40 ಲಕ್ಷ ರೂಪಾಯಿಗೂ ಅಧಿಕ ಯುಪಿಐ ವಹಿವಾಟು ನಡೆಸುವ ವ್ಯಾಪಾರಿಗಳಿಗೆ ಜಿಎಸ್ಟಿ ನೋಟಿಸ್
ಕೆಲವು ಬೇಕರಿ ಮತ್ತು ಟೀ ಅಂಗಡಿ ಮಾಲೀಕರಿಗೆ ಜಿಎಸ್ಟಿಸಲ್ಲಿಸುವಂತೆ ನೋಟಿಸ್ ನೀಡಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ನಂತರ, ವಾಣಿಜ್ಯ ತೆರಿಗೆ ಇಲಾಖೆಯು ಶುಕ್ರವಾರ ಸ್ಪಷ್ಟೀಕರಣ ನೀಡಿದೆ.;
ವಾಣಿಜ್ಯ ತೆರಿಗೆ ಇಲಾಖೆಯು ಬೇಕರಿ, ಹೋಟೆಲ್, ಕಿರಾಣಿ ಅಂಗಡಿ ಮತ್ತು ಟೀ ಅಂಗಡಿಗಳಂತಹ ಸಣ್ಣ ವ್ಯಾಪಾರ ಸಂಸ್ಥೆಗಳಿಗೆ ಜಿಎಸ್ಟಿ ನೋಟಿಸ್‌ಗಳನ್ನು ನೀಡಲು ಮುಂದಾಗಿದೆ. ಇವರ ವಾರ್ಷಿಕ ವಹಿವಾಟು 40 ಲಕ್ಷ ರೂಪಾಯಿ ಮೀರಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ವಾಣಿಜ್ಯ ತೆರಿಗೆ ಇಲಾಖೆಯು ರಾಜ್ಯಾದ್ಯಂತ ಯುಪಿಐಮೂಲಕ ವಹಿವಾಟು ನಡೆಸುವ ಸಣ್ಣ ಮತ್ತು ಮಧ್ಯಮ ಗಾತ್ರದ ವ್ಯಾಪಾರಿಗಳ ಮಾಹಿತಿಯನ್ನು ಸಂಗ್ರಹಿಸಿದೆ. ಈ ಮಾಹಿತಿಯ ಆಧಾರದ ಮೇಲೆ, ತೆರಿಗೆ ಇಲಾಖೆಯು ಜಿಎಸ್ಟಿ ವಿಧಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇತ್ತೀಚೆಗೆ ಕೆಲವು ಬೇಕರಿ ಮತ್ತು ಟೀ ಅಂಗಡಿ ಮಾಲೀಕರಿಗೆ ಜಿಎಸ್ಟಿಸಲ್ಲಿಸುವಂತೆ ನೋಟಿಸ್ ನೀಡಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದ ನಂತರ, ವಾಣಿಜ್ಯ ತೆರಿಗೆ ಇಲಾಖೆಯು ಶುಕ್ರವಾರ ಸ್ಪಷ್ಟೀಕರಣ ನೀಡಿದೆ.
ನಿಯಮಗಳು ಮತ್ತು ಉದ್ದೇಶ
ಇಲಾಖೆಯ ಪ್ರಕಟಣೆಯ ಪ್ರಕಾರ, 2017ರ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ಅಡಿಯಲ್ಲಿ, ಸರಕುಗಳ ಮಾರಾಟದ ವಾರ್ಷಿಕ ಮೌಲ್ಯವು 40 ಲಕ್ಷ ರೂಪಾಯಿ ದಾಟಿದರೆ ಮತ್ತು ಸೇವೆಗಳ ಪೂರೈಕೆಯ ಮೌಲ್ಯವು 20 ಲಕ್ಷ ರೂಪಾಯಿ ದಾಟಿದರೆ ವರ್ತಕರು ಜಿಎಸ್ಟಿನೋಂದಣಿ ಮಾಡಿಸುವುದು ಕಡ್ಡಾಯವಾಗಿದೆ. ಆದರೆ, ಬಹುತೇಕ ಸಣ್ಣ ವ್ಯಾಪಾರಿಗಳು ಈ ನಿಯಮವನ್ನು ಪಾಲಿಸದೆ ಜಿಎಸ್ಟಿನೋಂದಣಿ ಮಾಡಿಸಿಲ್ಲ.
ಇಂತಹ ವ್ಯಾಪಾರಿಗಳನ್ನು ಗುರುತಿಸಲು ವಾಣಿಜ್ಯ ತೆರಿಗೆ ಇಲಾಖೆಯು ಯುಪಿಐ ಪ್ಲಾಟ್‌ಫಾರ್ಮ್‌ಗಳಿಂದ ಮಾಹಿತಿ ಕಲೆಹಾಕಿದೆ. ಈ ಮಾಹಿತಿಯನ್ನು ಪರಿಶೀಲಿಸಿದ ನಂತರ, 40 ಲಕ್ಷ ರೂಪಾಯಿಗಿಂತ ಹೆಚ್ಚು ಹಣವನ್ನು ಪಡೆದು, ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017ರ ಅಡಿಯಲ್ಲಿ ನೋಂದಣಿ ಪಡೆಯದೆ ಮತ್ತು ತೆರಿಗೆ ಪಾವತಿಸದೆ ಇರುವ ವ್ಯಾಪಾರಿಗಳಿಗೆ ಮಾತ್ರ ನೋಟಿಸ್ ಜಾರಿ ಮಾಡಲಾಗಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.