ವಿಶಾಖಪಟ್ಟಣಂನಲ್ಲಿ ಗೂಗಲ್ ಎಐ ಹಬ್ ; ಕರ್ನಾಟಕಕ್ಕೆ ಯೋಜನೆ ಕೈ ತಪ್ಪಿದ್ದು ಯಾಕೆ?
ಜಾಗತಿಕ ದೈತ್ಯ ಸಂಸ್ಥೆಯ ಬೃಹತ್ ಹೂಡಿಕೆಯೊಂದು ರಾಜ್ಯದ ಕೈ ತಪ್ಪಿರುವುದಕ್ಕೆ ಉದ್ಯಮಿಗಳು ಬೇಸರ ಹೊರಹಾಕಿದರೆ, ರಾಜಕೀಯ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ಯೋಜನೆ ಕೈ ತಪ್ಪಲು ರಾಜ್ಯ ಸರ್ಕಾರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿವೆ.
ಮಾಹಿತಿ ತಂತ್ರಜ್ಞಾನದ ದೈತ್ಯ ಸಂಸ್ಥೆ ʼಗೂಗಲ್ʼ ತನ್ನ ಗ್ಲೋಬಲ್ ಎಐ (ಕೃತಕ ಬುದ್ದಿಮತ್ತೆ) ಹಬ್ ಸ್ಥಾಪನೆಗೆ ಆಂಧ್ರಪ್ರದೇಶದ ಜೊತೆ ಒಡಂಬಡಿಕೆ ಮಾಡಿಕೊಂಡಿರುವ ವಿಚಾರವು ಕರ್ನಾಟಕ ಸರ್ಕಾರ, ವಿರೋಧ ಪಕ್ಷಗಳು ಹಾಗೂ ಉದ್ಯಮಿಗಳ ನಡುವೆ ವಾಗ್ಯುದ್ಧಕ್ಕೆ ಕಾರಣವಾಗಿದೆ.
ಜಾಗತಿಕ ಸಂಸ್ಥೆಯ ಬೃಹತ್ ಹೂಡಿಕೆಯೊಂದು ರಾಜ್ಯದ ಕೈ ತಪ್ಪಿರುವುದಕ್ಕೆ ಉದ್ಯಮಿಗಳು ಬೇಸರ ಹೊರಹಾಕಿದರೆ, ರಾಜಕೀಯ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿವೆ. ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದಲೇ ಗೂಗಲ್ ಎಐ ಹಬ್ ಕೈ ತಪ್ಪಿದೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ.
'ಎಐ ಹಬ್ ಸ್ಥಾಪನೆಗಾಗಿ ಗೂಗಲ್ ಸಂಸ್ಥೆ ಮುಂದಿನ 5 ವರ್ಷಗಳಲ್ಲಿ ಸುಮಾರು 1.3 ಲಕ್ಷ ಕೋಟಿ ಹೂಡಿಕೆ ಮಾಡಲಿದೆ. ಇದರಿಂದ ಸುಮಾರು 5000 ಉದ್ಯೋಗ, ಆಂಧ್ರಪ್ರದೇಶಕ್ಕೆ ವಾರ್ಷಿಕ 10 ಸಾವಿರ ಕೋಟಿ ರೂ. ಆದಾಯ ಹರಿದು ಬರಲಿದೆ. ಗೂಗಲ್ ಕ್ಯಾಂಪಸ್ ಇರುವ ಬೆಂಗಳೂರಿನಲ್ಲೇ ಎಐ ಹಬ್ ಸ್ಥಾಪಿಸಿದ್ದರೆ ಸುಧಾರಿತ ಸಂವಹನ ವ್ಯವಸ್ಥೆ ಸಾಧ್ಯವಾಗುತ್ತಿತ್ತು. ಜತೆಗೆ ರಾಜ್ಯಕ್ಕೂ ಆದಾಯ ಬರುತ್ತಿತ್ತು. ದೊಡ್ಡ ಪ್ರಮಾಣದ ಹೂಡಿಕೆಯನ್ನು ಆಕರ್ಷಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಪ್ರತಿಪಕ್ಷಗಳು, ಉದ್ಯಮಿಗಳು ದೂರುತ್ತಾರೆ.
