ಗೋಬಿ, ಕಾಟನ್ ಕ್ಯಾಂಡಿ ಕಲರ್ ಬ್ಯಾನ್ ಆಯ್ತು.. ಕಬಾಬ್ ಕಥೆ ಏನು?
ಕೃತಕ ಬಣ್ಣಗಳು ಗ್ರಾಹಕರನ್ನು ಸೆಳೆಯುತ್ತವೆ. ಆದರೆ ಈ ಕಲರ್‌ಗಳು ಆರೋಗ್ಯಕ್ಕೆ ಹಾನಿಕಾರವಾಗಿದ್ದು, ಕಾನ್ಸರ್ ರೋಗಗಕ್ಕೂ ಕಾರಣವಾಗುತ್ತವೆ. ಆ ಹಿನ್ನೆಲೆಯಲ್ಲಿ ಕಬಾಬ್‌ನಲ್ಲಿ ಬಳಸುತ್ತಿರುವ ಬಣ್ಣದ ವಿಷಯದಲ್ಲೂ ಈಗ ಸರ್ಕಾರ ಕ್ರಮಕ್ಕೆ ಮುಂದಾಗಿದೆ.
ಗೋಬಿ ಮಂಚೂರಿ, ಕಾಟನ್ ಕ್ಯಾಂಡಿ, ಕಬಾಬ್‌ಗಳ ಬಣ್ಣಕ್ಕೆ ಮನಸೋತು ಬಾಯಲ್ಲಿ ನೀರೂರಿಸಿಕೊಂಡು ರುಚಿಗೆ ಬಾಯಿ ಚಪ್ಪರಿಸುವವರೇ ಎಲ್ಲರೂ. ಆದರೆ, ಹಾಗೆ ಕಣ್ಣು ಕೋರೈಸುವ ಬಣ್ಣವೇ ತಿನ್ನುವವರ ಜೀವಕ್ಕೇ ಅಪಾಯ ತರುವ ಸಾಧ್ಯತೆ ಇದೆ ಎಂಬುದು ಇತ್ತೀಚೆಗೆ ಚರ್ಚೆಗೊಳಗಾಗುತ್ತಿದೆ. ಆ ಹಿನ್ನೆಲೆಯಲ್ಲೇ ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿ ಸೇರಿದಂತೆ ಆಹಾರ ಪದಾರ್ಥಗಳಲ್ಲಿ ಅಪಾಯಕಾರಿ ರಾಸಾಯನಿಕ ಬಣ್ಣ ಬಳಸದಂತೆ ಸರ್ಕಾರವೇ ಎಚ್ಚರಿಕೆ ನೀಡಿದೆ.
ರಾಜ್ಯದಲ್ಲಿ ಇತ್ತೀಚೆಗೆ ರಾಜ್ಯಾದ್ಯಂತ 170ಕ್ಕೂ ಹೆಚ್ಚು ಕಡೆ ಗೋಬಿ ಮಂಚೂರಿ ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಮದುವೆ ಮನೆಗಳು, ಶಾಪಿಂಗ್ ಮಾಲ್‌ಗಳು, ಉದ್ಯಾನವನಗಳು ಮತ್ತು ವ್ಯಾಪಾರ ಮೇಳಗಳಂತಹ ವಿವಿಧ ಮಾರಾಟ ಕೇಂದ್ರಗಳಿಂದ ಕಾಟನ್ ಕ್ಯಾಂಡಿ, ಗೋಬಿ ಮಂಚೂರಿಯ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. 100ಕ್ಕೂ ಹೆಚ್ಚು ಕಡೆಯ ಗೋಬಿ ಮಂಚೂರಿ ಅಸುರಕ್ಷಿತ ಎಂದು ರಿಪೋರ್ಟ್ ಬಂದಿತ್ತು.
ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸದ್ಯ ಕಲರ್ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಗೆ ಕೃತಕ ಬಣ್ಣ ಬಳಕೆ ಮಾಡುವುದನ್ನು ಬ್ಯಾನ್ ಮಾಡಿದೆ. ಇವೆರಡು ಆಹಾರಗಳಲ್ಲಿ ಕ್ಯಾನ್ಸರ್ಕಾರಕ ಅಂಶಗಳು ಪತ್ತೆಯಾಗಿರುವುದರಿಂದ ರಾಜ್ಯದ ಜನರ ಆರೋಗ್ಯವನ್ನುಗಮನದಲ್ಲಿಟ್ಟುಕೊಂಡು ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಆಹಾರಗಳಿಗೆ ಕೃತಕ ಬಣ್ಣವನ್ನು ಬಳಸುವುದಕ್ಕೆ ರಾಜ್ಯ ಸರ್ಕಾರ ನಿಷೇಧ ಹೂಡಿದೆ.
