗ ಅವರು, “ಮಹಿಳಾ ಆಯೋಗದ ಪತ್ರ ಬಂದಿದೆ. ಆದರೆ, ಸದ್ಯ ಚುನಾವಣಾ ಕರ್ತವ್ಯದ ಒತ್ತಡದ ಕಾರಣದಿಂದ ಈ ಪ್ರಕರಣದ ಕುರಿತು ಗಮನ ಹರಿಸಲು ಆಗಿಲ್ಲ. ಮುಂದಿನ ವಾರ ಆ ಬಗ್ಗೆ ಗಮನ ಹರಿಸಲಿದ್ದೇವೆ” ಎಂದು ಆಯೋಗದ ಪತ್ರ ಕೈಸೇರಿರುವ ಬಗ್ಗೆ ಖಚಿತಪಡಿಸಿದರು.

ರಾಜಕೀಯ ಲಾಭ ಮುಖ್ಯವಾಯಿತೆ?

ಈ ನಡುವೆ, ಸಾವಿರಾರು ಮಹಿಳೆಯರ ಘನತೆ ಮತ್ತು ಬದುಕಿಗೆ ಅಪಾಯ ತಂದೊಡ್ಡಿರುವ ಪೆನ್ ಡ್ರೈವ್ ಪ್ರಕರಣ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದೆ. ನೂರಾರು ಮಹಿಳೆಯರ ಖಾಸಗಿ ಕ್ಷಣಗಳು ಸೋರಿಕೆಯಾಗಿ ಹಾದಿಬೀದಿಯಲ್ಲಿ ಜನ ಮಾತನಾಡತೊಡಗಿದ್ದಾರೆ. ಸರ್ಕಾರಿ ನೌಕರರು, ರಾಜಕಾರಣಿಗಳು, ಮಾಧ್ಯಮದವರು, ಗೃಹಿಣಿಯರು ಸೇರಿದಂತೆ ನೂರಾರು ಮಹಿಳೆಯರು ಇದ್ದಾರೆ ಎನ್ನಲಾಗುತ್ತಿರುವ ವಿಡಿಯೋಗಳು ಜನರ ಬಾಯಿಗೆ ಆಹಾರವಾಗುತ್ತಿವೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅನಗತ್ಯ ಚರ್ಚೆಗೆ, ಅನುಮಾನಕ್ಕೆ ಕಾರಣವಾಗಿವೆ.

ಆದರೂ, ರಾಜ್ಯ ಸರ್ಕಾರ ಮತ್ತು ಗೃಹ ಇಲಾಖೆ ಈ ಅನಾಹುತಕಾರಿ ಬೆಳವಣಿಗೆಯನ್ನು ತಡೆಯುವ ಮತ್ತು ತನಿಖೆ ನಡೆಸುವ ಯಾವ ಪ್ರಯತ್ನವನ್ನೂ ಮಾಡಿಲ್ಲ ಎಂಬುದು ಮಹಿಳಾ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಸಾವಿರಾರು ಮಹಿಳೆಯರ ಘನತೆಯ ಪ್ರಶ್ನೆಯನ್ನು ಕೂಡ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಲಾಯಿತೆ? ಅದೇ ಕಾರಣಕ್ಕಾಗಿ ಪೆನ್‌ ಡ್ರೈವ್‌ ಪ್ರಸರಣ ತಡೆಗೆ, ಜಾಲತಾಣಗಳಲ್ಲಿ ವಿಡಿಯೋ ಮತ್ತು ಚಿತ್ರಗಳ ಪ್ರಸರಣ ತಡೆಗೆ ಬಿಗಿ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಲಿಲ್ಲವೆ? ಹಾಗೇ ಪ್ರಕರಣದಲ್ಲಿ ಭಾಗಿಯಾದವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲೂ ನಿಧಾನ ಧೋರಣೆ ತಾಳುತ್ತಿರುವುದರ ಹಿಂದೆಯೂ ರಾಜಕೀಯ ಕಾರಣಗಳಿವೆಯೇ? ಎಂಬ ಪ್ರಶ್ನೆಗಳೂ ಕೇಳಿಬರುತ್ತಿವೆ.

