ಒಳ ಮೀಸಲಾತಿ: ಸರ್ಕಾರದಿಂದ ಅನ್ಯಾಯ; ಅಲೆಮಾರಿಗಳಿಗೆ ಬೇಡವೇ ಸಾಮಾಜಿಕ ನ್ಯಾಯ?
ಅಲೆಮಾರಿ ಸಮುದಾಯದಲ್ಲಿ ಬಹುತೇಕ ಜಾತಿಗಳ ಇಂದಿಗೂ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ಪಡೆದಿಲ್ಲ. ಜನಸಂಖ್ಯೆ ಕಡಿಮೆ ಇದೆ ಎಂಬ ಒಂದೇ ಕಾರಣಕ್ಕೂ ಅವರನ್ನು ಮೀಸಲಾತಿಯಿಂದ ವಂಚಿಸುವುದು ಸರಿಯಲ್ಲ ಎಂಬ ಅಭಿಪ್ರಾಯಗಳೂ ಕೇಳಿ ಬರುತ್ತಿವೆ.;
ಶತಮಾನಗಳಿಂದ ಸಮಾಜದ ಮುಖ್ಯವಾಹಿನಿಗೆ ಬರಲು ಹೆಣಗಾಡುತ್ತಿರುವ ಅಲೆಮಾರಿಗಳಿಗೆ ಒಳ ಮೀಸಲಾತಿ ಕುರಿತಂತೆ ರಾಜ್ಯ ಸರ್ಕಾರದ ಕೈಗೊಂಡಿರುವ ನಿರ್ಣಯ, ಆ ಸಮುದಾಯಗಳ ಪ್ರಗತಿಗೆ ಕೊನೆ ಮೊಳೆ ಒಡೆದಂತಾಗಿದೆ.
ಮೀಸಲಾತಿ ಪಡೆದು ಇತರರಂತೆ ತಾವೂ ಕೂಡ ಸಮಾಜದಲ್ಲಿ ಘನತೆಯಿಂದ ಬದುಕಬೇಕೆಂಬ ಕನಸು ಹೊತ್ತಿದ್ದ ಅಲೆಮಾರಿ ಸಮುದಾಯಗಳನ್ನು ಇದೀಗ ಸರ್ಕಾರವೇ ಬೀದಿಗೆ ತಂದು ನಿಲ್ಲಿಸಿದೆ.
ಅಲೆಮಾರಿ ಸಮುದಾಯಗಳಲ್ಲಿ ಒಟ್ಟು 59 ಜಾತಿಗಳಿವೆ. ಇವುಗಳಲ್ಲಿ ಸಪಾರಿ, ಮಾಸ್ತಿ, ಮಣ್ಣೆ,ಲಿಂಗಧರ್, ಬಿಂದ್ಲಾ ಜಾತಿಗಳು 100ರ ಒಳಗೆ ಜನಸಂಖ್ಯೆ ಹೊಂದಿವೆ. ಬಕದ್, ಬಂಡಿ, ಬ್ಯಾಗರ, ಚಿಕ್ಕಿಲಿಯನ್, ಜಗ್ಗಲಿ, ಜಾಂಬುವುಲು, ಕೂಸಾ, ಕೊಟೇಗರ್ ಮೆಟ್ರಿ, ಕುರುವನ್, ಮಚಲ, ಮಾಲಾ ಸನ್ಯಾಸಿ, ಮೇಘವಾಲ್, ಮೆಂಘವರ್, ನಾದಿಯಾ, ಅದಿ, ನಾಯಾದಿ, ಪಂಬದ, ತಿರ್ಗರ್ ಜಾತಿಗಳು 1000ಜನಸಂಖ್ಯೆ ಒಳಗಿವೆ. ಉಳಿದಂತೆ ಬೇಡ-ಬುಡ್ಗ ಜಂಗಮರು, ಶಿಳ್ಳೇಕ್ಯಾತರು, ದೊಂಬರು ಮಾತ್ರ ಹೆಚ್ಚು ಜನಸಂಖ್ಯೆ ಹೊಂದಿವೆ.
