
World War-I: ಹೈಫಾ ವಿಮೋಚನೆಯ ವೀರಗಾಥೆ: ಕನ್ನಡಿಗರ ಶೌರ್ಯದ ಇನ್ನೊಂದು ಹೆಸರೇ ಮೈಸೂರು ಲ್ಯಾನ್ಸರ್ಸ್ !
'ಹೈಫಾ ಕದನ'ದಲ್ಲಿ ಮಡಿದ ಮೈಸೂರು ಸಂಸ್ಥಾನಕ್ಕೆ ಸೇರಿದ್ದ ಲ್ಯಾನ್ಸರ್ಸ್ ಯೋಧರ ಶೌರ್ಯವನ್ನು ಸ್ಮರಿಸಲು 'ಹೈಫಾ ದಿನ'ವನ್ನು ಪ್ರತಿ ವರ್ಷ ಸೆಪ್ಟೆಂಬರ್ 23 ರಂದು ಬೆಂಗಳೂರಿನಲ್ಲಿ ಆಚರಿಸಲಾಗುತ್ತಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ.
ಯುರೋಪಿನ ನೆಲದಲ್ಲಿ ನಡೆದಿದ್ದ ಮೊದಲ ಮಹಾಯುದ್ಧಕ್ಕೂ, ಕರ್ನಾಟಕಕ್ಕೂ ಒಂದು ಅವಿನಾಭಾವ ಸಂಬಂಧವಿದೆ ಎಂದರೆ ಹಲವರಿಗೆ ಅಚ್ಚರಿಯಾಗಬಹುದು. ಆದರೆ, ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಈ ಮಹಾಸಮರದಲ್ಲಿ ಕನ್ನಡಿಗರ ಶೌರ್ಯ, ತ್ಯಾಗ ಮತ್ತು ಬಲಿದಾನದ ರೋಚಕ ಕಥೆಗಳು ಒಂದೊಂದಾಗಿ ಅನಾವರಣಗೊಳ್ಳುತ್ತವೆ. ಅಂತಹ ಒಂದು ಸಾಹಸಗಾಥೆಯೇ ಇಂದು ಇಸ್ರೇಲ್‌ನಲ್ಲಿರುವ 'ಹೈಫಾ' ನಗರವನ್ನು ವೈರಿಗಳಿಂದ ವಿಮೋಚನೆಗೊಳಿಸಿದ ಕದನ. ಈ ಐತಿಹಾಸಿಕ ವಿಜಯದ ಸಂಕೇತವಾಗಿ ಪ್ರತಿ ವರ್ಷ ಸೆಪ್ಟೆಂಬರ್ 23 ರಂದು "ಹೈಫಾ ದಿನ" ಆಚರಿಸಲಾಗುತ್ತದೆ. ಅಂದ ಹಾಗೆ ಈ ಆಚರಣೆಯ ಕೇಂದ್ರಬಿಂದು ನಮ್ಮ ಬೆಂಗಳೂರಿನಲ್ಲೇ ಇದೆ!
ವಿಶ್ವ ಯುದ್ಧದಲ್ಲಿ ಅಶ್ವದಳವೊಂದರ ಮಹಾನ್ ಸಾಧನೆ ಎಂದೇ ಬಣ್ಣಿಸಲಾಗಿರುವ 'ಹೈಫಾ ಕದನ'ದಲ್ಲಿ ಮಡಿದ ಮೈಸೂರು ಸಂಸ್ಥಾನಕ್ಕೆ ಸೇರಿದ್ದ ಲ್ಯಾನ್ಸರ್ ಯೋಧರ ಶೌರ್ಯವನ್ನು ಸ್ಮರಿಸಲು 'ಹೈಫಾ ದಿನ'ವನ್ನು ಪ್ರತಿ ವರ್ಷ ಸೆಪ್ಟೆಂಬರ್ 23 ರಂದು ಬೆಂಗಳೂರಿನಲ್ಲಿ ಆಚರಿಸಲಾಗುತ್ತಿದೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಯೋಧರ ಕುಟುಂಬದ ಸದಸ್ಯರು ನಗರದ ಹೃದಯ ಭಾಗದಲ್ಲಿರುವ ಜೆ.ಸಿ. ನಗರದ 'ಹೈಫಾ ಸ್ಮಾರಕ'ದಲ್ಲಿ ವೀರ ಯೋಧರಿಗೆ ಗೌರವ ನಮನ ಸಲ್ಲಿಸುತ್ತಿದ್ದಾರೆ.