ನ್ಯಾಯಾಂಗಕ್ಕೆ ಮೊರೆ

ಆ ಹಿನ್ನೆಲೆಯಲ್ಲಿ ʼಜನವಾದಿʼ ಮಹಿಳಾ ಸಂಘಟನೆಯ ಕೆ ಎಸ್ ವಿಮಲಾ ಪ್ರತಿಕ್ರಿಯಿಸಿ, “ಸಾವಿರಾರು ಮಹಿಳೆಯರ ಬದುಕಿನ, ಘನತೆಯ ಪ್ರಶ್ನೆ ಇದು. ಇಂತಹದ್ದೊಂದು ಆಘಾತಕಾರಿ ಹಗರಣದ ವಿಷಯದಲ್ಲಿ ಈವರೆಗೂ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಜಾಣಮೌನಕ್ಕೆ ಶರಣಾಗಿರುವುದು ದಿಗ್ಭ್ರಮೆ ಹುಟ್ಟಿಸುವ ಸಂಗತಿ. ಅಷ್ಟೊಂದು ಹೇಯ ಕೃತ್ಯ ಎಸಗಿದಾತ ಮತ್ತು ಅಂತಹದ್ದನ್ನು ಜಾಲತಾಣಗಳಲ್ಲಿ ಹಂಚಿದವರು ಇಬ್ಬರೂ ಸಮಾನ ಪಾತಕಿಗಳೇ. ಇದರಿಂದಾಗಿ ಸಾವಿರಾರು ಹೆಣ್ಣುಮಕ್ಕಳ ಜೀವ ಮತ್ತು ಘನತೆಗೆ ಅಪಾಯಕ್ಕೀಡಾಗಿದೆ. ಆದರೂ ಸರ್ಕಾರ ಈ ಬಗ್ಗೆ ಯಾವ ಕ್ರಮಕ್ಕೂ ಮುಂದಾಗಿಲ್ಲ. ಕನಿಷ್ಟ ಅಂತಹ ಅಪಾಯಕಾರಿ ಸರಕು ಜಾಲತಾಣದಲ್ಲಿ ಹಂಚಿಕೆಯಾದಂತೆ ಬಿಗಿ ಕ್ರಮ ಜರುಗಿಸುವ, ಜನರಿಗೆ ಎಚ್ಚರಿಕೆ ನೀಡುವ ಕನಿಷ್ಠ ಕಾಳಜಿ ಕೂಡ ಸರ್ಕಾರ ತೋರಿಲ್ಲ” ಎಂದರು.

ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, “ಮಹಿಳೆಯರ ಘನತೆಯ ವಿಷಯ ಇದಾಗಿದ್ದು, ಇಂತಹ ಸೂಕ್ಷ್ಮ ವಿಷಯದಲ್ಲಿ ಸರ್ಕಾರ ಕುರುಡಾಗಿರುವುದು ಸಲ್ಲದು. ಕೇವಲ ಚುನಾವಣೆ ಲಾಭವೇ ಎಲ್ಲಕ್ಕಿಂತ ಇವರಿಗೆ ಮುಖ್ಯವಾಗಿ ಹೋಯಿತೆ? ರಾಜಕೀಯ ಲಾಭಕ್ಕಾಗಿ ಪ್ರಕರಣದ ವಿಷಯದಲ್ಲಿ ಸರ್ಕಾರ ಜಾಣಮೌನಕ್ಕೆ ಜಾರಿದೆಯೇ? ಎಂಬ ಪ್ರಶ್ನೆ ಮೂಡುತ್ತಿದೆ. ಹಾಗಾಗಿ ಈಗ ನಮಗೆ ಇರುವುದು ನ್ಯಾಯಾಂಗದ ಆಸರೆ ಮಾತ್ರ. ಪ್ರಕರಣದ ಕುರಿತು ಗೌರವಾನ್ವಿತ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ನೊಂದವರಿಗೆ ನ್ಯಾಯ ಕೊಡಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆ ಒತ್ತಾಯಿಸುತ್ತದೆ. ಅಲ್ಲದೆ, ರಾಜ್ಯ ಸರ್ಕಾರದ ಜಾಣ ಮೌನವನ್ನು ತೀವ್ರವಾಗಿ ಖಂಡಿಸುತ್ತದೆ” ಎಂದು ಹೇಳಿದರು.

Tags:    

Similar News