World War-I: ಹೈಫಾ ಕದನದ 107ನೇ ವರ್ಷಾಚರಣೆ; ಬೆಂಗಳೂರಿನಲ್ಲಿ‌ ಮೈಸೂರು ಲ್ಯಾನ್ಸರ್ಸ್ ವೀರ ಯೋಧರ ಸಂಸ್ಮರಣೆ

ಜೆ.ಸಿ. ನಗರದ ಹೈಫಾ ಸ್ಮಾರಕದಲ್ಲಿ ಆಯೋಜಿಸಲಾದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ, ಹುತಾತ್ಮ ವೀರ ಯೋಧರ ಕುಟುಂಬದ ಸದಸ್ಯರು, ಸೇನೆಯ ಹಿರಿಯ ಅಧಿಕಾರಿಗಳು ಹಾಗೂ ಅನೇಕ ಸಾರ್ವಜನಿಕರು ಭಾಗವಹಿಸಿ ಗೌರವ ಸಲ್ಲಿಸಿದರು.

Update: 2025-09-23 04:26 GMT

ಜೆ.ಸಿ ನಗರದಲ್ಲಿರುವ ಹೈಫಾ ಚೌಕದಲ್ಲಿ ಮಂಗಳವಾರ ಹೈಫಾ ದಿನಾಚರಣೆ ಆಚರಿಸಲಾಯಿತು

Click the Play button to listen to article

ಮೊದಲ ಮಹಾಯುದ್ಧದ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಲಾದ ಹೈಫಾ ಕದನದ 107ನೇ ವಾರ್ಷಿಕೋತ್ಸವವನ್ನು ಬೆಂಗಳೂರಿನಲ್ಲಿ ಸೋಮವಾರ ಅತ್ಯಂತ ಶ್ರದ್ಧೆ ಮತ್ತು ಗೌರವದಿಂದ ಆಚರಿಸಲಾಯಿತು. ನಗರದ ಜೆ.ಸಿ. ನಗರದಲ್ಲಿರುವ ಹೈಫಾ ಚೌಕದಲ್ಲಿರುವ ಯುದ್ಧ ಸ್ಮಾರಕದಲ್ಲಿ ಮೈಸೂರು ಲ್ಯಾನ್ಸ್ ಹೆರಿಟೇಜ್ ಫೌಂಡೇಶನ್ ವತಿಯಿಂದ ಆಯೋಜಿಸಲಾಗಿದ್ದ ಈ 'ಹೈಫಾ ದಿನಾಚರಣೆ'ಯಲ್ಲಿ, ಮೈಸೂರು ಲ್ಯಾನ್ಸರ್‌ಗಳೂ ಸೇರಿದಂತೆ ಭಾರತೀಯ ಸೈನಿಕರ ಅದಮ್ಯ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸಲಾಯಿತು. 

