ಬೆಂಗಳೂರಿನಲ್ಲಿ ನಡೆಯಲಿದೆ ದೇಶದ ಮೊದಲ ಕ್ವಾಂಟಮ್ ಸಮ್ಮೇಳನ: ಸಚಿವ ಭೋಸರಾಜು

ದೇಶದ ಮೊದಲ ಕ್ವಾಂಟಮ್‌ ಸಮ್ಮೇಳನಕ್ಕೆ ಆಗಮಿಸುತ್ತಿರುವ ನೊಬೆಲ್‌ ಪುರಸ್ಕೃತ ವಿಜ್ಞಾನಿಗಳಾದ ಪ್ರೊ. ಡಂಕನ್‌ ಹಲ್ದಾನೆ ಹಾಗೂ ಪ್ರೊ. ಡೇವಿಡ್‌ ಗ್ರಾಸ್‌ ಅವರೊಂದಿಗೆ ಜುಲೈ 30 ರಂದು ಸಭೆಯನ್ನು ಆಯೋಜಿಸಲಾಗಿದೆ.;

Update: 2025-07-29 12:07 GMT

ಸಭೆಯಲ್ಲಿ ಸಚಿವ ಎಸ್‌.ಎಸ್.‌ ಭೋಸರಾಜು ಮಾತನಾಡಿದರು.

"ಐಟಿ ಮತ್ತು ಏರೋಸ್ಪೇಸ್ ಕ್ಷೇತ್ರದಂತೆ, ಕ್ವಾಂಟಮ್ ತಂತ್ರಜ್ಞಾನದಲ್ಲೂ ಕರ್ನಾಟಕವನ್ನು ಜಾಗತಿಕ ಕೇಂದ್ರವನ್ನಾಗಿ ರೂಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ," ಎಂದು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಭೋಸರಾಜು ಅವರು ಘೋಷಿಸಿದ್ದಾರೆ.

ಈ ಮಹತ್ವಾಕಾಂಕ್ಷಿ ಗುರಿಯನ್ನು ತಲುಪಲು, ಬೆಂಗಳೂರಿನಲ್ಲಿ ಜುಲೈ 31 ಹಾಗೂ ಆಗಸ್ಟ್ 1 ರಂದು "ಕ್ವಾಂಟಮ್ ಇಂಡಿಯಾ ಬೆಂಗಳೂರು ಸಮ್ಮೇಳನ"ವನ್ನು ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.

ವಿಕಾಸಸೌಧದಲ್ಲಿ ನಡೆದ ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವರು, "ದೇಶದಲ್ಲೇ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಈ ಸಮ್ಮೇಳನದಲ್ಲಿ ನೋಬೆಲ್ ಪುರಸ್ಕೃತ ವಿಜ್ಞಾನಿಗಳಾದ ಪ್ರೊ. ಡಂಕನ್ ಹಲ್ದಾನೆ ಹಾಗೂ ಪ್ರೊ. ಡೇವಿಡ್ ಗ್ರಾಸ್ ಅವರು ಭಾಗವಹಿಸುತ್ತಿರುವುದು ಹೆಮ್ಮೆಯ ಸಂಗತಿ. ಕರ್ನಾಟಕವನ್ನು 'ಕ್ವಾಂಟಮ್ ರಾಜಧಾನಿ'ಯನ್ನಾಗಿಸುವ ನಿಟ್ಟಿನಲ್ಲಿ ರೂಪುರೇಷೆಗಳನ್ನು ಸಿದ್ಧಪಡಿಸಲು, ಈ ವಿಜ್ಞಾನಿಗಳೊಂದಿಗೆ ಜುಲೈ 30 ರಂದು ವಿಶೇಷ ಸಭೆಯನ್ನು ಏರ್ಪಡಿಸಲಾಗಿದೆ," ಎಂದರು.

ಬೆಂಗಳೂರು ಈಗಾಗಲೇ ದೇಶದ ನಾವೀನ್ಯತೆಯ ರಾಜಧಾನಿಯಾಗಿದ್ದು, ಕ್ವಾಂಟಮ್ ತಂತ್ರಜ್ಞಾನದ ಅಭಿವೃದ್ಧಿಗೆ ಅಗತ್ಯವಾದ ಪೂರಕ ಸೌಕರ್ಯಗಳನ್ನು ಹೊಂದಿದೆ. ಈ ಸಾಮರ್ಥ್ಯವನ್ನು ಬಳಸಿಕೊಂಡು, ಆರ್ಥಿಕ ಮತ್ತು ಸಾಮಾಜಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತಿರುವ ಈ ಕ್ಷೇತ್ರದಲ್ಲಿ ರಾಜ್ಯದ ಛಾಪು ಮೂಡಿಸಲು ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ಸಚಿವರು ವಿವರಿಸಿದರು.

Tags:    

Similar News