ವಿದ್ಯಾರ್ಥಿಗಳಿಗೆ ಸಿಹಿ ಸುದ್ಧಿ; ಸರ್ಕಾರಿ- ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಸೀಟು ಹೆಚ್ಚಳ
ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ 450 ಯುಜಿ ಸೀಟುಗಳನ್ನು ಹೆಚ್ಚಳ ಮಾಡಲಾಗಿದೆ. ಇದೇ ರೀತಿ, ಖಾಸಗಿ ಕಾಲೇಜುಗಳಲ್ಲಿಯೂ 1,100 ಸೀಟುಗಳು ಹೆಚ್ಚಳವಾಗಿವೆ.
ಸಚಿವ ಶರಣಪ್ರಕಾಶ ಪಾಟೀಲ್
ರಾಜ್ಯದಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಸಿಹಿ ಸುದ್ದಿ ನೀಡಿದೆ. 2025 -26ನೇ ಸಾಲಿನಲ್ಲಿ ಸರ್ಕಾರಿ, ಖಾಸಗಿ ಕಾಲೇಜುಗಳಲ್ಲಿ ಎಂಬಿಬಿಎಸ್ ಹಾಗೂ ಸ್ನಾತಕೋತ್ತರ ವೈದ್ಯಕೀಯ ಸೀಟುಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ.
ಯುಜಿ ಸೀಟುಗಳ ವಿವರ
ವೈದ್ಯಕೀಯ ಶಿಕ್ಷಣ ಇಲಾಖೆಗೆ ಈ ಬಾರಿ ಸರ್ಕಾರಿ ಮೆಡಿಕಲ್ ಕಾಲೇಜುಗಳಲ್ಲಿ 450 ಯುಜಿ ಸೀಟು ಹೆಚ್ಚಳ ಮಾಡಲಾಗಿದೆ. ಇದೇ ರೀತಿ ಖಾಸಗಿ ಕಾಲೇಜುಗಳಲ್ಲಿಯೂ 1,100 ಸೀಟುಗಳು ಹೆಚ್ಚಳವಾಗಿವೆ. ಕಳೆದ ವರ್ಷದ ಸರ್ಕಾರಿ ಕೋಟಾದಲ್ಲಿ 12,395 ಸೀಟುಗಳಿದ್ದು, ಅವುಗಳನ್ನು1,550 ಹೆಚ್ಚಿಸಲಾಗಿದೆ. ಆ ಮೂಲಕ ಒಟ್ಟು ಸರ್ಕಾರಿ ಸೀಟುಗಳ ಸಂಖ್ಯೆ 13,945 ಆಗಿದೆ. ಈ ಎಲ್ಲಾ ವಿವರಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ದ ಫೆಡರಲ್ ಕರ್ನಾಟಕಕ್ಕೆ ತಿಳಿಸಿದ್ದಾರೆ.
ಕನ್ಹೇರಿ ಸ್ವಾಮೀಜಿ ಹಿನ್ನೆಲೆ ಗೊತ್ತಿಲ್ಲ
ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಿಗೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಇತ್ತೀಚೆಗೆ ಆದೇಶ ಹೊರಡಿಸಿರುವ ಬಗ್ಗೆ ನನಗೆ ಮಾಹಿತಿ ಇಲ್ಲ. ಶ್ರೀಗಳ ಹಿನ್ನೆಲೆಯೂ ತಿಳಿದಿಲ್ಲ ಎಂದರು.
ಸರ್ಕಾರದ ಅನುಮತಿ ಕಡ್ಡಾಯ
ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಪಥಸಂಚಲನ ನಡೆಸಲು ಸರ್ಕಾರದ ಅನುಮತಿ ಕಡ್ಡಾಯವಾಗಿ ಪಡೆಯಬೇಕು. ಇತ್ತೀಚೆಗೆ ಆರ್‌ಎಸ್‌ಎಸ್ ಹಾಗೂ ಬಿಜೆಪಿ ನಾಯಕರು ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಾಗ್ದಾಳಿ ನಡೆಸುತ್ತಿದ್ಧಾರೆ. ಅವರು ಎಲ್ಲಿಯೂ ಆರ್‌ಎಸ್‌ಎಸ್ ನಿಷೇಧ ಮಾಡಬೇಕು ಎಂದು ಹೇಳಿಲ್ಲ. ಸರ್ಕಾರಿ ಸ್ಥಳಗಳಲ್ಲಿ ಚಟುವಟಿಕೆ ನಡೆಸಲು ಅನುಮತಿ ಪಡೆಯಬೇಕು ಎಂದು ಪತ್ರ ಬರೆದಿದ್ದರು. ಈ ಹಿಂದೆ 2013ರಲ್ಲಿ ಜಗದೀಶ್ ಶೆಟ್ಟರ್ ಇದ್ದಾಗಲೇ ಸರ್ಕಾರಿ ಆದೇಶ ಮಾಡಿದ್ದರು ಎಂದು ತಿಳಿಸಿದರು.
ರಾಜಕೀಯ ಉದ್ದೇಶಕ್ಕೆ ಯತ್ನಾಳ್ ಪತ್ರ
ಸರ್ಕಾರಿ ಸ್ಥಳಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆ ಮಾಡಬಾರದು ಎಂದು ಆದೇಶ ಹೊರಡಿಸಿದ ಬೆನ್ನಲ್ಲೇ, ಬಿಜೆಪಿ ಉಚ್ಚಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸರ್ಕಾರಿ ಸ್ಥಳದಲ್ಲಿ ನಮಾಜ್ ನಿಷೇಧದ ಮಾಡುವ ಬಗ್ಗೆ ಪತ್ರ ಬರೆದಿದ್ದು ಕೇವಲ ರಾಜಕೀಯ ಉದ್ದೇಶಕ್ಕಾಗಿ ಮಾತ್ರ. ಹಿರಿಯ ನಾಯಕರು ಸಮಾಜ ಕಟ್ಟುವ ಕೆಲಸ ಮಾಡಬೇಕು ಎಂದು ಹೇಳಿದರು.