ಜಿಎಸ್‌ಟಿ ಸುಧಾರಣೆ: ರಾಜ್ಯಗಳ ಒತ್ತಡಕ್ಕೆ ಮಣಿದ ಕೇಂದ್ರ: ಸಿಎಂ ಸಿದ್ದರಾಮಯ್ಯ
ನಾವು ಜಿಎಸ್‌ಟಿಯನ್ನು 'ಗಬ್ಬರ್ ಸಿಂಗ್ ತೆರಿಗೆ' ಎಂದು ಕರೆದಿದ್ದೆವು, ಏಕೆಂದರೆ ಇದು ದೇಶದ ಸಣ್ಣ ವ್ಯಾಪಾರಿಗಳ ಸರ್ವನಾಶಕ್ಕೆ ಕಾರಣವಾಗಿತ್ತು. ಕಳೆದ ಎಂಟು ವರ್ಷಗಳಿಂದ ನಾವು ಹೇಳುತ್ತಾ ಬಂದಿದ್ದನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಲೇ ಬಂದಿತ್ತು.;
ಸಿಎಂ ಸಿದ್ದರಾಮಯ್ಯ
ತೆರಿಗೆದಾರರು ಮತ್ತು ವ್ಯಾಪಾರಿ ವರ್ಗದ ಮೇಲಿನ ಆರ್ಥಿಕ ಭಾರವನ್ನು ಕಡಿಮೆ ಮಾಡುವ ಉದ್ದೇಶದಿಂದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಕೈಗೊಂಡಿರುವ ತೆರಿಗೆ ಸುಧಾರಣಾ ಕ್ರಮಗಳನ್ನು ಸ್ವಾಗತಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, "ಈ ಸುಧಾರಣೆಯು ನರೇಂದ್ರ ಮೋದಿ ಸರ್ಕಾರದ ಹೊಸ ಆವಿಷ್ಕಾರವೇನಲ್ಲ. 2017ರಲ್ಲಿ ಎನ್‌ಡಿಎ ಸರ್ಕಾರವು ಅವಸರದಲ್ಲಿ ದೋಷಪೂರ್ಣ ಜಿಎಸ್‌ಟಿಯನ್ನು ಜಾರಿಗೊಳಿಸಿದಾಗಲೇ, ರಾಹುಲ್ ಗಾಂಧಿ ನೇತೃತ್ವದ ವಿರೋಧ ಪಕ್ಷಗಳು ಈ ಸುಧಾರಣೆಗಳಿಗೆ ಒತ್ತಾಯಿಸಿದ್ದವು. ಆದರೆ, ಅಂದು ನಮ್ಮ ಮಾತುಗಳಿಗೆ ಕೇಂದ್ರ ಸರ್ಕಾರ ಕಿವಿಗೊಡಲಿಲ್ಲ" ಎಂದು ಹೇಳಿದ್ದಾರೆ.
"ನಾವು ಜಿಎಸ್‌ಟಿಯನ್ನು 'ಗಬ್ಬರ್ ಸಿಂಗ್ ತೆರಿಗೆ' ಎಂದು ಕರೆದಿದ್ದೆವು, ಏಕೆಂದರೆ ಇದು ದೇಶದ ಸಣ್ಣ ವ್ಯಾಪಾರಿಗಳ ಸರ್ವನಾಶಕ್ಕೆ ಕಾರಣವಾಗಿತ್ತು. ಕಳೆದ ಎಂಟು ವರ್ಷಗಳಿಂದ ನಾವು ಹೇಳುತ್ತಾ ಬಂದಿದ್ದನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಲೇ ಬಂದಿತ್ತು. ಈಗ ರಾಜ್ಯ ಸರ್ಕಾರಗಳ ನಿರಂತರ ಒತ್ತಡಕ್ಕೆ ಮಣಿದು, ಕೇಂದ್ರವು ಈ ಸುಧಾರಣೆಗೆ ಒಪ್ಪಿಗೆ ನೀಡಿದೆ. ಇದನ್ನು ಮೊದಲೇ ಮಾಡಿದ್ದರೆ, ದೇಶದ ಜನತೆ ಇಷ್ಟೊಂದು ಕಷ್ಟಗಳನ್ನು ಅನುಭವಿಸಬೇಕಾಗಿರಲಿಲ್ಲ," ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜ್ಯಕ್ಕೆ ಆಗುವ ನಷ್ಟ ಮತ್ತು ಬೇಡಿಕೆ
"ಈಗಿನ ಜಿಎಸ್‌ಟಿ ಸುಧಾರಣೆಯಿಂದಾಗಿ ಕರ್ನಾಟಕ ಸರ್ಕಾರವು ವಾರ್ಷಿಕವಾಗಿ 15,000 ದಿಂದ 20,000 ಕೋಟಿ ರೂ. ವರಮಾನವನ್ನು ಕಳೆದುಕೊಳ್ಳಲಿದೆ. ಆದಾಗ್ಯೂ, ರಾಜ್ಯದ ಜನರ ಹಿತದೃಷ್ಟಿಯಿಂದ ನಾವು ಈ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಇದೇ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ಸಂಗ್ರಹಿಸುತ್ತಿರುವ ಜಿಎಸ್‌ಟಿ ಪರಿಹಾರ ಸುಂಕದಲ್ಲಿ ರಾಜ್ಯಕ್ಕೆ ನ್ಯಾಯಬದ್ಧವಾದ ಪಾಲನ್ನು ನೀಡಬೇಕು," ಎಂದು ಮುಖ್ಯಮಂತ್ರಿಗಳು ಆಗ್ರಹಿಸಿದ್ದಾರೆ.
ತೆರಿಗೆ ಸುಧಾರಣೆಯ ಲಾಭವು ಸಾಮಾನ್ಯ ಜನರಿಗೆ ತಲುಪುವಂತೆ ನೋಡಿಕೊಳ್ಳುವುದು ಮತ್ತು ವ್ಯಾಪಾರಿಗಳು ಇದನ್ನು ದುರುಪಯೋಗಪಡಿಸಿಕೊಳ್ಳದಂತೆ ತಡೆಯುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.