ಜಿಎಸ್‌ಟಿ ನೋಟಿಸ್‌| ಬಾಳೆಹಣ್ಣು ತಿಂದು ನಮ್ಮ ಮೂತಿಗೆ ಒರೆಸಲು ಬಿಜೆಪಿ ಯತ್ನ: ಡಿಕೆಶಿ

ಕೇಂದ್ರ ಬಿಜೆಪಿ ಸರ್ಕಾರ 2019ರಲ್ಲೇ ವಾರ್ಷಿಕ 40 ಲಕ್ಷ ವಹಿವಾಟು ಮಿತಿ ನಿಗದಿಗೊಳಿಸಿ ಎಲ್ಲಾ ರಾಜ್ಯ ಸರ್ಕಾರಗಳಿಗೂ ಇದನ್ನು ಪಾಲಿಸುವಂತೆ ಆದೇಶ ನೀಡಿದೆ.;

Update: 2025-07-21 08:37 GMT

ಡಿಸಿಎಂ ಡಿ.ಕೆ. ಶಿವಕುಮಾರ್‌

"ಸಣ್ಣ ವ್ಯಾಪಾರಿಗಳಿಗೆ ಜಿಎಸ್‌ಟಿ ನೋಟಿಸ್‌ ಜಾರಿ ಮಾಡುವ ಮೂಲಕ ಬಿಜೆಪಿಯವರು ತಾವು ಬಾಳೆಹಣ್ಣು ತಿಂದು ನಮ್ಮ ಮೂತಿಗೆ ಒರೆಸುವ ಪ್ರಯತ್ನ ಮಾಡುತ್ತಿದ್ದಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ.

ಸೋಮವಾರ ಬೆಂಗಳೂರಿನ ಸದಾಶಿವನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಕೇಂದ್ರ ಬಿಜೆಪಿ ಸರ್ಕಾರ 2019ರಲ್ಲೇ ವಾರ್ಷಿಕ 40 ಲಕ್ಷಕ್ಕೂ ವಹಿವಾಟು ಮಿತಿ ನಿಗದಿಗೊಳಿಸಿ ಎಲ್ಲಾ ರಾಜ್ಯ ಸರ್ಕಾರಗಳಿಗೂ ಇದನ್ನು ಪಾಲಿಸುವಂತೆ ಆದೇಶ ನೀಡಿದೆ. ಬಡವರಿಗೆ ಕಿರುಕುಳ ನೀಡುವುದನ್ನು ಬಿಜೆಪಿ ಸರ್ಕಾರ ಹಿಂಪಡೆಯಬೇಕು. ತರಕಾರಿ, ಹಣ್ಣು, ಎಳನೀರು, ಹೂವಿನ ವ್ಯಾಪಾರಿ ಸೇರಿದಂತೆ ಸಣ್ಣಪುಟ್ಟ ವ್ಯಾಪಾರ ಮಾಡುವ ಲಕ್ಷಾಂತರ ಮಂದಿ ಇದ್ದಾರೆ. ಈಗಾಗಲೇ 14 ಸಾವಿರ ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ" ಎಂದರು.

ಈ ಹಿಂದೆಯೇ ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜಿಎಸ್‌ಟಿ ವಿಚಾರವಾಗಿ ವಿರೋಧ ವ್ಯಕ್ತಪಡಿಸಿದ್ದರು. ಈ ವಿಚಾರದಲ್ಲಿ ಜನರಿಗೆ ಹೇಗೆ ನೆರವಾಗಬಹುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳ ಜತೆ ಚರ್ಚೆ ಮಾಡಿ ಅಗತ್ಯ ಮಾರ್ಗದರ್ಶನ ನೀಡಲಿದ್ದಾರೆ ಎಂದು ತಿಳಿಸಿದರು.