ಮೈಸೂರು ಮೂಲದವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಹಿರಿಯ ಪತ್ರಕರ್ತ ಅನಿಲ್ ರಾಜೆ ಅರಸ್ ಅವರು, ಮೈಸೂರು ಲ್ಯಾನ್ಸರ್ಸ್‌ನ ಐತಿಹಾಸಿಕ ಸಾಧನೆಗಳನ್ನು ದಾಖಲಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಈ ಸ್ಮರಣೆಯ ಕುರಿತು 'ದ ಫೆಡರಲ್ ಕರ್ನಾಟಕ'ದ ಜತೆ ಮಾತನಾಡಿ, "ಮೈಸೂರು ಸಂಸ್ಥಾನದ ಯೋಧರ ಶೌರ್ಯವನ್ನು ಸಾಕಷ್ಟು ವರ್ಷಗಳ ಕಾಲ ಮರೆತುಬಿಡಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು 2017ರಲ್ಲಿ ಇಸ್ರೇಲ್‌ಗೆ ಹೋದ ನಂತರ ಹೈಫಾ ದಿನ ಆಚರಣೆ ಮಾಡಲು ಆರಂಭಿಸಲಾಗಿದೆ. ಆ ಕಾರ್ಯ ಮುಂದುವರಿದಿದ್ದು, ಈ ಬಾರಿಯೂ ಸ್ಮರಣೆ ನಡೆಯಲಿದೆ," ಎಂದು ಮಾಹಿತಿ ನೀಡಿದ್ದಾರೆ.
ಬೆಂಗಳೂರಿನ ಜೆ.ಸಿ. ನಗರದಲ್ಲಿರುವ ಮೈಸೂರು ಲ್ಯಾನ್ಸರ್ಸ್ ಹೈಫಾ ಸ್ಮಾರಕವನ್ನು ಅಂದಿನ ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನಿರ್ಮಿಸಿದ್ದರು. ಸ್ಮಾರಕದ ಮೇಲೆ ಮೈಸೂರು ರಾಜ್ಯದ ಅಧಿಕೃತ ಲಾಂಛನವಾದ 'ಗಂಡಭೇರುಂಡ' ಹಾಗೂ ಯುದ್ಧದಲ್ಲಿ ಹುತಾತ್ಮರಾದ ಸೈನಿಕರ ಹೆಸರುಗಳನ್ನು ಕೆತ್ತಲಾಗಿದೆ.
ಏನಿದು ಹೈಫಾ ದಿನ? ಯಾಕಿಷ್ಟು ಮಹತ್ವ?
ಮೊದಲ ಮಹಾಯುದ್ಧದ (1914-1918) ಸಮಯದಲ್ಲಿ, ಬ್ರಿಟಿಷ್ ಸಾಮ್ರಾಜ್ಯದ ಪರವಾಗಿ ಭಾರತದ ಹಲವು ಸಂಸ್ಥಾನಗಳ ಸೈನಿಕರು ಯುದ್ಧರಂಗಕ್ಕೆ ಧುಮುಕಿದ್ದರು. ಇದರಲ್ಲಿ ಮೈಸೂರು, ಜೋಧ್‌ಪುರ ಮತ್ತು ಹೈದರಾಬಾದ್ ಸಂಸ್ಥಾನಗಳ ಲ್ಯಾನ್ಸರ್‌ಗಳು (ಭರ್ಜಿ ಅಥವಾ ಈಟಿಗಳನ್ನು ಹೊಂದಿದ ಅಶ್ವದಳದ ಸೈನಿಕರು) ಪ್ರಮುಖ ಪಾತ್ರ ವಹಿಸಿದ್ದರು. 1918ರ ಸೆಪ್ಟೆಂಬರ್ 23ರಂದು, ಇಂದಿನ ಇಸ್ರೇಲ್‌ನಲ್ಲಿರುವ ಆಯಕಟ್ಟಿನ ಬಂದರು ನಗರಿ ಹೈಫಾವನ್ನು ಆಕ್ರಮಿಸಿಕೊಂಡಿದ್ದ ಒಟ್ಟೋಮನ್ ಸಾಮ್ರಾಜ್ಯ (ಟರ್ಕಿ), ಜರ್ಮನಿ ಮತ್ತು ಆಸ್ಟ್ರಿಯಾ ಸೈನ್ಯಗಳ ವಿರುದ್ಧ ಭಾರತೀಯ ಸೈನಿಕರು ಸಾಹಸಮಯ ಕದನ ನಡೆಸಿದ್ದರು. ಸೆಪ್ಟೆಂಬರ್ 19ರಂದು ಆರಂಭಗೊಂಡಿದ್ದ ಈ ಮಿಲಿಟರಿ ಕಾರ್ಯಾಚರಣೆ 23ರಂದು ಕೊನೆಗೊಂಡಿತ್ತು.
