ಕರ್ನಾಟಕದಲ್ಲಿ ಆಹಾರ ಧಾನ್ಯಗಳ ಉತ್ಪಾದನೆ; ಧನಾತ್ಮಕ ಬೆಳವಣಿಗೆ ದಾಖಲಿಸುವ ನಿರೀಕ್ಷೆ
2024-25 ನೇ ಸಾಲಿನಲ್ಲಿ ಕರ್ನಾಟಕದಾದ್ಯಂತ ಆಹಾರ ಧಾನ್ಯಗಳ ಉತ್ಪಾದನೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 4ರಷ್ಟು ಹೆಚ್ಚಾಗಲಿದೆ. ರಾಜ್ಯದ ಕೃಷಿ ಇಲಾಖೆಯ ವರದಿಯಲ್ಲಿ ಆಹಾರ ಧಾನ್ಯ ಹಾಗೂ ಎಣ್ಣೆಕಾಳುಗಳ ಉತ್ಪಾದನೆ ಪ್ರಮಾಣವು 148.39 ಲಕ್ಷ ಟನ್ ಇರಲಿದೆ ಎಂದು ಅಂದಾಜಿಸಲಾಗಿದೆ.
ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ಕೃಷಿ ಕ್ಷೇತ್ರವು ಸಾರ್ವಕಾಲಿಕ ದಾಖಲೆಯತ್ತ ಹೆಜ್ಜೆ ಇಟ್ಟಿದೆ. 2024-25ನೇ ಸಾಲಿನಲ್ಲಿ ದೇಶಾದ್ಯಂತ ಆಹಾರ ಪದಾರ್ಥಗಳ ಉತ್ಪಾದನೆ ಪ್ರಮಾಣ ಹೆಚ್ಚಾಗಿದೆ. ಇದು ಕೃಷಿ ವಲಯದಲ್ಲಿ ಸಕಾರಾತ್ಮಕ ಬೆಳವಣಿಗೆಯ ಮುನ್ಸೂಚನೆ ಎಂದು ವಿಶ್ಲೇಷಿಸಲಾಗಿದೆ. ಆಹಾರ ಪದಾರ್ಥಗಳ ಉತ್ಪಾದನೆಯಲ್ಲಿ ಕರ್ನಾಟಕದ ಕೊಡುಗೆಯೂ ಹೆಚ್ಚಿನ ಪ್ರಮಾಣದಲ್ಲಿದೆ.
2024-25 ನೇ ಸಾಲಿನಲ್ಲಿ ಕರ್ನಾಟಕದಾದ್ಯಂತ ಆಹಾರ ಧಾನ್ಯಗಳ ಉತ್ಪಾದನೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 4ರಷ್ಟು ಹೆಚ್ಚಾಗಲಿದೆ. ರಾಜ್ಯದ ಕೃಷಿ ಇಲಾಖೆಯ ವರದಿಯಲ್ಲಿ ಆಹಾರ ಧಾನ್ಯ ಹಾಗೂ ಎಣ್ಣೆಕಾಳುಗಳ ಉತ್ಪಾದನೆ ಪ್ರಮಾಣವು 148.39 ಲಕ್ಷ ಟನ್ ಇರಲಿದೆ ಎಂದು ಅಂದಾಜಿಸಲಾಗಿದೆ. ಖಾರಿಫ್ ಋತುವಿನಲ್ಲಿ 112 ಲಕ್ಷ ಟನ್ ಆಹಾರ ಧಾನ್ಯ ಉತ್ಪಾದನೆಯ ಗುರಿ ಹೊಂದಿತ್ತು. ಮೆಕ್ಕೆಜೋಳ (49.28 ಲಕ್ಷ ಟನ್), ರಾಗಿ (11.76 ಲಕ್ಷ ಟನ್) ಹಾಗೂ ತೊಗರಿ (11.95 ಲಕ್ಷ ಟನ್) ಸೇರಿದಂತೆ ಪ್ರಮುಖ ಬೆಳೆಗಳಿಗೆ ನಿರ್ದಿಷ್ಟ ಉತ್ಪಾದನಾ ಗುರಿ ನಿಗದಿಪಡಿಸಲಾಗಿತ್ತು. 2024-25ನೇ ಸಾಲಿನ ಆಹಾರ ಧಾನ್ಯಗಳ ಅಂತಿಮ ಉತ್ಪಾದನಾ ಅಂಕಿಅಂಶಗಳು 2026 ಫೆಬ್ರುವರಿಯಲ್ಲಿ ಲಭ್ಯವಾಗಲಿವೆ.
