ಸಿನಿಮಾ ನಿರ್ದೇಶನದತ್ತ ಹಂಸಲೇಖ; ಈ ಬಾರಿ ʼಗಿಟಾರ್‌ʼ ನಿಜವಾಗುತ್ತದಾ?

ಈಗ ಘೋಷಿಸಿರುವ ‘ಗಿಟಾರ್’ ಚಿತ್ರವನ್ನು 2017ರಲ್ಲೇ ಹಂಸಲೇಖ ಅವರು ಮಾಡಬೇಕಿತ್ತು. ಆ ಸಂದರ್ಭದಲ್ಲಿ ಕಾರ್‍ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ‘ಗಿಟಾರ್’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವುದಾಗಿ ಹೇಳಿಕೊಂಡಿದ್ದರು.;

Update: 2024-12-16 11:39 GMT

ಜನಪ್ರಿಯ ಗೀತರಚನೆಕಾರ ಮತ್ತು ಸಂಗೀತ ನಿರ್ದೇಶಕ ಹಂಸಲೇಖ, ನಿರ್ದೇಶಕರಾಗುತ್ತಿರುವ ಸುದ್ದಿ ಹಲವು ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ, ಕಾರಣಾಂತರಗಳಿಂದ ಆ ಸುದ್ದಿ ಇದುವರೆಗೂ ನಿಜವಾಗಿಲ್ಲ. ಈಗ ಹಂಸಲೇಖ ಹೊಸದೊಂದು ಚಿತ್ರ ನಿರ್ದೇಶಿಸುತ್ತಿರುವುದಾಗಿ ಮತ್ತೊಮ್ಮೆ ಘೋಷಿಸಿದ್ದಾರೆ.

ಹಂಸಲೇಖ ಇಷ್ಟು ವರ್ಷಗಳಲ್ಲಿ ಚಿತ್ರಕ್ಕೆ ಸಂಗೀತ ಸಂಯೋಜಿಸುವುದರ ಜೊತೆಗೆ ಕಥೆ, ಚಿತ್ರಕಥೆ, ಸಾಹಿತ್ಯ ಮತ್ತು ಸಂಭಾಷಣೆಯನ್ನು ರಚಿಸಿದ್ದರು. ಈಗ ಇದೇ ಮೊದಲ ಬಾರಿಗೆ ಅವರು ತಮ್ಮ 73ನ ವಯಸ್ಸಿನಲ್ಲಿ ಚಿತ್ರವೊಂದನ್ನು ನಿರ್ದೇಶಿಸುತ್ತಿರುವುದಾಗಿ ಘೋಷಿಸಿದ್ದಾರೆ. ಈ ಚಿತ್ರಕ್ಕೆ ‘ಗಿಟಾರ್’ ಎಂಬ ಶೀರ್ಷಿಕೆಯನ್ನು ಅವರು ಇಟ್ಟಿದ್ದು, 2025ರ ಜನವರಿಯಲ್ಲಿ ಸಿನಿಮಾ ಸೆಟ್ಟೇರಲಿದೆಯಂತೆ. ಈ ವಿಷಯವನ್ನು ಸ್ವತಃ ಹಂಸಲೇಖ ಘೋಷಿಸಿದ್ದಾರೆ.

ಭಾನುವಾರ, ‘ಚಂದನವನದ ಚಿಲುಮೆಗಳು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ‘ಒಂದೊಳ್ಳೆಯ ಸಿನಿಮಾ ಮಾಡಬೇಕೆಂಬುದು ನನ್ನ ಬಹುಕಾಲದ ಬಯಕೆ. ಅದು ಮುಂದಿನ ವರ್ಷ ನನಸಾಗಲಿದೆ. ಜಾಗತಿಕವಾಗಿ ಸಲ್ಲುವ ಒಂದು ಕಥೆಯನ್ನು ಆರಂಭಿಸಲಿದ್ದೇನೆ. ಚಿತ್ರದ ಹೆಸರು ‘ಗಿಟಾರ್ʼ. ಆ ಗಿಟಾರ್‌ನಿಂದ ಬರುವ ಧ್ವನಿ ದೇಸಿ ಧ್ವನಿಯಾಗಿ, ಗ್ಲೋಬಲ್‌ ದನಿಯಾಗಲಿ ಎಂಬುದು ನನ್ನಾಸೆ’ ಎಂದು ಹೇಳಿದ್ದಾರೆ.

