ಜಿಎಸ್‌ಟಿ ಸುಧಾರಣೆಗೆ ರಾಜ್ಯ ಸರ್ಕಾರದ ಮಿಶ್ರ ಪ್ರತಿಕ್ರಿಯೆ: ಹೊರೆ ಇಳಿಕೆಗೆ ಸ್ವಾಗತ, ರಾಜ್ಯದ ಪಾಲು ಬಿಡುಗಡೆಗೆ ಒತ್ತಾಯ
ಹೊಸ ತೆರಿಗೆ ನೀತಿಯು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದ್ದು, ಪ್ರಸ್ತುತ ಇರುವ ನಾಲ್ಕು ಸ್ಲ್ಯಾಬ್‌ಗಳ ಬದಲು ಕೇವಲ ಶೇ.5 ಮತ್ತು ಶೇ.18 ಎಂಬ ಎರಡು ತೆರಿಗೆ ಹಂತಗಳು ಜಾರಿಗೆ ಬರಲಿವೆ.;
ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಮಹತ್ವದ ಜಿಎಸ್‌ಟಿ ಸುಧಾರಣೆಗೆ ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನಸಾಮಾನ್ಯರ ಮೇಲಿನ ತೆರಿಗೆ ಹೊರೆ ಇಳಿಸಿರುವುದನ್ನು ಸ್ವಾಗತಿಸಿರುವ ರಾಜ್ಯ , ಇದೇ ವೇಳೆ ರಾಜ್ಯಕ್ಕೆ ಬರಬೇಕಾದ ಜಿಎಸ್‌ಟಿ ಪಾಲು ಮತ್ತು ನಷ್ಟದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಹೊಸ ತೆರಿಗೆ ನೀತಿಯು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದ್ದು, ಪ್ರಸ್ತುತ ಇರುವ ನಾಲ್ಕು ಸ್ಲ್ಯಾಬ್‌ಗಳ ಬದಲು ಕೇವಲ ಶೇ.5 ಮತ್ತು ಶೇ.18 ಎಂಬ ಎರಡು ತೆರಿಗೆ ಹಂತಗಳು ಜಾರಿಗೆ ಬರಲಿವೆ. ಈ ಬದಲಾವಣೆಯು ಜನಸಾಮಾನ್ಯರಿಗೆ ಅನುಕೂಲಕರವಾಗಿದ್ದರೂ, ರಾಜ್ಯದ ಆರ್ಥಿಕ ಸ್ವಾಯತ್ತತೆಯ ಮೇಲೆ ಪರಿಣಾಮ ಬೀರಲಿದೆ ಎಂದು ರಾಜ್ಯ ಸರ್ಕಾರ ವಾದಿಸಿದೆ.
ಜ್ಞಾನೋದಯ ಆಗಿದೆಯಲ್ಲ, ಸಂತೋಷ: ಪ್ರಿಯಾಂಕ್ ಖರ್ಗೆ ವ್ಯಂಗ್ಯ
"ನಾವು ಮೊದಲಿನಿಂದಲೂ ಇದನ್ನು 'ಗಬ್ಬರ್ ಸಿಂಗ್ ಟ್ಯಾಕ್ಸ್' ಎಂದು ಕರೆಯುತ್ತಿದ್ದೆವು. ಈಗ ಅವರಿಗೆ ಜ್ಞಾನೋದಯವಾಗಿದೆಯಲ್ಲ, ಸಂತೋಷ," ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ. "ಪೆನ್ಸಿಲ್, ಮೊಸರು, ಚಪಾತಿಯಂತಹ ವಸ್ತುಗಳ ಮೇಲೆಲ್ಲಾ ತೆರಿಗೆ ಹಾಕಿ ಈಗ ತೆಗೆದಿದ್ದಾರೆ. ಶ್ರೀಮಂತರನ್ನು ಬಿಟ್ಟು ಬಡವರು ಮತ್ತು ಸಾಮಾನ್ಯರ ಮೇಲೆ ಈಗಲೂ ಲೋಪಗಳಿವೆ. ಅವೆಲ್ಲವೂ ಸರಿಯಾಗಬೇಕು. ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು ಹೇಗೆ ಸರಿಪಡಿಸುತ್ತಾರೆ ಎಂಬುದನ್ನು ಕಾದು ನೋಡೋಣ," ಎಂದು ಅವರು ಕೇಂದ್ರದ ನಡೆಯನ್ನು ವಿಶ್ಲೇಷಿಸಿದ್ದಾರೆ.
ಇದೇನು ಬಂಪರ್ ಅಲ್ಲ, ನಮ್ಮ ಹಣವನ್ನೇ ನೀಡಿಲ್ಲ
ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು, "ಕೆಲವು ವಸ್ತುಗಳ ಮೇಲೆ ಜಿಎಸ್‌ಟಿ ಕಡಿಮೆ ಮಾಡಿದ್ದು ರಾಜ್ಯಕ್ಕೆ ನಷ್ಟವಾಗುತ್ತದೆ ಎಂದು ಈಗಲೇ ಹೇಳಲಾಗದು. ಆದರೆ, ಇದು ಕೇಂದ್ರದ ಬಂಪರ್ ಕೊಡುಗೆ ಖಂಡಿತ ಅಲ್ಲ. ಮೊದಲು ಜಿಎಸ್‌ಟಿ ಹಾಕಿದ್ದೇ ತಪ್ಪು, ಈಗ ತೆಗೆದಿದ್ದೇವೆ ಎನ್ನುವುದು ಹಾಸ್ಯಾಸ್ಪದ. ಕೇಂದ್ರ ಸರ್ಕಾರ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ನಮಗೆ ಬರಬೇಕಾದ ಜಿಎಸ್‌ಟಿ ಪಾಲನ್ನೇ ಅವರು ಸರಿಯಾಗಿ ನೀಡಿಲ್ಲ," ಎಂದು ಗಂಭೀರ ಆರೋಪ ಮಾಡಿದರು.