ಕಾರ್ಮೆಲ್ ಪರ್ವತದ ಕಡಿದಾದ ಇಳಿಜಾರು ಮತ್ತು ಕಿಶೋನ್ ನದಿಯ ಜೌಗು ಪ್ರದೇಶದ ನಡುವೆ ಇದ್ದ ಹೈಫಾ ನಗರವು ಟರ್ಕಿ ಮತ್ತು ಜರ್ಮನಿಯ ಸೈನಿಕರಿಗೆ ನೈಸರ್ಗಿಕ ರಕ್ಷಣೆ ಒದಗಿಸಿತ್ತು. ನಗರದ ಪ್ರವೇಶದ್ವಾರವನ್ನು ಮೆಷಿನ್ ಗನ್‌ಗಳು ಮತ್ತು ಫಿರಂಗಿಗಳನ್ನು ಇಟ್ಟುಕೊಂಡು ಸಂರಕ್ಷಿಸಲಾಗಿತ್ತು. ಇಂತಹ ದುರ್ಗಮ ಪರಿಸ್ಥಿತಿಯಲ್ಲಿ, ಕೇವಲ ಭರ್ಜಿ ಮತ್ತು ಕತ್ತಿಗಳನ್ನು ಹೊಂದಿದ್ದ ಮೈಸೂರು ಮತ್ತು ಜೋಧ್‌ಪುರ್ ಲ್ಯಾನ್ಸರ್‌ಗಳು, ತಮ್ಮ ಪ್ರಾಣವನ್ನು ಲೆಕ್ಕಿಸದೆ ವೈರಿಗಳ ಮೇಲೆ ಮುಗಿಬಿದ್ದು ವಿಜಯ ಸಾಧಿಸಿದ್ದರು.
ಮೈಸೂರು ಲ್ಯಾನ್ಸರ್‌ಗಳ ವೀರಾವೇಶ
ಈ ಯುದ್ಧದಲ್ಲಿ ಮೈಸೂರು ಲ್ಯಾನ್ಸರ್‌ಗಳು ಕಾರ್ಮೆಲ್ ಪರ್ವತದ ಕಡಿದಾದ ಹಾದಿಯಲ್ಲಿ ಸಾಗಿ, ಶತ್ರುಗಳ ಫಿರಂಗಿಗಳನ್ನು ನಿಷ್ಕ್ರಿಯಗೊಳಿಸಿ, ಪೂರ್ವ ಮತ್ತು ಉತ್ತರ ದಿಕ್ಕಿನಿಂದ ನಗರಕ್ಕೆ ಲಗ್ಗೆ ಇಟ್ಟಿದ್ದರು. ಈ ಅನಿರೀಕ್ಷಿತ ದಾಳಿಯಿಂದ ಶತ್ರು ಸೈನ್ಯವು ಕಂಗಾಲಾಗಿತ್ತು. ಭಾರತೀಯ ಯೋಧರ ವೀರಾವೇಶಕ್ಕೆ ಶತ್ರುಗಳು ತತ್ತರಿಸಿಹೋಗಿದ್ದರು ಎಂಬುದನ್ನು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ ಎಂಬುದಾಗಿ ಅನಿಲ್ರಾಜೇ ಅರಸ್ ಅವರು ಹೇಳುತ್ತಾರೆ.