ಹಂಸಲೇಖ ಅವರು ಚಿತ್ರ ನಿರ್ದೇಶನದ ಬಗ್ಗೆ ಮಾತನಾಡುತ್ತಿರುವುದು ಇದು ಮೊದಲೇನಲ್ಲ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಅವರು ನಿರ್ದೇಶಕರಾಗಿಯೇ ಎರಡು ದಶಕಗಳು ಕಳೆದಿರಬೇಕಿತ್ತು. ಹಂಸಲೇಖ ಅವರು ತಮ್ಮ ಮಗ ಅಲಂಕಾರ್‍ ಅಭಿನಯದಲ್ಲಿ ‘ಸುಗ್ಗಿ’ ಎಂಬ ಚಿತ್ರವನ್ನು ನಿರ್ಮಿಸಿದ್ದರು. ಈ ಚಿತ್ರವನ್ನು ಎಸ್. ಮಹೇಂದರ್‍ ನಿರ್ದೇಶಿಸುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಒಂದು ಹಂತದಲ್ಲಿ ಕಾರಣಾಂತರಗಳಿಂದ ಹಂಸಲೇಖ ಅವರೇ ಚಿತ್ರದ ನಿರ್ದೇಶನವನ್ನು ಕೈಗೆತ್ತಿಕೊಮಡರು. ಚಿತ್ರ ಮುಗಿದರೂ ಇದುವರೆಗೂ ಬಿಡುಗಡೆಯಾಗಲಿಲ್ಲ.

ಆ ನಂತರ ಆಗಾಗ ಹಂಸಲೇಖ ಅವರು ಚಿತ್ರ ನಿರ್ದೇಶನ ಮಾಡುತ್ತಿರುವ ಬಗ್ಗೆ ಸುದ್ದಿಗಳಾಗುತ್ತಲೇ ಇರುತ್ತವೆ. 2011ರಲ್ಲಿ ಅವರು ‘ಬಾಗಿನ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವ ಸುದ್ದಿ ಬಂದಿತ್ತು. ತಮ್ಮ ಬೇರುಗಳನ್ನು ಹುಡುಕಿಕೊಂಡು ಹೋಗುವ ಕಥೆ ಇದ್ದ ಈ ಚಿತ್ರದಲ್ಲಿ ಕನ್ನಡ ಚಿತ್ರರಂಗದ ಜನಪ್ರಿಯ ನಟರು ಭಾಗಿಯಾಗುವುದರ ಜೊತೆಗೆ ಒಂದಿಷ್ಟು ಹೊಸ ಪ್ರತಿಭೆಗಳೂ ಇರಲಿದ್ದಾರೆ ಎಂದು ಹಂಸಲೇಖ ಹೇಳಿಕೊಂಡಿದ್ದರು. ಚಿತ್ರದಲ್ಲಿ ಭಾಗಿಯಾಗುವವರಿಗೆ ಒಂದು ಕಾರ್ಯಾಗಾರವನ್ನೂ ಅವರು ಆಯೋಜಿಸಿದ್ದರು. ಆದರೆ, ಈ ಚಿತ್ರ ಶುರುವಾಗಲೇ ಇಲ್ಲ.

2016ರಲ್ಲಿ ‘4ಕೆ’ ಎಂಬ ಚಿತ್ರವನ್ನು ನಿರ್ದೇಶಿಸುವುದಾಗಿ ಹಂಸಲೇಖ ಹೇಳಿಕೊಂಡಿದ್ದರು. ಹಂಲೇ ಸಿನಿಸ್ಕೂಲ್‍ ಪ್ರೊಡಕ್ಷನ್ಸ್ ಎಂಬ ಸಂಸ್ಥೆ ಪ್ರಾರಂಭಿಸಿದ್ದ ಅವರು, ಅದರಡಿ ‘4ಕೆ’ ಚಿತ್ರವನ್ನು ನಿರ್ಮಿಸಿ-ನಿರ್ದೇಶಿಸುವುದಾಗಿ ತಿಳಿಸಿದ್ದರು. ಇದೊಂದು ಆ್ಯಂಥಾಲಜಿ ಚಿತ್ರವಾಗಿದ್ದು, ಈ ಚಿತ್ರದಲ್ಲಿ ನಾಲ್ಕು ವಿಭಿನ್ನ ಕಥೆಗಳಿದ್ದು, ಒಂದೊಂದು ಕಥೆಯನ್ನು ಒಬ್ಬೊಬ್ಬ ನಿರ್ದೇಶಕರು ನಿರ್ದೇಶಿಸಬೇಕಿತ್ತು. ಅದರಲ್ಲಿ ಒಂದು ಕಥೆಯನ್ನು ಹಂಸಲೇಖ ಅವರು ಸಹ ನಿರ್ದೇಶಿಸಬೇಕಿತ್ತು. ಪ್ರತಿ ಕಥೆಗೂ ಪ್ರತ್ಯೇಕ ತಂಡ ಕೆಲಸ ಮಾಡಬೇಕಿತ್ತು. ಆದರೆ, ಈ ಚಿತ್ರವೂ ಮುಂದುವರೆಯಲಿಲ್ಲ.

