ಪಾಪದ ಕೊಡ ತುಂಬಿದಾಗ ಎಲ್ಲವೂ ಹೊರ ಬರಬೇಕು: ಹಾಸನ ಡಿಸಿ ಪರೋಕ್ಷ ಟಾಂಗ್
ಪಾಪದ ಕೊಡ ತುಂಬಿದಾಗ ಎಲ್ಲವೂ ಹೊರ ಬರಬೇಕು. ಶಿಶುಪಾಲನಿಗೆ ಕೃಷ್ಣ ನೂರು ತಪ್ಪು ಮಾಡಲು ಅವಕಾಶ ಕೊಟ್ಟ, ಆದರೆ ನೂರಾ ಒಂದನೇ ತಪ್ಪು ಮಾಡಲು ಅವಕಾಶ ಕೊಡಲಿಲ್ಲ ಎಂದು ಜಿಲ್ಲಾಧಿಕಾರಿ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಗರಣದ ಕುರಿತು ಪ್ರತಿಕ್ರಿಯಿಸಿದ್ದಾರೆ;
ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲಾಧಿಕಾರಿ ಸತ್ಯಭಾಮಾ ಅವರು, ದೇವೇಗೌಡ ಅವರ ಕುಟುಂಬಕ್ಕೆ ಪರೋಕ್ಷ ಟಾಂಟ್ ನೀಡಿದ್ದಾರೆ. ʻʻಪಾಪದ ಕೊಡ ತುಂಬಿದಾಗ ಎಲ್ಲವೂ ಹೊರ ಬರಬೇಕು. ಶಿಶುಪಾಲನಿಗೆ ಕೃಷ್ಣ ನೂರು ತಪ್ಪು ಮಾಡಲು ಅವಕಾಶ ಕೊಟ್ಟ, ಆದರೆ ನೂರಾ ಒಂದನೇ ತಪ್ಪು ಮಾಡಲು ಅವಕಾಶ ಕೊಡಲಿಲ್ಲʼʼ ಎಂದು ಪೌರಾಣಿಕ ಕಥೆ ಹೇಳುವ ಮೂಲಕ ಟಾಂಗ್ ನೀಡಿದ್ದಾರೆ.
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಹಾಸನದಲ್ಲಿ ಸೋಮವಾರ (ಏ. 29) ಪ್ರತಿಭಟನಾ ಮೆರವಣಿಗೆ ನಡೆಸಿದವು. ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡು ಪ್ರಜ್ವಲ್ ರೇವಣ್ಣ ವಿರುದ್ಧ ಘೋಷಣೆ ಕೂಗಿದರು.
ಪ್ರತಿಭಟನೆ ನಡೆಸಿ ನಂತರ ಜಿಲ್ಲಾಧಿಕಾರಿ ಸಿ ಸತ್ಯಭಾಮಾ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಪತ್ರ ಸ್ವೀಕರಿಸಿದ ನಂತರ ಮಾತನಾಡಿದ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರು, ಪೆನ್‌ಡ್ರೈವ್ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿದ್ದು ತನಿಖಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಕೃಷ್ಣ ಶಿಶುಪಾಲನ ಕತೆ ಹೇಳಿದ
"ಪಾಪದ ಕೊಡ ತುಂಬಿದಾಗ ಎಲ್ಲವೂ ಹೊರ ಬರಬೇಕು. ಶಿಶು ಪಾಲನಿಗೆ ಕೃಷ್ಣ ನೂರು ತಪ್ಪು ಮಾಡಲು ಅವಕಾಶ ಕೊಟ್ಟ. 101ನೇ ತಪ್ಪು ಮಾಡಲು ಅವಕಾಶ ಕೊಡಲಿಲ್ಲ" ಎಂದು ಪೌರಾಣಿಕ ಹಿನ್ನೆಲೆಯ ಸಂದೇಶವನ್ನು ವಿವರಿಸುವ ಮೂಲಕ ಪ್ರಜ್ವಲ್ ರೇವಣ್ಣ ಅಕ್ರಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. "ಈಗಲೂ ಎಲ್ಲಾ ರೀತಿಯಲ್ಲೂ ನ್ಯಾಯ ಸಿಗುತ್ತದೆ" ಎಂದು ಭರವಸೆ ನೀಡಿದ ಜಿಲ್ಲಾಧಿಕಾರಿ, "ಇಲ್ಲಿ ಎಲ್ಲಾ ಹೋರಾಟಗಾರರು ಬಂದಿದ್ದೀರಿ. ನಿಮ್ಮೆಲ್ಲರ ಮನವಿಯನ್ನು ಪರಿಗಣಿಸಿದ್ದೇನೆ. ಸೂಕ್ತ ತನಿಖೆಯಾಗಿ ನಿಮಗೆಲ್ಲಾ ನ್ಯಾಯ ಸಿಗುತ್ತದೆ" ಎಂದು ಭರವಸೆ ವ್ಯಕ್ತಪಡಿಸಿದರು.