1918ರ ಸೆಪ್ಟೆಂಬರ್ 23ರಂದು, ಇಂದಿನ ಇಸ್ರೇಲ್‌ನಲ್ಲಿರುವ ಆಯಕಟ್ಟಿನ ಬಂದರು ನಗರಿ ಹೈಫಾವನ್ನು ವೈರಿಗಳಿಂದ ಮುಕ್ತಗೊಳಿಸಲು ಭಾರತೀಯ ಅಶ್ವದಳವು ಮಹತ್ವದ ಕಾರ್ಯಾಚರಣೆ ನಡೆಸಿತ್ತು. ಬ್ರಿಟಿಷ್ ಸೇನೆಯ ಭಾಗವಾಗಿದ್ದ 15ನೇ ಇಂಪೀರಿಯಲ್ ಸರ್ವಿಸ್ ಕ್ಯಾವಲ್ರಿ ಬ್ರಿಗೇಡ್‌ನಲ್ಲಿ ಜೋಧಪುರ ಲ್ಯಾನ್ಸರ್‌, ಹೈದರಾಬಾದ್‌ ಲ್ಯಾನ್ಸರ್‌ ಮತ್ತು ಮೈಸೂರು ಲ್ಯಾನ್ಸರ್‌ಗಳ ತುಕಡಿಗಳಿದ್ದವು. ಅತ್ಯಾಧುನಿಕ ಮೆಷಿನ್ ಗನ್‌ಗಳು ಮತ್ತು ಫಿರಂಗಿಗಳಿಂದ ಸುಸಜ್ಜಿತವಾಗಿದ್ದ ಒಟ್ಟೋಮನ್ ತುರ್ಕರು ಮತ್ತು ಜರ್ಮನ್ ಪಡೆಗಳ ವಿರುದ್ಧ ಕೇವಲ ಈಟಿ ಮತ್ತು ಖಡ್ಗಗಳನ್ನು ಹಿಡಿದು ಭಾರತೀಯ ಸೈನಿಕರು ನಡೆಸಿದ ದಿಟ್ಟ ದಾಳಿಯು, ಜಗತ್ತಿನ ಅಂತಿಮ ಅಶ್ವದಳ ದಾಳಿಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿದೆ. ಈ ಕದನದಲ್ಲಿ ಮೈಸೂರು ಲ್ಯಾನ್ಸರ್‌ಗಳು ತೋರಿದ ಅಪ್ರತಿಮ ಪರಾಕ್ರಮದಿಂದ ಹೈಫಾ ನಗರವು ಶತ್ರುಗಳಿಂದ ವಿಮೋಚನೆಗೊಂಡಿತ್ತು.

ಈ ಐತಿಹಾಸಿಕ ವಿಜಯದ ಸ್ಮರಣಾರ್ಥವಾಗಿ ನಡೆದ ಕಾರ್ಯಕ್ರಮದಲ್ಲಿ ಸೇನೆಯ ಹಿರಿಯ ಅಧಿಕಾರಿಗಳು, ನಿವೃತ್ತ ಯೋಧರು ಹಾಗೂ ಹೈಫಾ ಕದನದಲ್ಲಿ ಹೋರಾಡಿದ ವೀರ ಯೋಧರ ಕುಟುಂಬದ ಸದಸ್ಯರು ಪಾಲ್ಗೊಂಡಿದ್ದರು. ಸ್ಮಾರಕಕ್ಕೆ ಪುಷ್ಪಗುಚ್ಛವಿರಿಸಿ ಗೌರವ ಸಲ್ಲಿಸಿದ ಗಣ್ಯರು, ಮೈಸೂರು ಸಂಸ್ಥಾನದ ಯೋಧರು ಅಂದು ತೋರಿದ ಸಾಹಸವನ್ನು ಸ್ಮರಿಸಿದರು. ಈ ದಿನಾಚರಣೆಯು ಕೇವಲ ಇತಿಹಾಸದ ನೆನಪಲ್ಲ, ಬದಲಾಗಿ ನಮ್ಮ ಸೈನಿಕರ ಕರ್ತವ್ಯನಿಷ್ಠೆ ಮತ್ತು ದೇಶಪ್ರೇಮಕ್ಕೆ ಸಲ್ಲಿಸುವ ಗೌರವವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. 

ಬೆಂಗಳೂರಿನಲ್ಲಿರುವ ಸ್ಮಾರಕದ ವಿಶೇಷತೆ ಏನು?