ಕೇಂದ್ರದ ಒತ್ತಡದಿಂದ ನೋಟಿಸ್‌

"ಸಣ್ಣ ವರ್ತಕರಿಗೆ ಜಿಎಸ್‌ಟಿ ನೋಟಿಸ್‌ ನೀಡಿರುವ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುತ್ತೇವೆ. ನಮ್ಮ ಜನರಿಗೆ ನ್ಯಾಯ ಒದಗಿಸಿಕೊಡಬೇಕು. ಅತಿ ಹೆಚ್ಚು ಜಿಎಸ್‌ಟಿ ತೆರಿಗೆ ಕಟ್ಟುತ್ತಿರುವ ರಾಜ್ಯ ನಮ್ಮದು. ನಮ್ಮ ಬಡ ಹಾಗೂ ಮಧ್ಯಮ ವ್ಯಾಪಾರಿಗಳಿಗೆ ಇದರಿಂದ ತೊಂದರೆ ಆಗುತ್ತಿದೆ. ಕೇಂದ್ರ ಸಮಿತಿಯ ಒತ್ತಡದ ಮೇರೆಗೆ ಈ ನೋಟಿಸ್‌ ನೀಡಲಾಗಿದೆ" ಎಂದು ಶಿವಕುಮಾರ್‌ ಹೇಳಿದರು.

ಐದು ಪಾಲಿಕೆ, ಆಕ್ಷೇಪಣೆಗೆ ಅವಕಾಶ

" ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಕುರಿತು ಯಾರು ಬೇಕಾದರೂ ಆಕ್ಷೇಪಣೆ ಸಲ್ಲಿಸಬಹುದು. ಅದು ಅವರ ಹಕ್ಕು. ಅದನ್ನು ಮೊಟಕುಗೊಳಿಸಲು ಆಗುವುದಿಲ್ಲ. ನಾವು ಏನಾದರೂ ತಪ್ಪು ಮಾಡಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಬೆಂಗಳೂರಿನಲ್ಲಿ ಐದು ಪಾಲಿಕೆ ಮಾಡಲು ಸರ್ಕಾರ ಬದ್ಧವಾಗಿದೆ. ನಾನು ಬಿಜೆಪಿ ನಾಯಕರ ಸಭೆ ಕರೆದು ಚರ್ಚಿಸಿ ಸಲಹೆಗಳನ್ನು ಸ್ವೀಕರಿಸಿದ್ದೇನೆ. ಜಂಟಿ ಸದನ ಸಮಿತಿ ರಚಿಸಿ ಚರ್ಚೆ ಮಾಡಲಾಗಿದೆ. ಈಗಲೂ ಅವರು ತಮ್ಮ ಆಕ್ಷೇಪಣೆ ಸಲ್ಲಿಸಬಹುದು. ಅವರು ರಾಜಕೀಯ ಕಾರಣಕ್ಕೆ ಧ್ವನಿ ಎತ್ತುತ್ತಿದ್ದಾರೆ. ಬೆಂಗಳೂರಿನ ಹಿತಕ್ಕಾಗಿ ಐದು ಪಾಲಿಕೆ ಮಾಡಲು ಮುಂದಾಗಿದ್ದೇವೆ" ಎಂದರು. 

ತನಿಖೆ ನಂತರ ಸತ್ಯ ಬಯಲಿಗೆ

ಎಸ್‌ಐಟಿ ರಚನೆ ವಿಚಾರವಾಗಿ ಪರ ವಿರೋಧ ಚರ್ಚೆಯಾಗುತ್ತಿದೆ. ಇದನ್ನು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಸಮರ್ಥವಾಗಿ ನಿಭಾಯಿಸುತ್ತಿದ್ದು, ಬಹಳ ಹಿರಿಯ ಅಧಿಕಾರಿಗಳನ್ನು ಎಸ್‌ಐಟಿ ತಂಡದಲ್ಲಿ ನಿಯೋಜಿಸಿದ್ದಾರೆ. ತನಿಖೆ ನಂತರ ಆರೋಪಗಳ ಕುರಿತು ಸತ್ಯಾಸತ್ಯತೆ ತಿಳಿಯುತ್ತದೆ. ನಾವು ಏನು ಮಾಡಿದರೂ ಬಿಜೆಪಿ ಅದಕ್ಕೆ ವಿರೋಧ ಮಾಡುತ್ತದೆ ಎಂದು ತಿಳಿಸಿದರು.

Tags:    

Similar News