ನಮ್ಮನ್ನು ನಾವು ರಕ್ಷಣೆ ಮಾಡಬೇಕು
"ಇಂತ ಘಟನೆಯಾದಾಗ ನಾವು ಪ್ರತಿಭಟಿಸಬೇಕು" ಎಂದು ಹೇಳಿದ ಡಿ ಸಿ ಸತ್ಯಭಾಮಾ, "ತಮ್ಮನ್ನು ತಾವು ರಕ್ಷಣೆ ಮಾಡುವಷ್ಟು ಮಹಿಳೆ ಮುಂದುವರೆದಿದ್ದಾರೆ" ಎಂದರು. ಇನ್ನು ನಾವು ನಿಮ್ಮ ಜೊತೆ ಇದ್ದೇವೆ ಎಂದು ಸತ್ಯಭಾಮಾ ಪ್ರತಿಭಟನಾಕಾರರಿಗೆ ಭರವಸೆ ನೀಡಿದರು.
ಅಧಿಕಾರ ನೀಡಿದವರು ಯಾರು?
ಇನ್ನು ಹಾಸನ ಜಿಲ್ಲಾಧಿಕಾರಿ ಹೇಳಿಕೆಗೆ ಸಂಬಂಧಿಸಿದಂತೆ ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಜೆಡಿಎಸ್ ನಾಯಕ, ಹಾಗೂ ಆರೋಪಿ ಪ್ರಜ್ವಲ್ ರೇವಣ್ಣ ಚಿಕ್ಕಪ್ಪ ಎಚ್ ಡಿ ಕುಮಾರಸ್ವಾಮಿ, "ರಾಜ್ಯದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯುತ್ತಿದೆ. ನೀತಿ ಸಂಹಿತೆ ಇನ್ನು ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು ಯಾವುದೇ ರೀತಿಯ ಪ್ರತಿಕ್ರಿಯೆ ನೀಡುವಂತಿಲ್ಲ. ಆದರೆ ಹಾಸನ ಜಿಲ್ಲಾಧಿಕಾರಿಗಳು ಪಾಪದ ಕೊಡ ತುಂಬಿದಾಗ ಸತ್ಯ ಹೊರ ಬರಲೇಬೇಕು ಎಂದು ಪೌರಾಣಿಕ ಶಿಶುಪಾಲನ ಕಥೆಯನ್ನು ಹೇಳಲು ಹೊರಟಿದ್ದಾರೆ. ಈ ಪಾಠವನ್ನೂ ಅವರಿಗೆ ತಯಾರಿ ಮಾಡಿಸಿ ಹೇಳಿಸಿರಬೇಕು ಎಂದು ಅಕ್ರೋಶ ವ್ಯಕ್ತಪಡಿಸಿದರು. ಈ ವಿಷಯನ್ನು ನಿರ್ಧರಿಸಲು ನೀವು ಯಾರು?, ನ್ಯಾಯಧೀಶರೇ?, ನಿಮ್ಮ ಕೆಲಸವೇನು? ನೀವು ಮಾಡುತ್ತಿರುವುದೇನು? ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮಗೆ ಮಾನ ಮರ್ಯಾದೆ ಇದ್ದರೆ ಈ ಡಿಸಿ ಮೇಲೆ ಯಾವ ರೀತಿಯ ಕ್ರಮ ಕೈಗೊಳ್ಳುತ್ತೀರಿ?, ಅವರಿಗೆ ಆ ರೀತಿಯಾದ ಹೇಳಿಕೆ ನೀಡಲು ಅಧಿಕಾರ ಕೊಟ್ಟವರು ಯಾರು?" ಎಂದು ಪ್ರಶ್ನಿಸಿದ್ದಾರೆ.