ಕಬಾಬ್ ಕೂಡ ಬ್ಯಾನ್?
ಇದೀಗ ಗೋಬಿ ಆಯ್ತು, ಕಾಟನ್ ಕ್ಯಾಂಡಿ ಆಯ್ತು. ಇದೀಗ ಭಾರತದ ಜನಪ್ರಿಯ ಮಾಂಸಾಹಾರ ಸ್ನಾಕ್ಸ್ ಆಗಿರುವ ಕಬಾಬ್‌ನ ಸರದಿ. ಅನೇಕರು ಕಬಾಬ್ ಪರಿಮಳಕ್ಕೆ ಮನಸೋಲುತ್ತಾರೆ. ಆದರೆ ಭಾರತೀಯರ ಬಾಯಲ್ಲಿ ನಿರೂರಿಸುವ ಈ ಕಬಾಬ್‌ಗೂ ಕೃತಕ ಬಣ್ಣ ಬಳಸಲಾಗುತ್ತದೆ. ಹಾಗಾಗಿ ಕಬಾಬ್ ಅನ್ನು ಕೂಡ ಟೆಸ್ಟ್‌ಗೆ ಒಳಪಡಿಸಲು ಆಹಾರ ಮತ್ತು ಸುರಕ್ಷತಾ ಇಲಾಖೆ ನಿರ್ಧರಿಸಿದೆ.
"ಕಬಾಬ್‌ನಲ್ಲಿ ಹಾನಿಕಾರಕ ಕೃತಕ ಬಣ್ಣವಿರುವ ಬಗ್ಗೆ ಆಹಾರ ಮತ್ತು ಸುರಕ್ಷತಾ ಇಲಾಖೆ ಪರೀಕ್ಷೆ ನಡೆಯುತ್ತಿದ್ದು, ಇನ್ನು ರಿಪೋರ್ಟ್ ಬಂದಿಲ್ಲ. ವರದಿ ಇನ್ನಷ್ಟೆ ಕೈ ಸೇರಬೇಕಾಗಿದೆʼʼ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿ ಡಾ. ಮನೋರಂಜನ್ ʼದ ಫೆಡರಲ್ ಕರ್ನಾಟಕʼಕ್ಕೆ ತಿಳಿಸಿದ್ದಾರೆ.
ಕಬಾಬ್‌ನ ರುಚಿ ಹೆಚ್ಚಿಸಲು, ಆಕರ್ಷಕವಾಗಿ ಕಾಣುವಂತೆ ಮಾಡಲು ಪೌಡರ್ ಬಳಸಲಾಗುತ್ತದೆ. ಇದು ಕೂಡ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೀಗಾಗಿ ಗೋಬಿ ಮಂಚೂರಿ ಕಲರ್ ಬ್ಯಾನ್‌ಗೆ ಯಾವ ನಿಯಮಗಳು ಅನ್ವಯವಾಗುತ್ತದೆಯೋ ಆ ನಿಯಮಗಳೇ ಕಬಾಬ್‌ಗೂ ಅನ್ವಯವಾಗುತ್ತದೆ ಎಂದು FSSAI (ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ) ಮೂಲಗಳು ತಿಳಿಸಿವೆ.
"ರಾಜ್ಯದಲ್ಲಿ ಸದ್ಯ ಕಲರ್ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಗೆ ಕೃತಕ ಬಣ್ಣ ಬಳಕೆ ಬ್ಯಾನ್ ಆಗಿದೆ. ಆರೋಗ್ಯ ದೃಷ್ಟಿಯಲ್ಲಿ ಇವೆರಡು ಆಹಾರಗಳಿಗೆ ಕೃತಕ ಬಣ್ಣವನ್ನು ಬಳಸುವುದಕ್ಕೆ ರಾಜ್ಯ ಸರ್ಕಾರ ನಿಷೇಧ ಹೂಡಿದೆ. ಆಹಾರ ಪದಾರ್ಥಗಳಲ್ಲಿ ಕೃತಕ, ಹಾನಿಕಾರಕ ಕಲರ್ ಬಳಸಬಾರದು ಎಂದು ಈಗಾಗಲೇ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು, ಆಕಸ್ಮಾತ್ ಕಲರ್ ಬಳಸೋದು ಕಂಡು ಬಂದರೆ ಕ್ರಮ ಕೈಗೊಳ್ಳಲಾಗುತ್ತದೆ. ಗೋಬಿ ಮಂಚೂರಿಯಲ್ಲಿ ಕಲರ್ ಬಳಸದಂತೆ ಸೂಚನೆ ನೀಡಲಾಗಿದೆ. ಯಾರಾದರೂ ಆಕರ್ಷಕ ಕಲರ್ ಬಳಸಿದ್ರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ" ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಸ್ಪಷ್ಟಪಡಿಸಿದ್ದರು.