ಈ ಯುದ್ಧದಲ್ಲಿ ಮೈಸೂರು ಲ್ಯಾನ್ಸರ್ ಪಡೆಯ 29 ಅಧಿಕಾರಿಗಳು, 444 ಸೈನಿಕರು ಮತ್ತು 526 ಕುದುರೆಗಳು ಭಾಗವಹಿಸಿದ್ದವು. ಈ ಕದನದಲ್ಲಿ, 8 ಮೈಸೂರು ಲ್ಯಾನ್ಸರ್‌ಗಳು ವೀರಮರಣವನ್ನಪ್ಪಿದರು ಮತ್ತು 34 ಯೋಧರು ಗಾಯಗೊಂಡಿದ್ದರು. ಆದರೂ, 1,350 ಜರ್ಮನ್ ಮತ್ತು ಒಟ್ಟೋಮನ್ ಸೈನಿಕರನ್ನು ಸೆರೆಹಿಡಿದಿದ್ದರು. ಅಶ್ವದಳವೊಂದು ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಜರ್ಮನ್ ಸೈನಿಕರನ್ನು ಸೋಲಿಸಿದ್ದು ಮೊದಲ ಮಹಾಯುದ್ಧದ ಇತಿಹಾಸದಲ್ಲಿ ಒಂದು ನಿರ್ಣಾಯಕ ತಿರುವು ಎಂದು ಹೇಳಲಾಗುತ್ತಿದೆ.
ಬಹಾಯಿ ಧರ್ಮದೊಂದಿಗಿನ ಅವಿನಾಭಾವ ಸಂಬಂಧ
ಈ ವಿಜಯವು ಧಾರ್ಮಿಕವಾಗಿಯೂ ಪ್ರಾಮುಖ್ಯತೆ ಪಡೆದಿದೆ. ಯುದ್ಧದ ಸಮಯದಲ್ಲಿ, ಬಹಾಯಿ ಧರ್ಮದ ಸಂಸ್ಥಾಪಕರಾದ ಬಹಾವುಲ್ಲಾರ ಹಿರಿಯ ಮಗ ಅಬ್ದುಲ್ ಬಹಾ ಅವರನ್ನು ಜರ್ಮನ್ ಸೈನಿಕರ ಬಂಧನದಿಂದ ಲ್ಯಾನ್ಸರ್‌ಗಳು ರಕ್ಷಿಸಿದ್ದರು. ಒಂದು ವೇಳೆ ಈ ರಕ್ಷಣೆ ತಡವಾಗಿದ್ದರೆ, ಒಟ್ಟೋಮನ್ ಮತ್ತು ಜರ್ಮನ್ ಪಡೆಗಳು ಅವರನ್ನು ಗಲ್ಲಿಗೇರಿಸುತ್ತಿದ್ದವು. ಈ ಕಾರಣದಿಂದಾಗಿ, ಬಹಾಯಿ ಸಮುದಾಯವು ಇಂದಿಗೂ ಮೈಸೂರು ಲ್ಯಾನ್ಸರ್ಸ್ ಮತ್ತು ಅಂದಿನ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸುತ್ತಿದೆ.
