ನ.14 ರಂದು ರಾಜ್ಯಾದ್ಯಂತ "ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ"ಕ್ಕೆ ಚಾಲನೆ

ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಗ್ರಾಮಮಟ್ಟದ ಆಡಳಿತದಲ್ಲಿ ಅವರ ಭಾಗವಹಿಸುವಿಕೆ ಉತ್ತೇಜಿಸಲು ನ.14 ರಿಂದ ಜ.24 ರವರೆಗೆ "ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ"ವನ್ನು ಕೈಗೊಳ್ಳಲಾಗಿದೆ.

Update: 2025-11-10 09:17 GMT
Click the Play button to listen to article

ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಗ್ರಾಮ ಮಟ್ಟದ ಆಡಳಿತದಲ್ಲಿ ಅವರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ಮಹತ್ವದ ಉದ್ದೇಶದೊಂದಿಗೆ ರಾಜ್ಯ ಸರ್ಕಾರವು ರಾಜ್ಯಾದ್ಯಂತ "ಮಕ್ಕಳ ಸ್ನೇಹಿ ಗ್ರಾಮ ಪಂಚಾಯತಿ ಅಭಿಯಾನ"ವನ್ನು ಆಯೋಜಿಸಿದೆ. ಪಂಚಾಯತ್ ರಾಜ್ ಆಯುಕ್ತಾಲಯವು  ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, 10 ವಾರಗಳ ನಡೆಯುವ ಅಭಿಯಾನವು ಮಕ್ಕಳ ದಿನಾಚರಣೆಯಾದ ನ.14 ರಿಂದ ಆರಂಭವಾಗಿ ಜ.24 ರವರೆಗೆ ನಡೆಯಲಿದೆ.

ಈ ಅಭಿಯಾನದ ಪ್ರಮುಖ ಭಾಗವಾಗಿ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಒಂದು ದಿನ "ಮಕ್ಕಳ ವಿಶೇಷ ಗ್ರಾಮ ಸಭೆ"ಯನ್ನು ಕಡ್ಡಾಯವಾಗಿ ನಡೆಸಲು ಆದೇಶಿಸಲಾಗಿದೆ. 2006ರಿಂದಲೂ ಮಕ್ಕಳ ಗ್ರಾಮಸಭೆಗಳನ್ನು ನಡೆಸಿಕೊಂಡು ಬರಲಾಗುತ್ತಿದ್ದು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಮತ್ತು ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪುವ ನಿಟ್ಟಿನಲ್ಲಿ ಈ ಅಭಿಯಾನವನ್ನು ಪ್ರತಿ ವರ್ಷ ಹಮ್ಮಿಕೊಳ್ಳಲಾಗುತ್ತಿದೆ. 

ಮಕ್ಕಳ ಆರೋಗ್ಯ, ಶಿಕ್ಷಣ, ರಕ್ಷಣೆ ಮತ್ತು ಅಭಿವೃದ್ಧಿಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವುದು ಈ ಅಭಿಯಾನದ ಮೂಲ ಗುರಿಯಾಗಿದೆ. ಅಭಿಯಾನದ ಅವಧಿಯಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಆರೋಗ್ಯ ಮತ್ತು ಪೌಷ್ಟಿಕತೆ ಸಂಬಂಧ ಮಕ್ಕಳ ಜನನ ನೋಂದಣಿ, ಲಸಿಕೆ, ಪೌಷ್ಟಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವುದು ಮತ್ತು ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡುವುದು ಹಾಗೂ ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿ, ಮಕ್ಕಳ ಮೇಲಿನ ದೌರ್ಜನ್ಯಗಳ ವಿರುದ್ಧ ಅರಿವು ಮೂಡಿಸುವುದಾಗಿದೆ. ಮಕ್ಕಳಿಗಾಗಿ ಕ್ರೀಡಾಕೂಟ, ಚಿತ್ರಕಲಾ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಅಭಿಯಾನದ ಉದ್ದೇಶವಾಗಿದೆ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. 

ಮಕ್ಕಳು ತಮ್ಮ ಸಮಸ್ಯೆಗಳು, ಬೇಡಿಕೆಗಳು ಮತ್ತು ಸಲಹೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅನುಕೂಲವಾಗುವಂತೆ ಪ್ರತಿ ಗ್ರಾಮ ಪಂಚಾಯತಿಯಲ್ಲಿ "ಮಕ್ಕಳ ದನಿ ಪೆಟ್ಟಿಗೆ"ಯನ್ನು ಸ್ಥಾಪಿಸಲಾಗುವುದು. ಜತೆಗೆ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಚರ್ಚೆಗಾಗಿ ಹಾಗೂ ಮಾಹಿತಿ ಹಂಚಿಕೊಳ್ಳಲು ಪ್ರತಿ ಪಂಚಾಯಿತಿಯು ತನ್ನದೇ ಆದ ಫೇಸ್‌ಬುಕ್ ಪುಟವನ್ನು ರಚಿಸಿ ನಿರ್ವಹಿಸಬೇಕು ಎಂದು ಸುತ್ತೋಲೆಯಲ್ಲಿ ಸೂಚನೆ ನೀಡಲಾಗಿದೆ. 

ಅಭಿಯಾನದ ಕೇಂದ್ರಬಿಂದುವಾದ "ಮಕ್ಕಳ ವಿಶೇಷ ಗ್ರಾಮ ಸಭೆ"ಯು ಮಕ್ಕಳಿಗೆ ತಮ್ಮ ಗ್ರಾಮದ ಅಭಿವೃದ್ಧಿ ಕುರಿತು ನೇರವಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಸಂಯೋಜಿಸಲು ಒಂದು ವಿಶಿಷ್ಟ ವೇದಿಕೆಯನ್ನು ಒದಗಿಸುತ್ತದೆ. ಈ ಸಭೆಯಲ್ಲಿ ಮಕ್ಕಳು ಎತ್ತುವ ಪ್ರತಿಯೊಂದು ವಿಷಯವನ್ನು ದಾಖಲಿಸಿ, ಅವುಗಳ ಪರಿಹಾರಕ್ಕಾಗಿ ಕ್ರಿಯಾ ಯೋಜನೆಯನ್ನು ರೂಪಿಸಲಾಗುವುದು. ಕಳೆದ ವರ್ಷದ ಸಭೆಯ ನಿರ್ಣಯಗಳ ಪಾಲನಾ ವರದಿಯನ್ನು ಈ ಸಭೆಯಲ್ಲಿ ಮಂಡಿಸುವುದು ಕಡ್ಡಾಯವಾಗಿದೆ. ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಈ ಅಭಿಯಾನವನ್ನು ಯಶಸ್ವಿಗೊಳಿಸಬೇಕೆಂದು ಸರ್ಕಾರವು ಕಟ್ಟುನಿಟ್ಟಿನ ಸೂಚನೆ ನೀಡಿದೆ. ಈ ಮೂಲಕ ಮಕ್ಕಳನ್ನು ಕೇವಲ ಫಲಾನುಭವಿಗಳೆಂದು ಪರಿಗಣಿಸದೆ, ಗ್ರಾಮದ ಅಭಿವೃದ್ಧಿಯ ಸಕ್ರಿಯ ಪಾಲುದಾರರನ್ನಾಗಿ ಮಾಡಲು ಸರ್ಕಾರ ಮುಂದಾಗಿದೆ.

Tags:    

Similar News