"ನಿಯಮ ಮೀರಿ ನಿಷೇಧಿತ ಪದಾರ್ಥಗಳನ್ನು ತಯಾರಿಸಿ ಜನರಿಗೆ ಮಾರಾಟ ಮಾಡಿದರೆ ಕಾನೂನು ಅನ್ವಯ ಕಠಿಣ ಕ್ರಮಕೈಗೊಳ್ಳಲಾಗುತ್ತದೆ. ಇದಕ್ಕೆ 7 ವರ್ಷದವರೆಗೂ ಜೈಲು ಶಿಕ್ಷೆ ವಿಧಿಸಲಾಗುತ್ತದೆ" ಎಂದು ದಿನೇಶ್ ಗುಂಡೂರಾವ್ ಎಚ್ಚರಿಕೆ ನೀಡಿದ್ದಾರೆ.
ಹೋಟೆಲ್ ಮಾಲೀಕರಿಗೆ ಸೂಚನೆ
"ಗೋಬಿ ಮಂಚೂರಿಯನ್‌ನಲ್ಲಿ ಕೃತಕ ಬಣ್ಣ ಬಳಸಬಾರದು. ಇದೇ ನಿಯಮ ಕಬಾಬ್‌ಗೂ ಅನ್ವಯಿಸುತ್ತದೆ ಎಂದು ಬೆಂಗಳೂರಿನ ಹೋಟೆಲ್ ಮಾಲೀಕರಿಗೆ ಸರ್ಕಾರದ ಸುತ್ತೋಲೆಯ ಬಗ್ಗೆ ತಿಳಿಸಲಾಗಿದೆ. ಎಲ್ಲರೂ ನಿಯಮ ಪಾಲನೆ ಮಾಡುತ್ತಿದ್ದಾರೆ" ಎಂದು ಬೃಹತ್ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದರು.
ʼದ ಫೆಡರಲ್ ಕರ್ನಾಟಕʼದೊಂದಿಗೆ ಮಾತನಾಡಿದ ಅವರು, ಆಹಾರ ಪದಾರ್ಥಗಳಲ್ಲಿ ಕೃತಕ ಬಣ್ಣ ಬಳಸಬಾರದು ಎಂದು ಸರ್ಕಾರ ನಿರ್ದೇಶನ ನೀಡಿದೆ. ಇನ್ನು ಈ ಹಿಂದೆಯೇ ಆಹಾರದಲ್ಲಿ ಬಳಸಬಹುದಾದ ಮತ್ತು ಬಳಸಬಾರದ ಬಣ್ಣಗಳನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ವಿಂಗಡಿಸಿದೆ. ಹೋಟೆಲ್‌ಗಳಲ್ಲಿ ಗೋಬಿ ಮಂಚೂರಿ, ಕಾಬಾಬ್, ಟೊಮ್ಯಾಟೊ ಸೂಪ್, ಕೇಸರಿ ಬಾತ್‌ಗೆ ಬಣ್ಣ ಬಳಸಲಾಗುತ್ತದೆ. ಆದರೆ, ಅನುಮತಿ ಇರುವ ಬಣ್ಣಗಳನ್ನು ಮಾತ್ರ ಬಳಸಬೇಕು. ಅಲ್ಲದೇ ಈ ಆಹಾರ ಪದಾರ್ಥಗಳಿಗೆ ಇಂತಿಷ್ಟೇ ಪ್ರಮಾಣದಲ್ಲಿ ಬಣ್ಣ ಬಳಸಬೇಕು ಎನ್ನುವ ನಿಯಮವೂ ಇದೆ. ಆದರೆ, ಕೆಲವರು ಗ್ರಾಹಕರನ್ನು ಆಕರ್ಷಿಸುವ ಉದ್ದೇಶದಿಂದ ಮಿತಿ ಮೀರಿ ಬಣ್ಣ ಬಳಸುತ್ತಿದ್ದರು. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕೆಲವು ನಿರ್ದಿಷ್ಟ ಬಣ್ಣಗಳನ್ನು ಬಳಸುವುದಕ್ಕೆ ಅನುಮತಿ ನೀಡಿದೆ. ಆದರೆ, ಅದನ್ನು ನಿಗದಿತ ಮಿತಿಗಿಂತ ಹೆಚ್ಚು ಬಳಸಿದರೂ ಆರೋಗ್ಯಕ್ಕೆ ಹಾನಿಕಾರಕವಾಗಬಲ್ಲದು. ಈ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದರು.