“ ಕರ್ನಾಟಕ ಬಹಳಷ್ಟು ಮುನ್ನಡೆ ಸಾಧಿಸಿದೆ. ಗೂಗಲ್ ಎಐ ಸಿಟಿ ಹಬ್ ಕೈ ತಪ್ಪಿರುವುದು ರಾಜ್ಯಕ್ಕಾದ ದೊಡ್ಡ ನಷ್ಟ, ವಿಶಾಖಪಟ್ಟಣಂನಲ್ಲಿ ಎಐ ಹಬ್ ಸಿಟಿ ನಿರ್ಮಾಣವಾದರೆ ಬೆಂಗಳೂರಿನ ಡೇಟಾ ಸೆಂಟರ್ ಕೂಡ ಅಲ್ಲಿಗೆ ಸ್ಥಳಾಂತರವಾಗುವ ಸಾಧ್ಯತೆ ಇರಲಿದೆ ಎಂದು ಐಟಿ ಉದ್ಯಮಿ ಮೋಹನ್ ದಾಸ್ ಪೈ ಆತಂಕ ವ್ಯಕ್ತಪಡಿಸಿದ್ದಾರೆ.
'ದ ಫೆಡರಲ್ ಕರ್ನಾಟಕ'ದ ಜೊತೆ ಮಾತನಾಡಿದ ಅವರು, ಎಐ ಹಬ್ ಸ್ಥಾಪನೆ ಸಂಬಂಧ ರಾಜ್ಯ ಸರ್ಕಾರದ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಗೂಗಲ್, ಫೇಸ್ ಬುಕ್, ಮೆಟಾ ಜತೆ ಚರ್ಚಿಸಿ ಲಾಬಿ ನಡೆಸಬೇಕಾಗಿತ್ತು. ಈ ಕೆಲಸವನ್ನು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಅವರು ಸಮರ್ಥವಾಗಿ ಮಾಡಿದ ಕಾರಣ ʼಎಐ ಹಬ್' ಪಡೆದುಕೊಂಡಿದ್ದಾರೆ. ಇದರಿಂದ ಕರ್ನಾಟಕಕ್ಕೆ ದೊಡ್ಡ ನಷ್ಟವಾಗಿದೆ. ಗೂಗಲ್ ರೀತಿಯ ಕಂಪೆನಿ ರಾಜ್ಯಕ್ಕೆ ಬಂದಿದ್ದರೆ ದೊಡ್ಡ ಪರಿಣಾಮ ಬೀರುತ್ತಿತ್ತು. ನಮ್ಮ ಡೇಟಾ ಸೆಂಟರ್ ಆಂಧ್ರದಲ್ಲಿ ನಿರ್ವಹಣೆ ಮಾಡುವುದರಿಂದ ಎಲ್ಲಾ ಆದಾಯ ಆಂಧ್ರ ಪಾಲಾಗಲಿದೆ. ನಮ್ಮಲ್ಲಿನ ಎಐ ಉದ್ಯೋಗಗಳು ಕೂಡ ಅಲ್ಲಿಗೆ ಸ್ಥಳಾಂತರವಾಗಲಿವೆ ಎಂದು ಮೋಹನ್ ದಾಸ್ ಪೈ ಹೇಳಿದರು.
