ಮುಂದಿನ ನಾಲ್ಕು ತಿಂಗಳಲ್ಲಿ ಗ್ರೇಟರ್ ಬೆಂಗಳೂರು ಚುನಾವಣೆ ಸಿದ್ಧತೆ: ಡಿಸಿಎಂ ಡಿ.ಕೆ.ಶಿವಕುಮಾರ್
ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಒಪ್ಪಿಗೆ ದೊರೆತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಚುನಾವಣಾ ವಿಭಾಗಗಳನ್ನು ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಸರ್ವಪಕ್ಷ ಸಭೆ ನಡೆಸಿ ಎಲ್ಲರ ಸಲಹೆ ಪಡೆಯಲಾಗುವುದು ಎಂದರು.;
ಮುಂದಿನ ನಾಲ್ಕು ತಿಂಗಳೊಳಗೆ ಗ್ರೇಟರ್ ಬೆಂಗಳೂರು ಮಹಾನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸಿದ್ಧತೆಗಳನ್ನು ಕೈಗೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಮೈಸೂರಿನ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಶುಕ್ರವಾರ ಮಾತನಾಡಿದ ಅವರು, ಮೊದಲು ಮೀಸಲಾತಿ ಮತ್ತು ವಲಯವಾರು ವಿಭಾಗಗಳನ್ನು ಅಂತಿಮಗೊಳಿಸಲಾಗುವುದು ಎಂದು ನುಡಿದರು. ಇದೇ ವೇಳೆ ಅವರು ಚುನಾವಣೆ ವಿಳಂಬ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಅಭಿಪ್ರಾಯಪಟ್ಟರು.
ಗ್ರೇಟರ್ ಬೆಂಗಳೂರು ವಿಧೇಯಕಕ್ಕೆ ರಾಜ್ಯಪಾಲರ ಒಪ್ಪಿಗೆ ದೊರೆತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ, ಚುನಾವಣಾ ವಿಭಾಗಗಳನ್ನು ಯಾವ ರೀತಿ ಮಾಡಬೇಕು ಎಂಬ ಬಗ್ಗೆ ಸರ್ವಪಕ್ಷ ಸಭೆ ನಡೆಸಿ ಎಲ್ಲರ ಸಲಹೆ ಪಡೆಯಲಾಗುವುದು ಎಂದರು.
ಸದನದಲ್ಲಿ ಎಲ್ಲರೂ ತಮ್ಮ ಸಲಹೆ ಸೂಚನೆಗಳನ್ನು ನೀಡಿದ್ದು, ಕ್ಯಾಬಿನೆಟ್ ಉಪ ಸಮಿತಿಯು ಅವುಗಳಲ್ಲಿ ಶೇಕಡಾ 90ರಷ್ಟನ್ನು ಪರಿಗಣಿಸಿದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದರು. ಹೊಸ ಪ್ರದೇಶಗಳನ್ನು ಸೇರಿಸುವುದರಿಂದ ವಿಳಂಬವಾಗಲಿರುವ ಕಾರಣ, ಸದ್ಯ ಇರುವ ವಿಭಾಗಗಳ ಅನ್ವಯವೇ ಚುನಾವಣೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಗ್ರೇಟರ್ ಬೆಂಗಳೂರು ವಿಧೇಯಕವನ್ನು 'ಕ್ವಾರ್ಟರ್ ಬೆಂಗಳೂರು' ಎಂದು ಲೇವಡಿ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಈ ವಿಧೇಯಕ ಮೊದಲಿಗೆ ಬಂದಾಗಲೇ ವಿರೋಧಿಸಬೇಕಿತ್ತು, ಸದನದಲ್ಲಿ ಜಾರಿಗೆ ತರಲು ಏಕೆ ಒಪ್ಪಿಗೆ ನೀಡಿದರು ಎಂದು ಪ್ರಶ್ನಿಸಿದರು. ಅವರು 'ಕ್ವಾರ್ಟರ್ ಬೆಂಗಳೂರು', 'ಫುಲ್ ಬೆಂಗಳೂರು' ಎಂದು ಏನಾದರೂ ಹೇಳಲಿ, ಆದರೆ ಸದನದಲ್ಲಿ ಏಕೆ ಸಲಹೆ ನೀಡಿದರು? ವಿರೋಧ ಪಕ್ಷದವರು ಅಷ್ಟು ಮಾತನಾಡಲಿಲ್ಲ ಎಂದರೆ ಅವರಿಗೆ ಗೌರವ ಕಡಿಮೆಯಲ್ಲವೇ, ಆದ್ದರಿಂದ ಮಾತನಾಡುತ್ತಿದ್ದಾರೆ. ಬೆಂಗಳೂರಿನ ಒಂದು ಭಾಗವಾಗಿರುವ ಅವರಿಗೆ ಏನು ಗೌರವ ನೀಡಬೇಕೋ ಅದನ್ನು ನಾವು ನೀಡುತ್ತೇವೆ,'' ಎಂದು ಉತ್ತರಿಸಿದರು.