ಏನಿದು ಕೃತಕ ಬಣ್ಣ ರೋಡಮೈನ್ ಬಿ
ಗೋಬಿ ಮಂಚೂರಿಯನ್ ಮತ್ತು ಕಾಟನ್ ಕ್ಯಾಂಡಿಗೆ ರೋಡಮೈನ್ ಬಿ ಎಂಬ ಕೃತಕ ಬಣ್ಣವನ್ನು ಬಳಸಲಾಗುತ್ತದೆ. ರೋಡಮೈನ್ ಬಿ ಬಣ್ಣವನ್ನು ಜವಳಿ ಉದ್ಯಮದಲ್ಲಿ ಬಳಲಾಗುತ್ತದೆ. ಗೋಬಿ ಮಂಚೂರಿಯನ್‌ನಲ್ಲಿ ಇದನ್ನು ಬಳಸುವುದರ ಮೂಲಕ ಆಹಾರದ ಆಕರ್ಷಣೆ ಹೆಚ್ಚುತ್ತದೆ. ಆದರೆ ಈ ಕೆಮಿಕಲ್‌ಯುಕ್ತ ಆಹಾರವನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಬಹಳಷ್ಟು ಪ್ರಭಾವ ಬೀಳುತ್ತದೆ. ಬದಲಾದ ಮತ್ತು ಬದಲಾಗುತ್ತಿರುವ ಜೀವನ ಶೈಲಿಯ ಕಾರಣ ಹೊರಗಿನ ಆಹಾರ ಸೇವನೆ ಹೆಚ್ಚಾಗುತ್ತಿದೆ. ಇದು ಆಹಾರ ಉದ್ಯಮದ ಬೆಳವಣಿಗೆಗೂ ಕಾರಣವಾಗಿದೆ. ಆದರೆ, ಕೇವಲ ಲಾಭೋದ್ದೇಶದಿಂದ ಅಪಾಯಕಾರಿ ಕಲರ್ ಬಳಸಿ ಆಹಾರ ಪದಾರ್ಥಗಳ ರಂಗು ಹೆಚ್ಚಿಸುವ ಮೂಲಕ ಜನರ ಆರೋಗ್ಯಕ್ಕೆ ಕುತ್ತು ತರುತ್ತಿದ್ದಾರೆ.
ಆಹಾರಗಳಲ್ಲಿ ಬಣ್ಣ ಬಳಕೆ ಮಾಡುವುದರಿಂದ ಆರೋಗ್ಯದ ಮೇಲೆ ತಕ್ಷಣವಲ್ಲದಿದ್ದರೂ ನಿಧಾನಗತಿಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಕ್ಕಳು ಅತೀ ಹೆಚ್ಚು ಕೃತಕ ಬಣ್ಣ ಬಳಸಿದ ಆಹಾರವನ್ನು ಸೇವಿಸುವುದರಿಂದ ಅತಿ ತೂಕ, ಬೊಜ್ಜು ಬರುವ ಸಾಧ್ಯತೆಗಳು ಇವೆ. ಯೌವನಾವಸ್ಥೆಯಲ್ಲಿ ಸಕ್ಕರೆ ಕಾಯಿಲೆ, ಹೃದಯ ಸಂಬಂಧಿ ಕಾಯಿಲೆ, ನರ ದೌಬ್ಯರ್ಲ ಕಾಯಿಲೆಗಳು ಬರುವ ಸಾಧ್ಯತೆ ಹೆಚ್ಚಾಗಿದೆ.
ಸದ್ಯ ಗೋಬಿ ಮಂಚೂರಿ, ಕಲರ್ ಕ್ಯಾಂಡಿಯಲ್ಲಿನ ಕೃತಕ ಬಣ್ಣ ನಿಷೇಧದ ಬೆನ್ನಲ್ಲೇ ಕಬಾಬ್ ತಯಾರಿಕೆಯಲ್ಲೂ ಕಲರ್ ಬಳಸುತ್ತಾರೆ ಹಾಗೂ ಸ್ವಚ್ಛತೆ ಇರಲ್ಲ ಎಂದು ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಕೂಡ ಬಂದಿವೆ. ಈ ನಿಟ್ಟಿನಲ್ಲಿ ಆಹಾರ ಇಲಾಖೆ ಕಬಾಬ್ ಅನ್ನು ಪರೀಕ್ಷೆಗೆ ಒಳಪಡಿಸಲು ಮುಂದಾಗಿದೆ. ಕಬಾಬ್ ವಿಷಯದಲ್ಲಿ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂಬುವುದನ್ನು ಕಾದು ನೋಡಬೇಕಾಗಿದೆ.