ಬೆಂಗಳೂರಿನಲ್ಲಿ ದೊಡ್ಡ ಗೂಗಲ್ ಕ್ಯಾಂಪಸ್
ಎಐ ತಂತ್ರಜ್ಞಾನದಲ್ಲಿ ಬೆಂಗಳೂರು ಜಗತ್ತಿನಲ್ಲೇ ನಾಲ್ಕನೇ ದೊಡ್ಡ ನಗರವಾಗಿದೆ. ದೇಶದ ಅತಿ ದೊಡ್ಡ ಗೂಗಲ್ ಕ್ಯಾಂಪಸ್ ಆಗಿರುವ ಅನಂತ ಹೆಸರಿನ ಕ್ಯಾಂಪಸ್ ಬೆಂಗಳೂರಲ್ಲಿದೆ. ಆಂಧ್ರದಲ್ಲಿ ಎಐ ಹಬ್ ಸ್ಥಾಪನೆಯಿಂದ ರಾಜ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂಬುದು ಐಟಿ ಬಿಟಿ ಇಲಾಖೆ ಅಧಿಕಾರಿಗಳ ಸಮರ್ಥನೆಯಾಗಿದೆ.
ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಆಂಧ್ರಪ್ರದೇಶದವರು ಭಾರೀ ರಿಯಾಯಿತಿ ನೀಡುತ್ತಿದ್ದಾರೆ.ಶೇ 25 ರಷ್ಟು ಭೂಮಿ, ಉಚಿತ ವಿದ್ಯುತ್, ನೀರು ಕೊಡುತ್ತಿದ್ದಾರೆ. ಬೇರೆ ಯಾವ ರಾಜ್ಯವಾದರೂ ಈ ರೀತಿ ಕೊಡಲಾಗುತ್ತದೆಯೇ ಎಂದು ಪ್ರಶ್ನಿಸಿದ ಅವರು, ಆಂಧ್ರಪ್ರದೇಶ ಸರ್ಕಾರ ಭಾರೀ ರಿಯಾಯಿತಿ ಬಹಿರಂಗಪಡಿಸಲಿ ಎಂದು ಆಗ್ರಹಿಸಿದ್ದಾರೆ.
ʼಅನಂತʼ ಕ್ಯಾಂಪಸ್ ವಿಶೇಷತೆ ಏನು?
ಭಾರತದ ಅತಿ ದೊಡ್ಡ ಗೂಗಲ್ ಕ್ಯಾಂಪಸ್ ಬೆಂಗಳೂರಿನಲ್ಲಿದೆ. ಅನಂತ ಹೆಸರಿನ ಈ ಕ್ಯಾಂಪಸ್ 1.6 ಮಿಲಿಯನ್ ಚದರ ಅಡಿ ವಿಸ್ತೀರ್ಣ ಹೊಂದಿದೆ. 5,000 ಕ್ಕೂ ಹೆಚ್ಚು ಉದ್ಯೋಗಿಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಗೂಗಲ್ ಕ್ಯಾಂಪಸ್ ಪರಿಸರ ಸ್ನೇಹಿಯಾಗಿದೆ. ತ್ಯಾಜ್ಯ ನೀರು ಮರುಬಳಕೆ, ಮಳೆ ನೀರು ಕೊಯ್ಲು ಸೌಲಭ್ಯ, ಆಟದ ಮೈದಾನ, ವಾಯುವಿಹಾರ ಪ್ರದೇಶ, ಬ್ಯಾಡ್ಮಿಂಟನ್ ಕೋರ್ಟ್, ವಾಲಿಬಾಲ್ ಮತ್ತು ಕ್ರಿಕೆಟ್ ಅಂಗಣದ ಜತೆಗೆ ಚೈಲ್ಡ್ ಡೇ ಕೇರ್ ಕೇಂದ್ರವೂ ಇದೆ.
