ಅಹೋರಾತ್ರಿ ಧರಣಿ | ಮುಡಾ ಚರ್ಚೆ ನಿಲುವಳಿಗೆ ಹೆದರಿ ಓಡಿದ ಸರ್ಕಾರ: ಆರ್ ಅಶೋಕ್ ಟೀಕೆ

Update: 2024-07-25 08:04 GMT

ಸದನದಲ್ಲಿ ಮುಡಾ ಹಗರಣದ ಬಗ್ಗೆ ಚರ್ಚೆಸಲು ನಿಲುವಳಿ ಸೂಚನೆ ಮಂಡಿಸಿದ್ದೆವು. ಆದರೆ ಅದನ್ನು ತಿರಸ್ಕರಿಸುವ ಮೂಲಕ ಸರ್ಕಾರ ಓಡಿ ಹೋಗಿದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್ ಅಶೋಕ್ ವಾಗ್ಧಾಳಿ ನಡೆಸಿದ್ದಾರೆ.

ಬುಧವಾರ ಪ್ರತಿಪಕ್ಷಗಳು ಮುಡಾ ಹಗರಣದ ವಿಚಾರವಾಗಿ ವಿಧಾನಮಂಡಲದ ಉಭಯ ಸದನಗಳಲ್ಲಿ ಅಹೋರಾತ್ರಿ ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಆರ್ ಅಶೋಕ್ ಅವರು, ʻʻಮೂಡ ಹಗರಣದಲ್ಲಿ ಕಾಂಗ್ರೆಸ್ ಪಕ್ಷವು 4 ಸಾವಿರ ಕೋಟಿ ಲೂಟಿ ಮಾಡಿದೆ. ಈ ಕುರಿತ ನಿಲುವಳಿ ಸೂಚನೆ ತಂದಿದ್ದು, ಸರ್ಕಾರ ಹೆದರಿ ಓಡಿ ಹೋಗಿದೆ. ಇದೇ ವೇಳೆ ಹಲವು ಮಸೂದೆಗಳಿಗೆ ಒಪ್ಪಿಗೆ ನೀಡಿದೆ. ಸರ್ಕಾರವು ಹೇಡಿಗಳಂತೆ ವರ್ತಿಸಿದೆ. ಸಿಎಂ ಅವರಿಗೆ ಧೈರ್ಯ, ಮಾನ- ಮರ್ಯಾದೆ ಇದ್ದರೆ 14 ನಿವೇಶನಗಳನ್ನು ನ್ಯಾಯಯುತವಾಗಿ ಪಡೆದುದಾಗಿ ಅವರು ತಿಳಿಸಬೇಕಿತ್ತುʼʼ ಎಂದು ಸವಾಲು ಹಾಕಿದರು.

ʻʻವಾಲ್ಮೀಕಿ ನಿಗಮದಲ್ಲಿ ದಲಿತರ 187 ಕೋಟಿ ಹಣವನ್ನು ಚೆಕ್‍ ಮೂಲಕ ಲೂಟಿ ಮಾಡಿದ್ದಾರೆ. ದಲಿತರ ಅಭಿವೃದ್ಧಿಗೆ ಮೀಸಲಿಟ್ಟ 25 ಸಾವಿರ ಕೋಟಿ ಹಣವನ್ನೂ ಲೂಟಿ ಮಾಡಿದ್ದಾರೆ. ಈಗ ಮುಡಾದಲ್ಲಿ ದಲಿತರ ಜಮೀನಿನ ವಿಚಾರದಲ್ಲೂ ಅನ್ಯಾಯವಾಗಿದೆ. ಅವರು ಕೇಂದ್ರದ ಎಸ್‍ಸಿ, ಎಸ್‍ಟಿ ಇಲಾಖೆಗೆ ದೂರು ನೀಡಿದ್ದಾರೆʼʼ ಎಂದು ತಿಳಿಸಿದರು.

ʻʻಮೋಸದಿಂದ ಜಮೀನಿನ ಲೂಟಿ ಕುರಿತು ಜಿಲ್ಲಾಧಿಕಾರಿಗಳಿಗೂ ದೂರು ನೀಡಿದ್ದಾರೆ. ಅದರ ದೂರಿನ ಪ್ರತಿ ನನ್ನ ಬಳಿ ಇದೆ. ಏಕಾಏಕಿ ಜಮೀನಿನ ಭೂಪರಿವರ್ತನೆ, ಡಿನೋಟಿಫಿಕೇಶನ್ ಮಾಡಿದ್ದಾರೆ. ಕಾಂಗ್ರೆಸ್‌ನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ರಾಜ್ಯದ ಜನತೆ ನೋಡುತ್ತಿದ್ದಾರೆʼʼ ಎಂದು ಆರ್. ಅಶೋಕ್ ಅವರು ಟೀಕಿಸಿದರು.

