ಕುಮಾರಸ್ವಾಮಿ ವಿಧಾನಸೌದಲ್ಲಿರುವ ಭಯೋತ್ಪಾದಕರಲ್ಲಿ ಒಬ್ಬರೇ?: ಡಿ.ಕೆ. ಶಿವಕುಮಾರ್

ಕುಮಾರಸ್ವಾಮಿ ಹೇಳಿಕೆ ಅವರ ಪಕ್ಷದವರಿಗೂ ಮತ್ತು ಅವರ ಹಿಂದಿನ ಆಡಳಿತಕ್ಕೂ ಅನ್ವಯಿಸುತ್ತದೆ. ಅವರೂ ಸಹ ಭಯೋತ್ಪಾದಕರ ಒಂದು ಭಾಗವಾಗಿದ್ದಾರೆಯೇ ಎಂದು ಶಿವಕುಮಾರ್​ ಹೇಳಿದ್ದಾರೆ.

Update: 2025-11-10 13:59 GMT
Click the Play button to listen to article

ವಿಧಾನಸೌಧದಲ್ಲಿ ಭಯೋತ್ಪಾದಕರಿದ್ದಾರೆ ಎಂಬ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, "ಹಾಗಾದರೆ ಕುಮಾರಸ್ವಾಮಿ ಅವರೂ ಭಯೋತ್ಪಾದಕರ ಒಂದು ಭಾಗವೇ? ಅವರೂ ವಿಧಾನಸೌಧದಲ್ಲಿ ಕುಳಿತಿರಲಿಲ್ಲವೇ?" ಎಂದು ಮರುಪ್ರಶ್ನಿಸುವ ಮೂಲಕ ಖಡಕ್ ತಿರುಗೇಟು ನೀಡಿದ್ದಾರೆ.

ಚುನಾವಣಾ ಅಕ್ರಮಗಳ ವಿರುದ್ಧ ಕರ್ನಾಟಕದಲ್ಲಿ ಸಂಗ್ರಹಿಸಲಾದ 1.12 ಕೋಟಿ ಸಹಿಪತ್ರಗಳನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹಸ್ತಾಂತರಿಸಲು ದೆಹಲಿಗೆ ಆಗಮಿಸಿದ್ದ ಅವರು, ಸೋಮವಾರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಕುಮಾರಸ್ವಾಮಿ ಹೇಳಿಕೆಗೆ ಖಡಕ್ ತಿರುಗೇಟು

ವಿಧಾನಸೌಧದಲ್ಲಿ ಭಯೋತ್ಪಾದಕರಿದ್ದಾರೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆಯ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, "ಕುಮಾರಸ್ವಾಮಿ ಅವರೂ ಸಹ ವಿಧಾನಸೌಧದಲ್ಲಿ ಕುಳಿತಿರಲಿಲ್ಲವೇ? ಹಾಗಿದ್ದರೆ ಈ ಹೇಳಿಕೆ ಅವರಿಗೂ, ಅವರ ಪಕ್ಷದವರಿಗೂ ಮತ್ತು ಅವರ ಹಿಂದಿನ ಆಡಳಿತಕ್ಕೂ ಅನ್ವಯಿಸುತ್ತದೆ. ಅವರೂ ಸಹ ಭಯೋತ್ಪಾದಕರ ಒಂದು ಭಾಗವಾಗಿದ್ದಾರೆಯೇ?" ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದರು.

ಮತ ಕಳ್ಳತನದ ವಿರುದ್ಧ ಹೋರಾಟ

ಇದಕ್ಕೂ ಮುನ್ನ, ಮತ ಕಳ್ಳತನದ ವಿರುದ್ಧ ಕಾಂಗ್ರೆಸ್ ನಡೆಸುತ್ತಿರುವ ಹೋರಾಟದ ಬಗ್ಗೆ ಮಾತನಾಡಿದ ಅವರು, "ಚುನಾವಣೆಗಳಲ್ಲಿ ಮತ ಕಳ್ಳತನ‌ ನಡೆಯುತ್ತಿರುವ ಬಗ್ಗೆ ಮೊದಲು ಪತ್ತೆ ಹಚ್ಚಿದ್ದೇ ಕರ್ನಾಟಕದಲ್ಲಿ. ನಮ್ಮ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಇಂದು ನಾವು ಸಾಂಕೇತಿಕವಾಗಿ ಸಹಿ ಸಂಗ್ರಹ ಅಭಿಯಾನದ ದಾಖಲೆಗಳನ್ನು ಹಸ್ತಾಂತರಿಸಿದ್ದೇವೆ. ಅವರ ಮಾರ್ಗದರ್ಶನದಲ್ಲಿ ಮತದಾನದ ಹಕ್ಕಿನ ರಕ್ಷಣೆಗಾಗಿ ನಾವು ಹೋರಾಟ ಮಾಡುತ್ತಿದ್ದೇವೆ," ಎಂದು ತಿಳಿಸಿದರು.