ಅಲೆಮಾರಿ ಸಮುದಾಯದಲ್ಲಿ ಬಹುತೇಕ ಜಾತಿಗಳ ಇಂದಿಗೂ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ಪಡೆದಿಲ್ಲ. ಜನಸಂಖ್ಯೆ ಕಡಿಮೆ ಇದೆ ಎಂಬ ಒಂದೇ ಕಾರಣಕ್ಕೂ ಅವರನ್ನು ಮೀಸಲಾತಿಯಿಂದ ವಂಚಿಸುವುದು ಸರಿಯಲ್ಲ ಎಂಬ ಅಭಿಪ್ರಾಯಗಳೂ ಕೇಳಿ ಬರುತ್ತಿವೆ.
ಈ ಹಿಂದೆ ಒಳ ಮೀಸಲಾತಿ ಸಮೀಕ್ಷೆ ನಡೆಸಿದ್ದ ನ್ಯಾ.ಎ.ಜೆ.ಸದಾಶಿವ ಆಯೋಗವು ಅಲೆಮಾರಿಗಳ ಜೀವನ ಮಟ್ಟ, ಸ್ಥಿತಿಗತಿಗಳನ್ನು ಮನಗಂಡು ಅವರಿಗೆ ಶೇ 1 ರಷ್ಟು ಮೀಸಲಾತಿ ಒದಗಿಸಿತ್ತು. ಇದೇ ಶಿಫಾರಸು ಆಧಾರದ ಮೇಲೆ ನ್ಯಾ. ನಾಗಮೋಹನ್ ದಾಸ್ ವರದಿ ಕೂಡ ಪ್ರತ್ಯೇಕ ಪ್ರವರ್ಗ ಸೃಷ್ಟಿಸಿ, ಶೇ 1 ರಷ್ಟು ಮೀಸಲಾತಿ ಒದಗಿಸಿತ್ತು. ಈಗ ಅತಿ ಹಿಂದುಳಿದ ಅಲೆಮಾರಿ ಸಮುದಾಯಗಳನ್ನು ಬಲಾಡ್ಯ ಸ್ಪೃಶ್ಯ ಜಾತಿಗಳ ಗುಂಪಿಗೆ ಸೇರಿಸಿ ಮೀಸಲಾತಿ ಅಡಕ ಮಾಡಿರುವುದು ಬಲಾಡ್ಯರ ಷಡ್ಯಂತ್ರವಾಗಿದೆ. ಸರ್ಕಾರ ಕಣ್ಣು ಮುಚ್ಚಿಕೊಂಡು, ನಿರ್ಧಾರ ಪ್ರಕಟಿಸಿದೆ ಎಂಬ ಆರೋಪ ಕೇಳಿ ಬಂದಿದೆ.
ಸಾಮಾಜಿಕ ನ್ಯಾಯ ಕಲ್ಪಿಸಲಿ
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಒಳ ಮೀಸಲಾತಿ ಕುರಿತ ಸರ್ಕಾರದ ತೀರ್ಮಾನಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲೆಮಾರಿ ಸಮುದಾಯಗಳು ಬೇರೆ ಶೋಷಿತ ಸಮುದಾಯಗಳಿಗಿಂತ ಭಿನ್ನವಾದ ಜೀವನ ಕ್ರಮ ಅಳವಡಿಸಿಕೊಂಡಿವೆ. ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಬೇರೆ ಯಾವುದೇ ಸಮುದಾಯಗಳೊಂದಿಗೆ ಸ್ಪರ್ಧೆ ಮಾಡಲಾಗದ ಸ್ಥಿತಿಯಲ್ಲಿವೆ. ಅಲೆಮಾರಿಗಳ ವಾಸ್ತವ ಸ್ಥಿತಿ ಮನಗಂಡು ನ್ಯಾ.ಎಚ್.ಎನ್. ನಾಗಮೋಹನದಾಸ್ ಆಯೋಗವು ಶೇ 1 ರಷ್ಟು ಒಳಮೀಸಲಾತಿ ನೀಡಿ ಶಿಫಾರಸು ಮಾಡಿತ್ತು . ಆದರೆ, ಸರ್ಕಾರ ಮೀಸಲಾತಿಯನ್ನು ಸ್ಪೃಶ್ಯ ಜಾತಿಗಳಿಗೆ ನೀಡಿ,ಅಲೆಮಾರಿಗಳನ್ನು ಅವರೊಂದಿಗೆ ಸ್ಪರ್ಧಿಸಲು ಬಿಟ್ಟಿರುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅದೇ ರೀತಿ ಸಾಹಿತಿ ದೇವನೂರ ಮಹಾದೇವ ಅವರು ಕೂಡ ಮುಖ್ಯಮಂತ್ರಿಗೆ ಪತ್ರ ಬರೆದಿದ್ದು, ಮೀಸಲಾತಿ ಹಂಚಿಕೆಯಲ್ಲಿ ಆಗಿರುವ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಿದ್ದಾರೆ.