ಡಿಸಿ ವಿರುದ್ದ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದ ದೇವೇಗೌಡರು
ಜಿಲ್ಲಾಧಿಕಾರಿಗಳ ಕಾರ್ಯನಿರ್ವಹಣೆ ಬಗ್ಗೆ ಮಾಜಿ ಪ್ರಧಾನಿ, ರಾಜ್ಯಸಭಾ ಸದಸ್ಯ ಎಚ್.ಡಿ. ದೇವೇಗೌಡರು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದರು.
ದೇವೇಗೌಡರು ಪತ್ರದಲ್ಲಿ ಸಿ. ಸತ್ಯಭಾಮ 8 ತಿಂಗಳಿನಿಂದ ಹಾಸನ ಜಿಲ್ಲಾಧಿಕಾರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಹಾಸನದ ಜನರಿಂದ ಉತ್ತಮ ಅಭಿಪ್ರಾಯವಿಲ್ಲ. ಸರ್ಕಾರಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಕೆಳಹಂತದ ಅಧಿಕಾರಿಗಳನ್ನು ಅವರು ಉತ್ತೇಜಿಸುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. ಸಿ. ಸತ್ಯಭಾಮಾ ಮತ್ತು ಹಾಸನ ಜಿಲ್ಲಾ ಉಸ್ತುವಾರಿ ಹಾಗೂ ಸಹಕಾರ ಸಚಿವರಾದ ಕೆ. ಎನ್. ರಾಜಣ್ಣ ಒಂದೇ ಸಮುದಾಯಕ್ಕೆ ಸೇರಿದವರು. ಸಚಿವರ ನಿರ್ದೇಶನದಂತೆಯೇ ಜಿಲ್ಲಾಧಿಕಾರಿಗಳು ಯಾವಾಗಲೂ ಕೆಲಸ ಮಾಡುತ್ತಾರೆ. ಅವರು ರಾಜ್ಯ ಸರ್ಕಾರದ ಏಜೆಂಟ್‌ರಂತೆ ಕಾರ್ಯ ನಿರ್ವಹಣೆ ಮಾಡುತ್ತಾರೆ ಎಂದು ದೇವೇಗೌಡರು ಪತ್ರದಲ್ಲಿ ದೂರಿದ್ದರು.
ಲೋಕಸಭೆ ಚುನಾವಣೆ ಮತ್ತು ಬರ ನಿರ್ವಹಣೆ ಕಾರ್ಯಗಳು ನಡೆಯುತ್ತಿರುವುದರಿಂದ ಸಿ. ಸತ್ಯಭಾಮ ಅವರ ಕಾರ್ಯ ವೈಖರಿ ತೃಪ್ತಿದಾಯಕವಾಗಿಲ್ಲ. ಆದ್ದರಿಂದ ಅವರನ್ನು ತಕ್ಷಣವೇ ವರ್ಗಾವಣೆಗೊಳಿಸಿ ಜನಪರ ಅಧಿಕಾರಿಯನ್ನು ಹಾಸನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಪತ್ರದಲ್ಲಿ ಎಚ್. ಡಿ. ದೇವೇಗೌಡರು ಮನವಿ ಮಾಡಿದ್ದರು. ಈ ಪತ್ರಕ್ಕೆ ಸಂಬಂಧಿಸಿದಂತೆ ಸಿ. ಸತ್ಯಭಾಮಾ ಅವರಿಗೆ ಚುನಾವಣಾ ಆಯೋಗ ನೊಟೀಸ್ ನೀಡಿತ್ತು.