ಶೀಘ್ರದಲ್ಲೇ ರಾಮನಗರ ಹೆಸರು ಬದಲಾವಣೆ ಘೋಷಣೆ
ಡಿ.ಕೆ.ಶಿವಕುಮಾರ್ ಅವರು ಹಿಡಿದ ಕೆಲಸ ಮುಗಿಸುತ್ತಾರೆ ಎಂಬ ಮಾತಿದೆ. ಆದರೆ, ರಾಮನಗರ ಹೆಸರು ಬದಲಾವಣೆಯಲ್ಲಿ ವಿಳಂಬವಾಗುತ್ತಿದೆ ಯಾಕೆ ಎಂದು ಕೇಳಿದ ಪ್ರಶ್ನೆಗೆ ಅವರು, ''ಒಳ್ಳೆಯ ಶುಭ ಮುಹೂರ್ತ ಶುಭ ಘಳಿಗೆಯಲ್ಲಿ ಕಾನೂನಿನ ಅಡಿಯಲ್ಲಿಯೇ ಘೋಷಣೆ ಮಾಡಲಾಗುವುದು. ಶೀಘ್ರದಲ್ಲಿಯೇ ದಿನಾಂಕ ತಿಳಿಸುತ್ತೇವೆ," ಎಂದು ಉತ್ತರಿಸಿದರು.
ಪೆಹಲ್ಗಾಮ್ ದಾಳಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಎಂಬ ಕಾಂಗ್ರೆಸ್ ತೀರ್ಮಾನದ ಕುರಿತು ಮಾತನಾಡಿದ ಅವರು, ಪಕ್ಷ, ವ್ಯಕ್ತಿಗಿಂತ ದೇಶ ದೊಡ್ಡದು ಎಂಬುದು ನಮ್ಮ ಒಮ್ಮತದ ತೀರ್ಮಾನ. ಪ್ರಧಾನಮಂತ್ರಿಗಳು ಯಾವ ತೀರ್ಮಾನ ತೆಗೆದುಕೊಂಡರೂ ನಾವು ಬೆಂಬಲಿಸುತ್ತೇವೆ. ಭಾರತ ಯಾವ ರಾಷ್ಟ್ರಕ್ಕೂ ಮಣಿಯಬಾರದು ಎಂದು ನಾವು ಹೇಳಿದ್ದೆವು ಎಂದರು
ಕಬಿನಿ ಸಂರಕ್ಷಿತ ಪ್ರದೇಶದಲ್ಲಿನ ಅಕ್ರಮ ರೆಸಾರ್ಟ್‌ಗಳ ಬಗ್ಗೆ ಕೇಳಿದಾಗ, "ಈ ಬಗ್ಗೆ ಪಟ್ಟಿ ಮಾಡಿ ನನಗೆ ನೀಡಿ, ಆದರ ಬಗ್ಗೆ ಚರ್ಚೆ ನಡೆಸಲಾಗುವುದು" ಎಂದು ಡಿಸಿಎಂ ತಿಳಿಸಿದರು.