Explainer | ಗೃಹ ಆರೋಗ್ಯ ಯೋಜನೆ: ಮನೆ ಬಾಗಿಲಿಗೆ ಆರೋಗ್ಯ ಸೇವೆ, ಏನಿದರ ವಿಶೇಷ?
ಆರೋಗ್ಯ ಕಾರ್ಯಕರ್ತರ ತಂಡವು ಬಿಪಿ, ಮಧುಮೇಹ, ಕ್ಯಾನ್ಸರ್, ಗರ್ಭಕೋಶ ಕುರಿತ ಸಮಸ್ಯೆಗಳ ತಪಾಸಣೆ ಸೇರಿ ಹಲವು ಸಮಸ್ಯೆಗಳ ಪರಿಶೀಲನೆ ನಡೆಸಲಿದ್ದಾರೆ. ಹಾಗೆಯೇ ಉಚಿತ ಔಷಧಿ, ಆಹಾರ, ವ್ಯಾಯಾಮ ಸಲಹೆ ನೀಡಲಿದ್ದಾರೆ.
ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ʻಗೃಹ ಆರೋಗ್ಯʼ ಯೋಜನೆ ಜಾರಿಗೊಳಿಸಿದೆ. ಈ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಚಾಲನೆ ನೀಡಿದ್ದಾರೆ. ಆಯುಷ್ಮಾನ್ ಸೇರಿದಂತೆ ನಾನಾ ಆರೋಗ್ಯ ಸೇವೆ ಒದಗಿಸುತ್ತಿರುವುದರ ನಡುವೆ ಗೃಹ ಆರೋಗ್ಯ ಯೋಜನೆ ಜಾರಿಯಾಗಿದೆ. ಹಾಗಾದರೆ, ಯೋಜನೆ ಏನು, ಮಹತ್ವವೇನು, ಇದರಿಂದ ಗ್ರಾಮೀಣ ಜನರಿಗೆ ಆಗುವ ಅನುಕೂಲಗಳೇನು ಎಂಬ ಮಾಹಿತಿ ಇಲ್ಲಿದೆ.
ಗ್ರಾಮೀಣ ಭಾಗದಲ್ಲಿನ ಅನಾರೋಗ್ಯ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಯೋಜನೆ ಜಾರಿ ಮಾಡಲಾಗಿದೆ. ಗ್ರಾಮೀಣ ಪ್ರದೇಶದ ಬಹಳಷ್ಟು ಮಂದಿ ಅಧಿಕ ವೆಚ್ಚದ ಕಾರಣಕ್ಕೆ ಆರೋಗ್ಯ ತಪಾಸಣೆಗೆ ಮುಂದಾಗುವುದಿಲ್ಲ. ಈ ಕಾರಣದಿಂದ ದೀರ್ಘಕಾಲದ ಅನಾರೋಗ್ಯಕ್ಕೆ ತುತ್ತಾಗುವ, ಮರಣ ಹೊಂದುವ ಪ್ರಮಾಣ ಹೆಚ್ಚಿದೆ. ಈ ಸಮಸ್ಯೆ ಬಗೆಹರಿಸುವ ಉದ್ದೇಶದಿಂದ ಯೋಜನೆ ಜಾರಿಗೆ ತರಲಾಗಿದೆ.
ಏನಿದು ಗೃಹ ಆರೋಗ್ಯ ಯೋಜನೆ?
ʼಗೃಹ ಆರೋಗ್ಯʼ ಸರ್ಕಾರದ ನೂತನ ಆರೋಗ್ಯ ಯೋಜನೆ. ಮನೆ ಬಾಗಿಲಿನಲ್ಲೇ ಆರೋಗ್ಯ ತಪಾಸಣೆ ನಡೆಸಿ, ಔಷಧ ವಿತರಿಸುವ ಮೂಲಕ ಜನರ ಆರೋಗ್ಯ ಸುಧಾರಿಸುವುದು ಯೋಜನೆಯ ಉದ್ದೇಶ. ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಸೇರಿದಂತೆ ಆಶಾ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶದ ಪ್ರತಿ ಮನೆಗಳಿಗೆ ಭೇಟಿ ನೀಡಿ ಉಚಿತವಾಗಿ 30 ವರ್ಷ ಮೇಲ್ಪಟ್ಟವರ ಆರೋಗ್ಯ ತಪಾಸಣೆ ಮಾಡುತ್ತಾರೆ. ಪ್ರತಿ ಮಂಗಳವಾರ, ಬುಧವಾರ, ಶುಕ್ರವಾರ ಮತ್ತು ಶನಿವಾರದಂದು ದಿನಕ್ಕೆ 15 ಮನೆಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಕಾರ್ಯ ನಡೆಸಲಿದ್ದಾರೆ. ಯೋಜನೆಯು ಕೋಲಾರ ಜಿಲ್ಲೆಯಿಂದ ಆರಂಭವಾಗುತ್ತಿದ್ದು, ಜನವರಿ ಬಳಿಕ ರಾಜ್ಯಾದ್ಯಂತ ವಿಸ್ತರಣೆಯಾಗಲಿದೆ.