ʻʻಕಾಂಗ್ರೆಸ್‌ನ ಅತಿರಥ- ಮಹಾರಥರು ಸದನದಲ್ಲಿ ಬಾಯಿ ಬಿಟ್ಟಿಲ್ಲ. ಸಿದ್ದರಾಮಯ್ಯನವರ ಬೆಂಬಲಕ್ಕೆ ಯಾರೂ ನಿಂತಿಲ್ಲ. ವಿಪಕ್ಷಗಳ ಮಾತನಾಡುವ ಹಕ್ಕು ಕಸಿದುಕೊಂಡಿದ್ದಾರೆ ಮತ್ತು ದಮನಕಾರಿ ನೀತಿ ಅನುಸರಿಸುತ್ತಿದ್ದಾರೆ. ಇದರ ವಿರುದ್ಧ ಹಗಲು- ರಾತ್ರಿ ಧರಣಿ ಮಾಡುತ್ತೇವೆ. ನೀತಿಗೆಟ್ಟ ಮತ್ತು ನೀಚ ಸರ್ಕಾರದ ವಿರುದ್ಧ ಹೋರಾಟ ಇದಾಗಲಿದೆʼʼ ಎಂದು ಕಿಡಿಕಾರಿದರು.

ಅಹೋರಾತ್ರಿ ಧರಣಿ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಮಾತನಾಡಿ, ʻʻದಲಿತರಿಗೆ ಅನ್ಯಾಯ ಆಗಲು ಬಿಡುವುದಿಲ್ಲ. ಮುಖ್ಯಮಂತ್ರಿಗಳ ಕುಟುಂಬಕ್ಕೆ ಮೈಸೂರಿನಲ್ಲಿ ಮುಡಾದಿಂದ ಕೊಟ್ಟ 14 ನಿವೇಶನಗಳು ವಾಪಸ್ ಬರಬೇಕು. ಈ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ 5 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಹಂಚಿದೆ. ಆ ಹಂಚಿಕೆಯನ್ನು ರದ್ದು ಮಾಡಬೇಕಿದೆʼʼ ಎಂದು ಆಗ್ರಹಿಸಿದರು.

ʻʻನಾವು ಚುನಾಯಿತ ಪ್ರತಿನಿಧಿಗಳು... ಬಡವರ ನಿವೇಶನಗಳನ್ನು ಮನಸೋ ಇಚ್ಛೆ ಹಂಚಿದ ಕುರಿತು ಜನರು ನಮ್ಮನ್ನು ಕೇಳುತ್ತಿದ್ದಾರೆ. ಮುಡಾದಲ್ಲಿ ಮುಖ್ಯಮಂತ್ರಿಗಳ ಕುಟುಂಬವು ನಿವೇಶನ ಪಡೆದ ಕುರಿತು ಚರ್ಚಿಸಲು ಮುಂದಾದರೆ, ತನಿಖಾ ಆಯೋಗದ ಮುಂದೆ ಹೋಗಿ ಎಂದು ಕಾನೂನು ಸಚಿವರು ಹೇಳುತ್ತಾರೆ. ಯಾವ ತನಿಖಾ ಆಯೋಗದ ಬಗ್ಗೆ ಮಾತನಾಡುತ್ತೀರಿ? ಹಿಂದೆ ಸಿದ್ದರಾಮಯ್ಯನವರು ಅಧಿಕಾರದಲ್ಲಿ ಇದ್ದಾಗ ಯಾವ್ಯಾವ ತನಿಖಾ ಆಯೋಗದ ಪರಿಸ್ಥಿತಿ ಏನಾಗಿದೆ ಎಂದು ರಾಜ್ಯದ ಜನತೆಗೆ ಗೊತ್ತಿದೆ. ಮುಖ್ಯಮಂತ್ರಿಗಳು ಯಾಕೆ ಪಲಾಯನವಾದ ಮಾಡುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ. ಧೈರ್ಯಸ್ಥರಾದ ಮುಖ್ಯಮಂತ್ರಿಗಳು ಚರ್ಚೆಗೆ ಅವಕಾಶ ನೀಡುವರೆಂಬ ವಿಶ್ವಾಸದಲ್ಲಿದ್ದೆವು. ಆದರೆ, ಸಿದ್ದರಾಮಯ್ಯನವರು ದಿವ್ಯಮೌನ ತಾಳಿದ್ದಾರೆ. ಕೆಲವು ಸಚಿವರು ಸಿಎಂ ಅವರನ್ನು ನಿನ್ನೆ ಭೇಟಿ ಮಾಡಲು ಹೋಗಿದ್ದಾಗ ಮುಖ್ಯಮಂತ್ರಿಯವರು ಅವರನ್ನು ತರಾಟೆಗೆ ತೆಗೆದುಕೊಂಡ ಮಾಹಿತಿ ಇದೆ. ಅದೇ ಕಾರಣಕ್ಕೆ ಇವತ್ತು ಕೆಲವು ಶಾಸಕರು ಹಾರಾಡುವ ಪ್ರಯತ್ನ ಮಾಡಿದ್ದಾರೆʼʼ ಎಂದು ಹೇಳಿದರು.