ಗೂಗಲ್ ಕ್ಯಾಂಪಸ್‌ನಲ್ಲಿ ಎಐ, ಮ್ಯಾಪ್, ಆಂಡ್ರಾಯ್ಡ್, ಗೂಗಲ್ ಪ್ಲೇ ಮತ್ತು ಕ್ಲೌಡ್ ನಂತಹ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಈಗ ಎಐ ಹಬ್ ಸಿಟಿ ಸ್ಥಾಪನೆ ಬಳಿಕ ಕೆಲ ವಿಭಾಗಗಳು ಹಾಗೂ ನೌಕರರು ಆಂಧ್ರಪ್ರದೇಶಕ್ಕೆ ಸ್ಥಳಾಂತರವಾಗುವ ಮಾತುಗಳು ಹರಿದಾಡುತ್ತಿವೆ.ಆದರೆ, ಯಾರೊಬ್ಬರು ಖಚಿತಪಡಿಸಿಲ್ಲ.
ಗೂಗಲ್ ಎಐ ಹಬ್ ಆಂಧ್ರಪ್ರದೇಶದ ಪಾಲಾಗಿರುವ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅವರು, ಗೂಗಲ್ ನವರು ವಿಶಾಖಪಟ್ಟಣಂಗೆ ಹೋಗಿರುವುದು ಬೇರೆ ಕಾರಣಕ್ಕೆ, ನಾವು ಕೂಡ ಕರ್ನಾಟಕಕ್ಕೆ ಬರುವವರನ್ನು ಸ್ವಾಗತ ಮಾಡುತ್ತೇವೆ ಎಂದು ಹೇಳಿದ್ದಾರೆ.
ಗೂಗಲ್ ಎಐ ಹಬ್ ವೈಶಿಷ್ಟ್ಯಗಳೇನು?
1 ಗಿಗಾವಾಟ್ ಮಟ್ಟದ ಡೇಟಾ ಸೆಂಟರ್ ಕ್ಯಾಂಪಸ್ ಆಗಿರಲಿದೆ. ಜಲಾಂತರ್ಗಾಮಿ ಸಂವಹನ ಕೇಬಲ್ ವ್ಯವಸ್ಥೆಗೆ ಇದು ಜಾಗತಿಕ ಹೆಬ್ಬಾಗಿಲಾಗಲಿದೆ. ಶಕ್ತಿಯ ಪುನಶ್ಚೇತನ, ನೆಟ್ ವರ್ಕ್ ಮೂಲಸೌಕರ್ಯವೂ ಯೋಜನೆ ಒಳಗೊಂಡಿದೆ.
ಭಾರತದಲ್ಲಿ ಗೂಗಲ್ ಸಂಸ್ಥೆಯ ಮೊದಲ ಎಐ ಮತ್ತು ಡೇಟಾ ಮೂಲಸೌಕರ್ಯ ಕೇಂದ್ರವಾಗಲಿದೆ. ಏಷ್ಯಾದಲ್ಲೇ ಎಐ ನವೀನತೆ ಮತ್ತು ಕ್ಲೌಡ್ ತಂತ್ರಜ್ಞಾನ ಕೇಂದ್ರವಾಗುವ ಗುರಿ ಹೊಂದಿದೆ.
1-ಗಿಗಾವಾಟ್ ಸಾಮರ್ಥ್ಯದ ಡೇಟಾ ಸೆಂಟರ್ ಆರಂಭಿಸುವ ಮೂಲಕ ಗೂಗಲ್ AI, ಕ್ಲೌಡ್ ಮತ್ತು ಡಿಜಿಟಲ್ ಕಾರ್ಯಾಚರಣೆಗಳಿಗೆ ಹೆಚ್ಚು ಬಲ ತುಂಬಲಿದೆ.