2022-23 ರಲ್ಲಿ ಕರ್ನಾಟಕವು 79.09 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ143.56 ಲಕ್ಷ ಟನ್ ಆಹಾರ ಧಾನ್ಯಗಳನ್ನು ಉತ್ಪಾದನೆ ಮಾಡಿತ್ತು. 2023-24 ರಲ್ಲಿ 70.59 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 112.32 ಲಕ್ಷ ಟನ್ ಆಹಾರ ಪದಾರ್ಥಗಳ ಉತ್ಪಾದನೆ ದಾಖಲಿಸಿತ್ತು.
ಸರ್ಕಾರದ ಸಹಾಯಧನ, ಉತ್ತಮ ಮಳೆಯಿಂದಾಗಿ ಈ ಬಾರಿ ಏಕದಳ ಧಾನ್ಯಗಳು 134.25 ಲಕ್ಷ ಟನ್, ದ್ವಿದಳ ಧಾನ್ಯಗಳು 18.87 ಲಕ್ಷ ಟನ್, ಎಣ್ಣೆಕಾಳುಗಳು 10.68 ಲಕ್ಷ ಟನ್ ಉತ್ಪಾದನೆಯಾಗುವ ನಿರೀಕ್ಷೆಯಿದೆ ಎಂದು ಕೃಷಿ ಇಲಾಖೆ ಅಂಕಿ ಅಂಶಗಳು ತಿಳಿಸಿವೆ.
"ದೇಶದಲ್ಲಿ ಹಿಂಗಾರು ಬೆಳೆಗಳನ್ನು ಆಧರಿಸಿ ಒಟ್ಟಾರೆ ಉತ್ಪಾದನೆಯ ಅಂತಿಮ ಗುರಿಯನ್ನು ಅಂದಾಜು ಮಾಡಲಾಗಿದೆ. ಫೆಬ್ರುವರಿ ಅಥವಾ ಮಾರ್ಚ್ ಒಳಗೆ ಇಳುವರಿ ಪ್ರಮಾಣ ತಿಳಿಯಲಿದೆ. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸಕ್ತ ವರ್ಷ ಉತ್ತಮ ಇಳುವರಿ ನಿರೀಕ್ಷಿಸಲಾಗಿದೆ" ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಟಿ.ಎನ್. ಪ್ರಕಾಶ್ ಕಮ್ಮರಡಿ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ಕೃಷಿ ವಲಯದಲ್ಲಿ ಧನಾತ್ಮಕ ಬೆಳವಣಿಗೆ
2023–24 ರಲ್ಲಿ ನಕಾರಾತ್ಮಕ ಬೆಳವಣಿಗೆ ದಾಖಲಿಸಿದ್ದ ಕೃಷಿ ವಲಯವು, 2024–25 ರಲ್ಲಿ ಶೇ. 4ರ ಧನಾತ್ಮಕ ಬೆಳವಣಿಗೆ ಕಂಡಿದೆ. ಸೂಕ್ಷ್ಮ ಬೆಳೆ ನಿರ್ವಹಣೆ, ನೀರಾವರಿ ಯೋಜನೆಗಳ ವಿಸ್ತರಣೆ ಮತ್ತು ರೈತರಿಗೆ ನೀಡಿದ ಸಹಾಯಧನಗಳ ಪರಿಣಾಮ ಆಹಾರ ಪದಾರ್ಥಿಗಳ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸಲಿದೆ. ಕೃಷಿ ಇಲಾಖೆ, ಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಹಾಗೂ ಆರ್ಥಿಕ ಸಮೀಕ್ಷಾ ವರದಿಗಳು ಈ ಅಂಕಿ ಅಂಶಗಳನ್ನು ಅವಲಂಬಿಸಿ ವರದಿ ಬಿಡುಗಡೆ ಮಾಡಲಿವೆ.