ಯಾವ ಕಾಯಿಲೆಗಳ ಪರೀಕ್ಷೆ, ಔಷಧ?
ಆರೋಗ್ಯ ಕಾರ್ಯಕರ್ತರ ತಂಡವು ರಕ್ತದೊತ್ತಡ, ಮಧುಮೇಹ ಮತ್ತು ಬಾಯಿ, ಗರ್ಭ ಕಂಠ ಮತ್ತು ಸ್ತನ ಕ್ಯಾನ್ಸರ್ ಸ್ಕ್ರೀನಿಂಗ್, BMI, ವೇಸ್ಟ್ ಹಿಪ್ ರೇಷಿಯೋ ಅನುಪಾತ, ಸ್ಲೀಪ್ ಅಪ್ನಿಯಾ (ನಿದ್ದೆಯಲ್ಲಿ ಉಸಿರುಗಟ್ಟುವಿಕೆ) ಮತ್ತು ಮಾನಸಿಕ ಆರೋಗ್ಯ ಅಸ್ವಸ್ಥತೆಗಳ ತಪಾಸಣೆ ನಡೆಸಲಿದೆ. ಹಲವು ಕಾಯಿಲೆಗಳಿಗೆ ಉಚಿತ ಔಷಧ ನೀಡಿ, ಆಹಾರ, ನಿಯಮಿತದ ವ್ಯಾಯಾಮಕ್ಕೆ ಸಲಹೆ ನೀಡಲಿದ್ದಾರೆ.
ಬಾಯಿ ಕ್ಯಾನ್ಸರ್, ಮಹಿಳೆಯರ ಗರ್ಭಕಂಠ ಮತ್ತು ಸ್ತನ ಕ್ಯಾನ್ಸರ್ ಕಾಯಿಲೆಯನ್ನು ಪರೀಕ್ಷಿಸಲಾಗುತ್ತದೆ. ಈಗಾಗಲೇ ವಿಶೇಷ ಆರೋಗ್ಯ ಶಿಬಿರಗಳು, ಸಾಂಕ್ರಾಮಿಕ ಕಾಯಿಲೆಗಳ ಮೇಲ್ವಿಚಾರಣೆಯನ್ನೂ ಆಶಾ ಕಾರ್ಯಕರ್ತರು ನಡೆಸುತ್ತಿದ್ದಾರೆ.
92.75 ಕೋಟಿ ರೂ.ಮೀಸಲು
ಆರೋಗ್ಯ ಇಲಾಖೆ ಪ್ರಕಾರ ಆರೋಗ್ಯ ಸೇವೆ ಮನೆ ಬಾಗಿಲಿಗೆ ಕಾರ್ಯಕ್ರಮಕ್ಕಾಗಿ ಒಟ್ಟು 92.75 ಕೋಟಿ ರೂ.ಮೀಸಲಿಡಲಾಗಿದೆ. ರಾಜ್ಯದಾದ್ಯಂತ ಯೋಜನೆ ಅನುಷ್ಠಾನಗೊಳಿಸುವುದರಿಂದ ಬಡವರಿಗೆ ಉಚಿತವಾಗಿ ಮತ್ತಷ್ಟು ಆರೋಗ್ಯ ಸೇವೆಗಳು ಸಿಗಲಿವೆ. ಮುಂದಿನ ಎರಡು ತಿಂಗಳ ನಂತರ ಎಲ್ಲಾ ಜಿಲ್ಲೆಗಳಿಗೆ ಯೋಜನೆಯನ್ನು ವಿಸ್ತರಿಸಲಾಗುವುದು ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.