ಮೈಸೂರು ಲ್ಯಾನ್ಸರ್‌ಗಳ ಈ ಐತಿಹಾಸಿಕ ಸಾಧನೆಯನ್ನು ಚಿರಸ್ಥಾಯಿಗೊಳಿಸಲು ಬೆಂಗಳೂರಿನ ಜೆ.ಸಿ. ನಗರದಲ್ಲಿ 'ಹೈಫಾ ಮೈಸೂರು ಲ್ಯಾನ್ಸರ್‌ಗಳ ಸ್ಮಾರಕ'ವನ್ನು ನಿರ್ಮಿಸಲಾಗಿದೆ. ಈ ಸ್ಮಾರಕವು ಮೂರು ಯೋಧರ ಪ್ರತಿಮೆಗಳನ್ನು ಹೊಂದಿದ್ದು, ಇದು ಮೈಸೂರು, ಜೋಧ್‌ಪುರ ಮತ್ತು ಹೈದರಾಬಾದ್ ಲ್ಯಾನ್ಸರ್‌ಗಳ ಪ್ರತೀಕವಾಗಿದೆ. ದೆಹಲಿಯಲ್ಲಿರುವ 'ತೀನ್ ಮೂರ್ತಿ ಹೈಫಾ ಚೌಕ್' ಕೂಡ ಇದೇ ಕದನದ ಸ್ಮರಣಾರ್ಥ ನಿರ್ಮಿಸಲಾದ ಮತ್ತೊಂದು ಪ್ರಮುಖ ಸ್ಮಾರಕವಾಗಿದೆ. ಬೆಂಗಳೂರಿನ ಸ್ಮಾರಕದಲ್ಲಿ, ಯುದ್ಧದಲ್ಲಿ ಮಡಿದ ಮತ್ತು ಭಾಗವಹಿಸಿದ್ದ ಯೋಧರ ಹೆಸರುಗಳನ್ನು ಕೆತ್ತಲಾಗಿದೆ. ಪ್ರತಿ ವರ್ಷ ಸೆಪ್ಟೆಂಬರ್ 23 ರಂದು ಸೇನಾಧಿಕಾರಿಗಳು, ನಿವೃತ್ತ ಯೋಧರು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ವೀರ ಯೋಧರ ಬಲಿದಾನವನ್ನು ಸ್ಮರಿಸುತ್ತಾರೆ.

ಇತಿಹಾಸದ ಪುಟಗಳಲ್ಲಿ ಮರೆಯಾದ ಶೌರ್ಯ

1892ರಲ್ಲಿ ಸ್ಥಾಪನೆಯಾಗಿದ್ದ ಮೈಸೂರು ಲ್ಯಾನ್ಸರ್ ಪಡೆ ಶಿಸ್ತು ಮತ್ತು ಪರಾಕ್ರಮಕ್ಕೆ ಹೆಸರಾಗಿತ್ತು. ಹೈಫಾ ಕದನ ಮಾತ್ರವಲ್ಲದೆ, ಸೂಯೆಜ್ ಕಾಲುವೆ, ಗಾಜಾ, ಜೆರುಸಲೇಮ್, ಮತ್ತು ಡಮಾಸ್ಕಸ್‌ನಂತಹ ಹಲವು ಪ್ರಮುಖ ಕದನಗಳಲ್ಲಿಯೂ ಮೈಸೂರು ಲ್ಯಾನ್ಸರ್‌ಗಳು ತಮ್ಮ ಶೌರ್ಯ ಪ್ರದರ್ಶಿಸಿದ್ದನ್ನು ಬ್ರಿಟಿಷ್ ಅಧಿಕಾರಿಗಳು ದಾಖಲಿಸಿದ್ದಾರೆ ಎಂದು ಅನಿಲ್ ಅವರು ಹೇಳುತ್ತಾರೆ. ಅದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳಿವೆ ಎಂದು ಅವರು ಹೇಳಿದ್ದಾರೆ.

ಯುದ್ಧ ಮುಗಿಸಿ 1920ರಲ್ಲಿ ತಾಯ್ನಾಡಿಗೆ ಮರಳಿದ್ದ ಈ ವೀರ ಯೋಧರಿಗೆ ಮೈಸೂರು ಸಂಸ್ಥಾನದಲ್ಲಿ ಭವ್ಯ ಸ್ವಾಗತ ದೊರೆಕಿತ್ತು. ಆದರೆ, 1953ರಲ್ಲಿ ಮೈಸೂರು ಲ್ಯಾನ್ಸರ್‌ ಪಡೆಯನ್ನು ವಿಸರ್ಜಿಸಿ, ಭಾರತೀಯ ಸೇನೆಯ 61ನೇ ಕ್ಯಾವಲ್ರಿ ರೆಜಿಮೆಂಟ್‌ನೊಂದಿಗೆ ವಿಲೀನಗೊಳಿಸಲಾಯಿತು.