"ಈ ವೀರ ಯೋಧನ ಕದನ ಕೌಶಲವನ್ನು ಸ್ಮರಿಸಲು ಒಟ್ಟು ಮೂರು ಪ್ರಮುಖ ಸ್ಮಾರಕಗಳಿವೆ. ಇಸ್ರೇಲ್‌ನ ಹೈಫಾದಲ್ಲಿ, ನವದೆಹಲಿಯಲ್ಲಿ ಮತ್ತು ಬೆಂಗಳೂರಿನಲ್ಲಿ ಸ್ಮಾರಕಗಳಿವೆ. ನವದೆಹಲಿಯ 'ತೀನ್ ಮೂರ್ತಿ ಭವನ'ದ ಮುಂದಿರುವ ಸ್ಮಾರಕವು ಮೈಸೂರು, ಜೋಧ್‌ಪುರ ಮತ್ತು ಹೈದರಾಬಾದ್ ಲ್ಯಾನ್ಸರ್‌ಗಳನ್ನು ಪ್ರತಿನಿಧಿಸುತ್ತದೆ. 2017ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್‌ಗೆ ಭೇಟಿ ನೀಡಿದ ನಂತರ, ಈ ವೃತ್ತವನ್ನು 'ತೀನ್ ಮೂರ್ತಿ ಹೈಫಾ ಚೌಕ್' ಎಂದು ಮರುನಾಮಕರಣ ಮಾಡಲಾಗಿದೆ," ಎಂದು ಅನಿಲ್ ರಾಜ್ ಅವರು ವಿವರಣೆ ನೀಡುತ್ತಾರೆ.
ಬೆಂಗಳೂರಿನಲ್ಲಿರುವ ಸ್ಮಾರಕದ ವಿಶೇಷತೆ ಏನು?
ಮೈಸೂರು ಲ್ಯಾನ್ಸರ್‌ಗಳ ಈ ಐತಿಹಾಸಿಕ ಸಾಧನೆಯನ್ನು ಚಿರಸ್ಥಾಯಿಗೊಳಿಸಲು ಬೆಂಗಳೂರಿನ ಜೆ.ಸಿ. ನಗರದಲ್ಲಿ 'ಹೈಫಾ ಮೈಸೂರು ಲ್ಯಾನ್ಸರ್‌ಗಳ ಸ್ಮಾರಕ'ವನ್ನು ನಿರ್ಮಿಸಲಾಗಿದೆ. ಈ ಸ್ಮಾರಕವು ಮೂರು ಯೋಧರ ಪ್ರತಿಮೆಗಳನ್ನು ಹೊಂದಿದ್ದು, ಇದು ಮೈಸೂರು, ಜೋಧ್‌ಪುರ ಮತ್ತು ಹೈದರಾಬಾದ್ ಲ್ಯಾನ್ಸರ್‌ಗಳ ಪ್ರತೀಕವಾಗಿದೆ. ದೆಹಲಿಯಲ್ಲಿರುವ 'ತೀನ್ ಮೂರ್ತಿ ಹೈಫಾ ಚೌಕ್' ಕೂಡ ಇದೇ ಕದನದ ಸ್ಮರಣಾರ್ಥ ನಿರ್ಮಿಸಲಾದ ಮತ್ತೊಂದು ಪ್ರಮುಖ ಸ್ಮಾರಕವಾಗಿದೆ. ಬೆಂಗಳೂರಿನ ಸ್ಮಾರಕದಲ್ಲಿ, ಯುದ್ಧದಲ್ಲಿ ಮಡಿದ ಮತ್ತು ಭಾಗವಹಿಸಿದ್ದ ಯೋಧರ ಹೆಸರುಗಳನ್ನು ಕೆತ್ತಲಾಗಿದೆ. ಪ್ರತಿ ವರ್ಷ ಸೆಪ್ಟೆಂಬರ್ 23 ರಂದು ಸೇನಾಧಿಕಾರಿಗಳು, ನಿವೃತ್ತ ಯೋಧರು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ವೀರ ಯೋಧರ ಬಲಿದಾನವನ್ನು ಸ್ಮರಿಸುತ್ತಾರೆ.
ಇತಿಹಾಸದ ಪುಟಗಳಲ್ಲಿ ಮರೆಯಾದ ಶೌರ್ಯ
1892ರಲ್ಲಿ ಸ್ಥಾಪನೆಯಾಗಿದ್ದ ಮೈಸೂರು ಲ್ಯಾನ್ಸರ್ ಪಡೆ ಶಿಸ್ತು ಮತ್ತು ಪರಾಕ್ರಮಕ್ಕೆ ಹೆಸರಾಗಿತ್ತು. ಹೈಫಾ ಕದನ ಮಾತ್ರವಲ್ಲದೆ, ಸೂಯೆಜ್ ಕಾಲುವೆ, ಗಾಜಾ, ಜೆರುಸಲೇಮ್, ಮತ್ತು ಡಮಾಸ್ಕಸ್‌ನಂತಹ ಹಲವು ಪ್ರಮುಖ ಕದನಗಳಲ್ಲಿಯೂ ಮೈಸೂರು ಲ್ಯಾನ್ಸರ್‌ಗಳು ತಮ್ಮ ಶೌರ್ಯ ಪ್ರದರ್ಶಿಸಿದ್ದನ್ನು ಬ್ರಿಟಿಷ್ ಅಧಿಕಾರಿಗಳು ದಾಖಲಿಸಿದ್ದಾರೆ ಎಂದು ಅನಿಲ್ ಅವರು ಹೇಳುತ್ತಾರೆ. ಅದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳಿವೆ ಎಂದು ಅವರು ಹೇಳಿದ್ದಾರೆ.