ಆಯೋಗಗಳು ಹೇಳಿದ್ದೇನು?
ನ್ಯಾ. ಎ.ಜೆ. ಸದಾಶಿವ ಆಯೋಗ, ಮಾಧುಸ್ವಾಮಿ ಸಚಿವ ಸಂಪುಟ ಉಪ ಸಮಿತಿ, ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಆಯೋಗವು ಅಲೆಮಾರಿ ಸಮುದಾಯಗಳ ಜೀವನ ಮಟ್ಟ, ಸಾಮಾಜಿಕ ಹಿಂದುಳಿದಿರುವಿಕೆ ಆಧರಿಸಿ ಮೀಸಲಾತಿ ನೀಡಿದ್ದವು.
ನ್ಯಾ. ಸದಾಶಿವ ಆಯೋಗವು ಎಡಗೈ ಸಮುದಾಯಕ್ಕೆ ಶೇ 6, ಬಲಗೈ ಸಮುದಾಯಕ್ಕೆ ಶೇ 5, ಸ್ಪೃಶ್ಯ ಜಾತಿಗಳಿಗೆ ಶೇ 3 ಹಾಗೂ ಈ ಮೇಲಿನ ಮೂರು ಉಪಜಾತಿಗಳಲ್ಲಿ ಇಲ್ಲದ ಸಮುದಾಯಗಳು ಅಂದರೆ ಅಲೆಮಾರಿಗಳಿಗೆ ಶೇ 1 ರಷ್ಟು ಒಳ ಮೀಸಲಾತಿ ಒದಗಿಸಿ ಶಿಫಾರಸು ಮಾಡಿತ್ತು.
ಸದಾಶಿವ ಆಯೋಗದ ವರದಿ ಪರಿಶೀಲನೆಗೆ ಅಂದಿನ ಬಿಜೆಪಿ ಸರ್ಕಾರದಲ್ಲಿ ಕಾನೂನು ಸಚಿವರಾಗಿದ್ದ ಮಾಧುಸ್ವಾಮಿ ನೇತೃತ್ವದ ಸಂಪುಟ ಉಪ ಸಮಿತಿಯು ಎಡಗೈ ಗುಂಪಿಗೆ ಶೇ 5.5, ಬಲಗೈ ಗುಂಪಿಗೆ ಶೇ 5.5, ಸ್ಪೃಶ್ಯ ಜಾತಿಗಳ ಗುಂಪಿಗೆ ಶೇ 4 ರಷ್ಟು ಹಾಗೂ ಅಲೆಮಾರಿ ಜಾತಿಗಳ ಗುಂಪಿಗೆ ಶೇ 1, ಇತರ ಸೂಕ್ಷ್ಮ ಪರಿಶಿಷ್ಟ ಜಾತಿಗಳಿಗೆ ಶೇ 1ರಂತೆ ಒಳ ಮೀಸಲಾತಿ ನೀಡಬೇಕು ಎಂದು ಶಿಫಾರಸು ಮಾಡಿತ್ತು.