ಬ್ರಿಟಿಷರು ಅಧಿಕಾರಿಗಳು ಅಂದಿನ ಕಾಲದಲ್ಲಿ ಬರೆದಿದ್ದ ದಾಖಲೆಗಳು ಹಾಗೂ ಮಿಲಿಟರಿ ಅಧಿಕಾರಿಗಳು ಪ್ರಧಾನ ಕಚೇರಿಗೆ ಕಳುಹಿಸಿದ್ದ ಸಂದೇಶಗಳಲ್ಲಿ (ಡಿಸ್​​ಪ್ಯಾಚ್) ಮೈಸೂರು ಲ್ಯಾನ್ಸರ್​ಗಳ ಶೌರ್ಯದ ಬಗ್ಗೆ ಮಾಹಿತಿ ನೀಡಲಾಗಿದೆ. ಲ್ಯಾನ್ಸರ್​ಗಳ ವೀರತ್ವದ ಬಗ್ಗೆ ಹೆಚ್ಚು ಪುಸ್ತಕಗಳು ಇಲ್ಲದಿದ್ದರೂ, ಬ್ರಿಟಿಷರು ಬರೆದ ಪತ್ರಗಳು ಈ ಸಾಧನೆಗೆ ದಾಖಲೆಗಳನ್ನು ಒದಗಿಸುತ್ತವೆ. ಈ ಯುದ್ಧವು ಅಶ್ವದಳದ ಪರಮೋಚ್ಛ ಸಾಧನೆಗೆ ಒಂದು ದಾಖಲೆಯಾಗಿದೆ. ಸ್ವತಂತ್ರ ಭಾರತದಲ್ಲಿ ಸಾಕಷ್ಟು ವರ್ಷ ಈ ವೀರರನ್ನು ಮರೆಯಲಾಗಿತ್ತು. ಪ್ರಧಾನಿ ಮೋದಿ ಇಸ್ರೇಲ್​ಗೆ ತೆರಳಿದ ಬಳಿಕ ಮತ್ತೆ ಸ್ಮರಣೆ ಆರಂಭಗೊಂಡಿದೆ. ಏನೇ ಆದರೂ ಈ ವೀರ ಯೋಧರು ಗೌರವಕ್ಕೆ ಅರ್ಹರು ಎಂದು ಅನಿಲ್ ರಾಜ್ ಅವರು ಹೇಳುತ್ತಾರೆ.

ಮೊದಲ ವಿಶ್ವ ಮಹಾಯುದ್ಧದಲ್ಲಿ ಪಾಲ್ಗೊಂಡ ಮೈಸೂರಿನ ಅಶ್ವಾರೋಹಿ ದಳ ಮೈಸೂರು ಲ್ಯಾನ್ಸರ್ಸ್‌ನ ವೀರ ಯೋದರ ಸಾಹಸದ ಬಗ್ಗೆ, ಅಂದಿನ ಕಾಲದಲ್ಲಿ ಜಾಗತಿಕ ಮನ್ನಣೆ ಪಡೆದ ಬಗೆ ಹೇಗೆ? ಎಂಬ ವಿವರದ ಬಗ್ಗೆ ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.

World War-I: ಹೈಫಾ ವಿಮೋಚನೆಯ ವೀರಗಾಥೆ; ಕನ್ನಡಿಗರ ಶೌರ್ಯದ ಇನ್ನೊಂದು ಹೆಸರೇ ಮೈಸೂರು ಲ್ಯಾನ್ಸರ್ಸ್‌ !

Tags:    

Similar News