ಆ ನಂತರ 2018ರಲ್ಲಿ ಅವರು ‘ಶಕುಂತ್ಲೆ’ ಎಂಬ ಇನ್ನೊಂದು ಚಿತ್ರವನ್ನು ಘೋಷಿಸಿದರು. ಈ ಚಿತ್ರದಲ್ಲಿ ಬಾಲಿವುಡ್‍ ನಟರೊಬ್ಬರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಿದ್ದ ಹಂಸಲೇಖ, ನಾಯಕ-ನಾಯಕಿ ಸೇರಿದಂತೆ 16 ಹೊಸಬರನ್ನು ಈ ಚಿತ್ರದ ಮೂಲಕ ಪರಿಚಯಿಸುತ್ತಿರುವುದಾಗಿ ಘೋಷಿಸಿದ್ದರು. ಅವರೆಲ್ಲರನ್ನೂ ಆಡಿಷನ್‍ ಮೂಲಕ ಆಯ್ಕೆ ಮಾಡಿದ್ದಾಗಿ ಹೇಳಿದ್ದ ಅವರು, ಈ ಚಿತ್ರದಲ್ಲಿ ಬಾಲಿವುಡ್‍ ನಟರು ಪ್ರಮುಖ ಪಾತ್ರದಲ್ಲಿ ನಟಿಸುವ ಸಾಧ್ಯತೆ ಇದೆ ಎಂದು ಸಹ ಹೇಳಿದ್ದರು. ಈ ಚಿತ್ರವೂ ಕಾರಣಾಂತರಗಳಿಂದ ಶುರುವಾಗಲಿಲ್ಲ.

ಈಗ ಘೋಷಿಸಿರುವ ‘ಗಿಟಾರ್’ ಚಿತ್ರವನ್ನು 2017ರಲ್ಲೇ ಹಂಸಲೇಖ ಅವರು ಮಾಡಬೇಕಿತ್ತು. ಆ ಸಂದರ್ಭದಲ್ಲಿ ಕಾರ್‍ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ‘ಗಿಟಾರ್’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ, ಕಾರ್ಯಕ್‍ರಮದಲ್ಲಿ ಭಾಗವಹಿಸಿದ್ದ ರಘು ದೀಕ್ಷಿತ್‍ಗೆ ಬಾಸ್‍ ಗಿಟಾರ್ ನುಡಿಸಬೇಕೆಂದು ಮನವಿ ಮಾಡಿದ್ದರು. ಇದಕ್ಕೆ ರಘು ಸಹ ಒಪ್ಪಿದ್ದರು. ಆ ನಂತರ ಚಿತ್ರದ ಸುದ್ದಿಯೇ ಇರಲಿಲ್ಲ.

ಈಗ ಹಂಸಲೇಖ ಅವರು ಬಹುಶಃ ಮತ್ತೊಮ್ಮೆ ‘ಗಿಟಾರ್’ ಚಿತ್ರಕ್ಕೆ ಮರುಜೀವ ನೀಡಿರುವಂತಿದೆ. ಮುಂದಿನ ತಿಂಗಳಲ್ಲಿ ಚಿತ್ರ ಪ್ರಾರಂಭಿಸಬೇಕೆನ್ನುವುದು ಅವರ ಯೋಜನೆ. ಕಳೆದ ಎರಡು ದಶಕಗಳಿಂದ ಹಂಸಲೇಖ ಆಗಾಗ ಚಿತ್ರ ನಿರ್ದೇಶನದ ಬಗ್ಗೆ ಮಾತನಾಡುತ್ತಲೇ ಇದ್ದರು. ಆದರೆ, ಕಾರಣಾಂತರಗಳಿಂದ ಚಿತ್ರಗಳು ಪ್ರಾರಂಭವಾಗಿರಲಿಲ್ಲ. ಈ ಬಾರಿಯಾದರೂ ‘ಗಿಟಾರ್ g’ನಿಂದ ಧ್ವನಿ ಹೊರಡುತ್ತದಾ ಎಂಬುದನ್ನು ನೋಡಬೇಕು.

Tags:    

Similar News