ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಪಟ್ಟಿ ಶೀಘ್ರ ನವೀಕರಣ: ಅನರ್ಹರಿಗೆ ಕಾದಿದೆ ಆಘಾತ
ಪ್ರಗತಿ ಪರಿಶೀಲನಾ ಸಭೆಯಲ್ಲಿ, ಮರಣ ಹೊಂದಿದ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಮತ್ತು ಹೊಸ ಅರ್ಹರನ್ನು ಸೇರಿಸಲು ಪ್ರತಿ ತಿಂಗಳು ಪಂಚಾಯತ್ ಮಟ್ಟದಲ್ಲಿ ಪಟ್ಟಿಯನ್ನು ನವೀಕರಿಸಲು ಸಿಎಂ ಸೂಚಿಸಿದರು.;
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಡಿ ಇದುವರೆಗೆ ಒಟ್ಟು 97,813 ಕೋಟಿ ರೂಪಾಯಿ ಅನುದಾನವನ್ನು ವೆಚ್ಚ ಮಾಡಲಾಗಿದ್ದು, ಯೋಜನೆಗಳ ಲಾಭವು ಪ್ರತಿಯೊಬ್ಬ ಅರ್ಹ ಫಲಾನುಭವಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಆಂದೋಲನ ಮಾದರಿಯಲ್ಲಿ ಕಾರ್ಯನಿರ್ವಹಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಸೋಮವಾರ 'ಕೃಷ್ಣಾ'ದಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಹಲವು ಮಹತ್ವದ ನಿರ್ದೇಶನಗಳನ್ನು ನೀಡಿದರು. ಗೃಹಲಕ್ಷ್ಮಿ ಯೋಜನೆಯಡಿ ಅತಿ ಹೆಚ್ಚು, ಅಂದರೆ 1.24 ಕೋಟಿ ಫಲಾನುಭವಿಗಳಿಗೆ 50,005 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ನಂತರದ ಸ್ಥಾನದಲ್ಲಿ ಗೃಹಜ್ಯೋತಿ ಯೋಜನೆಗೆ 18,139 ಕೋಟಿ ರೂಪಾಯಿ ಮತ್ತು ಶಕ್ತಿ ಯೋಜನೆಗೆ 13,903 ಕೋಟಿ ರೂಪಾಯಿ ವೆಚ್ಚವಾಗಿದೆ.
ಪಂಚಾಯತ್ ಮಟ್ಟದಲ್ಲಿ ನವೀಕರಣ
ಸಭೆಯಲ್ಲಿ, ಮರಣ ಹೊಂದಿದ ಫಲಾನುಭವಿಗಳ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲು ಮತ್ತು ಹೊಸ ಅರ್ಹರನ್ನು ಸೇರಿಸಲು ಪ್ರತಿ ತಿಂಗಳು ಪಂಚಾಯತ್ ಮಟ್ಟದಲ್ಲಿ ಪಟ್ಟಿಯನ್ನು ನವೀಕರಿಸಿ, ಸಂಬಂಧಪಟ್ಟ ಬ್ಯಾಂಕ್‌ಗಳಿಗೆ ಮಾಹಿತಿ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು. ಅಲ್ಲದೆ, ಜಿಎಸ್‌ಟಿ ರಿಟರ್ನ್ ಸಲ್ಲಿಸುವವರು ಗೃಹಲಕ್ಷ್ಮಿ ಯೋಜನೆಯ ಲಾಭ ಪಡೆಯುವ ಕುರಿತು ಇರುವ ಗೊಂದಲವನ್ನು ಕೂಡಲೇ ನಿವಾರಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಅನರ್ಹ ಬಿಪಿಎಲ್ ಕಾರ್ಡುದಾರರನ್ನು ಗುರುತಿಸಿ, ಕಾರ್ಡ್ ರದ್ದುಪಡಿಸುವ ಕಾರ್ಯವನ್ನು ಪಂಚಾಯತ್ ಮಟ್ಟದಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ದೇಶನ ನೀಡಲಾಯಿತು. ಇದೇ ವೇಳೆ, ಅನ್ನಭಾಗ್ಯ ಯೋಜನೆಯಡಿ ವಿತರಿಸುವ ಅಕ್ಕಿಯು ಕಾಳಸಂತೆಯಲ್ಲಿ ಮಾರಾಟವಾಗುವುದನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ ಅವರು, ಅಕ್ಕಿಯ ಬದಲು ಪ್ರದೇಶವಾರು ಇತರ ಧಾನ್ಯಗಳನ್ನು ನೀಡುವ ಬಗ್ಗೆ ಪರಿಶೀಲಿಸಲು ಸಹ ಸೂಚಿಸಿದರು.