ಗ್ರೇಟರ್ ಬೆಂಗಳೂರು| ಕೊನೆಗೂ ಅಸ್ತಿತ್ವಕ್ಕೆ ಬಂದ ಐದು ನಗರ ಪಾಲಿಕೆ; ಅಧಿಸೂಚನೆ ಪ್ರಕಟ
ಗಡಿ ಗುರುತಿಸುವಿಕೆ ಹಾಗೂ ಜನಸಂಖ್ಯೆ ನಿಗದಿಪಡಿಸುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು ಎಂದು ನಗರಾಭಿವೃದ್ಧಿ ಇಲಾಖೆ ಅಧಿಸೂಚನೆಯಲ್ಲಿ ಕೋರಿದೆ.;
ʼಗ್ರೇಟರ್ ಬೆಂಗಳೂರನ್ನು 5 ಪಾಲಿಕೆಗಳನ್ನಾಗಿ ರಚಿಸಿ ರಾಜ್ಯ ಸರ್ಕಾರ ಶನಿವಾರ ಅಧಿಸೂಚನೆ ಹೊರಡಿಸಿದೆ.
ಗಡಿ ಗುರುತಿಸುವಿಕೆ ಹಾಗೂ ಜನಸಂಖ್ಯೆ ನಿಗದಿಪಡಿಸುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು ಎಂದು ನಗರಾಭಿವೃದ್ಧಿ ಇಲಾಖೆ ಅಧಿಸೂಚನೆಯಲ್ಲಿ ಕೋರಿದೆ.
ನಿರ್ದಿಷ್ಟ ಅವಧಿ ಪೂರ್ಣಗೊಳ್ಳುವ ಮೊದಲು ಯಾವುದೇ ವ್ಯಕ್ತಿಯಿಂದ ಸ್ವೀಕೃತವಾಗುವ ಆಕ್ಷೇಪಣೆ ಅಥವಾ ಸಲಹೆಗಳನ್ನು ರಾಜ್ಯ ಸರ್ಕಾರ ಪರಿಗಣಿಸಲಿದೆ. ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕೊಠಡಿ ಸಂಖ್ಯೆ: 436, 4ನೇ ಮಹಡಿ, ವಿಕಾಸ ಸೌಧ, ಡಾ.ಬಿ.ಆರ್. ಅಂಬೇಡ್ಕರ್ ವೀದಿ, ಬೆಂಗಳೂರು-560001 ವಿಳಾಸಕ್ಕೆ ಸಲ್ಲಿಸಬಹುದಾಗಿದೆ.
ಅಧಿಸೂಚನೆಯಲ್ಲಿ ಏನಿದೆ?
ನಗರಾಭಿವೃದ್ಧಿ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಪ್ರಸ್ತಾವಿತ ಪಾಲಿಕೆಯ ಗಡಿ ಗುರುತಿಸಲಾಗಿದೆ. ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024 ರ (2025 ರ ಕರ್ನಾಟಕ ಕಾಯ್ದೆ ಸಂಖ್ಯೆ: 36) ರ ಅಡಿಯಲ್ಲಿ ಈ ಅಂತಿಮ ಅಧಿಸೂಚನೆ ಜಾರಿಗೆ ಬಂದಿದೆ.
ಬೆಂಗಳೂರು ಪಶ್ಚಿಮ ನಗರಪಾಲಿಕೆ, ಬೆಂಗಳೂರು ದಕ್ಷಿಣ ನಗರ ಪಾಲಿಕೆ, ಬೆಂಗಳೂರು ಉತ್ತರ ನಗರ ಪಾಲಿಕೆ, ಬೆಂಗಳೂರು ಪೂರ್ವ ನಗರಪಾಲಿಕೆ, ಬೆಂಗಳೂರು ಕೇಂದ್ರನಗರ ಪಾಲಿಕೆ ಎಂದು ನಾಮಕರಣ ಮಾಡಲಾಗಿದೆ.