ಜಲಾಂತರ್ಗಾಮಿ ಸಂವಹನ ಕೇಬಲ್ ಅಳವಡಿಸಲಾಗುವುದು. ಇದರ ಮೂಲಕ ಅತಿ ವೇಗದ ಡೇಟಾ ವರ್ಗಾವಣೆ ಮತ್ತು ವಿಳಂಬವಾಗದಂತೆ ಸೇವೆ ಒದಗಿಸಬಹುದಾಗಿದೆ. ಅಲ್ಲದೇ ಶುದ್ಧ ಮತ್ತು ನವೀಕರಿಸಬಹುದಾದ ವಿದ್ಯುತ್ ಮೂಲಗಳ ಬಳಕೆಗೂ ಆದ್ಯತೆ ನೀಡಲಿದೆ. ಗೂಗಲ್ ನ ಜಾಗತಿಕ ಗುರಿಯಾದ 2030ರೊಳಗೆ ಶೇ 100 ರಷ್ಟು ಕಾರ್ಬನ್ ಮುಕ್ತ ಇಂಧನ ಬಳಕೆಯ ಉದ್ದೇಶ ಸಾಕಾರಕ್ಕೆ ಇದು ಪೂರಕವಾಗಿ ಕೆಲಸ ಮಾಡಲಿದೆ.
ಜಲಾಂತರ್ಗಾಮಿ ಕೇಬಲ್ ವ್ಯವಸ್ಥೆಗೆ ಬಲ
ವಿಶಾಖಪಟ್ಟಣಂ ಪೂರ್ವ ಕರಾವಳಿಯಲ್ಲಿ ಅಳವಡಿಸಲಾಗುವ ಜಲಾಂತರ್ಗಾಮಿ ಕೇಬಲ್ ವ್ಯವಸ್ಥೆ ಹಲವು ರಾಷ್ಟ್ರಗಳೊಂದಿಗೆ ಸುಗಮ ಸಂವಹನಕ್ಕೆ ಅವಕಾಶ ಮಾಡಿಕೊಡಲಿದೆ. ಗೂಗಲ್ ಸಂಸ್ಥೆ ಒಳಗೊಂಡಿರುವ ಎರಡು ಮಿಲಿಯನ್ ಮೈಲುಗಳಿಗಿಂತ ಹೆಚ್ಚು ಭೂಮಿಯ ಒಳಗೆ ಹಾಗೂ ನೀರೊಳಗಿನ ಕೇಬಲ್‌ಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ಭಾರತ ಮಾತ್ರವಲ್ಲದೆ ಪ್ರಪಂಚದ ಉಳಿದ ಭಾಗಗಳಿಗೂ ಸಂವಹನ ಸೇವೆ ಒದಗಿಸುವ AI ಕೇಂದ್ರವಾಗಲಿದೆ.
ಈಗಾಗಲೇ ಮುಂಬೈ ಮತ್ತು ಚೆನ್ನೈ ಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಜಲಾಂತರ್ಗಾಮಿ ಕೇಬಲ್ ವ್ಯವಸ್ಥೆಗೂ ಪೂರಕವಾಗಿ ಮಾರ್ಗ ವೈವಿಧ್ಯತೆ ಒದಗಿಸುತ್ತದೆ. ಭಾರತದ ಡಿಜಿಟಲ್ ಬೆನ್ನೆಲುಬಿನ ಸ್ಥಿತಿಸ್ಥಾಪಕತ್ವ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುತ್ತವೆ.
ವಿಶಾಖಪಟ್ಟಣಂನ ಹೊಸ ಡೇಟಾ ಸೆಂಟರ್ ಕ್ಯಾಂಪಸ್ 12 ದೇಶಗಳನ್ನು ವ್ಯಾಪಿಸಿರುವ ಗೂಗಲ್ ಸಂಸ್ಥೆಯ AI ಡೇಟಾ ಕೇಂದ್ರಗಳ ಜಾಲಗಳಿಗೆ ಸಂಪರ್ಕ ಹೊಂದಿರಲಿದೆ. ಇದು ಬೆಂಗಳೂರು, ಹೈದರಾಬಾದ್ ಮತ್ತು ಪುಣೆಯಲ್ಲಿರುವ ಗೂಗಲ್ ನ R&D ಕೇಂದ್ರಗಳು ಅಭಿವೃದ್ಧಿಪಡಿಸಿದ ತಂತ್ರಜ್ಞಾನದಿಂದ ಪ್ರಯೋಜನ ಪಡೆಯುತ್ತದೆ.