"ದೇಶದಲ್ಲಿ ಆಹಾರ ಪದಾರ್ಥಗಳ ಒಟ್ಟು ಉತ್ಪಾದನೆ ಪ್ರಮಾಣ 357 ಮಿಲಿಯನ್ ಟನ್ ದಾಖಲಿಸುವ ಸಾಧ್ಯತೆ ಇದೆ. ಉತ್ತರ ಪ್ರದೇಶ,ಪಂಜಾಬ್, ಹರಿಯಾಣ, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಆಹಾರ ಧಾನ್ಯಗಳ ಉತ್ಪಾದನೆಯಲ್ಲಿ ದಾಖಲೆ ಬರೆಯಲು ಕೊಡುಗೆ ನೀಡಿವೆ. ಕರ್ನಾಟಕದ ಕೃಷಿ ಕ್ಷೇತ್ರದಲ್ಲಿ ಸಿರಿಧಾನ್ಯಗಳ ಉತ್ಪಾದನೆ ಅದರಲ್ಲೂ ರಾಗಿ ಶೇ 60ರಷ್ಟು ಹೆಚ್ಚಿದೆ. ಜತೆಗೆ ಮುಸುಕಿನ ಜೋಳದ ಉತ್ಪಾದನೆಯೂ ಹೆಚ್ಚಿದೆ" ಎಂದು ಜಿಕೆವಿಕೆ ಕೃಷಿ ವಿಜ್ಞಾನಿ ಬೋರಯ್ಯ ಅವರು ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದರು.
ತೋಟಗಾರಿಕಾ ಕ್ಷೇತ್ರದಲ್ಲಿ ಟೊಮೆಟೊ, ಈರುಳ್ಳಿ ಹಾಗೂ ಮಿಡಿ ಸೌತೆಕಾಯಿ ಹೆಚ್ಚಿನ ಉತ್ಪಾದನೆ ದಾಖಲಿಸಿದೆ. ವಾಣಿಜ್ಯ ಬೆಳೆಗಳಲ್ಲಿ ಕಾಫಿ ಉತ್ಪಾದನೆ ದೇಶದಲ್ಲೇ ಮುಂದಿದೆ. ಕೃಷಿ ಇಲಾಖೆಯು ಅಂದಾಜು ಪಟ್ಟಿ ನೀಡಿದೆ. ಈ ವರ್ಷ ಉತ್ತಮ ಮಳೆಯಾಗಿದ್ದು, ಬೆಳೆಯೂ ಚೆನ್ನಾಗಿದೆ. ಸರ್ಕಾರದ ಸಬ್ಸಿಡಿ, ಸೌಲಭ್ಯ ನಿರ್ಮಾಣಗಳಿಗೆ ಸಹಾಯಧನ, ಬೆಳೆಗಳಿಗೆ ವಿಮೆ ನೀಡಿರುವುದರಿಂದ ಹೆಚ್ಚು ರೈತರು ಆಹಾರ ಧಾನ್ಯಗಳನ್ನು ಉತ್ಪಾದನೆಯತ್ತ ಮುಖ ಮಾಡಿದ್ದಾರೆ ಎಂದು ವಿವರಿಸಿದರು.
ದೇಶದಲ್ಲಿ ಶೇ 8 ರಷ್ಟು ಹೆಚ್ಚಳ
2024-25ನೇ ಸಾಲಿನಲ್ಲಿ ಭಾರತದ ಒಟ್ಟು ಆಹಾರ ಧಾನ್ಯಗಳ ಉತ್ಪಾದನೆಯು 357.73 ದಶಲಕ್ಷ ಟನ್‌ಗಳಿಗೆ ತಲುಪಿದೆ. ಕಳೆದ 2023-24ನೇ ಸಾಲಿನಲ್ಲಿ ಈ ಪ್ರಮಾಣ 332.30 ದಶಲಕ್ಷ ಟನ್‌ಗಳಷ್ಟಿತ್ತು. ಒಂದೇ ವರ್ಷದಲ್ಲಿ ಶೇ.8ರಷ್ಟು ಉತ್ಪಾದನೆ ಪ್ರಮಾಣ ಹೆಚ್ಚಳವಾಗಿದೆ. ಇದು ದೇಶದ ಕೃಷಿ ಇತಿಹಾಸದಲ್ಲೇ ಮಹತ್ವದ ಸಾಧನೆಯಾಗಿದೆ.