ಯುದ್ಧ ಮುಗಿಸಿ 1920ರಲ್ಲಿ ತಾಯ್ನಾಡಿಗೆ ಮರಳಿದ್ದ ಈ ವೀರ ಯೋಧರಿಗೆ ಮೈಸೂರು ಸಂಸ್ಥಾನದಲ್ಲಿ ಭವ್ಯ ಸ್ವಾಗತ ದೊರೆಕಿತ್ತು. ಆದರೆ, 1953ರಲ್ಲಿ ಮೈಸೂರು ಲ್ಯಾನ್ಸರ್ ಪಡೆಯನ್ನು ವಿಸರ್ಜಿಸಿ, ಭಾರತೀಯ ಸೇನೆಯ 61ನೇ ಕ್ಯಾವಲ್ರಿ ರೆಜಿಮೆಂಟ್‌ನೊಂದಿಗೆ ವಿಲೀನಗೊಳಿಸಲಾಯಿತು.
ಬ್ರಿಟಿಷರು ಅಧಿಕಾರಿಗಳು ಅಂದಿನ ಕಾಲದಲ್ಲಿ ಬರೆದಿದ್ದ ದಾಖಲೆಗಳು ಹಾಗೂ ಮಿಲಿಟರಿ ಅಧಿಕಾರಿಗಳು ಪ್ರಧಾನ ಕಚೇರಿಗೆ ಕಳುಹಿಸಿದ್ದ ಸಂದೇಶಗಳಲ್ಲಿ (ಡಿಸ್ಪ್ಯಾಚ್) ಮೈಸೂರು ಲ್ಯಾನ್ಸರ್‌ಗಳ ಶೌರ್ಯದ ಬಗ್ಗೆ ಮಾಹಿತಿ ನೀಡಲಾಗಿದೆ. ಲ್ಯಾನ್ಸರ್‌ಗಳ ವೀರತ್ವದ ಬಗ್ಗೆ ಹೆಚ್ಚು ಪುಸ್ತಕಗಳು ಇಲ್ಲದಿದ್ದರೂ, ಬ್ರಿಟಿಷರು ಬರೆದ ಪತ್ರಗಳು ಈ ಸಾಧನೆಗೆ ದಾಖಲೆಗಳನ್ನು ಒದಗಿಸುತ್ತವೆ. ಈ ಯುದ್ಧವು ಅಶ್ವದಳದ ಪರಮೋಚ್ಛ ಸಾಧನೆಗೆ ಒಂದು ದಾಖಲೆಯಾಗಿದೆ. ಸ್ವತಂತ್ರ ಭಾರತದಲ್ಲಿ ಸಾಕಷ್ಟು ವರ್ಷ ಈ ವೀರರನ್ನು ಮರೆಯಲಾಗಿತ್ತು. ಪ್ರಧಾನಿ ಮೋದಿ ಇಸ್ರೇಲ್‌ಗೆ ತೆರಳಿದ ಬಳಿಕ ಮತ್ತೆ ಸ್ಮರಣೆ ಆರಂಭಗೊಂಡಿದೆ. ಏನೇ ಆದರೂ ಈ ವೀರ ಯೋಧರು ಗೌರವಕ್ಕೆ ಅರ್ಹರು ಎಂದು ಅನಿಲ್ ರಾಜ್ ಅವರು ಹೇಳುತ್ತಾರೆ.