ಸಾಂಕ್ರಮಿಕ ಅಲ್ಲದ ರೋಗಗಳ ಕುರಿತು ಈ ಯೋಜನೆ ವಿಶೇಷ ಗಮನ ಹರಿಸಲಿದೆ. ಭಾರತದಲ್ಲಿ ಸಾಂಕ್ರಮಿಕವಲ್ಲದ ರೋಗಗಳಿಂದ ಸುಮಾರು ಶೇ 63ರಷ್ಟು ಸಾವುಗಳು ದಾಖಲಾಗುತ್ತಿವೆ. ರಾಜ್ಯದಲ್ಲಿ ಶೇ 15.6ರಷ್ಟು ಮಂದಿ ಮಧುಮೇಹದಿಂದ ಬಳಲುತ್ತಿದ್ದಾರೆ. ಶೇ.26.8ರಷ್ಟು ಮಂದಿ ಅಧಿಕ ರಕ್ತದೊತ್ತಡದ ಸಮಸ್ಯೆಗೆ ತುತ್ತಾಗಿದ್ದಾರೆ. ಈ ಪ್ರಮಾಣವನ್ನು ನಿಯಂತ್ರಣದಲ್ಲಿರಿಸಲು ಸರ್ಕಾರ ಗೃಹ ಆರೋಗ್ಯ ಯೋಜನೆ ಜಾರಿಗೆ ತಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಯೋಜನೆಯ ಮುಖಾಂತರ ರಕ್ತದೊತ್ತಡ, ಮಧುಮೇಹ ತಪಾಸಣೆ ನಡೆಸಿ ಔಷಧಿ ಪೂರೈಸುವುದಷ್ಟೇ ಅಲ್ಲ. ದೀರ್ಘಾವಧಿಯಲ್ಲಿ ಅಸಾಂಕ್ರಾಮಿಕ ರೋಗಗಳಿಂದ ಉಂಟಾಗುವ ಕಿಡ್ನಿ ವೈಫಲ್ಯ, ಹೃದಯಾಘಾತ, ಸ್ಟ್ರೋಕ್ ನಂತಹ ಜೀವಾಪಾಯ ರೋಗಗಳಿಂದ ಜನರನ್ನು ರಕ್ಷಿಸಬಹುದಾಗಿದೆ. ಹಾಗಾಗಿ ಗೃಹ ಆರೋಗ್ಯ ಯೋಜನೆ ನಮ್ಮ ಜನರ ಜೀವ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎನ್ನುತ್ತಾರೆ ಅವರು.
ವಿಶೇಷ ಆರೋಗ್ಯ ಶಿಬಿರ ಆಯೋಜನೆ
ರಾಜ್ಯಾದ್ಯಂತ ಗ್ರಾಮೀಣ ಪ್ರದೇಶದಲ್ಲಿ ಆರೋಗ್ಯ ತಪಾಸಣೆಯು ಅಂದಾಜು 4 - 6 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. ಅ ಬಳಿಕ ಹೆಚ್ಚಿನ ಆರೈಕೆಗಾಗಿ ವಿಶೇಷ ಆರೋಗ್ಯ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ಎರಡನೇ ಹಂತದಲ್ಲಿ, ಎನ್.ಸಿ.ಡಿ.ಗಳ ಅನುಸರಣೆ (ಫಾಲೋ ಅಪ್) ಮತ್ತು ನಿಯಂತ್ರಣಕ್ಕೆ ಗಮನ ನೀಡಲಾಗುತ್ತದೆ. ಈ ಆರೈಕೆಯನ್ನು ಖಚಿತಪಡಿಸಿಕೊಳ್ಳಲು ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳು ಅಥವಾ ಇತರ ಸಾರ್ವಜನಿಕ ಸ್ಥಳಗಳಲ್ಲಿ ಮಾಸಿಕ ಆರೋಗ್ಯ ಶಿಬಿರಗಳನ್ನು ನಡೆಸುವ ಗುರಿಯನ್ನು ಯೋಜನೆ ಹೊಂದಿದೆ.
ಅನುಭವ ಹಂಚಿಕೊಂಡ ಸಿಎಂ
ಗೃಹ ಆರೋಗ್ಯ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ತಮ್ಮ ಜೀವನದ ಆರೋಗ್ಯ ಸಮಸ್ಯೆ, ನಿಯಂತ್ರಣಗಳ ಕುರಿತು ಅನುಭವ ಹಂಚಿಕೊಂಡರು. 30 ವರ್ಷಗಳಿಂದ ಸಕ್ಕರೆ ಕಾಯಿಲೆ ಇದೆ. ಶಿಸ್ತಿನ ಜೀವನಶೈಲಿಯಿಂದ ಡಯಾಬಿಟಿಕ್ ನಿಯಂತ್ರಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ಸ್ಟಂಟ್ ಹಾಕಿಸಿ 24 ವರ್ಷ ಆಯ್ತು. ಪಕ್ಷ ಹಾಗೂ ಸರ್ಕಾರದ ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡುತ್ತೀದ್ದೇನೆ. ಯಾವುದೇ ಸಮಸ್ಯೆ ಇಲ್ಲ. ನಿಯಮಿತವಾಗಿ ವ್ಯಾಯಾಮ ಮಾಡುತ್ತೇನೆ. ಅರಾಮಾಗಿ ಎಲ್ಲಾ ಕೆಲಸ, ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದೇನೆ. ಮುಖ್ಯವಾಗಿ ವೈದ್ಯರು ಹೇಳಿದಂತೆ ಕೇಳುತ್ತೇನೆ ಎಂದು ತಮ್ಮದೇ ಅನುಭವಗಳ ಮೂಲಕ ಆರೋಗ್ಯ ಸಂದೇಶ ನೀಡಿದರು.