"ಒಬ್ಬರಿಗೆ ಒಂದು ಮತ ಎಂಬ ತತ್ವಕ್ಕಾಗಿ ನಾವು ಹೋರಾಡುತ್ತಿದ್ದೇವೆ. ಈ ಮತ ಕಳ್ಳತನವನ್ನು ಮೊದಲು ಪತ್ತೆ ಹಚ್ಚಿದ್ದು ನಮ್ಮದೇ ರಾಜ್ಯದಲ್ಲಿ. ಎಐಸಿಸಿ ಸಂಶೋಧನಾ ವಿಭಾಗ, ನಮ್ಮ ಅಭ್ಯರ್ಥಿಯಾಗಿದ್ದ ಮನ್ಸೂರ್ ಅಲಿ ಖಾನ್ ಮತ್ತು ಕೆಪಿಸಿಸಿ ತಂಡ ಸೇರಿ ಈ ಅಕ್ರಮವನ್ನು ಪತ್ತೆ ಮಾಡಿ ಎಐಸಿಸಿಗೆ ಮಾಹಿತಿ ನೀಡಿದೆವು. ನಂತರ, ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿಗೆ ಆಗಮಿಸಿ ಫ್ರೀಡಂ ಪಾರ್ಕ್‌ನಿಂದ ಈ ಹೋರಾಟಕ್ಕೆ ಚಾಲನೆ ನೀಡಿದರು. ಈ ಹೋರಾಟವು ಈಗ ಮಹಾರಾಷ್ಟ್ರ, ಹರಿಯಾಣ, ಮತ್ತು ಬಿಹಾರದವರೆಗೂ ಹಬ್ಬಿದೆ," ಎಂದು ವಿವರಿಸಿದರು.

ನಮ್ಮ ಕಾರ್ಯಕರ್ತರು, ಬ್ಲಾಕ್, ಜಿಲ್ಲಾಧ್ಯಕ್ಷರು ಹಾಗೂ ಪಕ್ಷದ ವಿವಿಧ ಘಟಕಗಳ ಪರಿಶ್ರಮದಿಂದ ಸಂಗ್ರಹಿಸಲಾದ ಈ ಸಹಿಗಳನ್ನು ನಾವು ಸಲ್ಲಿಸಿದ್ದೇವೆ. ನಮ್ಮ ಕಾರ್ಯಕರ್ತರು ಈ ಅಭಿಯಾನವನ್ನು ಇನ್ನೂ ಮುಂದುವರಿಸುತ್ತಿದ್ದು, ಉಳಿದ ಸಹಿ ದಾಖಲೆಗಳನ್ನು ಮುಂದಿನ ದಿನಗಳಲ್ಲಿ ಸಲ್ಲಿಕೆ ಮಾಡುತ್ತೇವೆ," ಎಂದರು.

ಚುನಾವಣಾ ಆಯೋಗದಿಂದಲೂ ಅನ್ಯಾಯ

ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, "ಚುನಾವಣಾ ಆಯೋಗವು ಬಿಹಾರದ ಮತದಾರರಿಗೆ ಸರಿಯಾದ ನ್ಯಾಯ ಒದಗಿಸಿಲ್ಲ. ಬಿಜೆಪಿ ಸಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ‌ ಮಾಡಿಕೊಂಡಿದೆ. ಯಾವುದು ಕಾಡದಿದ್ದರೂ, ಪ್ರತಿಯೊಬ್ಬರಿಗೂ ಆತ್ಮಸಾಕ್ಷಿ ಎನ್ನುವುದು ಇದ್ದೇ ಇರುತ್ತದೆ. ಅದು ಅಂತಿಮವಾಗಿ ಕೆಲಸ ಮಾಡಲಿದೆ," ಎಂದು ಹೇಳಿದರು.

"ಮತಕಳ್ಳತನ ಖಂಡಿತವಾಗಿಯೂ ನಡೆದಿದೆ. ರಾಹುಲ್ ಗಾಂಧಿ ಅವರು ಇದರ ಬಗ್ಗೆ ಮೊದಲ ಪತ್ರಿಕಾಗೋಷ್ಠಿ ನಡೆಸಿದ ನಂತರ, ಮಾಧ್ಯಮಗಳು ಬೆಂಗಳೂರಿಗೆ ಬಂದು ನಾವು ಉಲ್ಲೇಖಿಸಿದ ಮನೆಗಳಿಗೆ ಭೇಟಿ ನೀಡಿ 'ಫ್ಯಾಕ್ಟ್ ಚೆಕ್' ಮಾಡಿವೆ. ಅಕ್ರಮ ನಡೆದಿರುವುದು ಸತ್ಯ. ಯಾವ ಸರ್ಕಾರವೂ ತನ್ನ ವೈಫಲ್ಯವನ್ನು ಒಪ್ಪಿಕೊಳ್ಳುವುದಿಲ್ಲ. ವಿರೋಧ ಪಕ್ಷದ ಕೆಲಸವೇ ಸರ್ಕಾರದ ವೈಫಲ್ಯಗಳನ್ನು ಕಂಡುಹಿಡಿದು ಜನರಿಗೆ ತಿಳಿಸುವುದು," ಎಂದು ಅವರು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಹುದ್ದೆಯ ಬದಲಾವಣೆ ಕುರಿತಾದ ಊಹಾಪೋಹಗಳ ಬಗ್ಗೆ ಕೇಳಿದಾಗ, "ನಾನು ಈಗ ರಾಜಕೀಯ ವಿಚಾರಗಳನ್ನು ಮಾತನಾಡುವುದಿಲ್ಲ. ನಾನು ಪ್ರಜಾಪ್ರಭುತ್ವ, ಮತದಾನದ ಹಕ್ಕು ಮತ್ತು ಸಂವಿಧಾನವನ್ನು ಉಳಿಸುವ ವಿಚಾರವಾಗಿ ಮಾತನಾಡಲು ಬಂದಿದ್ದೇನೆ," ಎಂದು ಉತ್ತರಿಸುವುದನ್ನು ನಿರಾಕರಿಸಿದರು. 

Tags:    

Similar News