ʻʻಮುಡಾ ಹಗರಣದ ಕುರಿತು ಚರ್ಚಿಸಲು ನಿಲುವಳಿ ಸೂಚನೆ ಮಂಡಿಸಿದ್ದೆವು. ಕಾನೂನು ಸಚಿವರಾದ ಎಚ್.ಕೆ.ಪಾಟೀಲರು ಮಾತನಾಡಿ, ತನಿಖಾ ಆಯೋಗ ರಚಿಸಿದ್ದೇವೆ. ಅದರ ಮುಂದೆ ಹೇಳಿಕೆ ಕೊಡಿ ಎಂದು ತಿಳಿಸಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ. ದಲಿತರು, ಬಡವರಿಗೆ ನ್ಯಾಯ ಸಿಗುವ ವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ" ಎಂದು ಅವರು ಸ್ಪಷ್ಟಪಡಿಸಿದರು. ವಾಲ್ಮೀಕಿ ನಿಗಮದ ಹಗರಣದಲ್ಲಿ ಇ.ಡಿ. ವಿರುದ್ಧ ಎಫ್‍ಐಆರ್ ದಾಖಲಿಸಿದ ರಾಜ್ಯ ಸರ್ಕಾರದ ಕ್ರಮಕ್ಕೆ ರಾಜ್ಯ ಹೈಕೋರ್ಟ್ ಛೀಮಾರಿ ಹಾಕಿದೆ. ರಾಜ್ಯ ಸರ್ಕಾರಕ್ಕೆ ಮುಖಭಂಗ ಆಗಿದೆ. ಹೈಕೋರ್ಟ್, ಸರ್ಕಾರದ ವಿರುದ್ಧ ಚಾಟಿ ಏಟು ಬೀಸಿದೆʼʼ ಎಂದು ವಿಜಯೇಂದ್ರ ಹೇಳಿದರು.

ಅಹೋರಾತ್ರಿ ಧರಣಿ ವಿಚಾರವಾಗಿ ರಾಜ್ಯ ಬಿಜೆಪಿ ಘಟಕ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದು, ʻʻಭ್ರಷ್ಟ ಕಾಂಗ್ರೆಸ್ ಸರ್ಕಾರದ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಭ್ರಷ್ಟಾಚಾರ, ಎಸ್.ಸಿ ಸಮುದಾಯಗಳ ಅಭಿವೃದ್ಧಿಗೆ ಮೀಸಲಿದ್ದ ಹಣ ಅನ್ಯ ಕಾರ್ಯಗಳಿಗೆ ಬಳಸಿ ಪರಿಶಿಷ್ಟ ಜಾತಿ ಪಂಗಡಗಳ ಸಮುದಾಯಗಳಿಗೆ ದ್ರೋಹ ಬಗೆದು, ಮೂಡಾ ಹಗರಣದ ಪಿತಾಮಹ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಾಜೀನಾಮೆಗೆ ಆಗ್ರಹಿಸಿ, ವಿಧಾನಸೌಧದಲ್ಲಿ ಉಭಯ ಸದನಗಳ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರೊಂದಿಗೆ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭವಾಯಿತು. ಪರಿಶಿಷ್ಟ ಪಂಗಡಗಳ ಸಮುದಾಯಗಳಿಗೆ ಹಾಗೂ ಬಡವರಿಗೆ ನ್ಯಾಯ ಸಿಗುವವರೆಗೂ ಬಿಜೆಪಿ ಹೋರಾಟ ಮುಂದುವರಿಯಲಿದೆʼʼ ಎಂದು ತಿಳಿಸಿದೆ.

Tags:    

Similar News