2015-16ರಲ್ಲಿ ದೇಶದ ಆಹಾರ ಧಾನ್ಯ ಉತ್ಪಾದನೆ 251.54 ದಶಲಕ್ಷ ಟನ್ಗಳಷ್ಟಿತ್ತು. ಪ್ರಸ್ತುತ ಇದು 357.73 ದಶಲಕ್ಷ ಟನ್ಗಳಿಗೆ ಏರಿಕೆಯಾಗುವ ಮೂಲಕ, ಕಳೆದ ಒಂದು ದಶಕದಲ್ಲಿ ಬರೋಬ್ಬರಿ 106 ದಶಲಕ್ಷ ಟನ್ಗಳಷ್ಟು ಅಧಿಕ ಉತ್ಪಾದನೆ ಗುರಿ ಸಾಧಿಸಲಾಗಿದೆ. ಕೇಂದ್ರ ಸರ್ಕಾರದ ಕೃಷಿ ಪರ ನೀತಿಗಳು ಮತ್ತು ಯೋಜನೆಗಳು ಈ ಪ್ರಗತಿಗೆ ಕಾರಣ ಎಂದು ಕೇಂದ್ರ ಕೃಷಿ ಸಚಿವರು ಹೇಳುತ್ತಾರೆ.
ಯಾವ ಬೆಳೆ, ಎಷ್ಟು ಹೆಚ್ಚಳ?
ದೇಶದ ಪ್ರಮುಖ ಆಹಾರ ಬೆಳೆಗಳಾದ ಭತ್ತ (ಅಕ್ಕಿ) ಮತ್ತು ಗೋಧಿ ಉತ್ಪಾದನೆಯಲ್ಲಿಯೂ ಹೊಸ ದಾಖಲೆ ನಿರ್ಮಾಣವಾಗಿದೆ.
2024-25ನೇ ಸಾಲಿನಲ್ಲಿ ಅಕ್ಕಿ ಉತ್ಪಾದನೆಯು 1,501.84 ಲಕ್ಷ ಟನ್‌ಗಳಿಗೆ ತಲುಪಿದ್ದು, ಕಳೆದ ವರ್ಷಕ್ಕಿಂತ (1,378.25 ಲಕ್ಷ ಟನ್) 123.59 ಲಕ್ಷ ಟನ್‌ಗಳಷ್ಟು ಹೆಚ್ಚಾಗಿದೆ.
ಅದೇ ರೀತಿ, ಗೋಧಿ ಉತ್ಪಾದನೆಯು 1,179.45 ಲಕ್ಷ ಟನ್‌ಗಳಿಗೆ ಏರಿಕೆಯಾಗಿದ್ದು, ಕಳೆದ ವರ್ಷದ 1,132.92 ಲಕ್ಷ ಟನ್‌ಗಳಿಗೆ ಹೋಲಿಸಿದರೆ 46.53 ಲಕ್ಷ ಟನ್‌ಗಳಷ್ಟು ಹೆಚ್ಚಳ ದಾಖಲಿಸಿದೆ. ಎಣ್ಣೆಕಾಳುಗಳ ಉತ್ಪಾದನೆ 429.89 ಲಕ್ಷ ಟನ್‌ಗಳಿಗೆ ತಲುಪಿದ್ದು, ಕಳೆದ ವರ್ಷಕ್ಕಿಂತ ಶೇ.8ಕ್ಕೂ ಹೆಚ್ಚು ಏರಿಕೆಯಾಗಿದೆ.
ವಿಶೇಷವಾಗಿ ಸೋಯಾಬೀನ್ (152.68 ಲಕ್ಷ ಟನ್) ಮತ್ತು ಕಡಲೆಕಾಯಿ (119.42 ಲಕ್ಷ ಟನ್) ಉತ್ಪಾದನೆಯಲ್ಲಿ ದಾಖಲೆಯ ಪ್ರಗತಿ ಕಂಡುಬಂದಿದೆ. ತೊಗರಿ, ಹೆಸರು, ಮತ್ತು ಕಡಲೆ ಕಾಳುಗಳ ಉತ್ಪಾದನೆಯಲ್ಲೂ ಗಮನಾರ್ಹ ಹೆಚ್ಚಳವಾಗಿದ್ದು, ಇದು ಆಮದು ಅವಲಂಬನೆ ತಗ್ಗಿಸುವಲ್ಲಿ ಸಹಕಾರಿಯಾಗಲಿದೆ.