ನ್ಯಾ. ಎಚ್.ಎನ್. ನಾಗಮೋಹನ್ ದಾಸ್ ಆಯೋಗವು ಎಡಗೈ ಗುಂಪಿಗೆ ಶೇ 6, ಬಲಗೈ ಗುಂಪಿಗೆ ಶೇ 5, ಸ್ಪೃಶ್ಯ ಜಾತಿಗಳಿಗೆ ಶೇ 4 , ಎಕೆ-ಎಡಿ-ಎಎ ಜಾತಿಗಳ ಪ್ರತ್ಯೇಕ ಗುಂಪಿಗೆ ಶೇ 1 ಹಾಗೂ ಅಲೆಮಾರಿ ಜಾತಿಗಳಿಗೆ ಶೇ 1ರಷ್ಟು ಮೀಸಲಾತಿ ಒದಗಿಸಿತ್ತು. ಆದರೆ, ರಾಜ್ಯ ಸಚಿವ ಸಂಪುಟ ಆಯೋಗದ ವರದಿಯಲ್ಲಿ ರಚಿಸಿದ್ದ ಐದು ಪ್ರವರ್ಗಗಳನ್ನು ಮೂರಕ್ಕೆ ಇಳಿಸಿತ್ತು.
ಎಡಗೈ ಹಾಗೂ ಬಲಗೈ ಸಮುದಾಯಕ್ಕೆ ತಲಾ ಶೇ 6 ಹಾಗೂ ಸ್ಪೃಶ್ಯ ಜಾತಿಗಳ ಗುಂಪಿಗೆ ಶೇ 5 ರಷ್ಟು ಮೀಸಲಾತಿ ಹಂಚಿಕೆ ಮಾಡಿ ನಿರ್ಣಯ ಕೈಗೊಂಡಿತ್ತು. ಅಲೆಮಾರಿಗಳನ್ನು ಸ್ಪೃಶ್ಯ ಜಾತಿಗಳಿಗೆ ಸೇರಿಸಿದರೆ, ಆದಿ ಕರ್ನಾಟಕ- ಆದಿ ಆಂಧ್ರ ಹಾಗೂ ಆದಿ ದ್ರಾವಿಡ ಜಾತಿಗಳಿಗೆ ನೀಡಿದ್ದ ಮೀಸಲಾತಿಯನ್ನು ಬಲಗೈ ಸಮುದಾಯಕ್ಕೆ ನೀಡಿ ಜನಸಂಖ್ಯೆಯನ್ನು ಎಡಗೈ ಹಾಗೂ ಬಲಗೈ ಜಾತಿಗಳ ಗುಂಪಿಗೆ ಹಂಚಲಾಗಿತ್ತು.
ಕಾನೂನು ಹೋರಾಟದ ಎಚ್ಚರಿಕೆ
ಒಳ ಮೀಸಲಾತಿ ಹಂಚಿಕೆ ಕುರಿತಂತೆ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಮೀಸಲಾತಿಯಿಂದ ವಂಚಿತವಾಗಿರುವ ಸೂಕ್ಷ್ಮ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂದು ಹೇಳಿತ್ತು. ಆದರೆ, ಸರ್ಕಾರದ ಕೈಗೊಂಡಿರುವ ತೀರ್ಮಾನವು ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ. ರಾಜ್ಯ ಸರ್ಕಾರ ಕೂಡಲೇ ಮೀಸಲಾತಿ ಪರಿಷ್ಕರಣೆ ಮಾಡದೇ ಹೋದರೆ ಕಾನೂನು ಸಮರ ನಡೆಸಲಾಗುವುದು ಎಂದು ಅಲೆಮಾರಿ ಸಮುದಾಯ ಮುಖಂಡ ಎಚ್.ವಿ. ವೆಂಕಟಾಚಲ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಅಲೆಮಾರಿ ಜನಾಂಗದ ಸೌಲಭ್ಯ ಕದಿಯಲು ಕೆಲವು ಜಾತಿಗಳು ಪರಿಶಿಷ್ಟ ಜಾತಿಗಳ ಗುಂಪಿಗೆ ಸೇರಿವೆ. ಅತ್ಯಂತ ಹಿಂದುಳಿದ ಜಾತಿಗಳಾಗಿರುವ ಅಲೆಮಾರಿಗಳು ಇಂದಿಗೂ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಪ್ರಾತಿನಿಧ್ಯ ಪಡೆಯಲಾಗಿಲ್ಲ. ಹಾಗಾಗಿ ಅಲೆಮಾರಿಗಳಿಗೆ ಮೀಸಲಾತಿ ಒದಗಿಸಬೇಕು ಎಂದು ಒತ್ತಾಯಿಸಿದರು.