ರಾಜ್ಯಕ್ಕೆ 15,000 ಕೋಟಿ ರೂ. ಕೊರತೆ: ರಾಮಲಿಂಗಾರೆಡ್ಡಿ
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು, "ಕೇಂದ್ರ ಜಿಎಸ್‌ಟಿ ತಂದಿದ್ದರಿಂದ ಬಡವರು ಮತ್ತು ಮಧ್ಯಮ ವರ್ಗದವರ ಮೇಲೆ ದೊಡ್ಡ ಹೊಡೆತ ಬಿದ್ದಿತ್ತು. ನಾವು ಕೇಂದ್ರಕ್ಕೆ 4.5 ಲಕ್ಷ ಕೋಟಿ ರೂ. ತೆರಿಗೆ ನೀಡುತ್ತಿದ್ದರೂ, ನಮಗೆ ವಾಪಸ್ ಸಿಗುವುದು ಕಡಿಮೆ. ಈ ಸುಧಾರಣೆಯಿಂದ ರಾಜ್ಯಕ್ಕೆ ಸುಮಾರು 15,000 ಕೋಟಿ ರೂ. ಕೊರತೆಯಾಗಲಿದೆ. ಈ ನಷ್ಟವನ್ನು ಕೇಂದ್ರ ಸರ್ಕಾರವೇ ಭರಿಸಬೇಕು. ನಮ್ಮ 1 ರೂಪಾಯಿಯಲ್ಲಿ ಕೇವಲ 13 ಪೈಸೆ ಮಾತ್ರ ವಾಪಸ್ ನೀಡಲಾಗುತ್ತಿದೆ. ಹೆಚ್ಚುವರಿ ಸಂಗ್ರಹದಲ್ಲಿ ನಮಗೆ ಪಾಲು ಕೊಡಬೇಕು," ಎಂದು ಒತ್ತಾಯಿಸಿದರು.
ಹಿಂದಿನಿಂದಲೂ ಸಿಎಂ ಸಿದ್ದರಾಮಯ್ಯ ಅವರು ಜಿಎಸ್‌ಟಿ ಮತ್ತು ಕೇಂದ್ರ ರಾಜ್ಯ ಆದಾಯ ಹಂಚಿಕೆಯನ್ನು ವಿರೋಧಿಸುತ್ತಾ ಬಂದಿದ್ದರು. ಕರ್ನಾಟಕವು ಅನುಭವಿಸುತ್ತಿರುವ ನಷ್ಟದ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟ ಅಂಕಿಅಂಶಗಳನ್ನು ಮುಂದಿಟ್ಟಿದ್ದರು. "ಜಿಎಸ್‌ಟಿಯ ಅವೈಜ್ಞಾನಿಕ ಮತ್ತು ದೋಷಪೂರಿತ ಜಾರಿಯಿಂದಾಗಿ, ಕರ್ನಾಟಕವು ಇಲ್ಲಿಯವರೆಗೆ 59,000 ಕೋಟಿ ರೂಪಾಯಿ ಹೆಚ್ಚು ಆದಾಯವನ್ನು ಕಳೆದುಕೊಂಡಿದೆ," ಎಂದು ಅವರು ಈ ಹಿಂದೆಯೇ ಆರೋಪಿಸಿದ್ದರು. ರಾಜ್ಯವು ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆ ನೀಡುತ್ತಿದ್ದರೂ, ತೆರಿಗೆ ಹಂಚಿಕೆಯಲ್ಲಿ ಸೂಕ್ತ ಪಾಲು ಸಿಗದಿರುವುದು ಅಸಮತೋಲನಕ್ಕೆ ಕಾರಣವಾಗಿದೆ ಎಂಬುದು ಅವರ ವಾದವಾಗಿದೆ.
15,000 ಕೋಟಿ ರೂಪಾಯಿ ವಾರ್ಷಿಕ ನಷ್ಟ
ಹೊಸದಾಗಿ ಜಾರಿಗೆ ತಂದಿರುವ ಎರಡು ಹಂತದ ತೆರಿಗೆ ವ್ಯವಸ್ಥೆಯಿಂದಾಗಿ, ರಾಜ್ಯಕ್ಕೆ ವಾರ್ಷಿಕವಾಗಿ ಅಂದಾಜು 15,000 ಕೋಟಿ ರೂಪಾಯಿ ಆದಾಯ ನಷ್ಟವಾಗಲಿದೆ ಎಂದು ಅಂದಾಜಿಸಿದ್ದರು. ಈ ನಷ್ಟವನ್ನು ಸರಿದೂಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರಕ್ಕೆ ಸ್ಪಷ್ಟ ಪರಿಹಾರ ಸೂತ್ರವನ್ನು ಮುಂದಿಟ್ಟಿದ್ದರು. "ಐಷಾರಾಮಿ ವಸ್ತುಗಳು ಮೂಲಕ ಸಂಗ್ರಹವಾಗುವ ಹೆಚ್ಚುವರಿ ಆದಾಯವನ್ನು ರಾಜ್ಯಗಳಿಗೆ ಹಂಚಿಕೆ ಮಾಡಿ, ತೆರಿಗೆ ನಷ್ಟವನ್ನು ಭರಿಸಬೇಕು," ಎಂದು ಅವರು ಒತ್ತಾಯಿಸಿದ್ದರು.